ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

2ಎಗೆ ಪಂಚಮಸಾಲಿ ಸೇರಿಸಿದರೆ ತೀವ್ರ ಹೋರಾಟ: ಹಿಂದುಳಿದ ವರ್ಗಗಳ ಹಿತರಕ್ಷಣಾ ಸಂಘ

Last Updated 14 ಮಾರ್ಚ್ 2021, 11:37 IST
ಅಕ್ಷರ ಗಾತ್ರ

ಬೆಂಗಳೂರು: ‘ಪ್ರವರ್ಗ 2ಎ ಮೀಸಲಾತಿ ನೀಡಬೇಕೆಂಬ ಲಿಂಗಾಯತ ಪಂಚಮಸಾಲಿ ಸಮುದಾಯದ ಬೇಡಿಕೆಗೆ ತೀವ್ರ ವಿರೋಧ ವ್ಯಕ್ತಪಡಿಸಿರುವ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಹಿತರಕ್ಷಣಾ ಸಂಘ, ಈಗಿರುವ 2ಎ ಮೀಸಲಾತಿಯಲ್ಲಿ ಯಥಾಸ್ಥಿತಿ ಕಾಪಾಡಬೇಕು ಎಂದು ಆಗ್ರಹಿಸಿದೆ.

ಗಾಂಧಿಭವನದಲ್ಲಿ ಈ ಕುರಿತು ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಹಿತರಕ್ಷಣಾ ಸಂಘದ ಆಶ್ರಯದಲ್ಲಿ ನಡೆದ ಭಾನುವಾರ ನಡೆದ ಸಭೆಯಲ್ಲಿ ಹಿಂದುಳಿದ ವರ್ಗಗಳ ಸಂಘಟನೆಗಳ ಪ್ರಮುಖರು ಭಾಗವಹಿಸಿದರು.

‘ಪಂಚಮಸಾಲಿ ಸಮುದಾಯದ 2ಎ ಮೀಸಲಾತಿ ಬೇಡಿಕೆಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಈಗಾಗಲೇ ತೆಗೆದುಕೊಂಡಿರುವ ತೀರ್ಮಾನದ ವಿರುದ್ಧ ವಿಧಾನ ಮಂಡಲದ ಅಧಿವೇಶನ ಮುಗಿಯುವುದರೊಳಗೆ ಹಿಂದುಳಿದ ಸಮುದಾಯಗಳು ಒಟ್ಟಾಗಿ ವಿಧಾನಸೌಧಕ್ಕೆ ಮುತ್ತಿಗೆ ಹಾಕಬೇಕು’ ಎಂದು ಹಿಂದುಳಿದ ವರ್ಗಗಳ ಸಮುದಾಯದ ಮುಖಂಡ, ಮಾಜಿ ಶಾಸಕ ಎಂ.ಡಿ. ಲಕ್ಷ್ಮೀನಾರಾಯಣ ಹೇಳಿದರು.

‘ಪಂಚಮಸಾಲಿ ಸಮುದಾಯದ 2ಎ ಮೀಸಲಾತಿ ಬೇಡಿಕೆ ಇಟ್ಟಿರುವುದರಿಂದ ರಾಜ್ಯ ಸರ್ಕಾರ, ಆ ಸಮುದಾಯದ ಕುಲಶಾಸ್ತ್ರೀಯ ಅಧ್ಯಯನಕ್ಕೆ ಮುಂದಾಗಿದೆ. ಇದು ಸರಿಯಲ್ಲ. ವಾಸ್ತವದಲ್ಲಿ ಈ ಸಮುದಾಯಕ್ಕೆ 2ಎ ಮೀಸಲಾತಿ ನೀಡಲು ಸಾಧ್ಯವೇ ಇಲ್ಲ’ ಎಂದೂ ಪ್ರತಿಪಾದಿಸಿದರು.

‘ರಾಜ್ಯದಲ್ಲಿ 197 ಹಿಂದುಳಿದ ಸಮುದಾಯಗಳಿವೆ. ರಾಜ್ಯದಲ್ಲಿ ಪಂಚಮಸಾಲಿ ಸಮುದಾಯ ಶೈಕ್ಷಣಿಕ, ಆರ್ಥಿಕ, ಸಾಮಾಜಿಕವಾಗಿ ಮಂದುವರಿದಿದೆ. ಆದರೂ, ಕುಲಶಾಸ್ತ್ರೀಯ ಅಧ್ಯಯನ ಮಾಡಿ ವರದಿ ನೀಡುವಂತೆ ರಾಜ್ಯ ಹಿಂದುಳಿದ ವರ್ಗಗಳ ಆಯೋಗಕ್ಕೆ ಮುಖ್ಯಮಂತ್ರಿ ಸೂಚಿಸಿದ್ದಾರೆ. ರಾಜ್ಯದಲ್ಲಿ 43 ಮುಂದುವರಿದ ಸಮುದಾಯಗಳು ಮೀಸಲಾತಿಗಾಗಿ ಸರ್ಕಾರಕ್ಕೆ ಅರ್ಜಿ ಹಾಕಿವೆ. ಈ ಸಮುದಾಯಗಳ ಬೇಡಿಕೆಗೆ ಸ್ಪಂದಿಸದ ಮುಖ್ಯಮಂತ್ರಿ, ಜಾತಿ ಪ್ರೇಮದಿಂದ ಈ ನಿರ್ಧಾರ ಕೈಗೊಂಡಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಈ ಹಿಂದೆ ಪಂಚಮಸಾಲಿ ಸಮುದಾಯದ 2ಎ ಮೀಸಲಾತಿ ಬೇಡಿಕೆ ಸಂಬಂಧ ನಡೆದ ಅಧ್ಯಯನ ವರದಿಯಲ್ಲಿ ಈ ಸಮುದಾಯಕ್ಕೆ ಮೀಸಲಾತಿ ನೀಡಲು ಸಾಧ್ಯವಿಲ್ಲ ಎಂದು ಸ್ಪಷ್ಟವಾಗಿ ತಿಳಿಸಿದೆ. ಆದರೂ, ರಾಜ್ಯ ಸರ್ಕಾರ ಈ ವರದಿ ಮುಚ್ಚಿಟ್ಟು ಮತ್ತೆ ಕುಲಶಾಸ್ತ್ರೀಯ ಅಧ್ಯಯನಕ್ಕೆ ಸೂಚಿಸಿದೆ. ಒಂದು ವೇಳೆ ಮುಖ್ಯಮಂತ್ರಿ ಅವರು ಮೀಸಲಾತಿಗೆ ಶಿಫಾರಸು ಮಾಡಿದರೆ, ಆ ನಿಲುವನ್ನು ರಾಜ್ಯದ ಹಿಂದುಳಿದ ಸಮುದಾಯಗಳು ಯಾವುದೇ ಕಾರಣಕ್ಕೂ ಕ್ಷಮಿಸುವುದಿಲ್ಲ’ ಎಂದೂ ಅವರು ಎಚ್ಚರಿಕೆ ನೀಡಿದರು.

‘ಸರ್ಕಾರ ಬಜೆಟ್‌ನಲ್ಲಿ ಎರಡು ಪ್ರಮುಖ ಸಮುದಾಯಗಳ ಅಭಿವೃದ್ಧಿ ನಿಗಮಗಳಿಗೆ ತಲಾ ₹ 500 ಕೋಟಿ ಅನುದಾನ ಹಂಚಿಕೆ ಮಾಡಿದೆ. ಬಸವಕಲ್ಯಾಣದ ಅನುಭ ಮಂಟಪಕ್ಕೆ ₹ 500 ನೀಡಲಾಗಿದೆ. ಆದರೆ, ಎಲ್ಲ ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮಗಳಿಗೆ ಒಟ್ಟು ₹ 500 ಕೋಟಿ ಮಾತ್ರ ನೀಡಲಾಗಿದೆ. ಸಾಮಾಜಿಕ ಮತ್ತು ಶೈಕ್ಷಣಿಕವಾಗಿ ಮುಂದುವರಿದ ಸಮುದಾಯಗಳಿಗೆ ಅಭಿವೃದ್ಧಿ ನಿಗಮದ ಅಗತ್ಯವಿಲ್ಲ. ಯಡಿಯೂರಪ್ಪ ಅವರಿಗೆ ಮಾನ-ಮರ್ಯಾದೆ ಇದ್ದರೆ ಹೊತ್ತಿನ ಊಟ ಸಿಗದೆ ನರಳುತ್ತಿರುವ ಸಮುದಾಯಗಳ ಅಭಿವೃದ್ಧಿಗೆ ಹೆಚ್ಚು ಅನುದಾನ ನೀಡಲಿ’ ಎಂದು ಅವರು ಆಗ್ರಹಿಸಿದರು.

ಮಾಜಿ ಶಾಸಕ ಜೆ.ಡಿ. ನಾಯ್ಕ್ ಮಾತನಾಡಿ, ‘ಪ್ರಬಲ ಸಮುದಾಯವನ್ನು ಪ್ರವರ್ಗ 2ಎ ಪಟ್ಟಿಗೆ ಸೇರಿಸಿದರೆ, ಇತರ ಹಿಂದುಳಿದ ವರ್ಗಗಳಿಗೆ ಅನ್ಯಾಯವಾಗುತ್ತದೆ. ರಾಜ್ಯ ಸರ್ಕಾರ ಯಾವುದೇ ಕಾರಣಕ್ಕೂ ಶಿಫಾರಸು ಮಾಡಬಾರದು. ರಾಜಕೀಯ ಒತ್ತಡದಿಂದ ಶಿಫಾರಸು ಮಾಡುವ ಸಾಧ್ಯತೆಯೂ ಇದೆ. ಹೀಗಾಗಿ, 2ಎ ಮೀಸಲಾತಿ ನೀಡದಂತೆ ತಡೆಯುವ ಕೆಲಸ ಆಗಬೇಕು. ಎಲ್ಲ ಹಿಂದುಳಿದ ಸಮುದಾಯಗಳು ಹೋರಾಟಕ್ಕೆ ಮುಂದಾಗಬೇಕು’ ಎಂದು ಮನವಿ ಮಾಡಿದರು.

ರಾಜ್ಯ ಹಿಂದುಳಿದ ವರ್ಗಗಳ ಹಿತರಕ್ಷಣಾ ಸಂಘದ ರಾಜ್ಯ ಘಟಕದ ಅಧ್ಯಕ್ಷ ಮಂಜುನಾಥ ಲಕ್ಷ್ಮಣ ನಾಯ್ಕ್, ಸವಿತಾ ಸಮುದಾಯದ ಮುಖಂಡ ಸಂಪತ್‌ಕುಮಾರ್, ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಸದಸ್ಯ ಜೆ. ಡಿ. ಗೋಪಾಲ್‌ ಸೇರಿದಂತೆ ಹಿಂದುಳಿದ ಸಮುದಾಯಗಳ ಮುಖಂಡರು ಸಭೆಯಲ್ಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT