ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿಘಂಟು ತಜ್ಞ, ಶತಾಯುಷಿ ಪದ್ಮಶ್ರೀ ಪ್ರೊ.ಜಿ ವೆಂಕಟಸುಬ್ಬಯ್ಯ ಇನ್ನಿಲ್ಲ

Last Updated 19 ಏಪ್ರಿಲ್ 2021, 17:31 IST
ಅಕ್ಷರ ಗಾತ್ರ

ಬೆಂಗಳೂರು: ನಿಘಂಟು ತಜ್ಞರೆಂದೇ ಪ್ರಸಿದ್ಧಿ ಹೊಂದಿದ್ದ ಖ್ಯಾತ ಭಾಷಾ ತಜ್ಞ, ಶತಾಯುಷಿ ಪ್ರೊ.ಜಿ. ವೆಂಕಟಸುಬ್ಬಯ್ಯ (108) ಅವರು ಭಾನುವಾರ ತಡರಾತ್ರಿ 1.15ಕ್ಕೆ ನಿಧನರಾದರು. ಅವರು ಒಬ್ಬ ಪುತ್ರ ಹಾಗೂ ಪುತ್ರಿಯನ್ನು ಅಗಲಿದ್ದಾರೆ.

ಒಂದು ವಾರದ ಹಿಂದೆ ಮೂತ್ರನಾಳದ ಸೋಂಕಿಗೆ ಒಳಗಾಗಿದ್ದ ಅವರನ್ನು ಜಯನಗರದ 7ನೇ ಬ್ಲಾಕ್‌ನಲ್ಲಿರುವ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸಿದ್ದ ಅವರು, ಸಮಸ್ಯೆಯಿಂದ ಪೂರ್ಣಪ್ರಮಾಣದಲ್ಲಿ ಚೇತರಿಸಿಕೊಂಡಿದ್ದರು. ಅವರನ್ನು ಸೋಮವಾರ ಮನೆಗೆ ಕರೆದೊಯ್ಯುವಂತೆ ವೈದ್ಯರು ಸೂಚಿಸಿದ್ದರು. ಆದರೆ, ಭಾನುವಾರ ತಡರಾತ್ರಿ ಉಸಿರಾಟ ಸೇರಿದಂತೆ ವಯೋಸಹಜ ಸಮಸ್ಯೆಯಿಂದ ಮೃತಪಟ್ಟಿದ್ದಾರೆ.

ಮಧ್ಯಾಹ್ನ 1.30ಕ್ಕೆ ವಿಲ್ಸನ್‌ ಗಾರ್ಡನ್‌ನ ಚಿತಾಗಾರದಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಸಂಸ್ಕಾರ ನೆರವೇರಿಸಲಾಯಿತು. ಅವರ ಪತ್ನಿ ಮೂರುವರ್ಷದ ಹಿಂದೆ ನಿಧನಹೊಂದಿದ್ದರು. ಕೆಲ ವರ್ಷಗಳ ಹಿಂದೆ ಅವರನಾಲ್ವರು ಮಕ್ಕಳ ಪೈಕಿ ಒಬ್ಬ ಪುತ್ರ ಹಾಗೂ ‍ಪುತ್ರಿ ಮೃತ ಪಟ್ಟಿದ್ದರು.

ವೆಂಕಟಸುಬ್ಬಯ್ಯ ಅವರು ಕನ್ನಡದ ನಿಘಂಟುಶಾಸ್ತ್ರ, ಪ್ರಾಚೀನ ಸಾಹಿತ್ಯ ಅಧ್ಯಯನ, ಅನುವಾದ ಕ್ಷೇತ್ರಗಳಲ್ಲಿ ಅಪೂರ್ವ ಸಾಧನೆ ಮಾಡಿದ್ದಾರೆ. ಕನ್ನಡ ಭಾಷೆ ಅಥವಾ ಪದಗಳ ಅರ್ಥ ವಿವರಣೆಗೆ ಹಾಗೂ ಭಾಷೆಗೆ ಸಂಬಂಧಿಸಿದ ಗೊಂದಲಗಳ ನಿವಾರಣೆಗೆ ಇಂದಿಗೂ ಅವರು ರಚಿಸಿದ ಕೃತಿಗಳನ್ನೇ ಆಧಾರವಾಗಿ ಬಳಸಲಾಗುತ್ತಿದೆ.

‘ಪ್ರಜಾವಾಣಿ’ಯಲ್ಲಿ ಅವರು ಬರೆಯುತ್ತಿದ್ದ ‘ಇಗೋ ಕನ್ನಡ’ ಅಂಕಣ ಪ್ರಸಿದ್ಧಿ ಪಡೆದಿತ್ತು. ಈ ಅಂಕಣದ ಮೂಲಕ ಅವರು ಭಾಷಾ ಬಳಕೆಗೆ ಸಂಬಂಧಿಸಿದ ಗೊಂದಲಗಳನ್ನು ಬಗೆಹರಿಸಲು ನೆರವಾಗಿದ್ದರು. ಭಾಷೆಗೆ ನೀಡಿದ ಕೊಡುಗೆಗಾಗಿ ಅವರಿಗೆ 2017ರಲ್ಲಿ ‘ಪದ್ಮಶ್ರೀ’ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು.

1913ರಲ್ಲಿ ಮಂಡ್ಯ ಜಿಲ್ಲೆಯ ಕೆ.ಆರ್. ಪೇಟೆಯ ಕೈಗೊನಹಳ್ಳಿ ಯಲ್ಲಿ ಜನಿಸಿದರು. ಆನಂತರ ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಸುವರ್ಣ ಪದಕದೊಡನೆ ಎಂ.ಎ. ಪದವಿ, ನಂತರ ಬಿ.ಟಿ. ಪದವಿ ಪಡೆದಿದ್ದರು. ಅದೇ ಕಾಲೇಜಿನಲ್ಲಿ ಉಪನ್ಯಾಸಕ ರಾಗಿ ವೃತ್ತಿ ಆರಂಭಿಸಿದ ಅವರು, ನಂತರ ಬೆಂಗಳೂರಿನ ವಿಜಯಾ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ, ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿ, ನಿವೃತ್ತರಾಗಿದ್ದರು. ಕನ್ನಡ ಸಾಹಿತ್ಯ ಪರಿಷತ್ತಿನ ಕನ್ನಡ-ಕನ್ನಡ ನಿಘಂಟುವಿನ ಪ್ರಧಾನ ಸಂಪಾದಕರಾಗಿ ಸೇವೆ ಸಲ್ಲಿಸಿದ್ದರು.

‘ನಡೆದಾಡುವ ನಿಘಂಟು’, ‘ಶಬ್ದ ಬ್ರಹ್ಮ’ ಎಂದು ಜನಜನಿತರಾಗಿದ್ದ ಅವರು, ಸಾಹಿತ್ಯ ವಿಮರ್ಶೆ, ಸಂಶೋಧನೆ, ಅನುವಾದ, ನಿಘಂಟು ರಚನೆ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ್ದಾರೆ.

ಅವರ 70 ಪುಸ್ತಕಗಳು ಹಾಗೂ 14 ನಿಘಂಟುಗಳು ಪ್ರಕಟಗೊಂಡಿವೆ. ‘ನಿಘಂಟು ಪರಿವಾರ’, ‘ಅಕ್ರೂರ ಚರಿತ್ರೆ’ (ಸಂಪಾದನೆ), ‘ಇಗೋ ಕನ್ನಡ’ (ಸಾಮಾಜಿಕ ನಿಘಂಟು), ‘ಗತಿ ಪ್ರಜ್ಞೆ’, ‘ಕನ್ನಡವನ್ನು ಉಳಿಸಿ ಬೆಳೆಸಿದವರು’, ‘ಅನುಕಲ್ಪನೆ’, ‘ಕರ್ಣ ಕರ್ಣಾಮೃತ’, 'ಪತ್ರಿಕಾ ಪದಕೋಶ’ ಮುಂತಾದವು ಇವರ ಪ್ರಮುಖ ಕೃತಿಗಳು.

ಅವರಿಗೆ ವಿದ್ಯಾಲಂಕಾರ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಪಂಪ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ಶಂಬಾ ಪ್ರಶಸ್ತಿ, ಸೇಡಿಯಾಪು ಪ್ರಶಸ್ತಿ, ಕಾಯಕ ಪ್ರಶಸ್ತಿ, ಮಾಸ್ತಿ ಪ್ರಶಸ್ತಿ, ಹಂಪಿ ವಿಶ್ವವಿದ್ಯಾನಿಲಯದ ನಾಡೋಜ, ಕೇಂದ್ರ ಸಾಹಿತ್ಯ ಅಕಾಡೆಮಿಯ ಭಾಷಾ ಸಮ್ಮಾನ್ ಪುರಸ್ಕಾರ ಸೇರಿದಂತೆ ಹಲವು ಪ್ರಶಸ್ತಿಗಳು ಸಂದಿವೆ.

ಬೆಂಗಳೂರಿನಲ್ಲಿ ನಡೆದ 77ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯ ಗೌರವಕ್ಕೂ ಇವರು ಪಾತ್ರರಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT