ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಎಸ್‌ವೈ ಕುಟುಂಬದ ವಿರುದ್ಧ ಎಸಿಬಿಗೆ ದೂರು

ಬಿಎಂಆರ್‌ಸಿಎಲ್‌ನಿಂದ ಅಕ್ರಮವಾಗಿ ₹ 22 ಕೋಟಿ ಪರಿಹಾರ ಪಡೆದ ಆರೋಪ
Last Updated 13 ಸೆಪ್ಟೆಂಬರ್ 2021, 17:42 IST
ಅಕ್ಷರ ಗಾತ್ರ

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಕುಟುಂಬದ ಸದಸ್ಯರ ಒಡೆತನದ ಧವಳಗಿರಿ ಡೆವಲಪರ್ಸ್‌ ಕಂಪನಿ ಸಾರ್ವಜನಿಕ ಉದ್ದೇಶಕ್ಕೆ ಮೀಸಲಿರಿಸಿದ್ದ ರಸ್ತೆ ಹಾಗೂ ಅಸ್ತಿತ್ವದಲ್ಲೇ ಇಲ್ಲದ ಜಮೀನುಗಳನ್ನು ಖರೀದಿಸಿದಂತೆ ದಾಖಲೆ ಸೃಷ್ಟಿಸಿ ಬೆಂಗಳೂರು ಮೆಟ್ರೊ ರೈಲು ನಿಗಮದಿಂದ ₹ 22.92 ಕೋಟಿ ಪರಿಹಾರ ಪಡೆದು ವಂಚಿಸಿದೆ ಎಂದು ಆರೋಪಿಸಿ ವಕೀಲ ಟಿ.ಜೆ. ಅಬ್ರಹಾಂ ಭ್ರಷ್ಟಾಚಾರ ನಿಗ್ರಹ ದಳಕ್ಕೆ (ಎಸಿಬಿ) ದೂರು ನೀಡಿದ್ದಾರೆ.

ಬಿ.ಎಸ್‌. ಯಡಿಯೂರಪ್ಪ, ಅವರ ಮಕ್ಕಳಾದ ಬಿ.ವೈ. ವಿಜಯೇಂದ್ರ, ಬಿ. ವೈ. ರಾಘವೇಂದ್ರ, ಅಳಿಯ ಆರ್‌.ಎನ್‌. ಸೋಹನ್‌ ಕುಮಾರ್‌ ಮತ್ತು ಕೆ. ಹೊನ್ನಪ್ಪ ನಿಶಿತ್‌ ಎಂಬುವವರ ವಿರುದ್ಧ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ ಅಡಿಯಲ್ಲಿ ಎಫ್‌ಐಆರ್‌ ದಾಖಲಿಸಿ ತನಿಖೆ ನಡೆಸುವಂತೆ ಎಸಿಬಿಗೆ ಸೆಪ್ಟೆಂಬರ್‌ 9ರಂದು ಸಲ್ಲಿಸಿರುವ ದೂರಿನಲ್ಲಿ ಮನವಿ ಮಾಡಿದ್ದಾರೆ.

‘ಬಶೀರ್‌ ಎಂಬುವವರು ವೈಯಾಲಿಕಾವಲ್‌ ಗೃಹ ನಿರ್ಮಾಣ ಸಹಕಾರ ಸಂಘದಿಂದ ಪಡೆದಿದ್ದ ನಿವೇಶನದ ಪಕ್ಕದಲ್ಲಿದ್ದ ರಸ್ತೆಯನ್ನೂ ತಮ್ಮ ನಿವೇಶನದ ಜತೆ ವಿಲೀನ ಮಾಡುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಬೆಂಗಳೂರು ಅಭಿವೃದ್ಧಿ ‍ಪ್ರಾಧಿಕಾರ ಮೂರು ಬಾರಿ ತಿರಸ್ಕರಿಸಿತ್ತು. ಆದರೆ, ಅದನ್ನು ವಿಲೀನಗೊಳಿಸಿ ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಆದೇಶ ಹೊರಡಿಸಿದ್ದರು. ರಸ್ತೆಯೂ ಸೇರಿದಂತೆ 13.1 ಗುಂಟೆ ಜಮೀನನ್ನು ಬಶೀರ್‌ ಬಳಿ ಶೇಖರಪ್ಪ ಎಂಬುವವರು ಖರೀದಿಸಿ, ಬಳಿಕ ಧವಳಗಿರಿ ಡೆವಲಪರ್ಸ್‌ಗೆ ಮಾರಿದ್ದರು’ ಎಂಬ ಆರೋಪ ದೂರಿನಲ್ಲಿದೆ.

‘ನಾಗವಾರ ಹೋಬಳಿಯಲ್ಲಿನ ಆ 13.1 ಗುಂಟೆಯ ಜತೆಗೆ ಚೆಂಗಪ್ಪ ಮತ್ತು ಕಮಲ್‌ ಪಾಶಾ ಎಂಬುವವರು 100 ಸರ್ವೆ ನಂಬರ್‌ಗಳನ್ನು ಉಲ್ಲೇಖಿಸಿ 25,000 ಚದರ ಅಡಿ ಜಮೀನನ್ನು ಧವಳಗಿರಿ ಡೆವಲಪರ್ಸ್‌ಗೆ ಮಾರಿದ್ದರು. ಒಂದೇ ಕ್ರಯಪತ್ರದಲ್ಲಿ ಈ ವಹಿವಾಟು ನಡೆದಿದೆ. ವಾಸ್ತವದಲ್ಲಿ 100 ಸರ್ವೆ ನಂಬರ್‌ಗಳಲ್ಲಿ ಈ ಜಮೀನು ಇರಲೇ ಇಲ್ಲ. ಆದರೆ, ಈ ಎಲ್ಲವನ್ನೂ ಮೆಟ್ರೊ ಯೋಜನೆಗೆ ಸ್ವಾಧೀನಪಡಿಸಿಕೊಳ್ಳಲಾಗಿದೆ ಎಂಬಂತೆ ದಾಖಲೆ ಸೃಷ್ಟಿಸಿ, ಧವಳಗಿರಿ ಡೆವಲಪರ್ಸ್‌ ₹ 22.92 ಕೋಟಿ ಪರಿಹಾರ ಪಡೆದಿದೆ’ ಎಂದು ಆರೋಪಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT