ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸುಪ್ರೀಂ’ ಆದೇಶ ಕೊಟ್ಟರೂ ರಾಜ್ಯಕ್ಕೆ ಸಿಕ್ಕಿಲ್ಲ ‘ಆಮ್ಲಜನಕ’

ಹಂಚಿಕೆ 1,015 ಟನ್ ಸಿಕ್ಕಿದ್ದು 765 ಟನ್
Last Updated 15 ಮೇ 2021, 19:54 IST
ಅಕ್ಷರ ಗಾತ್ರ

ಬೆಂಗಳೂರು: ಕೋವಿಡ್‌ ರೋಗಿಗಳ ಚಿಕಿತ್ಸೆಗಾಗಿ ರಾಜ್ಯಕ್ಕೆ ಪ್ರತಿದಿನ ಅಗತ್ಯ ಇರುವ 1,200 ಟನ್‌ ಆಮ್ಲಜನಕವನ್ನು ಹಂಚಿಕೆ ಮಾಡುವಂತೆ ಹೈಕೋರ್ಟ್ ನೀಡಿದ್ದ ಆದೇಶವನ್ನು ಸುಪ್ರೀಂ ಕೋರ್ಟ್‌ ಎತ್ತಿ ಹಿಡಿದಿದ್ದರೂ ಕೇಂದ್ರ ಸರ್ಕಾರ 1,015 ಟನ್ ಹಂಚಿಕೆ ಮಾಡಿದೆ. ಆದರೆ, ಅದರಲ್ಲೂ ಲಭ್ಯವಾಗುತ್ತಿರುವುದು 765 ಟನ್‌ ಮಾತ್ರ!

ಮೇ 11ರಿಂದ ಅನ್ವಯವಾಗುವಂತೆ ರಾಜ್ಯಕ್ಕೆ ಕೇಂದ್ರ 1,015 ಟನ್‌ಹಂಚಿಕೆ ಮಾಡಿದೆ. ಈ ಪೈಕಿ, ರಾಜ್ಯದಲ್ಲಿರುವ ಏಳು ಆಮ್ಲಜನಕ ಉತ್ಪಾದನಾ ಘಟಕಗಳಿಂದ 765 ಟನ್‌, ರಾಜ್ಯದಲ್ಲಿಯೇ ಇರುವ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳಿಂದ (ಎಂಎಸ್‌ಎಂಇ) 60 ಟನ್‌, ಹೊರರಾಜ್ಯಗಳಿಂದ 190 ಟನ್‌ (ಒಡಿಶಾದಿಂದ 160, ವಿಶಾಖಪಟ್ಟಣದಿಂದ 30) ಹಂಚಿಕೆ ಆಗಿದೆ. ಹಂಚಿಕೆಯ ಪಾಲಿನಲ್ಲಿ ರಾಜ್ಯದ ಏಳು ಘಟಕಗಳಿಂದ ಮಾತ್ರ ಆಮ್ಲಜನಕ ಸಿಗುತ್ತಿದ್ದು, ಎಂಎಸ್‌ಎಂಇ ಘಟಕಗಳು ಉತ್ಪಾದನೆ ಆರಂಭಿಸಿಲ್ಲ.

ಜಿಲ್ಲೆಗಳಿಂದ ಲಭ್ಯ ಮಾಹಿತಿ ಅನ್ವಯ ರಾಜ್ಯದಲ್ಲಿ ಗುರುವಾರ (ಮೇ 13) 817.25 ಟನ್‌ ಆಮ್ಲಜನಕ ಬಳಕೆ ಆಗಿದೆ. ಶುಕ್ರವಾರ (ಮೇ 14) ಈ ಪ್ರಮಾಣ 828.25 ಟನ್‌ಗೆ ಏರಿಕೆ ಆಗಿದೆ. ಬೆಂಗಳೂರಿನಲ್ಲಿ ಅತೀ ಹೆಚ್ಚು 285 ಟನ್‌ ಬಳಕೆ ಆಗಿದೆ. ಕೋವಿಡ್‌ ಪ್ರಕರಣಗಳು ಹೆಚ್ಚು ದೃಢಪಟ್ಟಿರುವ ಮೈಸೂರು, ಬಳ್ಳಾರಿ, ಕಲಬುರ್ಗಿ, ಧಾರವಾಡ, ಬೆಳಗಾವಿ ಜಿಲ್ಲೆಗಳಲ್ಲಿ 30ರಿಂದ 50 ಟನ್‌ಗಳಂತೆ ಬಳಕೆ ಆಗಿದೆ.

‘ಹಂಚಿಕೆಯಾದ ಆಮ್ಲಜನಕದಲ್ಲಿ ರಾಜ್ಯಕ್ಕೆ ಒಡಿಶಾದಲ್ಲಿರುವ ಉತ್ಪಾದನಾ ಘಟಕಗಳಿಂದ ಹಂಚಿಕೆಯಾಗಿರುವುದು ಈವರೆಗೂ ಬಂದಿಲ್ಲ. ಅಲ್ಲಿಂದ ತರಲು ರಾಜ್ಯ ಸರ್ಕಾರ ಎಲ್ಲ ಪ್ರಯತ್ನಗಳನ್ನು ಮಾಡುತ್ತಿದೆ. ಆದರೆ, ಸಾಧ್ಯವಾಗುತ್ತಿಲ್ಲ’ ಎಂದು ಆಮ್ಲಜನಕ ವ್ಯವಸ್ಥೆಯ ರಾಜ್ಯ ನೋಡಲ್‌ ಅಧಿಕಾರಿ ಮುನೀಶ್‌ ಮೌದ್ಗಿಲ್ ಹೇಳಿದರು.

‘ಸದ್ಯದ ಸ್ಥಿತಿಯಲ್ಲಿ ನಮಗೆ 1,200 ಟನ್‌ ಬೇಕೇಬೇಕು. ಹೀಗಾಗಿ ಕೊರತೆ ಇದೆ. ಪರ್ಯಾಯ ವ್ಯವಸ್ಥೆ ಕೂಡಾ ಏನೂ ಆಗಿಲ್ಲ. ಕೇಂದ್ರ ಸರ್ಕಾರ ಹೆಚ್ಚುವರಿಯಾಗಿ ಹಂಚಿಕೆ ಮಾಡಬೇಕು’ ಎಂದು ಅವರು ಹೇಳಿದರು.

‘ರಾಜ್ಯಕ್ಕೆ ‘ಆಕ್ಸಿಜನ್‌ ಎಕ್ಸ್‌ಪ್ರೆಸ್‌’ ರೈಲಿನ ಮೂಲಕ ಮೇ 12ರಂದು ಟಾಟಾ ನಗರದಿಂದ (ಜಮ್‌ಶೆಡ್‌ಪುರ) 120 ಟನ್‌, ಶನಿವಾರ (ಮೇ 15) ಬೆಳಿಗ್ಗೆ ಒಡಿಶಾದ ಕಳಿಂಗನಗರ, ಸಂಜೆ ಟಾಟಾನಗರದಿಂದ ತಲಾ 120 ಟನ್‌ ಆಮ್ಲಜನಕ ಬಂದಿದೆ. ಇದು ಕೇಂದ್ರದ ಹಂಚಿಕೆ ಪಾಲು ಅಲ್ಲ. ಆಮ್ಲಜನಕಕ್ಕಾಗಿ ರಾಜ್ಯ ಸರ್ಕಾರ ಮಾಡಿದ್ದ ಮನವಿಯಂತೆ ಅಲ್ಲಿನ ಘಟಕಗಳು ಪೂರೈಸಿವೆ’ ಎಂದು ಆಮ್ಲಜನಕ ಸರಬರಾಜು ಸಮಿತಿಯ ನೇತೃತ್ವ ವಹಿಸಿರುವ ಐಪಿಎಸ್‌ ಅಧಿಕಾರಿ ಪ್ರತಾಪ್‌ ರೆಡ್ಡಿ ಹೇಳಿದರು.

‘ಆಮ್ಲಜನಕ ಸಾಗಣೆ ಮಾಡುವಂತೆ ರಾಜ್ಯ ಸರ್ಕಾರ ರೈಲ್ವೆಗೆ ಮಾಡಿದ ಮನವಿಯಂತೆ ‘ಆಕ್ಸಿಜನ್‌ ಎಕ್ಸ್‌ಪ್ರೆಸ್‌’ ರೈಲಿನಲ್ಲಿ ಟಾಟಾನಗರ (ಜಾರ್ಖಂಡ್‌) ಮತ್ತು ಕಳಿಂಗನಗರದಿಂದ (ಒಡಿಶಾ) ಆರು ಕಂಟೇನರ್‌ಗಳಲ್ಲಿ (ತಲಾ 120 ಟನ್‌) ಮೂರು ಬಾರಿ ವೈಟ್‌ಫೀಲ್ಡ್‌ನಲ್ಲಿರುವ ಇನ್‌ಲ್ಯಾಂಡ್‌ ಕಂಟೇನರ್‌ ಡಿಪೋಗೆ (ಐಸಿಡಿ) ಆಮ್ಲಜನಕ ಬಂದಿದೆ. ಇದು ಕೇಂದ್ರ ಹಂಚಿಕೆ ಮಾಡಿದ ಆಮ್ಲಜನಕದಲ್ಲಿನ ಪಾಲೊ ಎಂಬುವುದನ್ನು ರಾಜ್ಯ ಸರ್ಕಾರ ಹೇಳಬೇಕು. ಸಾಗಣೆಯಷ್ಟೆ ರೈಲ್ವೆಯ ಕೆಲಸ’ ಎಂದು ನೈರುತ್ಯ ರೈಲ್ವೆಯ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಅನೀಶ್‌ ಹೆಗಡೆ ತಿಳಿಸಿದರು.

‘ಲೋಡಿಂಗ್‌ಗಾಗಿ ಟ್ಯಾಂಕರ್‌ಗಳು ಕಾಯುತ್ತಿವೆ’
‘ಹೊರ ರಾಜ್ಯಗಳಿಂದ ಕರ್ನಾಟಕಕ್ಕೆ ಹಂಚಿಕೆಯಾದ ಆಮ್ಲಜನಕದ ಪಾಲಿನಲ್ಲಿ 15 ದಿನದ ಹಿಂದೆ ಒಮ್ಮೆ ಒಡಿಶಾದಿಂದ ಎರಡು ಟ್ಯಾಂಕರ್‌ಗಳಲ್ಲಿ 30 ಟನ್‌ ತರಲಾಗಿದೆ. ಅಲ್ಲಿಗೇ ಮತ್ತೆ ಎರಡು ಟ್ಯಾಂಕರ್‌ ಕಳುಹಿಸಿದ್ದು, ಲೋಡಿಂಗ್‌ಗಾಗಿ ಮೂರು ದಿನಗಳಿಂದ ಅಲ್ಲಿ ಕಾಯುತ್ತಿವೆ’ ಎಂದು ಪ್ರತಾಪ್‌ ರೆಡ್ಡಿ ತಿಳಿಸಿದರು.

‘ರಾಜ್ಯದ ಆಮ್ಲಜನಕ ಸೌಲಭ್ಯದ ಹಾಸಿಗೆಗಳ ಸಾಮರ್ಥ್ಯದ ಪ್ರಕಾರ 1,200 ಟನ್‌ ಅಗತ್ಯವಿದೆ. ಸದ್ಯ ಸಿಗುವಷ್ಟು ಪ್ರಮಾಣವನ್ನು ಬೇಡಿಕೆ ಆಧರಿಸಿ ಜಿಲ್ಲೆಗಳಿಗೆ ಹಂಚಿಕೆ ಮಾಡುತ್ತಿದ್ದೇವೆ. ರಾಜ್ಯದಲ್ಲಿರುವ ಆಮ್ಲಜನಕ ಘಟಕಗಳು ಸ್ವಲ್ಪ ಹೆಚ್ಚು ಉತ್ಪಾದನೆ ಮಾಡಿ ಕೊಡುತ್ತಿರುವುದರಿಂದ ಕೇಂದ್ರದ ಹಂಚಿಕೆಯ ಪಾಲಿಗಿಂತ (765 ಟನ್‌) ಹೆಚ್ಚು ಪ್ರಮಾಣ ಜಿಲ್ಲೆಗಳಿಗೆ ಹಂಚಲು ಸಾಧ್ಯವಾಗಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT