ಭಾನುವಾರ, ಸೆಪ್ಟೆಂಬರ್ 19, 2021
24 °C
ಕೋವಿಡ್‌ ಕರಿನೆರಳಿನಿಂದ ಹೊರಬರುವ ಪ್ರಯತ್ನ, ಮಡಿಕೇರಿಯತ್ತ ಪ್ರವಾಸಿಗರ ಆಗಮನ

ಪ್ರವಾಸೋದ್ಯಮ ಚಟುವಟಿಕೆ ಗರಿಗೆದರುವ ನಿರೀಕ್ಷೆ

ಆದಿತ್ಯ ಕೆ.ಎ. Updated:

ಅಕ್ಷರ ಗಾತ್ರ : | |

Prajavani

ಮಡಿಕೇರಿ: ಕೋವಿಡ್‌–19 ಪಿಡುಗಿನಿಂದ ಕೊಡಗು ಜಿಲ್ಲೆಯಲ್ಲಿ ಸ್ಥಗಿತಗೊಂಡಿದ್ದ ಪ್ರವಾಸೋದ್ಯಮ ಚಟುವಟಿಕೆಗಳು ನಿಧಾನವಾಗಿ ಗರಿಗೆದರುವ ಲಕ್ಷಣಗಳು ಕಾಣಿಸುತ್ತಿವೆ.

ಒಂದೊಂದೇ ಪ್ರವಾಸಿ ತಾಣಗಳು ಪ್ರವೇಶಕ್ಕೆ ಮುಕ್ತವಾಗುತ್ತಿವೆ. ಕೋವಿಡ್‌ ಕರಿನೆರಳು ಇನ್ನೂ ಕಾಡುತ್ತಿದ್ದು ಅದರ ನಡುವೆಯೇ ಜೀವಿಸುವ ಅನಿವಾರ್ಯತೆ ಸೃಷ್ಟಿಯಾಗಿದೆ.

ಲಾಕ್‌ಡೌನ್, ಕೋವಿಡ್‌ ಆತಂಕದಿಂದ ಕಳೆದ ನಾಲ್ಕೈದು ತಿಂಗಳಿಂದ ಮನೆಯಲ್ಲೇ ಉಳಿದಿದ್ದ ಪ್ರವಾಸಿ ಪ್ರಿಯರು, ಪ್ರವಾಸಿ ತಾಣಗಳತ್ತ ಬರಲು ಆರಂಭಿಸಿದ್ದಾರೆ.

ಕಳೆದ ವಾರ ಮಡಿಕೇರಿಯ ರಾಜಾಸೀಟ್‌ಗೆ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಬಳಿಕ ನಿಧಾನಕ್ಕೆ ಪ್ರವಾಸಿಗರು ‘ಮಂಜಿನ ನಗರಿ’ಯತ್ತ ಆಗಮಿಸುತ್ತಿದ್ದಾರೆ.

ವಾರಾಂತ್ಯದಲ್ಲಿ ರಾಜಾಸೀಟ್‌, ಕುಶಾಲನಗರದ ನಿಸರ್ಗಧಾಮದಲ್ಲಿ ಪ್ರವಾಸಿಗರು ಕಂಡುಬರುತ್ತಿದ್ದಾರೆ. ಸೆ.15ರ ಬಳಿಕ ಮತ್ತಷ್ಟು ಪ್ರವಾಸಿ ತಾಣಗಳು ಪ್ರವಾಸಿಗರಿಗೆ ಮುಕ್ತವಾಗಲಿದ್ದು, ಪ್ರವಾಸೋದ್ಯಮವನ್ನೇ ಅವಲಂಬಿಸಿ, ಜೀವನ ನಡೆಸುತ್ತಿದ್ದವರ ಮೊಗದಲ್ಲಿ ಮಂದಹಾಸ ಮೂಡುವ ಲಕ್ಷಣಗಳು ಕಾಣಿಸುತ್ತಿವೆ.

ಬುಕಿಂಗ್‌ ಆರಂಭ:
ಕೊಡಗಿನಲ್ಲಿ ಕೊರೊನಾ ಭೀತಿ ಹೆಚ್ಚಾದ ಬಳಿಕ ಹೋಮ್‌ ಸ್ಟೇ ಹಾಗೂ ರೆಸಾರ್ಟ್‌ಗಳು ಬಂದ್‌ ಆಗಿದ್ದವು. ಕೊಡಗು ಜಿಲ್ಲಾಡಳಿತವೇ ಹೋಮ್‌ ಸ್ಟೇ ಹಾಗೂ ರೆಸಾರ್ಟ್‌ ಅನ್ನು ಮುಚ್ಚುವಂತೆ ಅಧಿಕೃತ ಆದೇಶ ಹೊರಡಿಸಿತ್ತು. ಇದೀಗ ಅವುಗಳ ತೆರೆಯಲು ಅವಕಾಶ ನೀಡಲಾಗಿದ್ದು, ಹೋಮ್‌ ಸ್ಟೇ ಹಾಗೂ ರೆಸಾರ್ಟ್‌ ಮಾಲೀಕರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ಬುಕಿಂಗ್‌ ಸಹ ಆರಂಭವಾಗಿದೆ.

ಹೋಮ್‌ ಸ್ಟೇಗಳಲ್ಲಿ ಕೆಲಸವಿಲ್ಲದೇ ಕಾರ್ಮಿಕರು ತಮ್ಮ ಊರುಗಳಿಗೆ ತೆರಳಿದ್ದರು. ಪ್ರವಾಸೋದ್ಯಮ ಚಟುವಟಿಕೆಗಳು ಮತ್ತೆ ಗರಿಗೆದರುತ್ತಿದ್ದು ಕಾರ್ಮಿಕರು ಮತ್ತೆ ವಾಪಸ್ಸಾಗುವ ಸಾಧ್ಯತೆಯಿದೆ.

ಕೊಡಗು ಜಿಲ್ಲೆಯಲ್ಲಿ ತೋಟಗಾರಿಕೆ ಬೆಳೆಗಳೂ ಬದುಕಿಗೆ ಆಧಾರ. ಅದರಲ್ಲಿ ರೈತ ಕುಟುಂಬಗಳು, ಕಾರ್ಮಿಕರು ಬದುಕು ಕಟ್ಟಿಕೊಂಡಿದ್ದಾರೆ. ಅದೇ ರೀತಿ ಟ್ಯಾಕ್ಸಿ ಚಾಲಕರು, ಆಟೋ ಚಾಲಕರು, ಹೋಟೆಲ್‌, ರೆಸಾರ್ಟ್‌, ಲಾಡ್ಜ್ ಮಾಲೀಕರೂ ಸೇರಿದಂತೆ ಇನ್ನೂ ಹಲವರು ಪ್ರವಾಸೋದ್ಯಮವನ್ನೇ ನಂಬಿ ಬದುಕು ಸಾಗಿಸುತ್ತಿದ್ದಾರೆ. ಪ್ರವಾಸಿಗರು ಬಂದರೆ, ಅವಲಂಬಿತರು ಸಂಕಷ್ಟದಿಂದ ಹೊರಬರಲು ಸಾಧ್ಯವಾಗಲಿದೆ ಎಂದು ಹೋಮ್‌ ಸ್ಟೇ ಮಾಲೀಕ ನಂದೀಶ್‌ ಹೇಳಿದರು.

ಕೈಗಾರಿಕೆಗಳು ಇಲ್ಲ: ಜಿಲ್ಲೆಯಲ್ಲಿ ಕೈಗಾರಿಕೆಗಳು ಇಲ್ಲ. ಕೃಷಿ ಜಮೀನು ಇಲ್ಲದವರೂ ಪ್ರವಾಸಿ ತಾಣಗಳ ಬಳಿ ಸಣ್ಣಪುಟ್ಟ ಅಂಗಡಿ, ಸ್ಪೈಸ್‌‌‌ ಅಂಗಡಿ, ಆಟಿಕೆ ಅಂಗಡಿ ನಡೆಸುತ್ತಿದ್ದರು. ಅವರಿಗೆ ಇದೇ ಆದಾಯ ಮೂಲವಾಗಿತ್ತು. ಕೊರೊನಾ ನಿಯಂತ್ರಣಕ್ಕೆ ಹೇರಿದ್ದ ಲಾಕ್‌ಡೌನ್‌ನಿಂದ ಅವರೆಲ್ಲರೂ ಸಂಕಷ್ಟಕ್ಕೆ ಸಿಲುಕಿದ್ದರು.

ರಾಜಾಸೀಟ್‌ ಹಾಗೂ ನಿಸರ್ಗಧಾಮದಲ್ಲಿ ಬಂದ್‌ ಆಗಿದ್ದ ಅಂಗಡಿಗಳು ಮತ್ತೆ ಬಾಗಿಲು ತೆರೆದಿವೆ. ಪ್ರವಾಸೋದ್ಯಮ ಚಟುವಟಿಕೆ ಪೂರ್ಣ ಪ್ರಮಾಣದಲ್ಲಿ ಆರಂಭವಾದರೆ ಆರ್ಥಿಕ ಪುನಶ್ಚೇತನ ಸಾಧ್ಯವಾಗಲಿದೆ ಎಂದು ಹಲವರು ಹೇಳುತ್ತಾರೆ.

***

ಕೋವಿಡ್‌ ಭಯದಿಂದ ಹೊರ ರಾಜ್ಯದ ಪ್ರವಾಸಿ ತಾಣಕ್ಕೆ ಭೇಟಿ ಕೊಡುವವರ ಸಂಖ್ಯೆ ಕಡಿಮೆಯಾಗಲಿದ್ದು, ಕೊಡಗು ಸೇರಿದಂತೆ ರಾಜ್ಯದ ಸ್ಥಳೀಯ ತಾಣಕ್ಕೆ ಹೆಚ್ಚಿನ ಜನರು ಭೇಟಿ ಕೊಡುವ ನಿರೀಕ್ಷೆಯಿದೆ
– ನಾಗೇಂದ್ರ ಪ್ರಸಾದ್‌, ಅಧ್ಯಕ್ಷ, ಹೋಟೆಲ್‌– ರೆಸಾರ್ಟ್‌ ಮಾಲೀಕರ ಸಂಘ, ಕೊಡಗು

***
ಕೋವಿಡ್‌ಗೂ ಮೊದಲು ಕೊಡಗು ಜಿಲ್ಲೆಗೆ ಪ್ರತಿ ತಿಂಗಳು ಅಂದಾಜು 2 ಲಕ್ಷ ಪ್ರವಾಸಿಗರು ಭೇಟಿ ಕೊಡುತ್ತಿದ್ದರು. ಭಯ ದೂರವಾಗಿ ಪರಿಸ್ಥಿತಿ ಸುಧಾರಿಸಲು ಹಲವು ದಿನಗಳೇ ಬೇಕು
– ರಾಘವೇಂದ್ರ, ಸಹಾಯಕ ನಿರ್ದೇಶಕ, ಪ್ರವಾಸೋದ್ಯಮ ಇಲಾಖೆ

ಪ್ರವಾಸಿಗರಿಗೆ ಮುಕ್ತವಾದ ತಾಣಗಳು
* ಅಬ್ಬಿ ಜಲಪಾತ
* ರಾಜಾಸೀಟ್‌
* ನಿಸರ್ಗಧಾಮ
* ಮಡಿಕೇರಿ ಕೋಟೆ ಆವರಣದ ಮ್ಯೂಸಿಯಂ
* ಜಿಲ್ಲೆಯ ವಿವಿಧ ದೇಗುಲಗಳು

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು