ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೋಹಿತ್‌ ವಜಾ ಆಗದಿದ್ದರೆ ಹೋರಾಟ ಸ್ವರೂಪ ಬದಲು: ನಾರಾಯಣಗೌಡ

ರಾಜ್ಯದೆಲ್ಲೆಡೆ ಕರ್ನಾಟಕ ರಕ್ಷಣಾ ವೇದಿಕೆ ಸತ್ಯಾಗ್ರಹ
Last Updated 31 ಮೇ 2022, 20:29 IST
ಅಕ್ಷರ ಗಾತ್ರ

ಬೆಂಗಳೂರು: ‘ನಾಡಧ್ವಜ ಮತ್ತು ರಾಷ್ಟ್ರಕವಿ ಕುವೆಂಪು ಅವರಿಗೆ ಅವಮಾನ ಮಾಡಿರುವ ರೋಹಿತ್ ಚಕ್ರತೀರ್ಥ ಅವರನ್ನು ಪಠ್ಯಪುಸ್ತಕ ಮರುಪರಿಷ್ಕರಣಾ ಸಮಿತಿಯಿಂದ ವಜಾಗೊಳಿಸಬೇಕು’ ಎಂದು ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ (ಟಿ.ಎ.ನಾರಾಯಣಗೌಡ ಬಣ) ಕಾರ್ಯಕರ್ತರು ರಾಜ್ಯದಾದ್ಯಂತ ಮಂಗಳವಾರ ಪ್ರತಿಭಟನೆ ನಡೆಸಿದರು. ಸಮಿತಿ ವಿಸರ್ಜಿಸಿ ರೋಹಿತ್ ಚಕ್ರತೀರ್ಥ ಅವರನ್ನು ಜೈಲಿಗೆ ಕಳುಹಿಸದಿದ್ದರೆ ಪ್ರತಿಭಟನೆ ಬೇರೆ ರೂಪ ಪಡೆಯಲಿದೆ ಎಂದು ಎಚ್ಚರಿಕೆ ನೀಡಿದರು.

ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ಕರವೇ ಅಧ್ಯಕ್ಷ ಟಿ.ಎ.ನಾರಾಯಣಗೌಡ ನೇತೃತ್ವದಲ್ಲಿ ಧರಣಿ ಸತ್ಯಾಗ್ರಹ ನಡೆಸಲಾಯಿತು. ಅದೇ ರೀತಿ ಎಲ್ಲ ಜಿಲ್ಲೆಗಳಲ್ಲೂ ಕರವೇ ಕಾರ್ಯಕರ್ತರು ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿದರು. ರೋಹಿತ್ ಚಕ್ರತೀರ್ಥ ಅವರನ್ನು ಬಂಧಿಸಿ ಗಡಿಪಾರು ಮಾಡಬೇಕು ಎಂದು ಒತ್ತಾಯಿಸಿದರು.

‘ರಾಷ್ಟ್ರಗೀತೆಗೆ ಅವಮಾನ ಮಾಡುವುದು ಮತ್ತು ನಾಡಗೀತೆಗೆ ಅವಮಾನ ಮಾಡುವುದು ಎರಡೂ ಒಂದೇ. ನಾಡಧ್ವಜವನ್ನು ಒಳ ಉಡುಪಿಗೆ ಹೋಲಿಸುವಷ್ಟು ಕೆಟ್ಟ ಮನಸ್ಥಿತಿಯ ವ್ಯಕ್ತಿಯನ್ನು ಸರ್ಕಾರ ಪಠ್ಯಪುಸ್ತಕ ಮರು ಪರಿಷ್ಕರಣಾ ಸಮಿತಿಗೆ ಅಧ್ಯಕ್ಷರನ್ನಾಗಿ ಮಾಡಿರುವುದು ಕನ್ನಡಿಗರಿಗೆ ಮಾಡಿರುವ ಅವಮಾನ’ ಎಂದು ನಾರಾಯಣಗೌಡ ಆಕ್ರೋಶ
ವ್ಯಕ್ತಪಡಿಸಿದರು.

‘ಕುವೆಂಪು ಅವರಿಗೆ ಅವಮಾನ ಮಾಡಿದವನಿಗೆ ಸ್ಥಾನಮಾನ ಸಿಗುತ್ತದೆ ಎಂದರೆ ರಾಜ್ಯದ ದುರಂತ. ಮರು ಪರಿಷ್ಕರಣೆಗೊಂಡು ಮಕ್ಕಳಿಗೆ ವಿತರಿಸಿರುವ ಪುಸ್ತಕಗಳನ್ನು ವಾಪಸ್ ಪಡೆಯಬೇಕು. ಸರ್ಕಾರಕ್ಕೆ ಮರ್ಯಾದೆ ಇದ್ದರೆ ಸಮಿತಿಯನ್ನು ತಕ್ಷಣವೇ ವಿಸರ್ಜನೆ ಮಾಡಬೇಕು. ಈ ಸಂಬಂಧ ಮುಖ್ಯಮಂತ್ರಿಗೆ ಮೇ 31ರ ಗಡುವು ನೀಡಿದ್ದೆವು. ಅದು ಈಗ ಮುಗಿದಿದೆ. ಸರ್ಕಾರ ಇದೇ ರೀತಿ ಜಾಣಮೌನ ವಹಿಸಿದರೆ ಹೋರಾಟದ ಸ್ವರೂಪ ಬದಲಾಗಲಿದೆ’ ಎಂದು ಎಚ್ಚರಿಸಿದರು.

‘ವಿಕೃತ ಮನಸಿನ ರೋಹಿತ್ ಚಕ್ರತೀರ್ಥ ಜೈಲಿನಲ್ಲೂ ಬೇರೆಯವರ ಮನಸು ಕೆಡಿಸುವ ಸಾಧ್ಯತೆ ಇದೆ. ಆದ್ದರಿಂದ ಅವರನ್ನು ಅಲ್ಲಿಯೂ ಪ್ರತ್ಯೇಕವಾಗಿ ಇರಿಸಬೇಕು’ ಎಂದು ಕರವ ಪ್ರತಿಭಟನಕಾರರು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT