ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಟಿಯು ಕುಲಪತಿ ನೇಮಕಾತಿ: ಯುಜಿಸಿ ನಿಯಮ ಉಲ್ಲಂಘನೆ

28 ವರ್ಷಗಳ ಹಿಂದಿನ ಅಧಿನಿಯಮ ಅನುಸರಿಸಿದ ಸರ್ಕಾರ, ವಾರದೊಳಗೇ ಅಧಿಸೂಚನೆ ಬದಲು
Last Updated 3 ಸೆಪ್ಟೆಂಬರ್ 2022, 4:49 IST
ಅಕ್ಷರ ಗಾತ್ರ

ಬೆಳಗಾವಿ: ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಕುಲಪತಿ ನೇಮಕಾತಿ ಪ್ರಕ್ರಿಯೆಯಲ್ಲಿ, ವಿಶ್ವವಿದ್ಯಾಲಯ
ಗಳ ಅನುದಾನ ಆಯೋಗದ (ಯುಜಿಸಿ) ನಿಯಮ ಗಳನ್ನು ಗಾಳಿಗೆ ತೂರಲಾಗಿದೆ.

ಹೊಸ ಕುಲಪತಿ ನೇಮಕಾತಿಗೆ ರಾಜ್ಯಪಾಲರ ಕಚೇರಿ ಯಿಂದ ಆಗಸ್ಟ್‌ 10 ಹಾಗೂ 11ರಂದು ಅಧಿಸೂಚನೆಯ ಪ್ರಕಟಣೆ ನೀಡಿದೆ. ಅರ್ಜಿ ಸಲ್ಲಿಸುವವರು ವಿಟಿಯು ಅಧಿನಿಯಮ– 1994 ಹಾಗೂ ಯುಜಿಸಿ ನಿಯಮಾವಳಿ– 2018ರಲ್ಲಿ ಇರುವ ಅರ್ಹತೆ ಇರಬೇಕು ಎಂದು ತಿಳಿಸಲಾಗಿದೆ. ಆಗಸ್ಟ್‌ 16ರಂದು ಆ ಅಧಿಸೂಚನೆ ಹಿಂಪಡೆದು ಹೊಸದನ್ನು ಪ್ರಕಟಿಸಲಾಗಿದೆ. ವಿಟಿಯು ಅಧಿನಿಯಮಗಳನ್ನು ಮಾತ್ರ ಉಳಿಸಿಕೊಳ್ಳಲಾಗಿದೆ.

ಯುಜಿಸಿ ನಿಯಮಾವಳಿ ಪ್ರಕಾರ ವಿಶ್ವವಿದ್ಯಾಲಯದ ಕುಲಪತಿ ಹುದ್ದೆಗೆ ಉನ್ನತ ಮಟ್ಟದ ಸಾಮರ್ಥ್ಯ, ಸಾಂಸ್ಥಿಕ ಬದ್ಧತೆ ಇರಬೇಕು. ವಿಶ್ವವಿದ್ಯಾಲಯಗಳಲ್ಲಿ ಪ್ರಾಧ್ಯಾಪಕರಾಗಿ ಕನಿಷ್ಠ ಹತ್ತು ವರ್ಷ ಸೇವೆ ಸಲ್ಲಿಸಿರಬೇಕು ಅಥವಾ ಸಂಶೋಧನೆ ಮತ್ತು ಶೈಕ್ಷಣಿಕ ಆಡಳಿತ ಸಂಸ್ಥೆಗಳಲ್ಲಿ ಹತ್ತು ವರ್ಷಗಳ ಸಮಾನಾಂತರ ಸೇವೆಯ ಅನುಭವ ಇರಬೇಕು. ಪಿಎಚ್‌.ಡಿ ಕಡ್ಡಾಯ. ಹೊಸ ಅಧಿಸೂಚನೆಯಲ್ಲಿ 28 ವರ್ಷಗಳ ಹಿಂದಿನ ವಿಟಿಯು ಅಧಿನಿಯಮಗಳನ್ನು ಮಾತ್ರ ಉಳಿಸಿದ್ದು, ‘ಕುಲಪತಿ ಆಗುವವರು ಎಂಜಿನಿಯರಿಂಗ್, ಟೆಕ್ನಾಲಜಿ ಅಥವಾ ಶಿಕ್ಷಣದಲ್ಲಿ ಪ್ರಾಧ್ಯಾಪಕರಾಗಿ ಇರಬೇಕು’ ಎಂದಷ್ಟೇ ಇದೆ.

ಕುಲಪತಿ ಹುದ್ದೆಗೆ ಶಿಫಾರಸು ಮಾಡಲು ರಚಿಸಿರುವ ಸಮಿತಿಯಲ್ಲಿ ರಾಜ್ಯಪಾಲರಿಂದ ನಾಮನಿರ್ದೇಶಿತ, ಸರ್ಕಾರದಿಂದ ನಾಮನಿರ್ದೇಶಿತ, ವಿಟಿಯು ಎಕ್ಸಿಕ್ಯೂಟಿವ್ ಕಮಿಟಿ ಸದಸ್ಯ ಹಾಗೂ ಒಬ್ಬ ಅಕಾಡೆಮಿಕ್ ಸೆನೆಟ್ ಸದಸ್ಯ ಇರುತ್ತಾರೆ. ಯುಜಿಸಿ ನಿಯಮಾವಳಿ (2018) ಪ್ರಕಾರ ಈ ಸಮಿತಿಯಲ್ಲಿ ಯುಜಿಸಿ ಚೇರ್ಮನ್‌ ನಾಮನಿರ್ದೇಶನ ಮಾಡಿದ ಒಬ್ಬ ಸದಸ್ಯರೂ ಕಡ್ಡಾಯವಾಗಿ ಇರಬೇಕು. ಪಾರದರ್ಶಕತೆಗಾಗಿ ಈ ನಿಯಮ ಇದೆ. ವಿಟಿಯು ಕುಲಪತಿ ನೇಮಕಾತಿ ಅಧಿಸೂಚನೆಯಲ್ಲಿ ಇದನ್ನು ಪರಿಗಣಿಸಿಲ್ಲ.

‘ಇದೇ ಕಾರಣಕ್ಕಾಗಿ ಆಂಧ್ರಪ್ರದೇಶ ಹೈಕೋರ್ಟ್‌ 2021ರಲ್ಲಿ, ಜವಾಹರ ಲಾಲ್‌ ನೆಹರೂ ತಾಂತ್ರಿಕ ವಿವಿಕುಲಪತಿ ನೇಮಕಾತಿ ರದ್ದುಗೊಳಿಸಿ ತೀರ್ಪು ನೀಡಿದೆ’ ಎಂದು ವಕೀಲ ಸಂದೀಪ ಬೆಳಗಲಿ ‘‍ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ವಿಟಿಯು ಹಾಲಿ ಕುಲಪತಿ ಪ್ರೊ.ಕರಿಸಿದ್ಧಪ್ಪ ಅಧಿಕಾರಾವಧಿ ಈ ತಿಂಗಳಾಂತ್ಯಕ್ಕೆ ಕೊನೆಗೊಳ್ಳಲಿದೆ. ಹೊಸ ಅಧಿಸೂಚನೆ ಪ್ರಕಾರ ಅರ್ಜಿ ಸಲ್ಲಿಕೆಗೆ ಸೆ.6 ಕೊನೆಯ ದಿನ.

*

‘ನ್ಯಾಯಾಲಯದಲ್ಲಿ ಪ್ರಶ್ನಿಸುವೆ’

‘ವಿಶ್ವವಿದ್ಯಾಲಯದ ಕುಲಪತಿ ನೇಮಕಾತಿಯಲ್ಲಿ ಯುಜಿಸಿ ನಿಯಮಗಳನ್ನು ಪಾಲಿಸುವಂತೆ ಸುಪ್ರೀಂಕೋರ್ಟ್‌ ಈ ಹಿಂದೆಯೇ ನಿರ್ದೇಶಿಸಿದೆ. ರಾಜ್ಯದ ಉನ್ನತ ಶಿಕ್ಷಣ ಇಲಾಖೆಗೆ ಒಳಪಟ್ಟ ಸಂಸ್ಥೆಗಳೂ ಯುಜಿಸಿ ಅಧಿನಿಯಮ (2018) ಅನುಸರಿಸಲಾಗುತ್ತಿದೆ. ವಿಟಿಯು ಮಾತ್ರ ಹೊರತಾಗಿದೆಯೆ?’ ಎಂದು ಬೆಳಗಾವಿಯ ವಕೀಲ ಸಂದೀಪ ಬೆಳಗಲಿ ಪ್ರಶ್ನಿಸಿದ್ದಾರೆ.

‘ಅರ್ಹತೆ ಇಲ್ಲದಿದ್ದರೂ ಬೇಕಾದವರಿಗೆ ಹುದ್ದೆ ನೀಡುವ ದುರುದ್ದೇಶದಿಂದ ಈ ರೀತಿ ಮಾಡಲಾಗಿದೆ. ಯುಜಿಸಿ ನಿಯಮಾವಳಿಗಳನ್ನೇ ಅನುಸರಿಸಬೇಕು. ಇಲ್ಲದಿದ್ದರೆ ಕೋರ್ಟ್‌ ಮೊರೆ ಹೋಗುತ್ತೇನೆ’ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT