ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೋಂದಣಿ ಕಚೇರಿಯಲ್ಲಿ ಜನರ ಪರದಾಟ: ಸರ್ವರ್ ಸಮಸ್ಯೆ ತಂದ ‘ಅಮಾವಾಸ್ಯೆ’

ಸರ್ವರ್‌ ಡೌನ್‌ ಫಲಕ ಕಾಯಂ
Last Updated 13 ಆಗಸ್ಟ್ 2021, 19:57 IST
ಅಕ್ಷರ ಗಾತ್ರ

ಬೆಂಗಳೂರು: ಆಸ್ತಿ ನೋಂದಣಿಗೆ ಪದೇ ಪದೇ ತೊಡಕಾಗಿ ಕಾಡುವ ‘ಸರ್ವರ್ ಡೌನ್’ ಸಮಸ್ಯೆಯೂ ನೋಂದಣಿ ಮತ್ತು ಮುದ್ರಾಂಕ ಇಲಾಖೆಗೆ ತಲೆನೋವಾಗಿ ಕಾಡುತ್ತಿದೆ. ಮೂರು–ನಾಲ್ಕು ಇಲಾಖೆಗಳ ತಂತ್ರಾಂಶಗಳ ಮೇಲೆ ನೋಂದಣಿ ಇಲಾಖೆ ಅವಲಂಬಿತವಾಗಿದ್ದು, ಈ ಸಮಸ್ಯೆ ದಿನದಿಂದ ದಿನಕ್ಕೆ ಕಗ್ಗಂಟಾಗುತ್ತಲೇ ಹೋಗುತ್ತಿದೆ.

ಸರ್ವರ್ ಸಮಸ್ಯೆಯಿಂದಾಗಿ ನೋಂದಣಿ ಕಚೇರಿಯ ಕೆಲಸ ಮಾತ್ರವಲ್ಲ; ಕಂದಾಯ ಸೇರಿದಂತೆ ವಿವಿಧ ಇಲಾಖೆಗಳ ದಾಖಲೆಗಳನ್ನು ಪಡೆಯಲು ಜನ ಪರದಾಡುವಂತಾಗಿದೆ. ಸರ್ವರ್‌ ಸಮಸ್ಯೆಯನ್ನು ಸರಿಪಡಿಸಲು ಸರ್ಕಾರ ಆಸಕ್ತಿ ತೋರದೇ ಇರುವುದರಿಂದ, ಕಚೇರಿ ಕೆಲಸ ನಿರ್ವಹಿಸುವ ಸಿಬ್ಬಂದಿ ಮತ್ತು ನಾಗರಿಕರು ದಾಖಲೆ ಪಡೆಯುವ ವಿಷಯದಲ್ಲಿ ಕಗ್ಗತ್ತಲಿನ ಪರಿಸ್ಥಿತಿಯಲ್ಲೇ ಇರುವಂತಾಗಿದೆ ಎಂಬ ದೂರು ವ್ಯಾಪಕವಾಗುತ್ತಿದೆ.

ಉಪ ನೋಂದಣಾಧಿಕಾರಿ ಕಚೇರಿಗಳಲ್ಲಿ ನೋಂದಣಿ ಪ್ರಕ್ರಿಯೆ ನಿರ್ವಹಿಸುವ ತಂತ್ರಾಂಶದ ಹೆಸರು ಕಾವೇರಿ.ಇದೊಂದರಿಂದಲೇ ನೋಂದಣಿಪ್ರಕ್ರಿಯೆ ಪೂರ್ಣಗೊಳಿಸಲು ಆಗುವುದಿಲ್ಲ. ಕಂದಾಯ ಇಲಾಖೆ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ನಗರಾಭಿವೃದ್ಧಿ ಇಲಾಖೆಯ ತಂತ್ರಾಂಶಗಳನ್ನು ನೋಂದಣಿ ಇಲಾಖೆ ಅವಲಂಬಿಸಿದೆ.

ಕೃಷಿ ಭೂಮಿ ನೋಂದಣಿಗೆ ಕಂದಾಯ ಇಲಾಖೆಯ ‘ಭೂಮಿ’ ತಂತ್ರಾಂಶದ ಮೂಲಕ ಪಹಣಿ ಪಡೆದುಕೊಳ್ಳುತ್ತದೆ. ‘ಭೂಮಿ’ ತಂತ್ರಾಂಶದಲ್ಲಿ ದೋಷ ಕಾಣಿಸಿಕೊಂಡರೆ ಪಹಣಿ ದೊರೆಯದೆ ನೋಂದಣಿ ಪ್ರಕ್ರಿಯೆ ಸ್ಥಗಿತಗೊಳ್ಳುತ್ತಿದೆ. ಗ್ರಾಮ ವ್ಯಾಪ್ತಿಯ ಆಸ್ತಿ ಆಗಿದ್ದರೆ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ‘ಇ–ಸ್ವತ್ತು’ ತಂತ್ರಾಂಶದಿಂದ, ನಗರ ವ್ಯಾಪ್ತಿಯ ಆಸ್ತಿಯಾಗಿದ್ದರೆ ‘ಇ–ಆಸ್ತಿ’ ತಂತ್ರಾಶದಿಂದ ದಾಖಲೆಗಳನ್ನು ಕಾವೇರಿ ತಂತ್ರಾಂಶಕ್ಕೆ ಜೋಡಿಸಿಕೊಳ್ಳಬೇಕಾಗುತ್ತದೆ.

ವ್ಯಕ್ತಿಯೊಬ್ಬರು ಆಸ್ತಿಯಲ್ಲಿ ಭಾಗಶಃ ಮಾರಾಟ ಮಾಡುತ್ತಿದ್ದರೆ, ಅದಕ್ಕೆ ಬೇಕಿರುವ ನಕ್ಷೆಯನ್ನು ‘ಮೋಜಣಿ’ ತಂತ್ರಾಂಶದಿಂದ ಪಡೆಯಬೇಕಾಗುತ್ತದೆ. ನೋಂದಣಿಗೆ ಒಟಿಪಿಯನ್ನು ಇ–ಆಡಳಿತದ ಇಸಿಡಿಎಸ್‌ ಮೂಲಕ ಪಡೆಯಲಾಗುತ್ತದೆ. ನೋಂದಣಿ ಪ್ರಕ್ರಿಯೆ ನಡೆಸುವಾಗ ಯಾವುದೋ ಒಂದು ತಂತ್ರಾಂಶದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡರೆ ಇಡೀ ನೋಂದಣಿ ಪ್ರಕ್ರಿಯೆ ಅಲ್ಲೇ ನಿಲ್ಲುತ್ತದೆ.

2003ರಲ್ಲಿ ಅಭಿವೃದ್ಧಿಪಡಿಸಲಾಗಿರುವ ‘ಕಾವೇರಿ’ ತಂತ್ರಾಂಶದಲ್ಲೂ ಆಗಾಗ ತಾಂತ್ರಿಕ ತೊಂದರೆಗಳು ಎದುರಾಗುತ್ತವೆ. ಕೆಲವೊಮ್ಮೆ ಕಾವೇರಿ ತಂತ್ರಾಂಶ ಸರಿಯಾಗಿದ್ದರೂ, ಬೇರೆ ತಂತ್ರಾಂಶಗಳ ಲೋಪದಿಂದ ನೋಂದಣಿಗೆ ತೊಡಕಾಗುತ್ತದೆ. ಇದೆಲ್ಲದರ ಪರಿಣಾಮವಾಗಿ ನೋಂದಣಿ ಕಚೇರಿಗಳಲ್ಲಿ ದಿನವೂ ಸಿಬ್ಬಂದಿ ಮತ್ತು ಆಸ್ತಿ ನೋಂದಣಿಗೆ ಬರುವ ಜನ ಪರದಾಡುತ್ತಲೇ ಇದ್ದಾರೆ. ಸರ್ವರ್ ಡೌನ್ ಎಂಬ ಫಲಕಗಳು ಉಪನೋಂದಣಾಧಿಕಾರಿ ಕಚೇರಿಗಳಲ್ಲಿ ಕಾಯಂ ಆಗಿವೆ.

‘ವಾರದಲ್ಲಿ ಒಮ್ಮೆಯಾದರೂ ಈ ಸಮಸ್ಯೆ ನೋಂದಣಿ ಇಲಾಖೆಯನ್ನು ಕಾಡದೆ ಬಿಡುವುದಿಲ್ಲ. ಸರ್ವರ್ ಡೌನ್ ಎಂಬ ಸಿದ್ಧ ಉತ್ತರ ಕೇಳಿ ಜನ ರೋಸಿ ಹೋಗಿದ್ದಾರೆ. ಅದರಲ್ಲೂ ವಾರದ ಮೊದಲ ದಿನ(ಸೋಮವಾರ) ಸಮಸ್ಯೆ ಹೆಚ್ಚು ಎನ್ನುತ್ತಾರೆ ಪತ್ರ ಬರಹಗಾರರು.

‘ರಾಜ್ಯದ ಬಜೆಟ್‌ನಲ್ಲಿ ಶೇ 10ರಷ್ಟು ಮುದ್ರಾಂಕ ಮತ್ತು ನೋಂದಣಿ ಶುಲ್ಕದವರಮಾನ ಇದೆ. ಯಾವ ತಂತ್ರಾಂಶದಲ್ಲಿ ತಾಂತ್ರಿಕ ದೋಷ ಇದೆ ಎಂಬುದು ಜನರಿಗೆ ಮುಖ್ಯವಲ್ಲ. ಒಟ್ಟಾರೆ ನೋಂದಣಿ ಪ್ರಕ್ರಿಯೆ ಸುಗಮ ಆಗಬೇಕು. ಸಾಫ್ಟ್‌ವೇರ್ ಬದಲಿಸಿ ಸಮಸ್ಯೆ ಸರಿಪಡಿಸಬೇಕು’ ಎಂಬುದು ಅವರ ಆಗ್ರಹ.

‘3–4 ತಿಂಗಳಲ್ಲಿ ಸಮಸ್ಯೆ ಇತ್ಯರ್ಥ’

‘ಬೇರೆ ಬೇರೆ ಇಲಾಖೆಯ ತಂತ್ರಾಂಶದಲ್ಲಿ ದೋಷ ಕಾಣಿಸಿಕೊಂಡರೂ ನೋಂದಣಿ ಪ್ರಕ್ರಿಯೆ ಮುಂದುವರಿಸಲು ಆಗುವುದಿಲ್ಲ. ಒಟ್ಟಾರೆಯಾಗಿ ಜನ ಅದನ್ನು ನಮ್ಮ ಇಲಾಖೆಯ ಸರ್ವರ್ ಸಮಸ್ಯೆ ಎಂದು ಭಾವಿಸುತ್ತಾರೆ. ಸಾಫ್ಟ್‌ವೇರ್ ಬದಲಿಸಿ ಸಮಸ್ಯೆಯನ್ನು ಒಟ್ಟಾರೆಯಾಗಿ ಸರಿಪಡಿಸಲು ಇ–ಆಡಳಿತ ಪ್ರಯತ್ನಿಸುತ್ತಿದೆ’ ಎಂದು ನೋಂದಣಿ ಮತ್ತು ಮುದ್ರಾಂಕ ಇಲಾಖೆ ಆಯುಕ್ತ ಕೆ.ಪಿ.ಮೋಹನ್‌ರಾಜ್ ಹೇಳಿದರು.

ಆಸ್ತಿಯೇ ಇಲ್ಲದೆ ನೋಂದಣಿ ಆಗುವುದು ಸೇರಿ ಅಕ್ರಮಗಳನ್ನು ತಡೆಗಟ್ಟುವ ಉದ್ದೇಶದಿಂದ ಎಲ್ಲಾ ತಂತ್ರಾಂಶಗಳಿಂದ ದಾಖಲೆಗಳನ್ನು ಪಡೆದು ನೋಂದಣಿ ಪ್ರಕ್ರಿಯೆ ನಡೆಸಲಾಗುತ್ತಿದೆ ಎಂದರು. ‘ಬ್ಯಾಟರಿ, ಪ್ರಿಂಟರ್, ಕಂಪ್ಯೂಟರ್ ರೀತಿಯ ಹಾರ್ಡ್‌ವೇರ್‌ ಸಮಸ್ಯೆಗಳನ್ನು ಪರಿಹರಿಸಲು ಟೆಂಡರ್ ಪ್ರಕ್ರಿಯೆ ನಡೆಯುತ್ತಿದ್ದು, ಒಂದು ತಿಂಗಳಲ್ಲಿ ಹಾರ್ಡ್‌ವೇರ್ ಸಮಸ್ಯೆ ಸರಿಯಾಗಲಿದೆ. ಮೂರು–ನಾಲ್ಕು ತಿಂಗಳಲ್ಲಿ ಸಾಫ್ಟ್‌ವೇರ್ ಸಮಸ್ಯೆಯೂ ಇತ್ಯರ್ಥವಾಗಲಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT