ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕತ್ತೆ ಸಾಕಾಣಿಕೆ: ರಾಜ್ಯದ ಮೊದಲ ಕೇಂದ್ರ ಆರಂಭ

Last Updated 7 ಜೂನ್ 2022, 19:31 IST
ಅಕ್ಷರ ಗಾತ್ರ

ಮಂಗಳೂರು: ಬಂಟ್ವಾಳ ತಾಲ್ಲೂಕು ಇರಾ ಗ್ರಾಮ ಪಂಚಾಯಿತಿಯ ಪರ್ಲಡ್ಕದಲ್ಲಿ ರಾಜ್ಯದ ಮೊದಲ ಕತ್ತೆ ಸಾಕಾಣಿಕೆ ಮತ್ತು ತರಬೇತಿ ಕೇಂದ್ರ ಬುಧವಾರ ಉದ್ಘಾಟನೆಗೊಳ್ಳಲಿದೆ.

ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಕೆಲವು ವರ್ಷಗಳ ಕಾಲ ದುಡಿದು, ಅ ನಂತರ ಇರಾದಲ್ಲಿ ‘ಐಸಿರಿ ಫಾರ್ಮ್‌’ ಆರಂಭಿಸಿರುವ, ರಾಮನಗರ ಮೂಲದ ಶ್ರೀನಿವಾಸ ಗೌಡ ಅವರು ಈ ಕೇಂದ್ರ ಸ್ಥಾಪಿಸಿದ್ದಾರೆ. ಪ್ರಸಕ್ತ ಈ ಕೇಂದ್ರದಲ್ಲಿ 20 ಕತ್ತೆಗಳಿವೆ. ಅವುಗಳಲ್ಲಿ 12 ಕತ್ತೆಗಳು ಹಾಲು ಕೊಡುತ್ತಿವೆ. ಒಂದು ಕತ್ತೆ ಸಾಧಾರಣವಾಗಿ ಅರ್ಧ ಲೀಟರ್‌ ಹಾಲು ಕೊಡುತ್ತಿದ್ದು, ನಿತ್ಯ 6ರಿಂದ 7 ಲೀಟರ್‌ ಹಾಲು ಸಂಗ್ರಹವಾಗುತ್ತಿದೆ.

ಶ್ರೀನಿವಾಸ ಅವರು ಈಗಾಗಲೇ ಖಡಕನಾಥ ಕೋಳಿ, ಕುರಿ ಮತ್ತು ಮೇಕೆ ಸಾಕಾಣಿಕೆ ಮಾಡುತ್ತಿದ್ದಾರೆ.

‘ಕತ್ತೆ ಹಾಲಿನಲ್ಲಿ ಕೊಬ್ಬಿನ ಅಂಶ ಹಾಗೂ ಕ್ಯಾಲೊರಿ ಪ್ರಮಾಣ ಕಡಿಮೆ ಇರುತ್ತದೆ. ಜನಸಾಮಾನ್ಯರಿಗೂ ಇದು ಲಭ್ಯವಾಗುವಂತೆ ಮಾಡಲು ಯೋಜನೆ ರೂಪಿಸಿದ್ದೇನೆ. ಸ್ವತಃ ಬಾಟ್ಲಿಂಗ್‌ ಘಟಕಆರಂಭಿಸಿ, 30, 60, 100 ಹಾಗೂ 200 ಮಿ.ಲೀ ಬಾಟಲ್‌ಗಳನ್ನು ಮಾರುಕಟ್ಟೆಗೆ ಬಿಡಲಾಗುವುದು. 30 ಮಿ.ಲೀ ಹಾಲು ಸುಮಾರು ₹150 ದರಕ್ಕೆ ಲಭ್ಯವಾಗಲಿದೆ’ ಎಂದು ಶ್ರೀನಿವಾಸಗೌಡ ತಿಳಿಸಿದರು.

‘ಇನ್‌ಸ್ಟಿಟ್ಯೂಟ್‌ ಆಫ್‌ ಅನಿಮಲ್‌ಹೆಲ್ತ್‌ ಆ್ಯಂಡ್‌ ವೆಟರ್ನರಿ ಬಯಲಾಜಿಕಲ್ಸ್‌ ಸಂಸ್ಥೆಯ ಮಾಜಿ ನಿರ್ದೇಶಕ ಡಾ. ಆರ್‌.ಎನ್‌. ಶ್ರೀನಿವಾಸ ಗೌಡ ಅವರಿಂದ ಪ್ರೇರಣೆ ಪಡೆದು ಇದನ್ನು ಆರಂಭಿಸಿದ್ದೇನೆ. ದೇಶದಲ್ಲಿ ಕತ್ತೆಗಳ ಸಂಖ್ಯೆಯಲ್ಲಿ ಶೇ 61.2ರಷ್ಟು ಇಳಿಕೆಯಾಗಿರುವುದನ್ನು ಗಮನಿಸಿದ್ದ ಡಾ. ಶ್ರೀನಿವಾಸ ಗೌಡ ಅವರು, ಕತ್ತೆ ಸಾಕಾಣಿಕೆಯನ್ನು ಉತ್ತೇಜಿಸುವಂತೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರುತ್ತಿದ್ದರು. ದೇಶದಲ್ಲಿ ಪ್ರಸಕ್ತ 1.2 ಲಕ್ಷ ಕತ್ತೆಗಳು ಇವೆ’ ಎಂದು ಅವರು ತಿಳಿಸಿದರು.

ಗುಜರಾತ್‌ನ (ಹಲರಿ) ಹಾಗೂ ಆಂಧ್ರದ ತಳಿಗಳ ಕತ್ತೆಗಳನ್ನು ಶ್ರೀನಿವಾಸ ಗೌಡ ಅವರು ತಮ್ಮ ಫಾರ್ಮ್‌ನಲ್ಲಿ ಸಾಕುತ್ತಿದ್ದಾರೆ. ಪ್ರಸಕ್ತ 2.5 ಎಕರೆ ವಿಸ್ತೀರ್ಣದಲ್ಲಿ ಐಸಿರಿ ಫಾರ್ಮ್‌ ಹಬ್ಬಿದೆ.

ಸ್ವ ಉದ್ಯೋಗ ಆರಂಭಿಸಲು ಬಯಸುವ, ಆಸಕ್ತ ಯುವಕರಿಗೆ ಕತ್ತೆ ಸಾಕಾಣಿಕೆ ಬಗ್ಗೆ ಉಚಿತವಾಗಿ ತರಬೇತಿ ನೀಡಲು ಸಹ ಶ್ರೀನಿವಾಸಗೌಡ (ಮೊ.96322 64308) ಮುಂದಾಗಿದ್ದಾರೆ.

ಉತ್ಪನ್ನ ದುಬಾರಿ:‘ಕತ್ತೆ ಹಾಲಿಗೆ ಲೀಟರ್‌ಗೆ ₹5,000ದಿಂದ ₹7,000ವರೆಗೆ ದರ ಇದೆ. ಮೂತ್ರಕ್ಕೆ ಲೀಟರ್‌ಗೆ ₹500– ₹600 ಹಾಗೂ ಲದ್ದಿಗೆ ಕೆ.ಜಿ.ಗೆ ₹600ರಿಂದ ₹700ರಷ್ಟು ದರ ಇದೆ’ ಎಂದು ಶ್ರೀನಿವಾಸ ಗೌಡ ತಿಳಿಸಿದರು.

ಈ ಹಾಲು ಮಧುಮೇಹ ನಿಯಂತ್ರಣ, ರೋಗನಿರೋಧಕ ಶಕ್ತಿ ಹೆಚ್ಚಿಸುತ್ತದೆ. ಅಲ್ಲದೇ ಈ ಹಾಲನ್ನು ಸೌಂದರ್ಯವರ್ಧಕ ತಯಾರಿಕೆಗೂ ಬಳಸಲಾಗುತ್ತಿದೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT