ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೋಹಿತ್ ಚಕ್ರತೀರ್ಥಗೆ ಯಕ್ಷಗಾನ ಸಮ್ಮೇಳನದ ದಿಕ್ಸೂಚಿ ಭಾಷಣ: ಆಕ್ಷೇಪ

Last Updated 7 ಫೆಬ್ರುವರಿ 2023, 11:36 IST
ಅಕ್ಷರ ಗಾತ್ರ

ಉಡುಪಿ: ಫೆ.11, 12ರಂದು ಉಡುಪಿಯಲ್ಲಿ ನಡೆಯಲಿರುವ ರಾಜ್ಯಮಟ್ಟದ ಸಮಗ್ರ ಯಕ್ಷಗಾನ ಸಮ್ಮೇಳನದ ಗೋಷ್ಠಿಗಳ ಉದ್ಘಾಟನೆ ಹಾಗೂ ದಿಕ್ಸೂಚಿ ಭಾಷಣ ಮಾಡಲು ಲೇಖಕ ರೋಹಿತ್‌ ಚಕ್ರತೀರ್ಥರಿಗೆ ಅವಕಾಶ ನೀಡಿರುವುದಕ್ಕೆ ಆಕ್ಷೇಪಗಳು ವ್ಯಕ್ತವಾಗಿವೆ.

‘ಯಾವ ಮಾನದಂಡದ ಆಧಾರದಲ್ಲಿ ರೋಹಿತ್ ಚಕ್ರತೀರ್ಥರಿಗೆ ಗೋಷ್ಠಿಗಳ ದಿಕ್ಸೂಚಿ ಭಾಷಣದ ಹೊಣೆಗಾರಿಕೆ ನೀಡಲಾಗಿದೆ. ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಿರಿಯ ಯಕ್ಷಗಾನ ಕಲಾವಿದರು ಇಲ್ಲವೇ’ ಎಂದು ರಂಗಕರ್ಮಿ ಉದ್ಯಾವರ ನಾಗೇಶ್ ಕುಮಾರ್ ಪ್ರಶ್ನಿಸಿದ್ದಾರೆ.

ಕೊಳ್ಯೂರು ರಾಮಚಂದ್ರ ರಾಯರು, ಶ್ರೀಧರ ಹಂದೆ, ಗೋವಿಂದ ಭಟ್ಟರಂತಹ ದಿಗ್ಗಜರನ್ನು ಬಿಟ್ಟು ರೋಹಿತ್ ಚಕ್ರತೀರ್ಥಗೆ ಮಣೆ ಹಾಕುವ ಔಚಿತ್ಯವಾದರೂ ಏನಿತ್ತು. ಇದು ಯಕ್ಷಗಾನ ಸಮ್ಮೇಳನವೇ ಅಥವಾ ರಾಜಕೀಯ ಸಮ್ಮೇಳನವೇ ಎಂಬುದನ್ನು ಸ್ಪಷ್ಟಪಡಿಸಬೇಕು ಎಂದು ಒತ್ತಾಯಿಸಿದರು.

ಈಚೆಗೆ ನಡೆದ ಮಲ್ಪೆ ಬೀಚ್‌ ಉತ್ಸವ ಹಾಗೂ ಪರಶುರಾಮ ಥೀಂ ಪಾರ್ಕ್ ಉದ್ಘಾಟನಾ ಕಾರ್ಯಕ್ರಮವನ್ನು ಅಟಲ್ ಉತ್ಸವದಂತೆ ಆಚರಿಸಲಾಗಿದೆ. ಸರ್ಕಾರಿ ಕಾರ್ಯಕ್ರಮಗಳನ್ನು ಬಿಜೆಪಿಯ ತತ್ವ–ಸಿದ್ಧಾಂತಗಳನ್ನು ಪ್ರಚಾರ ಮಾಡುವ ವೇದಿಕೆಯಾಗಿ ಬಳಸಲಾಗುತ್ತಿದೆ. ಸಾಂಸ್ಕೃತಿಕ ರಂಗವನ್ನು ರಾಜಕೀಯಗೊಳಿಸಲಾಗುತ್ತಿದೆ ಎಂದು ವಾಗ್ದಾಳಿ ನಡೆಸಿದರು.

ಉಡುಪಿ ವಿಧಾನಸಭಾ ಕ್ಷೇತ್ರದ ಸಂಭಾವ್ಯ ಅಭ್ಯರ್ಥಿಯಾಗಿ ರೋಹಿತ್ ಚಕ್ರತೀರ್ಥ ಹೆಸರು ಮುನ್ನಲೆಗೆ ಬಂದಿದ್ದು, ಅವರನ್ನು ಸಮಾಧಾನಗೊಳಿಸಲು ಗೋಷ್ಠಿಯಲ್ಲಿ ದಿಕ್ಸೂಚಿ ಭಾಷಣ ಮಾಡುವ ಅವಕಾಶ ನೀಡಲಾಗಿದೆ ಎಂಬ ಸಂಶಯ ಕಾಡುತ್ತಿದೆ.

ಉಡುಪಿಯಲ್ಲಿ ರಾಜ್ಯಮಟ್ಟದ ಪ್ರಥಮ ಯಕ್ಷಗಾನ ಸಮ್ಮೇಳನ ನಡೆಯುತ್ತಿರುವುದು ಸಾಂಸ್ಕೃತಿಕ ವಲಯದಲ್ಲಿ ಸಂತಸ ತಂದಿದೆ. ಆದರೆ, ಸಮ್ಮೇಳನದ ಆಮಂತ್ರಣ ಪತ್ರಿಕೆಯನ್ನು ನೋಡಿದಾಗ ರಾಜಕೀಯ ಸಮ್ಮೇಳನದಂತೆ ಭಾಸವಾಗುತ್ತಿದೆ ಎಂದು ಉದ್ಯಾವರ ನಾಗೇಶ್ ಕುಮಾರ್ ಬೇಸರ ವ್ಯಕ್ತಪಡಿಸಿದರು.

ಪಠ್ಯ ಪುಸ್ತಕ ಪರಿಷ್ಕರಣೆ ಹೆಸರಿನಲ್ಲಿ ಇತಿಹಾಸವನ್ನು ತಿರುಚಿರುವ ರೋಹಿತ್ ಚಕ್ರತೀರ್ಥರನ್ನು ದಿಕ್ಸೂಚಿ ಭಾಷಣಕ್ಕೆ ಆಹ್ವಾನಿಸಿರುವುದು ಮತ್ತೊಂದು ಗೊಂದಲ ಸೃಷ್ಟಿಗೆ ಕಾರಣವಾಗಲಿದೆ ಎಂದು ಕಾಂಗ್ರೆಸ್ ಮುಖಂಡ ರಮೇಶ್ ಕಾಂಚನ್ ಟೀಕಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT