ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಾಮಾಣಿಕವಾಗಿ ಜವಾಬ್ದಾರಿ ನಿರ್ವಹಿಸುವೆ: ಥಾವರ್‌ಚಂದ್‌ ಗೆಹ್ಲೋಟ್‌

Last Updated 6 ಜುಲೈ 2021, 22:00 IST
ಅಕ್ಷರ ಗಾತ್ರ

ನವದೆಹಲಿ: ‘ಪಕ್ಷ ವಹಿಸಿರುವ ಹೊಸ ಜವಾಬ್ದಾರಿಯನ್ನು ಪ್ರಾಮಾಣಿಕವಾಗಿ ನಿರ್ವಹಿಸುವೆ’ ಎಂದು ರಾಜ್ಯದ ನೂತನ ರಾಜ್ಯಪಾಲರಾಗಿ ನೇಮಕಗೊಂಡಿರುವ ಥಾವರ್‌ಚಂದ್‌ ಗೆಹ್ಲೋಟ್‌ ಹೇಳಿದರು.

ಮಂಗಳವಾರ ‘ಪ್ರಜಾವಾಣಿ’ಯೊಂದಿಗೆ ಮಾತನಾಡಿದ ಅವರು, ‘2014ರಿಂದ ಕೇಂದ್ರದ ಸಚಿವನಾಗಿ ಕೆಲಸ ಮಾಡಿದ್ದೇನೆ. ಎರಡು ಅವಧಿಗೆ ಬಿಜೆಪಿಯ ಕರ್ನಾಟಕ ಉಸ್ತುವಾರಿಯಾಗಿಯೂ ಸೇವೆ ಸಲ್ಲಿಸಿರುವ ಅನುಭವ ಹೊಂದಿದ್ದೇನೆ’ ಎಂದು ಹೇಳಿದರು.

‘ಕರ್ನಾಟಕದ ಉಸ್ತುವಾರಿಯಾಗಿ ಕೆಲಸ ಮಾಡಿದ ಸಂದರ್ಭದಲ್ಲಿ ಯಾವುದೇ ರೀತಿಯ ಸಮಸ್ಯೆ ಎದುರಿಸಿರಲಿಲ್ಲ. ಭವಿಷ್ಯದಲ್ಲೂ ಯಾವುದೇ ತೊಂದರೆ ಎದುರಾಗುವುದಿಲ್ಲ ಎಂಬ ವಿಶ್ವಾಸವಿದೆ’ ಎಂದು 73 ವರ್ಷದ ಗೆಹ್ಲೋಟ್‌ ತಿಳಿಸಿದರು.

‘ನನಗೆ ಹೊಸ ಜವಾಬ್ದಾರಿ ವಹಿಸಿರುವ ಪ್ರಧಾನಿ ಮೋದಿ, ರಾಷ್ಟ್ರಪತಿ ರಾಮನಾಥ ಕೋವಿಂದ್‌ ಹಾಗೂ ಪಕ್ಷದ ಹಿರಿಯ ಮುಖಂಡರಿಗೆ ಅಭಿನಂದನೆ ಸಲ್ಲಿಸುವೆ. ಎಲ್ಲ ರೀತಿಯ ಸಮಸ್ಯೆಗಳಿಗೆ ಸಂವಿಧಾನದ ಚೌಕಟ್ಟಿನಲ್ಲಿ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸುವ ಮೂಲಕ ಹಿರಿಯರ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡುವೆ’ ಎಂದು ಅವರು ಭರವಸೆ ನೀಡಿದರು.

ಗೆಹ್ಲೋಟ್‌ ಪರಿಚಯ: ಮಧ್ಯಪ್ರದೇಶದ ಉಜ್ಜೈನ್‌ ಜಿಲ್ಲೆಯ ನಾಗ್ಡಾ ತಾಲ್ಲೂಕಿನ ರುಪೆಟಾ ಗ್ರಾಮದಲ್ಲಿ 1948ರ ಮೇ 18ರಂದು ಜನಿಸಿರುವ ಗೆಹ್ಲೋಟ್‌, ಮೂರು ಬಾರಿ ಮಧ್ಯಪ್ರದೇಶ ವಿಧಾನಸಭೆಯ ಸದಸ್ಯರಾಗಿ, ನಾಲ್ಕು ಬಾರಿ ಶಾಜಾಪುರ ಲೋಕಸಭಾ ಕ್ಷೇತ್ರದ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ.

2009ರ ಲೋಕಸಭೆ ಚುನಾವಣೆಯಲ್ಲಿ ಪರಾಭವಗೊಂಡಿದ್ದ ಅವರು, 2012ರಲ್ಲಿ ರಾಜ್ಯಸಭೆಗೆ ಆಯ್ಕೆಯಾಗಿದ್ದರು. ಸದ್ಯ ಬಿಜೆಪಿ ಸಂಸದೀಯ ಮಂಡಳಿ ಸದಸ್ಯರೂ, ಪಕ್ಷದ ಕೇಂದ್ರ ಚುನಾವಣಾ ಸಮಿತಿಯ ಸದಸ್ಯರೂ, ರಾಜ್ಯಸಭೆಯ ಬಿಜೆಪಿ ನಾಯಕರೂ ಆಗಿದ್ದಾರೆ.

ಗೆಹ್ಲೋಟ್‌ ಅವರು ಪಕ್ಷದ ರಾಷ್ಟ್ರೀಯ ಉಪಾಧ್ಯಕ್ಷ, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ಎಸ್‌.ಸಿ ಮೋರ್ಚಾ ಅಧ್ಯಕ್ಷ ಸ್ಥಾನ ಸೇರಿದಂತೆ ಬಿಜೆಪಿಯ ವಿವಿಧ ಹುದ್ದೆಗಳಲ್ಲಿ ಕೆಲಸ ಮಾಡಿರುವ ಅನುಭವಿ.

ಕಾರ್ಮಿಕ ಮುಖಂಡರಾಗಿದ್ದ ಇವರು 1968ರಿಂದ 1971ರವರೆಗೆ ಕಾರ್ಮಿಕ ಹೋರಾಟದಲ್ಲಿ ಭಾಗವಹಿಸಿ ಜೈಲು ವಾಸ ಅನುಭವಿಸಿದ್ದಾರೆ. ತುರ್ತು ಪರಿಸ್ಥಿತಿಯ ಸಂದರ್ಭದಲ್ಲೂ ಜೈಲು ಸೇರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT