ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಠ್ಯ ಸೇರಿದ ಹೆಡಗೇವಾರ್ ಭಾಷಣ; ಶೈಕ್ಷಣಿಕ ವಲಯದ ಆಕ್ಷೇಪ

ಭಗತ್ ಸಿಂಗ್‌ಗೆ ಕೊಕ್‌, ಆರೆಸ್ಸೆಸ್‌ ಸಂಸ್ಥಾಪಕಗೆ ಮಣೆ
Last Updated 16 ಮೇ 2022, 18:18 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯ ಸರ್ಕಾರ ಹತ್ತನೇ ತರಗತಿ ಪಠ್ಯ ಪುಸ್ತಕದಲ್ಲಿ ಆರ್‌ಎಸ್ಎಸ್ ಸಂಸ್ಥಾಪಕ ಕೇಶವ ಬಲಿರಾಮ್ ಹೆಡಗೇವಾರ್ ಅವರ ಭಾಷಣ ಸೇರ್ಪಡೆ ಮಾಡಿರುವುದು ಶೈಕ್ಷಣಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.

ರೋಹಿತ್ ಚಕ್ರತೀರ್ಥ ನೇತೃತ್ವದ ಪಠ್ಯಪುಸ್ತಕ ಪರಿಷ್ಕರಣೆ ಸಮಿತಿಯು ಹೆಡಗೇವಾರ್ ಅವರ ಸಾರ್ವಜನಿಕ ಭಾಷಣವನ್ನು ಪಠ್ಯಕ್ರಮದಲ್ಲಿ ಸೇರಿಸಲು ರಾಜ್ಯ ಸರ್ಕಾರಕ್ಕೆ ಶಿಫಾರಸು ಮಾಡಿತ್ತು. ಈ ಶಿಫಾರಸಿನಂತೆ 2022-23ರ ಶೈಕ್ಷಣಿಕ ವರ್ಷದಿಂದ 10ನೇ ತರಗತಿಯ ಕನ್ನಡ ವಿಷಯದ (ಪ್ರಥಮ ಭಾಷೆ) ಐದನೇ ಪಾಠವಾಗಿ ‘ನಿಜವಾದ ಆದರ್ಶ ಪುರುಷ ಯಾರಾಗಬೇಕು?’ ಎನ್ನುವುದನ್ನು ಸೇರಿಸಲಾಗಿದೆ.

ಜತೆಗೆ, ಪಿ.ಲಂಕೇಶ್‌ ಅವರ ‘ಮೃಗ ಮತ್ತು ಸುಂದರಿ’ ಸೇರಿದಂತೆ ಹಲವು ಪಠ್ಯಗಳನ್ನು ಕೈಬಿಟ್ಟು ಶಿವಾನಂದ ಕಳವೆ ಅವರ ‘ಸ್ವದೇಶಿ ಸೂತ್ರದ ಸರಳ ಹಬ್ಬ’ ಮತ್ತು ಎಂ. ಗೋವಿಂದ ಪೈ ಅವರ ‘ನಾನು ಪ್ರಾಸ ಬಿಟ್ಟ ಕಥೆ’, ವಿದ್ವಾಂಸ ದಿವಂಗತ ಬನ್ನಂಜೆ ಗೋವಿಂದಾಚಾರ್ಯರ ‘ಶುಕನಾಶನ ಉಪದೇಶ’ ಮತ್ತು ಶತಾವಧಾನಿ ಆರ್. ಗಣೇಶ್ ಅವರ ‘ಶ್ರೇಷ್ಠ ಭಾರತೀಯ ಚಿಂತನೆಗಳು’ ಸೇರಿಸಲಾಗಿದೆ. ಈ ವಿಷಯಗಳನ್ನು ಸೇರಿಸಿದ್ದಕ್ಕೆ ಈಗ ಪರ, ವಿರೋಧ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ. ಹೆಡಗೇವಾರ್‌ ಅವರ ಭಾಷಣ ಸೇರ್ಪಡೆಗೆ ಆಕ್ಷೇಪ ವ್ಯಕ್ತವಾಗಿದೆ.

ಯಾವುದೇ ಸಿದ್ಧಾಂತ ಹೇರಿಲ್ಲ: ‘ವಿರೋಧಿಸುವವರು ಪಠ್ಯಪುಸ್ತಕ ಓದಿಲ್ಲ. ಓದಿದ ನಂತರ ಆಕ್ಷೇಪಗಳನ್ನು ವ್ಯಕ್ತಪಡಿಸಲಿ. ಒಂದು ಸಿದ್ಧಾಂತಕ್ಕೆ ಸೀಮಿತವಾಗಿ ಪಠ್ಯ ರಚಿಸಿಲ್ಲ ಮತ್ತು ಯಾವುದೇ ಸಿದ್ಧಾಂತವನ್ನು ಹೇರುವ ಪ್ರಯತ್ನವನ್ನು ಮಾಡಿಲ್ಲ’ ಎಂದು ರೋಹಿತ್‌ ಚಕ್ರತೀರ್ಥ ಹೇಳಿದ್ದಾರೆ.

'ದೇವನೂರ ಮಹಾದೇವ ಅವರ ಎದೆಗೆ ಬಿದ್ದ ಅಕ್ಷರವನ್ನು ಸಹ ಪಠ್ಯದಲ್ಲಿ ಸೇರಿಸಲಾಗಿದೆ. ಹೀಗಾಗಿ, ಹೊಸ ವಿಷಯಗಳು, ವಿಚಾರಗಳು ಸೇರಿಸಬೇಕು ಎನ್ನುವುದು ಸಮಿತಿ ತೀರ್ಮಾನ’ ಎಂದು ಅವರು ಸಮರ್ಥಿಸಿಕೊಂಡಿದ್ದಾರೆ.

‘ನಮಗೆ ಯಾರಿಂದಲೂ ಒತ್ತಡ ಇರಲಿಲ್ಲ. ಭಾಷೆಯ ದೃಷ್ಟಿಯಿಂದ ಪಠ್ಯದಲ್ಲಿ ನಾಟಕಗಳು ಸೇರಿದಂತೆ ವೈವಿಧ್ಯಮಯ ವಿಷಯಗಳಿಗೆ ಆದ್ಯತೆ ನೀಡಿದ್ದೇವೆ. ಹೆಡಗೇವಾರ್‌ ಅವರನ್ನು ಸೈದ್ಧಾಂತಿಕ ದೃಷ್ಟಿಯಿಂದ ನೋಡಿಲ್ಲ. ಭಗತ್‌ ಸಿಂಗ್‌ ಅವರ ವಿಷಯ ಬದಲಾಯಿಸಿ ಹೆಡಗೇವಾರ್‌ ಭಾಷಣ ಸೇರಿಲ್ಲ. ಇಬ್ಬರ ವಿಷಯಗಳು ಪ್ರತ್ಯೇಕವಾಗಿದ್ದು, ಒಂದಕ್ಕೊಂದು ಸಂಬಂಧ ಇಲ್ಲ’ ಎಂದು ಪ್ರತಿಕ್ರಿಯಿಸಿದ್ದಾರೆ.

ಪಠ್ಯದಿಂದ ಕೈಬಿಟ್ಟಿರುವ ವಿಷಯಗಳು

* ಪತ್ರಕರ್ತ ಪಿ. ಲಂಕೇಶ್‌ ಅವರ ‘ಮೃಗ ಮತ್ತು ಸುಂದರಿ’.

*ಜಿ. ರಾಮಕೃಷ್ಣ ಅವರ ‘ಭಗತ್‌ ಸಿಂಗ್‌’

* ಸಾರಾ ಅಬೂಬಕ್ಕರ್‌ ಅವರ ‘ಯುದ್ಧ’

* ಎ.ಎನ್‌. ಮೂರ್ತಿ ರಾವ್‌ ಅವರ ‘ವ್ಯಾಘ್ರ ಕಥೆ’

* ಶಿವಕೋಟ್ಯಾಚಾರ್ಯ ಅವರ ‘ಸುಕುಮಾರ ಸ್ವಾಮಿ ಕಥೆ’

‘ಪಠ್ಯಪುಸ್ತಕ ಪಕ್ಷ ಪುಸ್ತಕವಲ್ಲ’

‘ಪಠ್ಯ ಪುಸ್ತಕಗಳು ಪಕ್ಷ ಪುಸ್ತಕಗಳಲ್ಲ. ಯಾವುದೇ ಪಕ್ಷದ ಸರ್ಕಾರಗಳು ತಮ್ಮ ಕಾರ್ಯಸೂಚಿಗೆ ಪಠ್ಯ ಪುಸ್ತಕಗಳನ್ನು ಸಾಧನ ಮಾಡಿಕೊಳ್ಳಬಾರದು’ ಎಂದು ಸಾಹಿತಿ ಬರಗೂರು ರಾಮಚಂದ್ರಪ್ಪ ಪ್ರತಿಕ್ರಿಯಿಸಿದ್ದಾರೆ.

‘ಜಾತಿವಾದ ಮತ್ತು ಧಾರ್ಮಿಕ ಮೂಲಭೂತ ವಾದವನ್ನು ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಪೋಷಿಸಲು ಪಠ್ಯ ಪುಸ್ತಕಗಳು ಸಾಧನವಾಗಬಾರದು’ ಎಂದು ತಿಳಿಸಿದ್ದಾರೆ.

‘ಪಕ್ಷದ ಮುಖವಾಣಿಯಾಗಬಾರದು’

‘ಪಠ್ಯಕ್ರಮ ಎನ್ನುವುದು ಯಾವುದೇ ಪಕ್ಷದ ಮುಖವಾಣಿಯಾಗಕೂಡದು. ಬಿಜೆಪಿ ಸರ್ಕಾರ ಪಕ್ಷ ಮತ್ತು ಆರ್‌ಎಸ್‌ಎಸ್‌ ಸಿದ್ಧಾಂತಗಳನ್ನು ಪಠ್ಯಕ್ರಮದಲ್ಲಿ ತೂರಿಸುವ ಪ್ರಯತ್ನಮಾಡುತ್ತಿದೆ. ಈ ಹೀನ ಕೆಲಸವನ್ನು ಕೈ ಬಿಡಬೇಕು’ ಎಂದು ಅಖಿಲ ಭಾರತ ಶಿಕ್ಷಣ ಉಳಿಸಿ ಸಮಿತಿ ಅಧ್ಯಕ್ಷ ಅಲ್ಲಮಪ್ರಭು ಬೆಟ್ಟದೂರು ಅಭಿಪ್ರಾಯಪಟ್ಟಿದ್ದಾರೆ.

‘ಮುಖ್ಯವಾಗಿ ಭಗತ್‌ಸಿಂಗ್ ಅವರ ಜೀವನಕ್ಕೆ ಸಂಬಂಧಿಸಿದ ಪಠ್ಯವನ್ನು ತೆಗೆದು ಹಾಕಿ ಹೆಡಗೇವಾರ್ ಅವರ ಭಾಷಣ ಸೇರಿಸಿದ್ದು ದೊಡ್ಡ ದುರಂತ. ಇದು ಮಹಾನ್ ಕ್ರಾಂತಿಕಾರಿ ಭಗತ್ ಸಿಂಗ್ ಅವರಿಗೆ ಬಗೆದ ದ್ರೋಹ. ಸ್ವಾತಂತ್ರ್ಯ ಹೋರಾಟಕ್ಕೆ ಹೆಡಗೇವಾರ್‌ ಅವರ ಕೊಡುಗೆ ನಗಣ್ಯ. ಅಷ್ಟಕ್ಕೂ ಹೆಡಗೇವಾರ್‌ ಅವರು ದೇಶದ ಮಹಾನ್ ಹೋರಾಟಗಾರರೆಂದು ದೇಶದ ಜನ ಮತ್ತು ಯಾವೊಬ್ಬ ಇತಿಹಾಸ ತಜ್ಞರು ಒಪ್ಪಿಕೊಂಡಿಲ್ಲ’ ಎಂದು ಹೇಳಿದ್ದಾರೆ.

‘ಪಠ್ಯವನ್ನು ವೈಜ್ಞಾನಿಕ, ಧರ್ಮ ನಿರಪೇಕ್ಷ, ಪ್ರಜಾತಾಂತ್ರಿಕ ಮೌಲ್ಯಗಳ ಆಧಾರದ ಮೇಲೆಯೇ ಪುನರ್‌ ರಚಿಸಬೇಕು. ಪಠ್ಯ ಪರಿಷ್ಕರಣಾ ಸಮಿತಿಯು ಹಲವಾರು ಪಠ್ಯಗಳನ್ನು ತೆಗೆದು ಹಾಕಿ ತಮ್ಮ ರಾಜಕೀಯ ಚಿಂತನೆಗಳಿಗೆ ಪೂರಕವಾಗಿರುವ ಹಲವಾರು ಪಾಠಗಳನ್ನು ಸೇರಿಸಿದೆ. ಇದು ಕೋಮುವಾದದ ವಿಷವನ್ನು ಬಿತ್ತಿ ಬೆಳೆಯಲು ಶಿಕ್ಷಣ ಎನ್ನುವ ಭೂಮಿಯ ಹದಗೊಳಿಸುವಿಕೆಯ ಕ್ರಮವಾಗಿದೆ’ ಎಂದಿದ್ದಾರೆ.

‘ಸೇರ್ಪಡೆಯಾದರೆ ತಪ್ಪೇನು?’

ಕಲಬುರಗಿ: ಆರ್‌ಎಸ್ಎಸ್ ಸರಸಂಘಚಾಲಕರಾಗಿದ್ದ ಹೆಡಗೇವಾರ್‌ ಅವರ ಭಾಷಣ ರಾಜ್ಯದ 10ನೇ ತರಗತಿಯ ಪಠ್ಯಪುಸ್ತಕದಲ್ಲಿ ಸೇರ್ಪಡೆಯಾದರೆ ತಪ್ಪೇನು? ಅವರೂ ರಾಷ್ಟ್ರವಾದಿಯಾಗಿದ್ದರು. ದಶಕಗಳ ಕಾಲ ಆಳ್ವಿಕೆ ನಡೆಸಿದ್ದ ಕಾಂಗ್ರೆಸ್ ಮುಚ್ಚಿಟ್ಟಿದ್ದ ರಾಷ್ಟ್ರೀಯ ವಿಚಾರ ಧಾರೆಗಳನ್ನು ಮಕ್ಕಳಿಗೆ ತಿಳಿಸುತ್ತಿದ್ದೇವೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ‌ಸಿ.ಟಿ. ರವಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT