ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸ ಮರಳು ನೀತಿಯಲ್ಲಿ ಉಚಿತ ಮರಳು ನೀಡುವ ಪ್ರಸ್ತಾವ ಇಲ್ಲ: ಸಚಿವ ಹಾಲಪ್ಪ ಆಚಾರ್

Last Updated 30 ಸೆಪ್ಟೆಂಬರ್ 2021, 10:50 IST
ಅಕ್ಷರ ಗಾತ್ರ

ಬೆಂಗಳೂರು: ‘ಹೊಸ ಮರಳು ನೀತಿಯಲ್ಲಿ ಉಚಿತ ಮರಳು ನೀಡುವ ಪ್ರಸ್ತಾವ ಇಲ್ಲ’ ಎಂದು ಗಣಿ ಮತ್ತು ಭೂ ವಿಜ್ಞಾನ ಸಚಿವ ಹಾಲಪ್ಪ ಆಚಾರ್ ಸ್ಪಷ್ಟಪಡಿಸಿದರು.

ಸುದ್ದಿಗೋಷ್ಟಿಯಲ್ಲಿ ಗುರುವಾರ ಮಾತನಾಡಿದ ಅವರು, ‘ನೂತನ ಮರಳು ನೀತಿಯಲ್ಲಿ ಉಚಿತವಾಗಿ ಮರಳು ನೀಡುವ ಪ್ರಸ್ತಾಪ ಇಲ್ಲ. ಹಿಂದೆ ಈ ಖಾತೆ ನಿಭಾಯಿಸಿದ್ದ ಸಚಿವರು ಯಾಕೆ ಆರೀತಿ ಹೇಳಿದ್ದರೊ ಗೊತ್ತಿಲ್ಲ’ ಎಂದರು.

‘ಬಡವರು ಹಾಗೂ ಜನಸಾಮಾನ್ಯರು ಮನೆ ಕಟ್ಟಲು ಅನುಕೂಲವಾಗುವಂತೆ ಉಚಿತ ಮರಳು ನೀತಿ ಜಾರಿಗೆ ತರುತ್ತೇವೆ’ ಎಂದು ಈ ಹಿಂದೆ ಗಣಿ ಮತ್ತು ಭೂ ವಿಜ್ಞಾನ ಸಚಿವರಾಗಿದ್ದ ಮುರುಗೇಶ್ ನಿರಾಣಿ ಹೇಳಿದ್ದರು.

‘ರಾಜ್ಯದಲ್ಲಿ 4.50 ಕೋಟಿ ಟನ್ ಮರಳು ಅವಶ್ಯಕತೆ ಇದ್ದರೆ, ಕೇವಲ 3.50 ಕೋಟಿ ಟನ್ ಮಾತ್ರ ಪೂರೈಕೆ ಆಗುತ್ತಿದೆ. 1 ಕೋಟಿ ಟನ್ ಮರಳು ಕೊರತೆ ಇದೆ. ಎಂ-ಸ್ಯಾಂಡ್ ಆದರೂ ಹೆಚ್ಚಳ ಮಾಡಬೇಕು ಅಥವಾ ಬೇರೆ ಏನಾದರೂ ಪರಿಹಾರ ಹುಡುಕಬೇಕಿದೆ’ ಎಂದು ಹಾಲಪ್ಪ ಆಚಾರ್ ತಿಳಿಸಿದರು.

‘ಹೊಸ ಮರಳು ನೀತಿಗೆ ಇನ್ನೂ ಸಚಿವ ಸಂಪುಟದಅನುಮೋದನೆ ಸಿಕ್ಕಿಲ್ಲ. ಮರಳು ನೀತಿಯನ್ನು ಸರಳವಾಗಿ ಮಾಡಬೇಕು ಅನ್ನುವುದಷ್ಟೇ ನನ್ನ ಉದ್ದೇಶ’ ಎಂದರು

ಮಹಿಳಾ ಸಾಂತ್ವನ ಕೇಂದ್ರ ರದ್ದು ಕುರಿತು ಪ್ರತಿಕ್ರಿಯಿಸಿದ ಅವರು, ‘ಕೇಂದ್ರ ಸರ್ಕಾರ ಒನ್ ಸ್ಟಾಪ್ ಸೆಂಟರ್ ಆರಂಭಿಸಿವೆ. ಅದೇ ಸ್ಥಳಗಳಲ್ಲಿ ರಾಜ್ಯದ ಸಾಂತ್ವನ ಕೇಂದ್ರಗಳಿದ್ದವು. ಒಂದೇ ಕಡೆ ಎರಡು ಕೇಂದ್ರಗಳಿವೆ ಎಂಬ ಕಾರಣಕ್ಕೆ ಸಾಂತ್ವನ ಕೇಂದ್ರಗಳನ್ನು ರದ್ದುಪಡಿಸಲಾಗಿದೆ. ಎರಡು ಕೇಂದ್ರಗಳ ಸೇವೆ ಒಂದೇ ಆಗಿದೆ. ಎರಡು ಕಡೆ ಇರುವ ಕಡೆ ಮಾತ್ರ ತೆಗೆಯಲಾಗಿದೆ. ತಾಲ್ಲೂಕು ಮಟ್ಟದಲ್ಲಿ ಸಾಂತ್ವನ ಕೇಂದ್ರಗಳಿವೆ’ ಎಂದು ಸ್ಪಷ್ಟಪಡಿಸಿದರು.

ಅಕ್ರಮ ಗಣಿಗಾರಿಕೆ‌ ನಡೆಯುತ್ತಿಲ್ಲ: ಮಂಡ್ಯ ಅಕ್ರಮ ಗಣಿಗಾರಿಕೆ ಸಂಬಂಧ ಸುಮಲತಾ ಭೇಟಿ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ‘ಮಂಡ್ಯದಲ್ಲಿ ಯಾವುದೇ ಅಕ್ರಮ ಗಣಿಗಾರಿಕೆ ನಡೆಯುತ್ತಿಲ್ಲ’ ಎಂದರು.

ಜಿಲ್ಲಾ ಸಮಿತಿ ಪರಿಶೀಲಿಸಿದ ಬಳಿಕ ಗಣಿಗಾರಿಕೆಗೆ ವೈಜ್ಞಾನಿಕವಾಗಿ ಅನುಮತಿ ನೀಡಲಾಗುತ್ತದೆ ಎಂದೂ ತಿಳಿಸಿದರು.

ಹಿರಿಯರಿಗೆ ಪ್ರಶಸ್ತಿ‌ ಪ್ರದಾನ: ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಹಿರಿಯ ನಾಗರಿಕರಿಗೆ ಬೆಂಗಳೂರಿನ ರವೀಂದ್ರ ಕಲಾ ಕ್ಷೇತ್ರದಲ್ಲಿ ಶುಕ್ರವಾರ (ಅ. 1) ನಡೆಯಲಿರುವ ‘ಹಿರಿಯ ನಾಗರಿಕರ ದಿನಾಚರಣೆ’ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು. ₹ 1 ಲಕ್ಷ ನಗದು ಹಾಗೂ ನೆನಪಿನ ಕಾಣಿಕೆ ನೀಡಲಾಗುತ್ತದೆ’ ಎಂದರು.

ಗುರುಪಾದಪ್ಪ ಅಂಚೇರ (ಶಿಕ್ಷಣ), ಕರವೀರಪ್ರಭು‌ ಕ್ಯಾಲಗೊಂಡ (ಸಾಹಿತ್ಯ), ಶರಣಪ್ಪ‌ಗೋನಾಳ (ಕಲೆ), ಎಸ್. ಜನಾರ್ದನ-(ಸಮಾಜಸೇವೆ), ಅಂಚೆ ಅಶ್ವಥ್ (ಕ್ರೀಡೆ), ಕಿಷನ್ ರಾವ್ (ಕಾನೂನು), ಬಿ.‌ಆರ್. ಅಂಬೇಡ್ಕರ್ ಕಲ್ಚರಲ್ ಆ್ಯಂಡ್ ವೆಲ್ಫೇರ್ ಸೊಸೈಟಿ (ಸಂಸ್ಥೆ ವಿಭಾಗ) ಪ್ರಶಸ್ತಿ ಪ್ರದಾನ ಮಾಡಲಾಗುವುದು’ ಎಂದು ಹಾಲಪ್ಪ ಆಚಾರ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT