ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನೆ ಬಾಗಿಲಿಗೆ ಬರಲಿದೆ ಪಶು ಚಿಕಿತ್ಸಾಲಯ

Last Updated 7 ಮೇ 2022, 16:12 IST
ಅಕ್ಷರ ಗಾತ್ರ

ಬೆಂಗಳೂರು: ಚಿಕಿತ್ಸೆ, ಕೃತಕ ಗರ್ಭಧಾರಣೆಯಂತಹ ಕೆಲಸಗಳಿಗೆ ರೈತರು ತಮ್ಮ ಜಾನುವಾರುಗಳನ್ನು ಪಶು ಚಿಕಿತ್ಸಾಲಯಕ್ಕೋ, ಪಶುವೈದ್ಯ ಆಸ್ಪತ್ರೆಗಳಿಗೋ ಕೊಂಡೊಯ್ಯಬೇಕಿಲ್ಲ. ಪಶುಸಂಗೋಪನೆ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ಸಹಾಯವಾಣಿಗೆ ಕರೆ ಮಾಡಿದರೆ ಸಾಕು. ಪಶು ವೈದ್ಯರು, ತಜ್ಞ ಸಿಬ್ಬಂದಿ, ಉಪಕರಣ, ಔಷಧಿಯನ್ನು ಹೊತ್ತ ಸಂಚಾರಿ ಚಿಕಿತ್ಸಾಲಯವೇ ಮನೆ ಬಾಗಿಲಿಗೆ ಬರಲಿದೆ.

ರಾಷ್ಟ್ರೀಯ ಜಾನುವಾರು ಆರೋಗ್ಯ ಮತ್ತು ರೋಗ ನಿಯಂತ್ರಣ ಯೋಜನೆ ಅಡಿಯಲ್ಲಿ ಕೇಂದ್ರ ಸರ್ಕಾರದ ಸಂಪೂರ್ಣ ನೆರವಿನಲ್ಲಿ ಸಂಚಾರಿ ಪಶು ಚಿಕಿತ್ಸಾಲಯಗಳ ಸೇವೆ ಒದಗಿಸಲಾಗುತ್ತಿದೆ. ₹ 44 ಕೋಟಿ ವೆಚ್ಚದಲ್ಲಿ ರಾಜ್ಯದಾದ್ಯಂತ 275 ಸಂಚಾರ ಪಶು ಚಿಕಿತ್ಸಾಲಯಗಳನ್ನು ಸೇವೆಗೆ ಒದಗಿಸಲಾಗುತ್ತಿದೆ. ಆರಂಭಿಕ ಹಂತದಲ್ಲಿ 70 ಸಂಚಾರಿ ಪಶು ಚಿಕಿತ್ಸಾಲಯಗಳಿಗೆ ಶನಿವಾರ ಚಾಲನೆ ನೀಡಲಾಯಿತು.‌

ವಿಧಾನಸೌಧದ ಮುಂಭಾಗ ಶನಿವಾರ ನಡೆದ ಸಮಾರಂಭದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರ ಪಶುಸಂಗೋಪನೆ ಮತ್ತು ಹೈನುಗಾರಿಕೆ ಸಚಿವ ಪುರುಷೋತ್ತಮ್‌ ರೂಪಾಲಾ, ರಾಜ್ಯದ ಪಶುಸಂಗೋಪನಾ ಸಚಿವ ಪ್ರಭು ಚವ್ಹಾಣ್ ಮತ್ತು ಸಹಕಾರ ಸಚಿವ ಎಸ್‌.ಟಿ. ಸೋಮಶೇಖರ್‌ ಸಂಚಾರಿ ಪಶು ಚಿಕಿತ್ಸಾಲಯಗಳಿಗೆ ಚಾಲನೆ ನೀಡಿದರು.

ಏನೇನು ಸೌಲಭ್ಯಗಳಿವೆ?: ಸುಸಜ್ಜಿತ ವಾಹನಗಳನ್ನು ಸಂಚಾರಿ ಪಶು ಚಿಕಿತ್ಸಾಲಯಗಳನ್ನಾಗಿ ಪರಿವರ್ತಿಸಲಾಗಿದೆ. ಅದರಲ್ಲಿ ಒಬ್ಬ ಪಶುವೈದ್ಯರು, ಒಬ್ಬ ಪಶುವೈದ್ಯಕೀಯ ಸಹಾಯಕ, ಒಬ್ಬ ‘ಡಿ’ ದರ್ಜೆ ನೌಕರ ಮತ್ತು ಚಾಲಕ ಇರುತ್ತಾರೆ.

ಹವಾನಿಯಂತ್ರಣ ವ್ಯವಸ್ಥೆ, ಫ್ಯಾನ್‌, ಬಿಸಿ ನೀರು ಕಾಯಿಸಲು ಗೀಸರ್‌, ಪ್ರಾಣಿಗಳ ದೇಹದ ತೂಕ ಮಾಪನಕ್ಕೆ ಯಂತ್ರ, ವೈದ್ಯಕೀಯ ಪರಿಕರಗಳನ್ನು ಇರಿಸುವ ಪೆಟ್ಟಿಗೆ, ಔಷಧಿಗಳನ್ನು ಇರಿಸಲು ಫ್ರಿಡ್ಜ್‌, ಸಿಬ್ಬಂದಿ ಕುಳಿತುಕೊಳ್ಳಲು ಆಸನದ ವ್ಯವಸ್ಥೆ ಮಾಡಲಾಗಿದೆ. ಸಣ್ಣ ಪ್ರಾಣಿಗಳನ್ನು ವಾಹನದೊಳಕ್ಕೆ ಹತ್ತಿಸಿ, ಅಲ್ಲಿಯೇ ಮಲಗಿಸಿ ಚಿಕಿತ್ಸೆ ನೀಡಲು ಸ್ಥಳಾವಕಾಶವಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT