ಶುಕ್ರವಾರ, ಮಾರ್ಚ್ 31, 2023
32 °C

ಕೋವಿಡ್‌ನಿಂದ 3.30 ಲಕ್ಷ ಸಾವು: ಡಿ.ಕೆ. ಶಿವಕುಮಾರ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಕೋವಿಡ್‌ನಿಂದ ರಾಜ್ಯದಲ್ಲಿ 3.30 ಲಕ್ಷ ಮಂದಿ ಮೃತಪಟ್ಟಿದ್ದಾರೆ. ಆದರೆ, ರಾಜ್ಯ ಸರ್ಕಾರ ಸಾವಿನ ಸಂಖ್ಯೆಯನ್ನು ಮುಚ್ಚಿಡುತ್ತಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಆರೋಪಿಸಿದರು.

ಸುದ್ದಿಗಾರರ ಜತೆ ಶುಕ್ರವಾರ ಮಾತನಾಡಿದ ಅವರು, ‘ಚಾಮರಾಜನಗರದಲ್ಲಿ ಒಂದೇ ದಿನ 65 ಮಂದಿ ಮೃತಪಟ್ಟಿದ್ದರು. ಆಸ್ಪತ್ರೆಯಲ್ಲಿ 36 ಜನರು ಸಾವಿಗೀಡಾಗಿದ್ದಾರೆ ಎಂಬ ವರದಿ ಬಂತು. ಕೇವಲ ಮೂರು ಮಂದಿ ಮೃತಪಟ್ಟಿದ್ದಾರೆ ಎಂದು ಸರ್ಕಾರ ಹೇಳಿತು. ಇದು ಸಾವಿನ ಸಂಖ್ಯೆಯನ್ನು ಮುಚ್ಚಿಡುತ್ತಿರುವುದಕ್ಕೆ ಸಾಕ್ಷಿ’ ಎಂದು ದೂರಿದರು.

ಚಾಮರಾಜನಗರದಲ್ಲಿ ಆಮ್ಲಜನಕದ ಕೊರತೆಯಿಂದ ಮೃತಪಟ್ಟಿರುವವರ ಪೈಕಿ 36 ಮಂದಿಯ ಮನೆಗಳಿಗೆ ಭೇಟಿನೀಡಿ, ಸಾಂತ್ವನ ಹೇಳಲಾಗಿದೆ. ಅವರಲ್ಲಿ ಯಾವ ಕುಟುಂಬಕ್ಕೂ ‘ಕೋವಿಡ್‌ನಿಂದ ಮೃತಪಟ್ಟಿದ್ದಾರೆ’ ಎಂಬ ಮರಣ ಪ್ರಮಾಣಪತ್ರ ವಿತರಿಸಿಲ್ಲ. ಬೀದರ್‌ ಜಿಲ್ಲೆಯಲ್ಲೂ ಸಾವಿನ ಸಂಖ್ಯೆಯನ್ನು ಮುಚ್ಚಿಡುತ್ತಿರುವುದನ್ನು ಕೆಪಿಸಿಸಿ ಕಾರ್ಯಾಧ್ಯಕ್ಷರು ಬಯಲಿಗೆ ತಂದಿದ್ದಾರೆ ಎಂದರು.

ಕೋವಿಡ್‌ನಿಂದ ಆಗಿರುವ ಸಾವುಗಳ ಕುರಿತು ತಕ್ಷಣವೇ ‘ಡೆತ್‌ ಆಡಿಟ್‌’ ನಡೆಸಬೇಕು. ಕೋವಿಡ್‌ನಿಂದ ಮೃತಪಟ್ಟಿರುವವರ ಕುಟುಂಬಗಳಿಗೆ ಸೂಕ್ತ ಪರಿಹಾರ ನೀಡಬೇಕು. ರಾಜ್ಯ ಸರ್ಕಾರ ಘೋಷಿಸಿರುವ ಪರಿಹಾರ ಮತ್ತು ಸುಪ್ರೀಂಕೋರ್ಟ್‌ ಆದೇಶದಂತೆ ಕೇಂದ್ರ ಸರ್ಕಾರ ಘೋಷಿಸುವ ಪರಿಹಾರ ಮೃತರ ಕುಟುಂಬಗಳಿಗೆ ತಲುಪುವಂತೆ ಕಾಂಗ್ರೆಸ್‌ ಕಾರ್ಯಕರ್ತರು ನೆರವು ಒದಗಿಸಲಿದ್ದಾರೆ ಎಂದು ಶಿವಕುಮಾರ್‌ ಹೇಳಿದರು.

‘ಕಾಂಗ್ರೆಸ್‌ ಅಪ್ಪ, ಅಮ್ಮ ಇಲ್ಲದ ಮನೆ’ ಎಂಬ ಸಚಿವ ಕೆ.ಎಸ್‌. ಈಶ್ವರಪ್ಪ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ‘ಪಾಪ, ಚುನಾವಣೆ ಬರಲಿ ಜನರು ಅವರಿಗೆ ತಕ್ಕ ಉತ್ತರ ನೀಡುತ್ತಾರೆ. ಆಗ ಎಲ್ಲವೂ ಗೊತ್ತಾಗುತ್ತದೆ’ ಎಂದರು.

17 ಜನರ ಪಕ್ಷಾಂತರದಿಂದ ತಮ್ಮ ಜೀವ ಉಳಿದಿದೆ ಎಂಬ ಜೆಡಿಎಸ್‌ ನಾಯಕ ಎಚ್‌.ಡಿ. ಕುಮಾರಸ್ವಾಮಿ ಅವರ ಹೇಳಿಕೆ ಬಗ್ಗೆ ಕೇಳಿದಾಗ, ‘ಕುಮಾರಸ್ವಾಮಿ ಯಾವ ಅರ್ಥದಲ್ಲಿ ಹೇಳಿದ್ದಾರೋ ಗೊತ್ತಿಲ್ಲ. ಅವರ ಜೀವ ಉಳಿಸುವುದು ಎಂದರೆ ಯಾವ ರೀತಿ ಎಂಬುದೂ ತಿಳಿಯಲಿಲ್ಲ’ ಎಂದು ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು