ಶುಕ್ರವಾರ, ಮೇ 7, 2021
26 °C
ಪ್ರಸಿದ್ಧ ಆಸ್ಪತ್ರೆ, ಶಿಕ್ಷಣ, ಧಾರ್ಮಿಕ ಕ್ಷೇತ್ರಗಳಿರುವ ಮಂಗಳೂರು, ಉಡುಪಿಗೆ ಬೇಕು ರೈಲು

ಮಧ್ಯ ಕರ್ನಾಟಕ–ಕರಾವಳಿ ರೈಲಿಗಾಗಿ ಎದ್ದಿದೆ ಕೂಗು

ಬಾಲಕೃಷ್ಣ ಪಿ.ಎಚ್‌. Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ಮಧ್ಯ ಕರ್ನಾಟಕದಿಂದ ಕರಾವಳಿ ಪ್ರದೇಶಕ್ಕೆ ರೈಲು ಓಡಿಸಬೇಕು ಎಂಬ ಕೂಗು ಎದ್ದಿದೆ. ಅದಕ್ಕಾಗಿ ದಾವಣಗೆರೆ–ಕರಾವಳಿ ರೈಲ್ವೆ ಹೋರಾಟ ಸಮಿತಿ ರಚನೆಗೊಂಡಿದೆ.

ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯ 25 ಸಾವಿರಕ್ಕೂ ಅಧಿಕ ಮಂದಿ ದಾವಣಗೆರೆ ಜಿಲ್ಲೆಯಲ್ಲಿದ್ದಾರೆ. ಚಿನ್ನದ ವ್ಯಾಪಾರ, ಹೋಟೆಲ್‌ ಮಾಲೀಕರು, ಕಾರ್ಮಿಕರು, ವಿವಿಧ ಇಲಾಖೆ, ಸಂಸ್ಥೆಗಳಲ್ಲಿ ಕೆಲಸ ಮಾಡುತ್ತಿದ್ದಾರೆ. 

ಆಸ್ಪತ್ರೆಗಾಗಿ ದಾವಣಗೆರೆಯಿಂದ ಮಂಗಳೂರು, ಉಡುಪಿಗೆ ನಿತ್ಯ ನೂರಾರು ಮಂದಿ ಓಡಾಡುತ್ತಾರೆ. ಜತೆಗೆ ಧರ್ಮಸ್ಥಳ, ಸುಬ್ರಹ್ಮಣ್ಯ, ಉಡುಪಿ, ಕಟೀಲು, ಕೊಲ್ಲೂರು ಸಹಿತ ಪ್ರಸಿದ್ಧ ಧಾರ್ಮಿಕ ಕ್ಷೇತ್ರಗಳಿಗೂ ಜನ ಹೋಗುತ್ತಿರುತ್ತಾರೆ. ಅಲ್ಲದೇ ಶಿಕ್ಷಣಕ್ಕೂ ಹೆಸರುವಾಸಿ ಆಗಿರುವುದರಿಂದ ನೂರಾರು ಮಂದಿ ತಮ್ಮ ಮಕ್ಕಳನ್ನು ಕರಾವಳಿ ಪ್ರದೇಶದ ಶಿಕ್ಷಣ ಸಂಸ್ಥೆಗಳಿಗೆ ಸೇರಿಸಿದ್ದಾರೆ. ಅವರೂ ಹೋಗಿ ಬರುತ್ತಿರುತ್ತಾರೆ. ಕೆಲವರು ಕಾರಲ್ಲಿ ಓಡಾಡಬಹುದು. ಬಹುತೇಕರು ಬಸ್ಸನ್ನೇ ಅವಲಂಬಿಸಿದ್ದಾರೆ.

ದಾವಣಗೆರೆಯಿಂದ ಉಡುಪಿವರೆಗೆ ರೈಲು ಓಡಿಸಿದರೆ ಎಲ್ಲರಿಗೂ ಉಪಯೋಗವಾಗಲಿದೆ ಎಂಬುದು ದಾವಣಗೆರೆ–ಕರಾವಳಿ ರೈಲ್ವೆ ಹೋರಾಟ ಸಮಿತಿ ಪ್ರಧಾನ ಕಾರ್ಯದರ್ಶಿ ಕೆ.ರಾಘವೇಂದ್ರ ನಾಯರಿ ಅವರ ಒತ್ತಾಯ.

ವಿಜಯಪುರ– ಮಂಗಳೂರು ನಡುವೆ ಒಂದು ರೈಲು ಓಡಿಸಲಾಗುತ್ತಿತ್ತು. ಅದರ ಸಮಯವು ಜನರಿಗೆ ಹೊಂದಾಣಿಕೆ ಆಗುತ್ತಿರಲಿಲ್ಲ. ದಾವಣಗೆರೆ ರೈಲು ನಿಲ್ದಾಣಕ್ಕೆ ರಾತ್ರಿ 2 ಗಂಟೆಗೆ ಬರುತ್ತಿತ್ತು. ಮಂಗಳೂರಿಗೆ ಬೆಳಿಗ್ಗೆ 11 ಗಂಟೆಗೆ ತಲುಪುತ್ತಿತ್ತು. ರೈಲು ಹಿಡಿಯಬೇಕಾದ ಸಮಯ ಅಪರಾತ್ರಿ. ಜೊತೆಗೆ ಮಂಗಳೂರಿಗೂ ಬೆಳಿಗ್ಗೆ ಬೇಗ ತಲುಪದೇ ಇರುವುದರಿಂದ ಜನರು ಈ ರೈಲಲ್ಲಿ ಓಡಾಡಲು ಅಷ್ಟಾಗಿ ಮನಸ್ಸು ಮಾಡಿರಲಿಲ್ಲ. ಈಗ ಕೊರೊನಾ ಕಾರಣದಿಂದ ಈ ರೈಲು ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ ಎಂದು ಅವರು ವಿವರಿಸಿದರು.

ಈಗ ಸ್ಥಗಿತಗೊಳಿಸಿರುವ ರೈಲನ್ನು ಬೇರೆಡೆ ಓಡಿಸಲು ರೈಲ್ವೆ ಇಲಾಖೆ ಯೋಜನೆ ರೂಪಿಸಿದೆ ಎಂಬ ಮಾಹಿತಿ ಇದೆ. ಆ ರೈಲನ್ನು ಬೇರೆ ಕಡೆ ಓಡಿಸಬಾರದು. ಈಗ ಇರುವ ಮಾರ್ಗದಲ್ಲೇ ಓಡಿಸಬೇಕು. ಆದರೆ, ಸಮಯವನ್ನು ಕನಿಷ್ಠ ಮೂರು ಗಂಟೆ ಹಿಂದಕ್ಕೆ ಹಾಕಬೇಕು. ಆಗ ಮಂಗಳೂರಿಗೆ ಬೆಳಿಗ್ಗೆ ಏಳೆಂಟು ಗಂಟೆಗೆ ತಲುಪಲು ಸಾಧ್ಯ. ಆಗ ತಮ್ಮ ಕೆಲಸವನ್ನು ಅಂದೇ ಮುಗಿಸಿಕೊಂಡು ಬರಲು ಜನರಿಗೆ ಅನುಕೂಲವಾಗುತ್ತದೆ. ಕಾಲೇಜುಗಳಿಗೆ ಹೋಗುವ ವಿದ್ಯಾರ್ಥಿಗಳಿಗೂ ಉಪಯೋಗವಾಗುತ್ತದೆ. ಆಸ್ಪತ್ರೆಗೆ ಹೋಗುವವರೂ ಸಮಯಕ್ಕೆ ಸರಿಯಾಗಿ ತಲುಪುತ್ತಾರೆ ಎಂಬುದು ಅವರ ವಿವರಣೆ.

ದಾವಣಗೆರೆ– ಮಂಗಳೂರು ಅಥವಾ ದಾವಣಗೆರೆ–ಉಡುಪಿ ನಡುವೆ ಇಂಟರ್‌ಸಿಟಿ ರೈಲು ಓಡಿಸಲು ಕ್ರಮ ಕೈಗೊಂಡರೆ ಅನುಕೂಲವಾಗಲಿದೆ ಎಂಬುದು ಹೋರಾಟ ಸಮಿತಿಯ ಇನ್ನೊಂದು ಬೇಡಿಕೆಯಾಗಿದೆ.

ದಾವಣಗೆರೆಯಿಂದ ಉಡುಪಿ, ಮಂಗಳೂರಿಗೆ ನಿತ್ಯ ಸಂಚರಿಸುವವರ ಪ್ರಮಾಣ 2–3 ಬಸ್‌ಗಳಷ್ಟು ಇದೆ. ಅದಕ್ಕೆ ಹೊಸರೈಲು ನೀಡಲು ಸಾಧ್ಯವಾಗುವುದಿಲ್ಲ. ವಿಜಯಪುರ–ಮಂಗಳೂರು ರೈಲಿನ ಸಮಯ ಮಾರ್ಪಾಡು ಮಾಡಲು ಸಾರ್ವಜನಿಕರ ಬೇಡಿಕೆ ಇದೆ. ಸಮಯ ಮಾರ್ಪಾಡು ಮಾಡಲು ಪ್ರಯತ್ನಿಸಲಾಗುವುದು ಎಂದು ಸಂಸದ ಜಿ.ಎಂ. ಸಿದ್ದೇಶ್ವರ ಪ್ರತಿಕ್ರಿಯಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.