ಶುಕ್ರವಾರ, ಡಿಸೆಂಬರ್ 4, 2020
24 °C
ಶಿರಾ ವಿಧಾನಸಭಾ ಕ್ಷೇತ್ರದ ಉಪಚುನಾವಣೆ

ಶಿರಾ ಉಪಚುನಾವಣೆ| ಕೊನೆಯ ‘ಅಸ್ತ್ರ’ ಪ್ರಯೋಗ

ಕೆ.ಜೆ.ಮರಿಯಪ್ಪ Updated:

ಅಕ್ಷರ ಗಾತ್ರ : | |

ತುಮಕೂರು: ಶಿರಾ ವಿಧಾನಸಭೆ ಉಪಚುನಾವಣೆ ಮತದಾನಕ್ಕೆ ಕ್ಷಣ ಗಣನೆ ಆರಂಭವಾಗಿದ್ದು, ಅಭ್ಯರ್ಥಿಗಳು ಕೊನೆಯ ‘ಅಸ್ತ್ರ’ ಪ್ರಯೋಗಿಸಿದ್ದಾರೆ. ಮನೆಮನೆ ಪ್ರಚಾರ ನೆಪಮಾತ್ರಕ್ಕೆ ನಡೆಯುತ್ತಿದ್ದು, ‘ಕಾರ್ಯಾಚರಣೆ’ ಜೋರಾಗಿದೆ. ಬತ್ತಳಿಕೆಯಲ್ಲಿದ್ದ ಬಿಲ್ಲು, ಬಾಣಗಳನ್ನು ಹೂಡಲಾಗಿದೆ.

ಕಳೆದ ಎರಡು ವಾರದಿಂದ ಪ್ರಚಾರದಲ್ಲಿ ಬೆವರು ಹರಿಸಿದ್ದ ಅಭ್ಯರ್ಥಿ ಗಳು, ವಿವಿಧ ಪಕ್ಷಗಳ ಮುಖಂಡರು ಈಗ ಮತದಾರರ ಮನೆಗಳಿಗೆ ಭೇಟಿ ನೀಡುತ್ತಿದ್ದಾರೆ. ಈ ಭೇಟಿಯೇ ಹೆಚ್ಚು ಮಹತ್ವ ಪಡೆದುಕೊಂಡಿದ್ದು, ಕುತೂಹಲ ಕೆರಳಿಸಿದೆ.

ರಾತ್ರಿ ಕಾರ್ಯಾಚರಣೆಗಾಗಿ ಯೋಜನೆ ಸಿದ್ಧಪಡಿಸಿಕೊಂಡಿದ್ದಾರೆ. ಬೆಳಗಾಗುವುದರ ಒಳಗೆ ಎಲ್ಲವೂ ಮುಗಿದಿರುತ್ತದೆ. ಇನ್ನೂ ಏನಿದ್ದರೂ ಮತಯಂತ್ರದಲ್ಲಿ ದಾಖಲಿಸುವುದಷ್ಟೇ ಬಾಕಿ ಉಳಿದಿರುತ್ತದೆ.

ಕ್ಷೇತ್ರದಲ್ಲಿ ಅಸ್ತಿತ್ವ ಉಳಿಸಿಕೊಳ್ಳಲು ಕಾಂಗ್ರೆಸ್, ಜೆಡಿಎಸ್ ಹೆಣಗಾಡುತ್ತಿದ್ದರೆ, ಆಡಳಿತಾರೂಢ ಬಿಜೆಪಿ ಅಸ್ತಿತ್ವ ಕ್ಕಾಗಿ ಪೈಪೋಟಿ ನಡೆಸಿದೆ. ನೆಲೆಯೇ ಇಲ್ಲದ ಬಿಜೆಪಿಯು ಉಪಚುನಾವಣೆ ಮೂಲಕ ಮುಂದಿನ ಸಾರ್ವತ್ರಿಕ ಚುನಾವಣೆಗೆ ಈಗಿನಿಂದಲೇ ಅಡಿಪಾಯ ಭದ್ರಪಡಿಸಿಕೊಳ್ಳುವ ಕೆಲಸದಲ್ಲಿ ನಿರತವಾಗಿದೆ.

ಲೆಕ್ಕಾಚಾರದ ಮೇಲೆ ನಂಬಿಕೆ: ಕೆ.ಆರ್.ಪೇಟೆ ಸೇರಿದಂತೆ ಉಪಚುನಾವಣೆ ಸಂದರ್ಭದಲ್ಲಿ ಪ್ರಯೋಗಿಸಿದ ‘ಪ್ರಯೋಗ’ಗಳನ್ನು ಇಲ್ಲೂ ಬಳಕೆ ಮಾಡಿದೆ. ಅದೇ ಉಮೇದಿನ ಮೇಲೆ ಎಲ್ಲವನ್ನೂ ಸಜ್ಜುಗೊಳಿಸಿದ್ದು, ಲೆಕ್ಕಾಚಾರದ ‘ಎಣಿಕೆ’ ತಪ್ಪಾಗುವುದಿಲ್ಲ. ಅದಕ್ಕೆ ಮತದಾನದಲ್ಲಿ ‘ಉತ್ತರ’ ಸಿಗಲಿದೆ ಎಂದು ಕಾದುಕುಳಿತಿದೆ. ಶತಾಯಗತಾಯ ಗೆಲ್ಲಲೇಬೇಕು ಎಂಬ ಪಣತೊಟ್ಟು ನಿಂತಿದೆ.

ವಿರೋಧ ಪಕ್ಷದಲ್ಲಿರುವ ಕಾಂಗ್ರೆಸ್‌ಗೂ ಮಾಡು, ಇಲ್ಲವೆ ಮಡಿ ಎಂಬ ಪರಿಸ್ಥಿತಿ ಎದುರಾಗಿದೆ. ಆಪರೇಷನ್ ಕಮಲದಿಂದ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ ನಡೆದ ಉಪಚುನಾವಣೆಯಲ್ಲೂ ಸಾಧನೆ ಹೇಳಿಕೊಳ್ಳುವಂತಿಲ್ಲ.

ಈಗ ಶಿರಾದಲ್ಲಿ ಗೆಲ್ಲುವ ಮೂಲಕ ಪಕ್ಷ ಭದ್ರವಾಗಿದೆ ಎಂಬುದನ್ನು ತೋರ್ಪಡಿಸಬೇಕಿದೆ. ಒಮ್ಮೆ ಈ ಕ್ಷೇತ್ರ ಕೈ ತಪ್ಪಿದರೆ ಮತ್ತೆ ತನ್ನ ತೆಕ್ಕೆಗೆ ತೆಗೆದುಕೊಳ್ಳುವುದು
ಕಷ್ಟಕರವಾಗುತ್ತದೆ ಎಂಬುದು ಚೆನ್ನಾಗಿ ಗೊತ್ತಿದೆ. ಅ ಕಾರಣಕ್ಕಾಗಿ ಗೆಲುವು ಅನಿವಾರ್ಯವಾಗಿದೆ. ಅದಕ್ಕಾಗಿ ಕಾಂಗ್ರೆಸ್ ನಾಯಕರು ಕಸರತ್ತು ಮುಂದುವರಿಸಿದ್ದಾರೆ.

ಅಸ್ತಿತ್ವದ ಪ್ರಶ್ನೆ: ಸತ್ಯನಾರಾಯಣ ಜಾಗದಲ್ಲಿ ಅವರ ಪತ್ನಿ ಅಮ್ಮಾಜಮ್ಮ ಅವರನ್ನು ನೋಡಲು ಜೆಡಿಎಸ್ ಕಾತುರವಾಗಿದೆ. ಕ್ಷೇತ್ರವನ್ನು ಉಳಿಸಿಕೊಂಡು ಪ್ರಾದೇಶಿಕ ಪಕ್ಷದ ಬೇರುಗಳು ಅಲುಗಾಡುತ್ತಿಲ್ಲ ಎಂಬ ಸಂದೇಶವನ್ನು ರವಾನಿಸಬೇಕಿದೆ. ಎರಡು ರಾಷ್ಟ್ರೀಯ ಪಕ್ಷಗಳ ಎದುರು ಜೆಡಿಎಸ್ ಅಸ್ತಿತ್ವ ಉಳಿಸಿಕೊಳ್ಳುವುದು ಕಷ್ಟಕರವಾಗಿದ್ದು, ತನ್ನ ಅನಿವಾರ್ಯ ಸ್ಥಿತಿಯನ್ನು ಮತದಾರರ ಮುಂದಿಟ್ಟಿದೆ. ಚುನಾವಣೆಯಿಂದ ಚುನಾವಣೆಗೆ ಜೆಡಿಎಸ್ ಶಕ್ತಿ ಕುಂದುತ್ತಿರುವುದು ಪಕ್ಷದ ನಾಯಕರ ತಲೆಬಿಸಿ ಮಾಡಿದೆ. ಇರುವ ಕ್ಷೇತ್ರವನ್ನಾದರೂ ಉಳಿಸಿ ಕೊಳ್ಳುವುದು ಅನಿವಾರ್ಯ ವಾಗಿದೆ. ಅಸ್ತಿತ್ವದ ಪ್ರಶ್ನೆಯನ್ನು ಜನರ ಎದುರು ತೆರೆದಿಟ್ಟು ಮತ ಭಿಕ್ಷೆ ಕೇಳಿದೆ.

ಕೊನೆಕ್ಷಣದ ‘ಕರಾಮತ್ತು’: ಮೂರು ಪಕ್ಷಗಳು ತಮ್ಮ ಅಸ್ತಿತ್ವದ ವಿಚಾರವನ್ನು ಮುಂದಿಟ್ಟುಕೊಂಡು ಹೋರಾಟ ನಡೆಸಿವೆ.  ಏನೆಲ್ಲ ಪ್ರಯತ್ನ, ಹೋರಾಟ ನಡೆಸಿದ್ದರೂ ಕೊನೆ ಕ್ಷಣದ ‘ಕರಾಮತ್ತು’ ಫಲಿತಾಂಶ ನಿರ್ಧರಿಸಲಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು