ಮಂಗಳವಾರ, ಮೇ 24, 2022
30 °C

ನಮ್ಮ ರಾಮಸ್ಮರಣೆ ಇನ್ನೊಬ್ಬರಿಗೆ ನೋವುಂಟು ಮಾಡದಂತೆ ಎಚ್ಚರ ವಹಿಸೋಣ: ಎಚ್‌ಡಿಕೆ  

ಪ್ರಜಾವಾಣಿ ವೆಬ್‌ಡೆಸ್ಕ್‌ Updated:

ಅಕ್ಷರ ಗಾತ್ರ : | |

ಬೆಂಗಳೂರು: ರಾಮನವಮಿ ಹಬ್ಬವನ್ನು ಭಕ್ತಿ-ಶ್ರದ್ಧೆಯಿಂದ ಆಚರಿಸೋಣ. ಆದರೆ, ನಮ್ಮ ರಾಮಸ್ಮರಣೆ ಇನ್ನೊಬ್ಬರಿಗೆ ನೋವುಂಟು ಮಾಡದಂತೆ ಎಚ್ಚರ ವಹಿಸೋಣ ಎಂದು ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ ಕುಮಾರಸ್ವಾಮಿ ಸಲಹೆ ನೀಡಿದ್ದಾರೆ. 

ಶ್ರೀರಾಮ ನವಮಿಯಂದು ಟ್ವಿಟರ್‌ ಮೂಲಕ ಜನರಿಗೆ ಮೊದಲಿಗೆ ಶುಭಾಶಯ ಕೋರಿದ್ದಾರೆ. 'ಶಾಂತಿ ಸಹನೆಯ ಸಾಕಾರಮೂರ್ತಿ, ಪಿತೃವಾಕ್ಯ ಪರಿಪಾಲಕ ಮತ್ತು ಸರ್ವ ಜೀವನಾದರ್ಶಗಳ ಪ್ರತೀಕ ಶ್ರೀರಾಮಚಂದ್ರರ ಚರಿತೆ ನಮಗೆಲ್ಲರಿಗೂ ಪ್ರೇರಣೆ. ಶ್ರೀರಾಮ ಸ್ಮರಣೆ ಮಾಡುತ್ತಾ ಆ ಮಹಾಪುರುಷನ ಆದರ್ಶಗಳನ್ನು ಅಳವಡಿಸಿಕೊಳ್ಳೋಣ' ಎಂದು ತಿಳಿಸಿದ್ದಾರೆ. 

ನಂತರ ಮತ್ತೊಂದು ಟ್ವೀಟ್‌ನಲ್ಲಿ ವಿಡಿಯೊ ಹಂಚಿಕೊಂಡಿರುವ ಅವರು, ರಾಮನ ಹೆಸರಿನ ಶೋಭಾಯಾತ್ರೆಗಳ ಮೂಲಕ ಇತರರಿಗೆ ನೋವುಂಟು ಮಾಡಬಾರದು ಎಂದು ಸಲಹೆ ನೀಡಿದ್ದಾರೆ.  

'ಶ್ರೀರಾಮಚಂದ್ರ ಮಹಾಪ್ರಭು ನಮ್ಮೆಲ್ಲರ ಆರಾಧ್ಯ ದೈವ. ಅಷ್ಟೇ ಅಲ್, ಮನುಕುಲಕ್ಕೆ ಆದರ್ಶ, ತ್ಯಾಗ, ಸರಳತೆ, ಶಾಂತಿ, ಸಹನೆ, ಮೌಲ್ಯಗಳ ದಿವ್ಯಬೆಳಕು ತೋರಿದ ನಮ್ಮೊಳಗಿನ ದೈವ. ರಾಮರಾಜ್ಯವು ಸರ್ವ ಜನಾಂಗದ ಶಾಂತಿಯ ತೋಟವಾಗಿತ್ತು. ನಾಡಿನ ಸಮಸ್ತ ಜನತೆಯಲ್ಲಿ ನನ್ನ ವಿನಮ್ರ ಮನವಿ ಇಷ್ಟೆ. ರಾಮನವಮಿ ಹಬ್ಬವನ್ನು ಭಕ್ತಿ-ಶ್ರದ್ಧೆಯಿಂದ ಆಚರಿಸೋಣ. ಆದರೆ, ನಮ್ಮ ರಾಮಸ್ಮರಣೆ ಇನ್ನೊಬ್ಬರಿಗೆ ನೋವುಂಟು ಮಾಡದಂತೆ ಎಚ್ಚರ ವಹಿಸೋಣ. ರಾಮನ ಹೆಸರಿನಲ್ಲಿ ಶೋಭಾಯಾತ್ರೆ ನಡೆಸಲು ನನ್ನದೇನೂ ಅಭ್ಯಂತರ ಇಲ್ಲ, ಅದಕ್ಕೆ ನನ್ನದೂ ಬೆಂಬಲ ಇದೆ' ಎಂದಿದ್ದಾರೆ.  

'ಶೋಭಾಯಾತ್ರೆ ಹೆಸರಿನಲ್ಲಿ ಇನ್ನೊಂದು ಸಮುದಾಯ ವಾಸ ಮಾಡುವ ಬೀದಿಗಳಲ್ಲಿ ಅಥವಾ ಅವರ ಪ್ರಾರ್ಥನಾ ಮಂದಿರಗಳ ಮುಂದೆ ಡಿಜೆ ಸೆಟ್ಟುಗಳನ್ನು ಹಾಕಿಕೊಂಡು 15-20 ನಿಮಿಷ ಕಾಲ ಕುಣಿಯುವುದು, ಕೇಕೆ ಹಾಕುವುದು ಇತ್ಯಾದಿ ಬೇಡ. ಇದರಿಂದ ಶಾಂತಿ ಕದಡುತ್ತದೆ. ಹೀಗೆ ಆಗುವುದು ಬೇಡ' ಎಂದು ಅವರು ಮನವಿ ಮಾಡಿದ್ದಾರೆ. 

'ಒಂದು ಸಮುದಾಯದ ಜನರು ಈಗ ಉಪವಾಸ ಆಚರಣೆಯಲ್ಲಿದ್ದಾರೆ. ಈ ಸಮಯದಲ್ಲಿ ಅವರ ಬಡಾವಣೆಗಳಿಗೆ ಹೋಗಿ ಶಾಂತಿಗೆ ಭಂಗ ತರುವುದು ಬೇಡ. ಅದಕ್ಕೆ ಅವಕಾಶವನ್ನೂ ಕೊಡಬಾರದು ಎಂದು ಎಲ್ಲ ಜಿಲ್ಲೆಗಳ ಜಿಲ್ಲಾಧಿಕಾರಿ, ಪೊಲೀಸ್ ವರಿಷ್ಠಾಧಿಕಾರಿಗಳಲ್ಲಿ ನನ್ನ ಮನವಿ' ಎಂದು ಅವರು ಟ್ವಿಟರ್‌ನಲ್ಲಿ ಬರಿದ್ದಾರೆ.  

'ಶೋಭಾಯಾತ್ರೆಯನ್ನು ಹಿಂದುಗಳು ವಾಸ ಮಾಡುವ ಬಡಾವಣೆ, ಬೀದಿಗಳಲ್ಲಿ ಮಾಡಿ, ಅಲ್ಲೆಲ್ಲ ಅರ್ಧ ಗಂಟೆ ಸಾಲದಿದ್ದರೆ, ಒಂದು ಗಂಟೆ ಮಾಡಿ. ಇದಕ್ಕೆ ನನ್ನ ಬೆಂಬಲವಿದೆ. ಎಲ್ಲರೂ ರಾಮಸ್ಮರಣೆ ಮಾಡೋಣ. ಪ್ರತಿಯೊಬ್ಬರ ಹೃದಯದಲ್ಲಿ ಆ ರಾಮನು ಚಿರಸ್ಥಾಯಿಯಾಗಿ ನಿಲ್ಲಬೇಕು ಎನ್ನುವುದೇ ನನ್ನ ಆಶಯ' ಎಂದು ಅವರು ಆಶಯ ವ್ಯಕ್ತಪಡಿಸಿದ್ದಾರೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು