ಬುಧವಾರ, ಮೇ 12, 2021
31 °C
ನೀರಿನ ಪರಿಶುದ್ಧತೆಯ ಬಗ್ಗೆ ಮುಗಿಯದ ಚರ್ಚೆ

ಒಳನೋಟ: ಅಂತರ್ಜಲ ಮಟ್ಟ ವೃದ್ಧಿಸಿದ ‘ಕೊಳಚೆ ನೀರು’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕೊಳಚೆ ನೀರನ್ನು ಪುನರ್‌ಬಳಸುವುದರ ಮಹತ್ವ ತಿಳಿಯಬೇಕೆಂದರೆ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯ ಕೆರೆಗಳನ್ನು ನೋಡಬೇಕು. ಬೆಂಗಳೂರಿನ ತ್ಯಾಜ್ಯ ನೀರನ್ನು ಸಂಸ್ಕರಿಸಿ ಈ ಜಿಲ್ಲೆಗಳ ಕೆರೆಗಳಿಗೆ ಹರಿಸಲಾಗುತ್ತಿದೆ. ಆದರೆ, ಹೀಗೆ ಸಂಸ್ಕರಿಸಿದ ನೀರಿನ ಜೊತೆಗೆ ಕೊಳಚೆ ನೀರೂ ಹರಿದು ಬರುತ್ತಿದೆ ಎಂಬ ದೂರು ಸ್ಥಳೀಯರದ್ದು.

‘ಕೊಳಚೆ ನೀರನ್ನು ಅಲ್ಲಿ ಸಂಸ್ಕರಿಸುವುದರ ಜೊತೆಗೆ, ಮೂರನೇ ಹಂತದಲ್ಲಿಯೂ ಶುದ್ಧೀಕರಿಸಿ ಪೂರೈಸಬೇಕು’ ಎಂದು ಸ್ಥಳೀಯರು ಒತ್ತಾಯಿಸುತ್ತಾರೆ.

ಬೆಂಗಳೂರಿನಿಂದ ಕೋಲಾರದ ಕೆರೆಗಳಿಗೆ ದಿನಕ್ಕೆ 36 ಕೋಟಿ ಲೀಟರ್‌ ಹಾಗೂ ಚಿಕ್ಕಬಳ್ಳಾಪುರ ಕೆರೆಗಳಿಗೆ 9 ಕೋಟಿ ಲೀಟರ್‌ ಸಂಸ್ಕರಿಸಿದ ನೀರನ್ನು ಪೂರೈಸಲಾಗುತ್ತಿದೆ.

‘ಅಂತರರಾಷ್ಟ್ರೀಯ ಮಾನದಂಡಗಳನ್ವಯ ನಗರದಲ್ಲಿ ಕೊಳಚೆ ನೀರನ್ನು ಸಂಸ್ಕರಿಸಲಾಗುತ್ತಿದೆ. ಉತ್ಪಾದನೆಯಾಗುತ್ತಿರುವ ತ್ಯಾಜ್ಯ ನೀರಿನ ಪೈಕಿ ಶೇ 85ರಷ್ಟನ್ನು ಸಂಸ್ಕರಿಸಲಾಗುತ್ತಿದೆ. ಎಲ್ಲ ಎಸ್‌ಟಿಪಿಗಳಲ್ಲಿನ ಪ್ರಕ್ರಿಯೆ ಆನ್‌ಲೈನ್ ಪರಿಶೀಲನೆ ಕೂಡ ನಡೆಯುತ್ತಿದೆ. ಸಂಸ್ಕರಿಸಿದ ನಂತರ ಮತ್ತೆ ಕೊಳಚೆ ನೀರು ಸೇರ್ಪಡೆಯಾಗುತ್ತಿಲ್ಲ’ ಎಂದು ಬೆಂಗಳೂರು ಜಲಮಂಡಳಿ ತ್ಯಾಜ್ಯ ನೀರು ನಿರ್ವಹಣಾ ವಿಭಾಗದ ಮುಖ್ಯ ಎಂಜಿನಿಯರ್‌ ಬಿ.ಸಿ. ಗಂಗಾಧರ ತಿಳಿಸಿದರು.

‘ಬೆಂಗಳೂರಿನಿಂದ ಈ ಜಿಲ್ಲೆಗಳಿಗೆ ಒಟ್ಟು 8 ಟಿಎಂಸಿ ಅಡಿ ನೀರು ಬಂದಿದೆ. 86ಕ್ಕೂ ಹೆಚ್ಚು ಕೆರೆಗಳನ್ನು, 52 ಚೆಕ್‌ಡ್ಯಾಮ್‌ಗಳನ್ನು ಈ ನೀರಿನಿಂದಲೇ ತುಂಬಿಸಲಾಗಿದೆ. ರಾಜಧಾನಿ ಇರುವವರೆಗೆ ಈ ಜಿಲ್ಲೆಗಳಿಗೆ ನೀರಿನ ಕೊರತೆ ಬಾಧಿಸದು. ಅಲ್ಲದೆ, ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗೆ ಇಷ್ಟು ನೀರನ್ನು ಬೇರೆ ಯಾವ ವಿಧದಿಂದಲೂ ತರಲು ಸಾಧ್ಯವಿಲ್ಲ’ ಎಂದು ಸಣ್ಣ ನೀರಾವರಿ ಇಲಾಖೆಯ ಉನ್ನತ ಅಧಿಕಾರಿಯೊಬ್ಬರು ತಿಳಿಸಿದರು.

‘ಎರಡನೇ ಹಂತದಲ್ಲಿ ಸಂಸ್ಕರಿಸಿದ ನೀರನ್ನು ನೀಡಲಾಗುತ್ತಿದೆ. ಕುಡಿಯಲು, ಅಡುಗೆಗೆ ಹೊರತು ಪಡಿಸಿ, ಕೃಷಿ ಸೇರಿದಂತೆ ಇತರೆ ಉದ್ದೇಶಗಳಿಗೆ ಈ ನೀರನ್ನು ಧಾರಾಳವಾಗಿ ಬಳಸಬಹುದು. ಯೋಜನೆ ವಿರೋಧಿಸಿ ಹಲವರು ನ್ಯಾಯಾಲಯದ ಮೊರೆ ಹೋಗಿದ್ದರು. ಹೈಕೋರ್ಟ್‌ ಮತ್ತು ಸುಪ್ರೀಂ ಕೋರ್ಟ್‌ ಪರಿಶೀಲನೆ ನಂತರ, ಯೋಜನೆಗೆ ಹಸಿರು ನಿಶಾನೆ ದೊರೆತಿದೆ’ ಎಂದರು.

‘ಕೆರೆಗಳು ಭರ್ತಿಯಾದ ನಂತರ ಈ ಭಾಗದಲ್ಲಿ ಅಂತರ್ಜಲ ಮಟ್ಟ ತುಂಬಾ ಹೆಚ್ಚಾಗಿದೆ. ಕೊಳವೆ ಬಾವಿಗಳನ್ನು ಮರುಪೂರಣಗೊಳಿಸಲಾಗಿದೆ. ಕೊಳವೆ ಬಾವಿಗಳಲ್ಲಿ ಬರುವ ನೀರು ಕುಡಿಯಲೂ ಯೋಗ್ಯವಾಗಿದೆ ಎಂದು ವಿಜ್ಞಾನಿಗಳು ವರದಿ ನೀಡಿದ್ದಾರೆ’ ಎಂದು ಅವರು ತಿಳಿಸಿದರು.

‘ತೃತೀಯ ಹಂತದಲ್ಲಿ ನೀರನ್ನು ಸಂಸ್ಕರಿಸಲು ಹೆಚ್ಚು ಹಣ ಖರ್ಚಾಗುತ್ತದೆ. ಬೆಂಗಳೂರಿನ ಕೊಳಚೆ ನೀರನ್ನು ನೀವು ಎಷ್ಟೇ ಶುದ್ಧೀಕರಿಸಿದರೂ ಆ ನೀರನ್ನು ಕುಡಿಯಲು ಯಾರೂ ಬಯಸುವುದಿಲ್ಲ ಹಾಗೆ ಹೇಳುವುದಕ್ಕೂ ಸಾಧ್ಯವಿಲ್ಲ. ಆ ಚಿಂತನೆಯೂ ಇಲಾಖೆಯ ಮುಂದೆ ಇಲ್ಲ’ ಎಂದು ಅವರು ಸ್ಪಷ್ಟಪಡಿಸಿದರು.

‘ಕೋಲಾರ ಜಿಲ್ಲೆಯ ನರಸಾಪುರ ತಾಲ್ಲೂಕಿನ ಕೈಗಾರಿಕಾ ಪ್ರದೇಶಕ್ಕೆ ಪೂರೈಸಲು ದಿನಕ್ಕೆ 4 ಕೋಟಿ ಲೀಟರ್ ಸಾಮರ್ಥ್ಯದ ಎಸ್‌ಟಿಪಿ ನಿರ್ಮಾಣ ಮಾಡಲಾಗುತ್ತದೆ. ತೃತೀಯ ಹಂತದಲ್ಲಿ ಈ ನೀರನ್ನು ಸಂಸ್ಕರಿಸಿ, ಕೈಗಾರಿಕಾ ಪ್ರದೇಶಕ್ಕೆ ಪೂರೈಸುವ ಯೋಜನೆ ಸರ್ಕಾರದ ಮುಂದಿದೆ’ ಎಂದೂ ಅವರು ತಿಳಿಸಿದರು.

‘ಸಂಸ್ಕರಿಸದ ನೀರಿನಿಂದ ಕೃಷಿ ಭೂಮಿಗೂ ಅನಾರೋಗ್ಯ’
‘ಕೈಗಾರಿಕೆ ಹಾಗೂ ವೈದ್ಯಕೀಯ ತ್ಯಾಜ್ಯಗಳು ಕೂಡ ನದಿ–ಕೆರೆಗಳನ್ನು ಸೇರುತ್ತಿರುವ ಪರಿಣಾಮ ನೀರು ವಿಷಕಾರಿಯಾಗುತ್ತಿದೆ. ಈ ನೀರನ್ನು ಸಂಸ್ಕರಿಸದೆಯೇ ಬಳಸಿದಲ್ಲಿ ಸಾಂಕ್ರಾಮಿಕ ರೋಗಗಳ ಜತೆಗೆ ಕ್ಯಾನ್ಸರ್‌ನಂತಹ ಕಾಯಿಲೆಗಳು ಕೂಡ ಕಾಣಿಸಿಕೊಳ್ಳುತ್ತವೆ.’


ಕೆ.ಸಿ. ರಘು

‘ಕಲುಷಿತ ನೀರನ್ನು ಸೇವಿಸಿದಲ್ಲಿ ಅತಿಸಾರ, ಕಾಮಾಲೆ, ಕಾಲರಾ, ಪೋಲಿಯೊ, ಚರ್ಮರೋಗ, ಆಮಶಂಕೆ ಸೇರಿದಂತೆ ವಿವಿಧ ರೋಗಗಳು ಬರುವ ಸಾಧ್ಯತೆಗಳು ಇರುತ್ತದೆ. ವಿಷಕಾರಿ ತ್ಯಾಜ್ಯಗಳು ನೀರನ್ನು ಸೇರಿದಲ್ಲಿ ಸಾಮಾನ್ಯ ಸಾಂಕ್ರಾಮಿಕ ಕಾಯಿಲೆಗಳೇ ಬಲಿಷ್ಠವಾಗಲಿವೆ. ಬಳಿಕ ಈಗಾಗಲೇ ಬಳಕೆಯಲ್ಲಿರುವ ಔಷಧಗಳಿಂದ ಅವುಗಳನ್ನು ವಾಸಿ ಮಾಡುವುದು ಕೂಡ ಕಷ್ಟವಾಗುತ್ತದೆ. ಹಾಗಾಗಿ, ನೀರಿನ ಸಂಸ್ಕರಣೆಗೆ ಆದ್ಯತೆ ನೀಡಬೇಕಾಗಿದೆ. ಇಲ್ಲವಾದರೆ ಭವಿಷ್ಯದಲ್ಲಿ ಗಂಭೀರ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.’

‘ಕುಡಿಯುವ ನೀರಿನ ಜತೆಗೆ ಕೃಷಿ ಭೂಮಿಗೆ ಬಳಸುವ ನೀರಿನ ಸುರಕ್ಷತೆಯ ಕಡೆಗೆ ಕೂಡ ಗಮನಹರಿಸಬೇಕು. ಎಚ್‌ಐವಿ ಸೇರಿದಂತೆ ವಿವಿಧ ಕಾಯಿಲೆಗಳಿಗೆ ಬಳಸುವ ಅವಧಿ ಮೀರಿದ ಔಷಧ ಹಾಗೂ ವೈದ್ಯಕೀಯ ತ್ಯಾಜ್ಯವನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡಲಾಗುತ್ತಿಲ್ಲ. ಇದರಿಂದಾಗಿ ಅವು ನದಿಗಳನ್ನು ಸೇರಿ ನೀರನ್ನು ಕಲುಷಿತಗೊಳಿಸುತ್ತಿವೆ. ವಿದೇಶಗಳಲ್ಲಿ ಈ ವಿಷಕಾರಿ ತ್ಯಾಜ್ಯಗಳನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡಲಾಗುತ್ತಿದೆ. ಆರ್ಸೆನಿಕ್, ಸೀಸದಂತಹ ಭಾರಲೋಹಗಳು ಕೂಡ ನದಿ ನೀರನ್ನು ಸೇರುತ್ತಿವೆ. ಪರಿಣಾಮ ನೀರು ವಿಷಕಾರಿಯಾಗಿ ಕ್ಯಾನ್ಸರ್‌ನಂತಹ ಕಾಯಿಲೆಗೆ ಕಾರಣವಾಗುತ್ತಿದೆ.’

‘ವಿಷಕಾರಿ ತ್ಯಾಜ್ಯಗಳು ನದಿ–ಕೆರೆಗಳಿಗೆ ಸೇರಿದಲ್ಲಿ ಜಲ ಸಸ್ಯಗಳು ಹಾಗೂ ಜಲಚರಗಳಿಗೆ ಕೂಡ ಹಾನಿಯಾಗುತ್ತದೆ. ಸಂಸ್ಕರಿಸದ ನೀರನ್ನು ಕೃಷಿ ಪ್ರದೇಶದಲ್ಲಿ ಗಿಡಗಳಿಗೆ ಉಣಿಸಿದಲ್ಲಿ ಅವು ನೀಡುವ ಫಲಗಳು ವಿಷಕಾರಿ ಅಂಶವನ್ನು ಹೊಂದಿರುತ್ತವೆ. ಇದರಿಂದಾಗಿ ಸಹಜವಾಗಿ ಆ ಫಲಗಳನ್ನು ಸೇವಿಸುವ ನಮಗೆ ಕೂಡ ಕಾಯಿಲೆಗಳು ಬರುವ ಸಾಧ್ಯತೆ ಇರುತ್ತದೆ. ಕೃಷಿಯ ಮೂಲವೇ ಕೆಟ್ಟುಹೋದಲ್ಲಿ ಆರೋಗ್ಯಯುತ ಕೃಷಿ ಉತ್ಪನ್ನವನ್ನು ಹೇಗೆ ನಿರೀಕ್ಷಿಸಲು ಸಾಧ್ಯ?’
-ಕೆ.ಸಿ. ರಘು, ಆಹಾರತಜ್ಞ

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು