ಶುಕ್ರವಾರ, ಏಪ್ರಿಲ್ 23, 2021
22 °C

ಎಸ್‌ಟಿ ಮೀಸಲಾತಿ ಹೆಚ್ಚಳ ವಿಷಯ ಚರ್ಚೆಯಲ್ಲಿ: ಬಿಎಸ್‌ವೈ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ವಾಲ್ಮೀಕಿ ಸಮುದಾಯಕ್ಕೆ ಮೀಸಲಾತಿ ಪ್ರಮಾಣ ಹೆಚ್ಚಿಸುವ ವಿಷಯ ಚರ್ಚೆಯಲ್ಲಿದೆ. ಸಮುದಾಯದ ಸರ್ವತೋಮುಖ ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿದೆ’ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದರು.

ಶಾಸಕರ ಭವನದ ವಾಲ್ಮೀಕಿ ತಪೋವನದಲ್ಲಿರುವ ಮಹರ್ಷಿ ವಾಲ್ಮೀಕಿ ಪ್ರತಿಮೆಗೆ ಶನಿವಾರ ಪುಷ್ಪನಮನ ಸಲ್ಲಿಸಿದ ಬಳಿಕ ಮಾತನಾಡಿದ ಅವರು, ‘ಕೋವಿಡ್ ಕಾರಣ ವಾಲ್ಮೀಕಿ ಜಯಂತಿಯನ್ನು ಸರಳವಾಗಿ ಆಚರಿಸಲಾಗಿದೆ. ಮುಂದಿನ ದಿನಗಳಲ್ಲಿ ಅದ್ಧೂರಿ ಕಾರ್ಯಕ್ರಮ ಆಯೋಜಿಸಿ ವಾಲ್ಮೀಕಿ ಪ್ರಶಸ್ತಿ ಪ್ರದಾನ ಮಾಡಲಾಗುವುದು’ ಎಂದರು.

‘ಸಮುದಾಯದ ಮಕ್ಕಳಿಗೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ಶೇ 3.5ರಿಂದ ಶೇ 7ಕ್ಕೆ ಮೀಸಲಾತಿ ಹೆಚ್ಚಿಸಬೇಕಿದೆ. ಸದ್ಯ ಉಪಚುನಾವಣೆಯ ನೀತಿ-ಸಂಹಿತೆ ಜಾರಿಯಲ್ಲಿರುವುದರಿಂದ ನ. 10ರ ನಂತರ ಮುಖ್ಯಮಂತ್ರಿ ಜೊತೆ ಈ ಬಗ್ಗೆ ಚರ್ಚಿಸಿ, ಮೀಸಲಾತಿ ಹೆಚ್ಚಿಸುವುದಾಗಿ ಸಚಿವ ಬಿ. ಶ್ರೀರಾಮುಲು ಭರವಸೆ ನೀಡಿದ್ದಾರೆ’ ಎಂದು ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದ ಸ್ವಾಮೀಜಿ ಹೇಳಿದರು.ಅದಕ್ಕೆ ಪ್ರತಿಕ್ರಿಯಿಸಿದ ಶ್ರೀರಾಮುಲು, ‘ಸರ್ಕಾರ ನೀಡಿರುವ ಭರವಸೆಯನ್ನು ಉಳಿಸಿಕೊಳ್ಳಲಿದೆ. ನೀತಿ-ಸಂಹಿತೆ ಕಾರಣ ಈಗ ಘೋಷಣೆ ಮಾಡುವಂತಿಲ್ಲ’ ಎಂದರು.

ವಾಲ್ಮೀಕಿ ಪ್ರಶಸ್ತಿಗೆ ನಾಲ್ವರ ಆಯ್ಕೆ: ವಾಲ್ಮೀಕಿ ಪ್ರಶಸ್ತಿಗೆ ಡಾ.ಕೆ.ಆರ್. ಪಾಟೀಲ, ಬಿ.ಎಲ್. ವೇಣು, ಗೌರಿಪುರದ ಮಾರಪ್ಪನಾಯಕ ಮತ್ತು ತಿಪ್ಪೇಸ್ವಾಮಿ ಅವರನ್ನು ಆಯ್ಕೆ ಮಾಡಲಾಗಿದೆ.

ಕಾರ್ಯಕ್ರಮ ಮುಗಿಸಿ ಮುಖ್ಯಮಂತ್ರಿ ತೆರಳಿದ ಬಳಿಕ, ವಾಲ್ಮೀಕಿ ಪ್ರತಿಮೆ ಎದುರು ನಿಂತು ಮೀಸಲಾತಿ ಸಿಗುವವರೆಗೂ ಹೋರಾಟ ನಿಲ್ಲಿಸುವುದಿಲ್ಲ ಎಂದು ಸಮುದಾಯದ ಜನರು ಘೋಷಣೆ ಕೂಗಿದರು.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು