ಪಠ್ಯ ಪೂರ್ಣಕ್ಕೆ ಶಿಕ್ಷಕರ ರಜೆ ಕಡಿತ: ಶಿಕ್ಷಣ ಸಚಿವ ಬಿ.ಸಿ.ನಾಗೇಶ್
ಶಿವಮೊಗ್ಗ: ಪಠ್ಯ ಕಡಿತಗೊಳಿಸದೇ, ಶಿಕ್ಷಕರ ರಜೆಗಳನ್ನು ಕಡಿಮೆ ಮಾಡಿ ಪಾಠಗಳನ್ನು ಪೂರ್ಣಗೊಳಿಸುವ ಕುರಿತು ಚರ್ಚೆ ನಡೆಯುತ್ತಿದೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಹೇಳಿದರು.
ನಗರದಲ್ಲಿ ಶನಿವಾರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
‘ಇರುವ ಪಠ್ಯ ಪೂರ್ಣಗೊಳಿಸಿದರೆ ಮಕ್ಕಳಿಗೆ ಲಾಭವಾಗುತ್ತದೆ. ಪಠ್ಯ ಕಡಿತಗೊಳಿಸಿದರೆ ಅವರಿಗೆ ನಷ್ಟವಾಗುತ್ತದೆ. ಒಂದೂವರೆ ವರ್ಷಗಳಿಂದ ಮಕ್ಕಳಿಗೆ ಸಮರ್ಪಕ ರೀತಿಯಲ್ಲಿ ಕಲಿಕೆ ಸಾಧ್ಯವಾಗಿಲ್ಲ. ಶಿಕ್ಷಕರು ರಜೆಗಳನ್ನು ತ್ಯಾಗ ಮಾಡುವ ಮೂಲಕ ಮಕ್ಕಳಿಗೆ ಸೇತುಬಂಧ ಶಿಕ್ಷಣ (ಬ್ರಿಜ್ ಕೋರ್ಸ್) ಕೊಡಬೇಕಿದೆ. ಇದರಿಂದ ಕಲಿಕಾ ನಷ್ಟ ಸರಿದೂಗಿಸಬಹುದು. ಮುಂದಿನ ತರಗತಿಗಳಿಗೆ ಅನುಕೂಲವಾಗುತ್ತದೆ. ಇಂತಹ ನಿರ್ಣಯ ಕೈಗೊಳ್ಳಲು ಶಿಕ್ಷಕರ ಸಹಕಾರ ಅಗತ್ಯ’ ಎಂದು ಪ್ರತಿಪಾದಿಸಿದರು.
ಶಿಕ್ಷಕರು 6ರಿಂದ 10ನೇ ತರಗತಿಗಳನ್ನು ಚೆನ್ನಾಗಿ ನಿರ್ವಹಿಸುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಕೋವಿಡ್ ಹೆಚ್ಚಳವಾದರೆ ಶಾಲೆ ಬಂದ್: ಕೇರಳದಲ್ಲಿ ಕೋವಿಡ್ ಹೆಚ್ಚಾಗುತ್ತಿದೆ. ಮಂಗಳೂರು, ಉಡುಪಿಯಲ್ಲಿ ಕಡಿಮೆ ಆಗುತ್ತಿದೆ. ರಾಜ್ಯದಲ್ಲೂ ಹೆಚ್ಚಳವಾದರೆ ತಕ್ಷಣ ಭೌತಿಕ ತರಗತಿಗಳನ್ನು ನಿಲ್ಲಿಸ
ಲಾಗುವುದು. ಅಂತಹ ಸಮಯ
ಬಂದರೆ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಎಂದು ಸಚಿವರು ತಿಳಿಸಿದರು.
ವರ್ಗಾವಣೆ ತಡೆಯಾಜ್ಞೆ ತೆರವಿಗೆ ಕ್ರಮ: ಶಿಕ್ಷಕರ ವರ್ಗಾವಣೆಗೆ ಕೆಲವು ಶಿಕ್ಷಕರು ಅಡ್ಡಿಯಾಗಿದ್ದಾರೆ. ಮೂರು ವರ್ಷಗಳಿಂದ ಶಿಕ್ಷಕರ ವರ್ಗಾವಣೆ ನನೆಗುದಿಗೆ ಬಿದ್ದಿದೆ. ಪ್ರತಿ ಬಾರಿಯೂ ಕೋರ್ಟ್‌ನಿಂದ ತಡೆಯಾಜ್ಞೆ ತರುತ್ತಿದ್ದಾರೆ. ಸರ್ಕಾರ ತಕ್ಷಣ ಮೇಲ್ಮನವಿ ಸಲ್ಲಿಸಲಿದೆ. ತಡೆಯಾಜ್ಞೆ ತೆರವಿಗೆ ಪ್ರಯತ್ನ ಮಾಡಲಿದೆ. ಉಳಿದ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆ ಮುಂದುವರಿಯಲಿದೆ ಎಂದು ಹೇಳಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.