ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಖಾದಿ ಉತ್ತೇಜನಕ್ಕೆ ವಿಶೇಷ ಯೋಜನೆ: ಬೊಮ್ಮಾಯಿ

ಗಾಂಧಿ ಜಯಂತಿ ಆಚರಣೆ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬೊಮ್ಮಾಯಿ ಹೇಳಿಕೆ
Last Updated 2 ಅಕ್ಟೋಬರ್ 2021, 18:43 IST
ಅಕ್ಷರ ಗಾತ್ರ

ಬೆಂಗಳೂರು: ಖಾದಿ ಮತ್ತು ಗ್ರಾಮೋದ್ಯೋಗದ ಉತ್ಪನ್ನಗಳ ಉತ್ಪಾದನೆಯನ್ನು ಉತ್ತೇಜಿಸಲು ವಿಶೇಷ ಯೋಜನೆ ರೂಪಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ನಗರದ ಗಾಂಧಿ ಭವನದಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಗಾಂಧಿ ಸ್ಮಾರಕ ನಿಧಿ ಮತ್ತು ಇತರ ಸಂಘ ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ಶನಿವಾರ ನಡೆದ ಗಾಂಧಿ ಜಯಂತಿ ಆಚರಣೆ ಕಾರ್ಯಕ್ರಮದಲ್ಲಿ ಗಾಂಧಿ ಸೇವಾ ಪುರಸ್ಕಾರ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದರು.

‘ಗಾಂಧೀಜಿ ಒಬ್ಬ ಸ್ವಾತಂತ್ರ್ಯ ಹೋರಾಟಗಾರ ಮಾತ್ರ ಅಲ್ಲ. ನೈತಿಕ ಭಾರತವನ್ನು ಕಟ್ಟಿದ ಶಕ್ತಿ. ಗಾಂಧೀಜಿಯವರು ಜನರಿಂದ ಉತ್ಪಾದನಾ ಚಟುವಟಿಕೆಗಳು ನಡೆಯಬೇಕು ಎಂದು ಬಯಸಿದ್ದರು. ದುಡಿಮೆಯಲ್ಲಿ ಆರ್ಥಿಕತೆ ಇದೆ. ದುಡ್ಡಿನಲ್ಲಿ ಅಲ್ಲ. ಬಸವಣ್ಣ
ನವರು ಕಾಯಕವೇ ಕೈಲಾಸ ಎಂದು ನುಡಿದರು. ಕಾಯಕ ಪೂಜೆಗಿಂತಲೂ ಮಿಗಿಲಾದದ್ದು’ ಎಂದರು.

ಗಾಂಧೀಜಿಯವರ ಹೋರಾಟಕ್ಕೆ ತಾತ್ವಿಕ, ಸೈದ್ಧಾಂತಿಕ ಹಾಗೂ ವೈಜ್ಞಾನಿಕ ಹಿನ್ನೆಲೆಯಿದೆ. ಪ್ರತಿಯೊಬ್ಬರೂ ಬದ್ಧತೆಯೊಂದಿಗೆ ಕೆಲಸ ಮಾಡಿದಾಗ ಸಾರ್ಥಕತೆ ಮೂಡುತ್ತದೆ. ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಗಾಂಧಿ ಭವನ ನಿರ್ಮಾಣ ಪ್ರಗತಿಯಲ್ಲಿದೆ. ದಾವಣಗೆರೆಯ ಗಾಂಧಿ ಭವನ ಇತ್ತೀಚೆಗೆ ಉದ್ಘಾಟನೆಯಾಗಿದ್ದು, ಶಿವಮೊಗ್ಗ, ಬಳ್ಳಾರಿ ಜಿಲ್ಲೆಗಳಲ್ಲಿ ಉದ್ಘಾಟನೆಗೆ ಸಜ್ಜುಗೊಂಡಿವೆ. ಉಳಿದ ಜಿಲ್ಲೆಗಳ ಗಾಂಧಿ ಭವನಗಳೂ ಶೀಘ್ರವೇ ಸಿದ್ಧವಾಗಲಿವೆ ಎಂದು ಅವರು ಹೇಳಿದರು.

ಶಾಸಕ ಎಚ್.ಕೆ. ಪಾಟೀಲ, ಹೈಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಅಶೋಕ ಬಿ. ಹಿಂಚಗೇರಿ ಮಾತನಾಡಿದರು. ಸಚಿವರಾದ ಗೋವಿಂದ ಎಂ. ಕಾರಜೋಳ, ಹಾಲಪ್ಪ ಆಚಾರ್, ಸಂಸದರಾದ ಶಿವಕುಮಾರ್ ಉದಾಸಿ, ಡಾ.ಎಲ್. ಹನುಮಂತಯ್ಯ ಉಪಸ್ಥಿತರಿದ್ದರು.

ಸಿದ್ದಗಂಗಾ ಮಠದ ಪರವಾಗಿ ಡಾ. ಶಿವಪ್ಪ ಹಾಗೂ ಮೀರಾತಾಯಿ ಕೊಪ್ಪಿಕರ್ ಪರವಾಗಿ ಗೋವಿಂದ ಕಾರಜೋಳ ಅವರು ಪ್ರಶಸ್ತಿ ಸ್ವೀಕರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT