ಶನಿವಾರ, ಜುಲೈ 2, 2022
22 °C
ನವೋದ್ಯಮ–4

ನವೋದ್ಯಮ: ಇನ್ನಷ್ಟು ‘ಉನ್ನತಿ’ ಸಾಧಿಸಲು ಬೇಕಿದೆ ಕಾಯಕಲ್ಪ

ಪ್ರವೀಣ ಕುಮಾರ್‌ ಪಿ.ವಿ. Updated:

ಅಕ್ಷರ ಗಾತ್ರ : | |

ನವೋದ್ಯಮ

ಬೆಂಗಳೂರು: ನವೋದ್ಯಮಗಳಿಗೆ ಉತ್ತೇಜನ ನೀಡುವಲ್ಲಿ ಇನ್ನಷ್ಟು ‘ಉನ್ನತಿ’ ಸಾಧಿಸಬೇಕಾದರೆ ‘ಐಡಿಯಾ2ಪಿಒಸಿ’ ಸ್ಪರ್ಧೆಗಳಲ್ಲಿ ಸಾಕಷ್ಟು ಸುಧಾರಣೆಗಳನ್ನು ತರಬೇಕು. ಆಯ್ಕೆ ಪ್ರಕ್ರಿಯೆಯನ್ನು ಪಾರದರ್ಶಕವಾಗಿ ನಡೆಸುವುದರ ಜೊತೆಗೆ ಈ ಸ್ಪರ್ಧೆಗೆ ಖಚಿತ ಚೌಕಟ್ಟು ರೂಪಿಸಬೇಕು ಎಂಬುದು ನವೋದ್ಯಮಿಗಳ ಒತ್ತಾಯ.

ನವೋದ್ಯಮಗಳನ್ನು ಸ್ಥಾಪಿಸಿ ಯಶಸ್ಸುಗಳಿಸುವುದಕ್ಕೆ ಕರ್ನಾಟಕದಲ್ಲಿ ಬೇರೆಲ್ಲ ರಾಜ್ಯಗಳಿಗಿಂತ ಉತ್ತಮ ಅವಕಾಶಗಳಿವೆ. ನವೋದ್ಯಮಗಳಿಗೆ ಉತ್ತೇಜನ ನೀಡಲು ರಾಜ್ಯ ಸರ್ಕಾರವು ಜಾರಿಗೊಳಿಸಿರುವ ‘ಕರ್ನಾಟಕ ನವೋದ್ಯಮ ಕಾರ್ಯನೀತಿ 2015 -2020’ ಹಾಗೂ ಎಲೆಕ್ಟ್ರಾನಿಕ್ಸ್‌, ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಮತ್ತು ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಕೈಗೊಂಡ ಉತ್ತೇಜನಾ ಚಟುವಟಿಕೆಗಳೂ ಇದಕ್ಕೆ ಕಾರಣ. ಇಲಾಖೆಯು 2016ರಿಂದ ನವೋದ್ಯಮಗಳಿಗೆ ಆರ್ಥಿಕ ನೆರವು ನೀಡುವ ಸಲುವಾಗಿ ಇದುವರೆಗೆ ₹ 117 ಕೋಟಿ ವೆಚ್ಚ ಮಾಡಿದೆ. 

‘ರಾಜ್ಯದಲ್ಲಿ ನವೋದ್ಯಮಗಳಿಗೆ ಬೇರೆಲ್ಲ ಕಡೆಗಿಂತ ಹೆಚ್ಚು ಉತ್ತೇಜನ ಸಿಗುತ್ತಿದೆ ಎಂಬುದು ಎಷ್ಟು ಸತ್ಯವೋ, ಆರ್ಥಿಕ ನೆರವು ಒದಗಿಸುವ ಪ್ರಕ್ರಿಯೆಯಲ್ಲಿ ಲೋಪಗಳಿರುವುದೂ ಅಷ್ಟೇ ನಿಜ. ಈ ಲೋಪಗಳನ್ನು ಆರಂಭಿಕ ಹಂತದಲ್ಲೇ ಸರಿಪಡಿಸದಿದ್ದರೆ, ಈ ಸವಲತ್ತು ದುರ್ಬಳಕೆ ಮತ್ತಷ್ಟು ಹೆಚ್ಚಲಿದೆ. ನವೋದ್ಯಮಿಗಳ ಕನಸಿನ ತಾಣ ಎಂಬ ಶ್ರೇಯವನ್ನು ರಾಜ್ಯವು ಕಳೆದುಕೊಳ್ಳಬೇಕಾಗುತ್ತದೆ’ ಎಂದು ಕಳವಳ ವ್ಯಕ್ತಪಡಿಸುತ್ತಾರೆ ನವೋದ್ಯಮಿಗಳು. 

‘ಈಗಿನ ವ್ಯವಸ್ಥೆಯಲ್ಲಿ ಐಡಿಯಾ 2 ಪಿಒಸಿ’ ಸ್ಪರ್ಧೆಗೆ ಅರ್ಜಿ ಆಹ್ವಾನಿಸುವುದಕ್ಕಿಂತ ಬೆರಳೆಣಿಗೆಯಷ್ಟು ದಿನಗಳ ಮುಂಚೆ ನೋಂದಣಿಯಾದ ನವೋದ್ಯಮವೂ ಭಾಗವಹಿಸುವುದಕ್ಕೆ ಅವಕಾಶ ಇದೆ.  ಆರ್ಥಿಕ ನೆರವು ಪಡೆಯಲೆಂದೇ ನವೋದ್ಯಮಗಳು ಹುಟ್ಟಿಕೊಳ್ಳಲು ಈ ಅಂಶ ಕಾರಣವಾಗುತ್ತಿದೆ. ಈ ಸ್ಪರ್ಧೆಯಲ್ಲಿ ಕನ್ನಡಿಗರು ಸ್ಥಾಪಿಸಿದ ಸಂಸ್ಥೆಗಳಿಗೆ ಆದ್ಯತೆ ಸಿಗುವುದನ್ನು ಖಚಿತಪಡಿಸುವ ನಿಯಮಾವಳಿಗಳೇ ಇಲ್ಲ. ಒಮ್ಮೆ ಆರ್ಥಿಕ ನೆರವು ಪಡೆದವರು ಮತ್ತೊಮ್ಮೆ ಈ ಸವಲತ್ತು ಪಡೆಯುವುದನ್ನು ತಡೆಯುವ ಕಟ್ಟುನಿಟ್ಟಿನ ವ್ಯವಸ್ಥೆಗಳಿಲ್ಲ. ಆರ್ಥಿಕ ನೆರವು ಪಡೆದವರು ನಿಜಕ್ಕೂ ನವೋದ್ಯಮ ಸ್ಥಾಪನೆ ಮಾಡಿದ್ದಾರೋ, ಆ ನವೋದ್ಯಮಕ್ಕೆ ನೀಡಿದ ಸವಲತ್ತಿನಿಂದ ಉಂಟಾದ ಸಾಮಾಜಿಕ ಮತ್ತು ಆರ್ಥಿಕ ಪರಿಣಾಮಗಳೇನು ಎಂಬುದನ್ನು ಪರಾಮರ್ಶೆಗೆ ಒಳಪಡಿಸುವುದಕ್ಕೂ ಮಾನದಂಡಗಳಿಲ್ಲ. ಆರ್ಥಿಕ ನೆರವು ಯೋಜನೆಯ ಸಂಪೂರ್ಣ ಪ್ರಯೋಜನ ನವೋದ್ಯಮಗಳಿಗೆ ಸಿಗಬೇಕಾದರೆ ಈ ವ್ಯವಸ್ಥೆಯಲ್ಲಿ ಮಹತ್ತರ ಬದಲಾವಣೆಗಳು ಆಗಬೇಕು’ ಎಂದು ಒತ್ತಾಯಿಸುತ್ತಾರೆ ನವೋದ್ಯಮಿ ಪ್ರತಾಪ್‌ ಪರಾಶರ.

‘ನಾವು ನವೋದ್ಯಮಗಳನ್ನು ಆಯ್ಕೆ ಮಾಡುವ ವ್ಯವಸ್ಥೆಯಲ್ಲಿ ಇನ್ನಷ್ಟು ಸುಧಾರಣೆಗಳನ್ನು ತರಲು ಕಾರ್ಯಕ್ರಮ ಹಾಕಿಕೊಂಡಿದ್ದೇವೆ. ಅಂಕ ನೀಡುವ ಪದ್ಧತಿಯನ್ನೂ ಆನ್‌ಲೈನ್‌ ವ್ಯವಸ್ಥೆಯಲ್ಲಿ ಅಳವಡಿಸಿಕೊಳ್ಳುವ ಚಿಂತನೆ ಇದೆ’ ಎಂದು  ಸ್ಟಾರ್ಟ್‌ಅಪ್‌ ಕರ್ನಾಟಕದ ಮುಖ್ಯಸ್ಥೆ ಚಂಪಾ ಇ. ತಿಳಿಸಿದರು.

‘ನವೋದ್ಯಮಗಳಿಗೆ ಆರ್ಥಿಕ ನೆರವನ್ನು ನಾವು ಒಂದೇ ಕಂತಿನಲ್ಲಿ ನೀಡುವುದಿಲ್ಲ. ಆರ್ಥಿಕ ನೆರವು ಪಡೆದು ನವೋದ್ಯಮ ಸ್ಥಾಪಿಸದೇ ಇದ್ದರೆ, ಅಂತಹವರಿಗೆ ಎರಡನೇ ಕಂತು ಸಿಗುವುದಿಲ್ಲ. ಎರಡನೇ ಕಂತಿನ ಹಣ ಪಡೆಯಲು ಮುಂದೆ ಬಾರದ ನವೋದ್ಯಮಗಳ ಬಗ್ಗೆ ಪರಿಶೀಲನೆ ನಡೆಸುತ್ತಿದ್ದೇವೆ. ಆರ್ಥಿಕ ನೆರವು ಪಡೆದ ಸಂಸ್ಥೆಗಳು ಅದನ್ನು ಸದ್ವಿನಿಯೋಗ ಮಾಡಿದ್ದಾವೆಯೇ ಇಲ್ಲವೇ ಎಂಬುದನ್ನೂ ಪರಿಶೀಲಿಸಲು ಕ್ರಮಕೈಗೊಳ್ಳುತ್ತಿದ್ದೇವೆ’ ಎಂದು ಅವರು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು. 

‘ಅರ್ಜಿ ಆಹ್ವಾನಿಸುವುದಕ್ಕೆ ಕೆಲವೇ ದಿನಗಳಿಗೆ ಮುನ್ನ ನೋಂದಣಿಯಾದ ನವೋದ್ಯಮಗಳನ್ನು ಆರ್ಥಿಕ ನೆರವು ಯೋಜನೆಗೆ ಆಯ್ಕೆ ಮಾಡಬಾರದು ಎಂದೇನಿಲ್ಲ. ಆ ನವೋದ್ಯಮಗಳ ಆಲೋಚನೆ ಚೆನ್ನಾಗಿದ್ದರೆ ಹಾಗೂ ಅವು ನಮ್ಮ ಮಾನದಂಡಗಳ ಪ್ರಕಾರ ಸವಲತ್ತು ಪಡೆಯಲು ಅರ್ಹವಾಗಿದ್ದರೆ ಮಾತ್ರ ಸ್ಪರ್ಧಿಸಲು ಅವಕಾಶ ಕಲ್ಪಿಸಲಾಗುತ್ತದೆ’ ಎಂದು ಅವರು ಸ್ಪಷ್ಪಪಡಿಸಿದರು.

‘ನವೋದ್ಯಮಿಗಳಿಗೆ ಆರ್ಥಿಕ ನೆರವು ನೀಡುವ ಹೊಣೆಯನ್ನು ಐಟಿಬಿಟಿ ಇಲಾಖೆ ಬದಲು ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಗೆ ಹಸ್ತಾಂತರಿಸಬೇಕು’ ಎಂದೂ ಅವರು ಸಲಹೆ ನೀಡಿದರು.

‘ಸಮಗ್ರ ತನಿಖೆ ನಡೆಸಿ’

‘ಫಲಾನುಭವಿಗಳ ಆಯ್ಕೆಗೆ ಸಂಬಂಧಿಸಿದ ಎಲ್ಲ ಕಡತಗಳನ್ನು ಮಾಹಿತಿ ತಂತ್ರಜ್ಞಾನ ಸಚಿವರು ಪರಿಶೀಲನೆ ನಡೆಸಿದರೆ ಅಕ್ರಮ ನಡೆದಿರುವುದು ಅವರಿಗೇ ಮನದಟ್ಟಾಗುತ್ತದೆ. ಇದುವರೆಗೆ ನಡೆದ ಎಲ್ಲ ‘ಐಡಿಯಾ 2 ಪಿಒಸಿ’ ಸ್ಪರ್ಧೆಗಳನ್ನೂ ಸರ್ಕಾರ ಸಮಗ್ರ ತನಿಖೆಗೆ ಒಳಪಡಿಸಬೇಕು. ಅಕ್ರಮವೆಸಗಿದವರ ವಿರುದ್ಧ ಶಿಸ್ತುಕ್ರಮ ಕೈಗೊಳ್ಳುವ ಮೂಲಕ, ಅನ್ಯಾಯಕ್ಕೊಳಗಾದ ನವೋದ್ಯಮಿಗಳಿಗೆ ನ್ಯಾಯ ಒದಗಿಸಬೇಕು’ ಎಂದು ಮೈಸೂರಿನ ಪ್ರವೀಣ್‌ ಕುಮಾರ್‌ ಎಂ.ಕೆ ಒತ್ತಾಯಿಸಿದರು.

ಆಗಬೇಕಿರುವ ಸುಧಾರಣೆಗಳು

* ಸ್ಪರ್ಧಿಗಳು ಯಾವ ಹಂತದಲ್ಲಿ ಯಾವ ವರ್ಗದಲ್ಲಿ ಎಷ್ಟು ಅಂಕ ಗಳಿಸಿದ್ದಾರೆ ಎಂಬುದನ್ನು ಆಯಾ ಹಂತದಲ್ಲೇ ಬಹಿರಂಗಪಡಿಸಬೇಕು 

* ನಿರ್ದಿಷ್ಟ ಮೊತ್ತದ ಆರ್ಥಿಕ ನೆರವು ಪಡೆಯಲು ಮಾನದಂಡಗಳೇನೆಂಬುದನ್ನು ಸ್ಪರ್ಧೆಗೆ ಮೊದಲೇ ಸ್ಪಷ್ಪಪಡಿಸಬೇಕು

* ಒಬ್ಬನೇ ಫಲನುಭವಿ ಬೇರೆ ಬೇರೆ ನವೋದ್ಯಮಗಳ ಮೂಲಕ ಒಂದಕ್ಕಿಂತ ಹೆಚ್ಚು ಬಾರಿ ಆರ್ಥಿಕ ನೆರವು ಪಡೆಯಲು ಅವಕಾಶ ನೀಡಬಾರದು

* ಕೆಲವು ಮೌಲ್ಯಮಾಪಕರು ಅಂಕಗಳನ್ನು ಈಗಲೂ ಪೆನ್ಸಿಲ್‌ನಲ್ಲಿ ಬರೆಯುತ್ತಾರೆ. ಇದು ಅಕ್ರಮಕ್ಕೆ ಅವಕಾಶ ಕಲ್ಪಿಸುತ್ತದೆ. ಮೌಲ್ಯಮಾಪನ ವ್ಯವಸ್ಥೆಯನ್ನು ವೈಜ್ಞಾನಿಕಗೊಳಿಸಬೇಕು.

* ಮೌಲ್ಯಮಾಪಕರ ಮತ್ತು ಫಲಾನುಭವಿಗಳ ಆಯ್ಕೆಯ ಈಗಿನ ಮಾದರಿ ಬದಲಾಯಿಸಬೇಕು. ಲೋಪಗಳಾದರೆ ಅವರನ್ನೂ ಹೊಣೆಗಾರರನ್ನಾಗಿ ಮಾಡುವ ನಿಯಮ ರೂಪಿಸಬೇಕು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು