ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೈನ ಸನ್ಯಾಸಿಗಳಾದ ಒಂದೇ ಕುಟುಂಬದ ಐವರು

ಮೂರು ತಲೆಮಾರಿನವರಿಗೆ ಸನ್ಯಾಸ ದೀಕ್ಷೆ ನೀಡಿದ ವಿಜಯ ಉದಯ್ ಪ್ರಭ್ ಸುರೀಶ್ವರಜೀ
Last Updated 22 ಫೆಬ್ರುವರಿ 2021, 21:36 IST
ಅಕ್ಷರ ಗಾತ್ರ

ದಾವಣಗೆರೆ: ಒಂದೇ ಕುಟುಂಬದ ಮೂರು ತಲೆಮಾರಿನ ಐವರು ಸದಸ್ಯರು ಸೇರಿ ಆರು ಜನರು ಇಲ್ಲಿನ ಆವರಗೆರೆಯಲ್ಲಿರುವ ನಾಗೇಶ್ವರ ಪಾರ್ಶ್ವ ಭೈರವ ಜೈನ ದೇವಾಲಯದಲ್ಲಿ ಸೋಮವಾರ ಮುಂಜಾನೆ ಜೈನ ಸನ್ಯಾಸ ದೀಕ್ಷೆ ಪಡೆದರು.

ನಗರದ ವರ್ಧಿಚಂದ್‌ ಜೀ (75), ಪುತ್ರ ಅಶೋಕ್‌ ಕುಮಾರ್ ಜೈನ್ (47), ಸೊಸೆ ಭಾವನಾ ಅಶೋಕ್ ಜೈನ್ (45) ಮೊಮ್ಮಕ್ಕಳಾದ ಪಕ್ಷಾಲ್ ಜೈನ್ (17) ಮತ್ತು ಜಿನಾಂಕ್ ಕುಮಾರ್ ಜೈನ್ (15) ಜೊತೆಗೆ ಚೆನ್ನೈನ ಲಕ್ಷಕುಮಾರ್ ಜೈನ್ (23) ಅವರೂ ಜೈನ ಧರ್ಮದ ವಿಧಿವಿಧಾನಗಳೊಂದಿಗೆ ಲೌಕಿಕ ಜೀವನ ತೊರೆದು ಸನ್ಯಾಸಿಗಳಾದರು.

ಆಚಾರ್ಯ ವಿಜಯ ಉದಯ್ ಪ್ರಭ್ ಸುರೀಶ್ವರಜೀ ಅವರು ಪ್ರತಿಜ್ಞಾವಿಧಿ ಬೋಧಿಸುವ ಮೂಲಕ ದೀಕ್ಷೆ ನೀಡಿದರು. ಇದಕ್ಕೂ ಮೊದಲು ಭಾನುವಾರ ರಾತ್ರಿ ನಡೆದ ಬೀಳ್ಕೊಡುಗೆ ಸಮಾರಂಭದಲ್ಲಿ ಸಾವಿರಾರು ಮಂದಿ ಭಾಗವಹಿಸಿದ್ದರು. ಎಲ್ಲರಿಗೂ ವೈರಾಗ್ಯ ಭಾವನೆ ಮೂಡಲಿ ಎಂಬುದು ಇದರ ಉದ್ದೇಶವಾಗಿತ್ತು.

‘ದೀಕ್ಷೆ ಸ್ವೀಕರಿಸುವ ಮೊದಲು ಅವರ ಬಳಿಯಲ್ಲಿದ್ದ ಸ್ಥಿರ ಆಸ್ತಿಯನ್ನು ಬೇರೆಯವರ ಹೆಸರಿಗೆ ಬರೆದು ಕೊಡಲಾಯಿತು. ಹಣ, ಚಿನ್ನದ ಆಭರಣಗಳು ಇನ್ನಿತರೆ ವಸ್ತುಗಳನ್ನು ದಾನ ಮಾಡಲಾಯಿತು. ಸನ್ಯಾಸತ್ವ ಸ್ವೀಕರಿಸಿದ ಬಟ್ಟೆ, ಶಾಲು, ಜೀವಿಗಳನ್ನು ಓಡಿಸಲು ಪೊರಕೆಯಂತಹ ವಸ್ತು ಸೇರಿ 14 ವಸ್ತುಗಳು ಮಾತ್ರ ಇವರ ಬಳಿ ಇರಲಿವೆ’ ಎಂದು ಸಮಾಜದ ಗೌತಮ್ ಜೈನ್ ತಿಳಿಸಿದರು.

‘ಒಂದೇ ಕುಟುಂಬದ ಮೂರು ತಲೆಮಾರಿನವರು ಇದೇ ಮೊದಲ ಬಾರಿಗೆ ದೇಶದಲ್ಲಿ ಜೈನ ಸನ್ಯಾಸ ದೀಕ್ಷೆ ಸ್ವೀಕರಿಸಿದ್ದಾರೆ. ಬೇರೆಯವರಿಗೆ ಯಾವುದೇ ಕಷ್ಟ ಕೊಡದಂತೆ ಆತ್ಮಕಲ್ಯಾಣಕ್ಕಾಗಿ ವರ್ಷದ 8 ತಿಂಗಳು ಬರಿಗಾಲಿನಲ್ಲಿ ಸಂಚರಿಸಿ ಅಹಿಂಸಾ ತತ್ವವನ್ನು ಬೋಧಿಸುವರು. ದೀಕ್ಷೆ ಸ್ವೀಕಾರದ ನಂತರ ಹೆಸರುಗಳೂ ಬದಲಾಗಲಿವೆ’ ಎಂದು ಗೌತಮ್ ಜೈನ್ ಮಾಹಿತಿ ನೀಡಿದರು.

ಕಲಬುರ್ಗಿಯ 13 ವರ್ಷದ ಬಾಲಕ ಹರ್ಷಕುಮಾರ್ ಜೈನ್‌ ಸನ್ಯಾಸ ದೀಕ್ಷೆ ಸ್ವೀಕರಿಸಲು ಮುಂದೆ ಬಂದಿದ್ದ.
ಜೂನ್ 13ರಂದು ಬೆಂಗಳೂರಿನ ಸುಶೀಲ್ ಧಾಮದಲ್ಲಿ ಆತನಿಗೆ ದೀಕ್ಷೆ ನೀಡಲು ದಿನಾಂಕ ನಿಗದಿಪಡಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT