ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿನ್ನದ ಕಿರೀಟ ತೊಡಿಸಿದ ‘ಕಾರಜೋಳ’ದ ಅಸಲಿಯತ್ತು

ಕುಡಿಯುವ ನೀರಿಗೂ ಪರದಾಡುತ್ತಿದ್ದ ಊರಲ್ಲಿ ಕಡು ಬೇಸಿಗೆಯಲ್ಲೂ ಉಕ್ಕಿ ಹರಿಯುತ್ತಿದೆ ನೀರು
Last Updated 27 ನವೆಂಬರ್ 2020, 2:10 IST
ಅಕ್ಷರ ಗಾತ್ರ
ADVERTISEMENT
""
""
""
""
""

ವಿಜಯಪುರ: ಅದೊಂದು ಕುಗ್ರಾಮ. ಅಷ್ಟೇ ಅಲ್ಲ, ಮಳೆಗಾಲದಲ್ಲೂ ಅಲ್ಲಿ ಕುಡಿಯಲು ಜನ, ಜಾನುವಾರುಗಳಿಗೆ ನೀರು ಸಿಗುತ್ತಿರಲಿಲ್ಲ. ಕರಿಕಲ್ಲುಗಳಿಂದ ಕೂಡಿದ ಆ ಊರಿನ ಜನರು ಹೊಟ್ಟೆಪಾಡಿಗಾಗಿ ನೆರೆಯ ಸೊಲ್ಲಾಪುರ, ಮುಂಬೈ, ಕರಾಡ, ಗೋವಾಕ್ಕೆ ಗುಳೇ ಹೋಗುವುದು ಮಾಮೂಲು. ಹಬ್ಬಕ್ಕೊ, ಹುಣ್ಣಿಮೆಗೂ ವರ್ಷದಲ್ಲಿ ಒಮ್ಮೆ ಊರಿಗೆ ಬಂದು ಮರಳುತ್ತಿದ್ದರು.

ಒಂದೇ ಒಂದು ಬೆಳೆಯನ್ನೂ ಕಾಣಲಾಗದ ಹೊಲವನ್ನು ಯಾರಿಗಾದರೂ ಮಾರಾಟ ಮಾಡೋಣ ಎಂದರೆ ಆ ಪಾಳುಬಿದ್ದ ಕಲ್ಲುಭೂಮಿಯನ್ನು ಪುಕ್ಕಟೆ ಕೊಡುತ್ತೇನೆ ಎಂದರೂ ಬೇಡ ಎನ್ನುವ ಪರಿಸ್ಥಿತಿ.

ವಿಜಯಪುರ ಜಿಲ್ಲೆಯ ಕಾರಜೋಳ ಗ್ರಾಮದ ನೋಟ

ಹೌದು, ಇಂತಹ ಕುಗ್ರಾಮವೀಗ ರಾಜ್ಯದ ಗಮನ ಸೆಳೆದಿದೆ. ಕೋವಿಡ್, ನೆರೆ–ಪ್ರವಾಹದಂತಹ ಸಂಕಷ್ಟದ ದಿನಗಳಲ್ಲಿ ಜನಪ್ರತಿನಿಧಿಗಳಿಗೆ ಚಿನ್ನದ ಕಿರೀಟ ತೊಡಿಸುವ ಮೂಲಕ ಎಲ್ಲರೂ ಹುಬ್ಬೇರುವಂತೆ ಮಾಡಿದೆ. ಸ್ವರ್ಣ ಕಿರೀಟದ ಹಿಂದಿನ ಅಸಲಿಯತ್ತಾದರೂ ಏನು? ಎಂಬ ಪ್ರಶ್ನೆ ಸಹಜವಾಗಿ ಮೂಡಿದೆ. ಇದರ ಅಸಲಿಯತ್ತನ್ನು ತಿಳಿಯಲು ‘ಪ್ರಜಾವಾಣಿ’ ಗ್ರಾಮಕ್ಕೆ ಭೇಟಿ ನೀಡಿದಾಗ ಆದ ಅನುಭವ ನಿಜಕ್ಕೂ ಅಚ್ಚರಿ ಎನಿಸುತ್ತದೆ.

ದಶಕದ ಹಿಂದೆ ಮಳೆಗಾಲದಲ್ಲೂ ಕುಡಿಯುವ ನೀರಿಗೆ ಪರದಾಡುತ್ತಿದ್ದ ಆ ಊರಲ್ಲಿ ಇಂದು ಏಪ್ರಿಲ್‌, ಮೇ ಬೇಸಿಗೆಯಲ್ಲೂ ಯಥೇಚ್ಛ ನೀರು ಹೊಲ, ಜಮೀನುಗಳಲ್ಲಿ ಹರಿದಾಡಿ ಇಡೀ ಊರನ್ನು ಹಚ್ಚಹಸಿರಾಗಿಸಿದೆ.

ಪುಕ್ಕಟೆ ಕೊಟ್ಟರೂ ಬೇಡ ಎನ್ನುಂತಿದ್ದ ಭೂಮಿಗೆ ಈಗ ಎಕರೆಗೆ ₹ 10 ಲಕ್ಷ ಕೊಟ್ಟರೂ ಕೃಷಿ ಭೂಮಿ ಖರೀದಿಗೆ ಸಿಗುವುದು ಕಷ್ಟವಾಗಿದೆ.

ವರ್ಷದಲ್ಲಿ ಒಮ್ಮೆ ಬಿಳಿಜೋಳ ಬಿತ್ತಿದರೂ ಬೆಳೆ ಬರುವುದು ಅನುಮಾನವಿದ್ದ ಆ ಹಳ್ಳಿಯಲ್ಲಿ ಈಗ ದ್ರಾಕ್ಷಿ, ಕಬ್ಬು, ಜೋಳ, ತೊಗರಿ, ಈರುಳ್ಳಿ, ಶೇಂಗಾ ಸೇರಿದಂತೆ ವಾಣಿಜ್ಯ ಬೆಳೆಗಳು ನಳನಳಿಸುತ್ತಿವೆ.

ದಶಕದ ಹಿಂದೆ ದೂರದ ನಗರಗಳಿಗೆ ವಲಸೆ ಹೋಗುತ್ತಿದ್ದವರು ಮರಳಿ ಊರು ಸೇರಿದ್ದಾರೆ. ನಗರಕ್ಕೆ ಗುಳೇ ಹೋಗುವುದು ನಿಲ್ಲಿಸಿ, ಚೈನಿ ಮಾಡಲು ಆಗಾಗ ಹೋಗುತ್ತಿದ್ದಾರೆ.

ಪ್ರಾಥಮಿಕ ಶಾಲೆಯೂ ಇಲ್ಲದ ಆ ಊರಲ್ಲಿ ಈಗ ಪ್ರೌಢಶಾಲೆ, ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆ, ಸಕ್ಕರೆ ಕಾರ್ಖಾನೆ, ಎರಡೆರಡು ಏತ ನೀರಾವತಿ ಯೋಜನೆ, ಸಂಪರ್ಕ ರಸ್ತೆ, ಚರಂಡಿ, ಕುಡಿಯುವ ನೀರು, ಮನೆ, ಮನೆಗೆ ಬೈಕು, ಕಾರು, ಟ್ರಾಕ್ಟರ್‌, ಟಿಪ್ಪರ್‌ ಎಲ್ಲವೂ ಬಂದಿವೆ.

ಇಷ್ಟೊಂದು ಬದಲಾವಣೆಗೆ ಕಾರಣ ಹುಡುಕುತ್ತಾ ಹೋದರೆ ಆ ಊರಿನ ಜನರ ಬಾಯಲ್ಲಿ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳರ ಹೆಸರು ಅಭಿಮಾನದಿಂದ ಅನುರಣಿಸುತ್ತದೆ. ಜೊತೆಗೆ ಕ್ಷೇತ್ರದ ಶಾಸಕ ಎಂ.ಬಿ.ಪಾಟೀಲ ಹೆಸರೂ ತಳಕುಹಾಕಿಕೊಳ್ಳುತ್ತದೆ.

ಗೋವಿಂದ ಕಾರಜೋಳ ಅವರುಸಣ್ಣ ನೀರಾವರಿ ಸಚಿವರಾಗಿದ್ದಾಗ ಕಾರಜೋಳ ಏತನೀರಾವರಿ ಯೋಜನೆಯನ್ನು ಅನುಷ್ಠಾನ ಮಾಡುವ ಮೂಲಕ ತಮ್ಮೂರಿಗೆ ಕೃಷ್ಣೆ ವರ್ಷಪೂರ್ತಿ ಹರಿಯುವಂತೆ(5200 ಹೆಕ್ಟೆರ್‌ ನೀರಾವರಿ) ಮಾಡಿದ ಪರಿಣಾಮ ಕರಿಕಲ್ಲಿನಿಂದ ಕೂಡಿದ್ದ ಊರಿನ ಚಿತ್ರಣ ಬದಲಾವಣೆಯಾಗಲು ಮುಖ್ಯ ಕಾರಣವಾಯಿತು ಎನ್ನುತ್ತಾರೆ ಗ್ರಾಮಸ್ಥ ಪರಶುರಾಮ ಮಲಘಾಣ.

ಪ್ರಥಮವಾಗಿ ಊರಲ್ಲಿ ಸಕ್ಕರೆ ಕಾರ್ಖಾನೆ ಆರಂಭಕ್ಕೆಗೋವಿಂದ ಕಾರಜೋಳ ಮತ್ತು ಎಂ.ಬಿ.ಪಾಟೀಲ ಆಸಕ್ತಿ ವಹಿಸಿದರು. ಪಾಳು ಬಿದ್ದಿದ್ದ ಭೂಮಿಗೆ ಎಕರೆಗೆ ₹3 ಲಕ್ಷದಿಂದ ₹ 5 ಲಕ್ಷಕ್ಕೆ ಸಕ್ಕರೆ ಕಾರ್ಖಾನೆ ಮಾಲೀಕರು ಖರೀದಿಸಿದರು. 250 ಎಕರೆ ಜಮೀನನ್ನು ಕಾರ್ಖಾನೆಯವರು ಖರೀದಿಸಿದರು ಎನ್ನುತ್ತಾರೆ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರ ಸಹಪಾಠಿ ಭೀಮೇಶ ಧರೆಯಪ್ಪ ಆಸಂಗಿ.

ಪಕ್ಷ ಭೇದವಿಲ್ಲದೇ ಗ್ರಾಮದ ಪ್ರತಿಯೊಂದು ಎಸ್‌ಸಿ, ಎಸ್‌ಟಿ ಕುಟುಂಬದವರಿಗೂ ಗಂಗಾಕಲ್ಯಾಣ ಯೋಜನೆಯಡಿ ಕೊಳವೆಬಾವಿ ಕೊರೆಯಿಸಿಕೊಟ್ಟಿದ್ದಾರೆ. ಸಮುದಾಯ ಭವನ, ದನದ ದವಾಖಾನೆ, ಆರೋಗ್ಯ ಕೇಂದ್ರವನ್ನು ಕಾರಜೋಳ, ಎಂ.ಬಿ.ಪಾಟೀಲ ಮಾಡಿಸಿಕೊಟ್ಟಿದ್ದಾರೆ ಎಂದರು.

ಕಾರಜೋಳ ಏತ ನೀರಾವರಿ ಬೆನ್ನೆಲ್ಲೆ ಎಂ.ಬಿ.ಪಾಟೀಲ ಅವರು ಜಲ ಸಂಪನ್ಮೂಲ ಸಚಿವರಾಗಿದ್ದಾಗ ಮುಳವಾಡ ಏತ ನೀರಾವರಿ ಯೋಜನೆಯನ್ನು ಕಾರಜೋಳ ಮೂಲಕವಾಗಿಯೇ ಬಬಲೇಶ್ವರಕ್ಕೆ ತೆಗೆದುಕೊಂಡು ಹೋದರು ಪರಿಣಾಮ ಕಾರಜೋಳದಲ್ಲಿ ನೀರಿಗೆ (ಮತ್ತೆ 5000 ಹೆಕ್ಟೇರ್ ಜಮೀನಿಗೆ‌ ನೀರಾವರಿ) ಬರವಿಲ್ಲದಂತಾಯಿತು ಎನ್ನುತ್ತಾರೆ ಮುಖಂಡ ಸೋಮನಾಥ ಕಳ್ಳಿಮನಿ.

ಕರಿಕಲ್ಲಿನಿಂದ ಕೂಡಿದ್ದ ಕಾರಜೋಳವನ್ನು ಚಿನ್ನ ಬೆಳೆಯವ ಮಣ್ಣನ್ನಾಗಿಸಿದ ಗೋವಿಂದ ಕಾರಜೊಳ ಮತ್ತು ಎಂ.ಬಿ.ಪಾಟೀಲರಿಗೆ ಚಿನ್ನದ ಕಿರೀಟವನ್ನೇ ತೊಡಿಸಿ ಸನ್ಮಾನಿಸಬೇಕೆಂದು ವರ್ಷದ ಹಿಂದೆಯೇ ಸಿದ್ಧತೆ ಮಾಡಿಕೊಂಡಿದ್ದೆವು. ಆದರೆ, ಕೋವಿಡ್‌ ಕಾರಣದಿಂದ ಅಭಿನಂದನಾ ಕಾರ್ಯಕ್ರಮ ಮುಂದೂಡಿಕೊಂಡು ಬಂದಿದ್ದೆವು ಎಂದು ಆಸಂಗಿ ಹೇಳಿದರು.

ಇದೀಗ ಊರಿಗೆ ರಸ್ತೆ ನಿರ್ಮಾಣದ ಭೂಮಿ ಪೂಜೆ, ತುಂಬಿದ ಕೆರೆಗೆ ಬಾಗಿನ ಅರ್ಪಣೆ ಹಾಗೂ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಕಟ್ಟಡ ಉದ್ಘಾಟನೆಗೆ ಗೋವಿಂದ ಕಾರಜೋಳ, ಶಾಸಕರಾದ ಎಂ.ಬಿ. ಪಾಟೀಲ ಮತ್ತು ಡಿಸಿಸಿ ಬ್ಯಾಂಕಿನ ಅಧ್ಯಕ್ಷರೂ ಹಾಗೂ ಕ್ಷೇತ್ರದ ಈ ಹಿಂದಿನ ಶಾಸಕರೂ ಆದ ಶಿವಾನಂದ ಪಾಟೀಲರು ಆಗಮಿಸುತ್ತಿರುವ ಸಂದರ್ಭವನ್ನು ಮನಗಂಡು ಒಟ್ಟಿಗೆ ಮೂವರಿಗೂ ಚಿನ್ನದ ಕಿರೀಟ ತೊಡಿಸಿ ಸನ್ಮಾನಿಸಿದ್ದೇವೆ ಎಂದರು.

ಚಿನ್ನದ ಕಿರೀಟ ಮಾಡಿಸಲು ಊರಿನ ಪ್ರತಿ ಮನೆ, ಮನೆಯಿಂದ ಪಟ್ಟಿ ಎತ್ತಿದ್ದೇವೆ. ಅನುಕೂಲಸ್ಥರು ಲಕ್ಷ, ಲಕ್ಷ ಕೊಟ್ಟರೆ, ಸಾಮಾನ್ಯರು ಸಾವಿರಗಟ್ಟಲೆ ಕೊಟ್ಟಿದ್ದಾರೆ. ಗ್ರಾಮದ ಪ್ರತಿಯೊಬ್ಬರೂ ತಮ್ಮ ಶಕ್ತಾನುಸಾರ ಹಣವನ್ನು ನೀಡಿದರು. ಸಂಗ್ರಹವಾದ ಹಣದಲ್ಲಿ ಚಿನ್ನದ ಕಿರೀಟ ಮಾಡಿಸಿ ತೊಡಿಸುವ ಮೂಲಕ ತವರಿನ ಸನ್ಮಾನ ಮಾಡಿದ್ದೇವೆ. ಚಿನ್ನದ ಕಿರೀಟದ ಹಿಂದೆ ಕೃತಜ್ಞತೆ, ಅಭಿಮಾನವಿದೆ. ಇದಕ್ಕೆ ಅನುಮಾನ ಪಡುವ ಅಗತ್ಯವಿಲ್ಲ ಎನ್ನುತ್ತಾರೆ ಅವರು.

3 ಚಿನ್ನದ ಕಿರೀಟ; 35 ತೊಲ ಬಂಗಾರ

ವಿಜಯಪುರ: ಊರಿನವರೇ ಆದ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರಿಗೆ 15 ತೊಲದ ಬಂಗಾರದ ಕಿರೀಟ, ಕ್ಷೇತ್ರದ ಶಾಸಕರಾದ ಎಂ.ಬಿ.ಪಾಟೀಲರಿಗೆ 14 ತೊಲ ಹಾಗೂ ಡಿಸಿಸಿ ಬ್ಯಾಂಕ್ ಅಧ್ಯಕ್ಷರೂ ಆದ ಶಾಸಕ ಶಿವಾನಂದ ಪಾಟೀಲ ಅವರಿಗೆ 6 ತೊಲ ಬಂಗಾರದ ಕಿರೀಟವನ್ನು ನ.23ರಂದು ಕಾರಜೋಳದಲ್ಲಿ ನಡೆದ ಕಾರ್ಯಕ್ರಮದಲ್ಲಿ ತೊಡಿಸಿ ಸನ್ಮಾನಿಸುವ ಮೂಲಕಗ್ರಾಮಸ್ಥರು ರಾಜ್ಯದ ಗಮನ ಸೆಳೆದಿದ್ದರು.

ಗೋವಿಂದ ಕಾರಜೋಳ ಮತ್ತು ಎಂ.ಬಿ.ಪಾಟೀಲರಿಗೆ ವರ್ಷದ ಹಿಂದೆಯೇ ಸನ್ಮಾನ ಮಾಡುವ ಸಂಬಂಧ ಬಂಗಾರದ ಕಿರೀಟಗಳನ್ನು ಸಿದ್ಧ ಮಾಡಿಕೊಳ್ಳಲಾಗಿತ್ತು. ಆದರೆ, ಶಾಸಕ ಶಿವಾನಂದ ಪಾಟೀಲರನ್ನು ಕಾರ್ಯಕ್ರಮಕ್ಕೆ ಒಂದು ತಿಂಗಳ ಮೊದಲು ಆಹ್ವಾನಿಸಲು ತೀರ್ಮಾನಿಸಿದ ಕಾರಣ ಸರಿಸಮನಾಗಿ ಬಂಗಾರದ ಕಿರೀಟ ಮಾಡಿಸಲು ಸಾಧ್ಯವಾಗಲಿಲ್ಲ ಎಂದು ಸಂಘಟಕರು ತಿಳಿಸಿದರು.

***

ಕರಿಕಲ್ಲಿನ ಬರಡು ನೆಲವಾಗಿದ್ದ ನಮ್ಮೂರಿಗೆ ಕನ್ಯೆ ಕೊಡಲು ಯಾರೂ ಬರುತ್ತಿರಲಿಲ್ಲ. ಬಹಳ ಬಿಕ್ಕಟ್ಟಿನಲ್ಲಿದ್ದ ಊರನ್ನು ಕಾರಜೋಳ, ಎಂ.ಬಿ.ಪಾಟೀಲ ನಂದನವನವನ್ನಾಗಿ ಮಾಡಿದ್ದಾರೆ.

-ಭೀಮೇಶ ಆಸಂಗಿ,ಗ್ರಾಮಸ್ಥ, ಕಾರಜೋಳ

***

ಕಾರಜೋಳ ಮಣ್ಣಿಗೆ ಬಂಗಾರದ ಬೆಲೆ ಬರಲು ಗೋವಿಂದ ಕಾರಜೋಳ, ಎಂ.ಬಿ.ಪಾಟೀಲ ಕಾರಣವಾಗಿರುವುದರಿಂದ ಬಂಗಾರದಿಂದಲೇ ಗೌರವಿಸಬೇಕು ಎಂಬುದು ಗ್ರಾಮಸ್ಥರ ಆಶಯವಾಗಿತ್ತು.

-ಪರಶುರಾಮ ಮಲಘಾಣ,ಗ್ರಾಮಸ್ಥ, ಕಾರಜೋಳ

***

ಕಾರಜೋಳ ಗೋವಿಂದ ಕಾರಜೋಳ ಅವರ ಮತಕ್ಷೇತ್ರವಲ್ಲದಿದ್ದರೂ ಹುಟ್ಟೂರು ಎಂಬ ಕಾರಣಕ್ಕೆ ಎಲ್ಲ ಸೌಲಭ್ಯ ಕಲ್ಪಿಸಿದ್ದಾರೆ. ಏನಿಲ್ಲ ಎಂಬ ಪ್ರಶ್ನೆಗೆ ಅವಕಾಶವಿಲ್ಲ

–ಸೋಮನಾಥ ಕಳ್ಳಿಮನಿ,ಮುಖಂಡ, ಕಾರಜೋಳ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT