ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೇಖಕರಿಗೆ ಬೆದರಿಕೆ ಪತ್ರ ಸರ್ಕಾರದ ನಿರ್ಲಕ್ಷ್ಯ ಸಲ್ಲದು -ಸಿದ್ದರಾಮಯ್ಯ ಸಲಹೆ

Last Updated 12 ಜುಲೈ 2022, 19:30 IST
ಅಕ್ಷರ ಗಾತ್ರ

ಬೆಂಗಳೂರು: ‘ಬರಹಗಾರರು, ಚಿಂತಕರು ಮತ್ತು ವಿರೋಧ ಪಕ್ಷಗಳ ಮುಖಂಡರಿಗೆ ಬರುತ್ತಿರುವ ಜೀವಬೆದರಿಕೆ ಕರೆ ಹಾಗೂ ಪತ್ರಗಳನ್ನು ನಿರ್ಲಕ್ಷಿಸಬಾರದು’ ಎಂದು ರಾಜ್ಯ ಸರ್ಕಾರಕ್ಕೆ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಸಲಹೆ ನೀಡಿದ್ದಾರೆ.

ಈ ಬಗ್ಗೆ ಹೇಳಿಕೆ ನೀಡಿರುವ ಅವರು, ‘ದಾವಣಗೆರೆ, ಭದ್ರಾವತಿ, ಅಜ್ಜಂಪುರ ಮುಂತಾದ ಊರುಗಳಿಂದ ಜೀವಬೆದರಿಕೆ ಪತ್ರಗಳು ಬಂದಿವೆ. ಕುಂ. ವೀರಭದ್ರಪ್ಪನವರಿಗೆ ಆರು, ಬಂಜಗೆರೆ ಜಯಪ್ರಕಾಶ್‌ಗೆ ಐದು ಪತ್ರ, ಬಿ.ಟಿ.ಲಲಿತಾ ನಾಯಕ್, ಬಿ.ಎಲ್. ವೇಣು, ಚಂದ್ರಶೇಖರ್ ತಾಳ್ಯ ಅವರಿಗೆ ತಲಾ ಎರಡು ಪತ್ರ, ಎಸ್.ಜಿ. ಸಿದ್ಧರಾಮಯ್ಯ ಮತ್ತು ವಸುಂಧರಾ ಭೂಪತಿ ಅವರಿಗೆ ಒಂದೊಂದು ಪತ್ರ ಬಂದಿದೆ’ ಎಂದಿದ್ದಾರೆ.

‘ನನಗೂ ಹಲವು ಬೆದರಿಕೆ ಪತ್ರಗಳು ಬಂದಿವೆ. ಡಿಜಿಯವರಿಗೆ ನಾನು ಈ ಬಗ್ಗೆ ಮಾತನಾಡಿದ್ದೆ. ಇತ್ತೀಚೆಗೆ ಟಿವಿ ಮಾಧ್ಯಮವೊಂದರಲ್ಲಿ ವೀರೇಶ್ ಎಂಬಾತ ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ. ಶಿವಕುಮಾರ್ ಮತ್ತು ನನಗೆ ಗುಂಡು ಹಾರಿಸಬೇಕೆಂದು ಹೇಳಿಕೆ ಕೊಟ್ಟಿದ್ದ. ಈ ಬೆದರಿಕೆಯ ಹೇಳಿಕೆ ಮತ್ತು ಪತ್ರಗಳ ಕುರಿತು ದೂರು ದಾಖಲಿಸಲಾಗಿದೆ. ಆದರೆ, ಈವರೆಗೂ ಎಫ್‍ಐಆರ್ ದಾಖಲು ಮಾಡಿದಿರುವುದು ಸರ್ಕಾರದ ಬೇಜವಾಬ್ದಾರಿ ನಡವಳಿಕೆ’ ಎಂದಿದ್ದಾರೆ.

ಬಂಜಗೆರೆ ಜಯಪ್ರಕಾಶ್‌ಗೆ ಭದ್ರತೆ

ರಾಮನಗರ: ಜೀವ ಬೆದರಿಕೆ ಪತ್ರದ ಹಿನ್ನೆಲೆಯಲ್ಲಿ ಸಾಹಿತಿ ಬಂಜಗೆರೆ ಜಯಪ್ರಕಾಶ್‌ ಅವರಿಗೆ ಪೊಲೀಸ್‌ ಇಲಾಖೆಯು ಭದ್ರತೆ ನೀಡಿದ್ದು, ಅಂಗರಕ್ಷಕರೊಬ್ಬರನ್ನು ನಿಯೋಜಿಸಿದೆ.

‘ಪಠ್ಯಪುಸ್ತಕ ಪರಿಷ್ಕರಣೆ ಕುರಿತಾಗಿ ನೀಡಿದ ಹೇಳಿಕೆ ಖಂಡಿಸಿ ‘ಸಹಿಷ್ಣು ಹಿಂದು’ ಹೆಸರಿನಲ್ಲಿ ಬಂಜಗೆರೆ ಅವರಿಗೆ ನಿರಂತರವಾಗಿ ಬೆದರಿಕೆ ಪತ್ರಗಳು ಬರುತ್ತಿವೆ. ಅದರಲ್ಲಿ ಬಂಜಗೆರೆ ಸೇರಿದಂತೆ ಇತರ ಸಾಹಿತಿಗಳಿಗೆ ಕೊಲೆ ಬೆದರಿಕೆ ಹಾಕಲಾಗಿದೆ. ಈ ಹಿನ್ನೆಲೆಯಲ್ಲಿ ಕ್ರಮ ಕೈಗೊಂಡಿದ್ದು, ಅಂಗರಕ್ಷಕ ಸೇವೆ ಒದಗಿಸಿದ್ದೇವೆ. ನ್ಯಾಯಾಲಯದ ಅನುಮತಿ ಮೇರೆಗೆ ಹಾರೋಹಳ್ಳಿ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಿ ತನಿಖೆಯನ್ನೂ ಕೈಗೊಂಡಿದ್ದೇವೆ’ ಎಂದು ರಾಮನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಂತೋಷ್‌ ಬಾಬು ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT