ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಷ್ಟ್ರದ ಸಂಪತ್ತು ಮಾರುವವರು ದೇಶವಿರೋಧಿಗಳು: ಅಮರ್‌ಜೀತ್‌ ಕೌರ್

ಎಐಟಿಯುಸಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಮರ್‌ಜೀತ್‌ ಕೌರ್ ಟೀಕೆ
Last Updated 29 ಮೇ 2022, 19:32 IST
ಅಕ್ಷರ ಗಾತ್ರ

ಮೈಸೂರು: ‘ಕಾರ್ಮಿಕರು ತಮ್ಮ ಬೆವರಿನಿಂದ ಕಟ್ಟಿದ ರಾಷ್ಟ್ರದ ಸಂಪತ್ತನ್ನು ಮಾರಾಟ ಮಾಡುವವರೇ ದೇಶ ವಿರೋಧಿಗಳು’ ಎಂದು ಎಐಟಿಯುಸಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಮರ್‌ಜೀತ್‌ ಕೌರ್ ತಿಳಿಸಿದರು.

ಇಲ್ಲಿನ ಪುರಭವನದಲ್ಲಿ ಭಾನುವಾರ ಆರಂಭವಾದ ಮೂರು ದಿನಗಳ ಎಐಟಿಯುಸಿಯ 11ನೇ ರಾಜ್ಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.

‘ಅಟಲ್‌ಬಿಹಾರಿ ವಾಜಪೇಯಿ, ಎಚ್.ಡಿ.ದೇವೇಗೌಡ ಸೇರಿದಂತೆ ಹಿಂದೆ ಪ್ರಧಾನಿಯಾಗಿದ್ದ ಹಲವರ ಅವಧಿಯಲ್ಲಿ ಸರ್ಕಾರವನ್ನು ಟೀಕಿಸಿದ್ದೆವು. ಆದರೆ, ಈಗ ಸರ್ಕಾರವನ್ನು ಟೀಕಿಸಿದವರಿಗೆ ರಾಷ್ಟ್ರವಿರೋಧಿಗಳು ಎಂಬ ಪಟ್ಟ ಕಟ್ಟಲಾಗುತ್ತಿದೆ’ ಎಂದು ಟೀಕಿಸಿದರು.

‘ಬ್ರಿಟಿಷರ ವಿರುದ್ಧ ಹೋರಾಡಿ ಪಡೆದ ಹಕ್ಕುಗಳನ್ನು ಇಂದು ನರೇಂದ್ರ ಮೋದಿ ವಾಪಸು ಪಡೆದುಕೊಂಡು ಮತ್ತೆ ಬ್ರಿಟಿಷ್ ಮಾದರಿ ಆಡಳಿತವನ್ನು ಸ್ಥಾಪಿಸುತ್ತಿದ್ದಾರೆ. ದೇಶದ ಪರಿಸ್ಥಿತಿ ದಿನದಿಂದ ದಿನಕ್ಕೆ ಹದಗೆಡುತ್ತಿದೆ. ಮುಂದಿನ ಚುನಾವಣೆಗಳಿಗಾಗಿ ಮಸೀದಿಗಳನ್ನು ಅಗೆಯುವುದೇ ಸರ್ಕಾರದ ಕಾರ್ಯಸೂಚಿಯಾಗಿದೆ. ಕೋಮುಸೌಹಾರ್ದ ಹಾಳು ಮಾಡಲಾಗುತ್ತಿದೆ’ ಎಂದು ಆತಂಕ ವ್ಯಕ್ತಪಡಿಸಿದರು.

‘ಕೇಂದ್ರದ ಜನವಿರೋಧಿ ನೀತಿಗಳು ಕೋವಿಡ್‌ಗಿಂತಲೂ ಅಪಾಯಕಾರಿ. ಏರುತ್ತಿರುವ ಇಂಧನ ದರ, ಅಡುಗೆ ಎಣ್ಣೆ ದರ, ಕಡಿತಗೊಳ್ಳುತ್ತಿರುವ ವೇತನಗಳು, ಉದ್ಯೋಗನಷ್ಟ ಹೀಗೆ ಹಲವು ಸಮಸ್ಯೆಗಳಿಗೆ ಕೇಂದ್ರ ಸರ್ಕಾರದ ನೀತಿಗಳೇ ಕಾರಣವಾಗಿದೆ’ ಎಂದು ಹರಿಹಾಯ್ದರು.

ಹೋರಾಟದ ಮೂಲಕ ಸರ್ಕಾರವನ್ನು ಮಣಿಸಿ: ‘ಕೇಂದ್ರ ಹಾಗೂ ಕೆಲವು ರಾಜ್ಯಸರ್ಕಾರಗಳು ವಿವೇಚನಾರಹಿತ ಕಾಯ್ದೆಗಳನ್ನು ಜಾರಿಗೆ ತರುತ್ತಿವೆ. ಬೆಲೆ ಏರಿಕೆ ಮಿತಿ ಮೀರುತ್ತಿದೆ. ಹೋರಾಟದ ಮೂಲಕವೇ ಸರ್ಕಾರವನ್ನು ಮಣಿಸಬೇಕು’ ಎಂದು ಎಐಟಿಯುಸಿ ಪ್ರಧಾನ ಕಾರ್ಯದರ್ಶಿ ಎಚ್.ಆರ್.ಶೇಷಾದ್ರಿ ಕರೆಕೊಟ್ಟರು.

ಇದಕ್ಕೂ ಮುನ್ನ ನಡೆದ ಮೆರವಣಿಗೆಯಲ್ಲಿಕೆಂಬಾವುಟ ಹಿಡಿದಿದ್ದ ಸಾವಿರಕ್ಕೂ ಅಧಿಕ ಹೋರಾಟಗಾರರು ಪಾಲ್ಗೊಂಡರು. ಸಯ್ಯಾಜಿರಾವ್ ರಸ್ತೆ, ಇರ್ವಿನ್ ರಸ್ತೆ, ಅಶೋಕರಸ್ತೆ ಮೂಲಕ ಮೆರವಣಿಗೆಯಲ್ಲಿ ಪುರಭವನಕ್ಕೆ ಬಂದರು. ಪುರುಷರು ಕೆಂಪಂಗಿಯಲ್ಲಿ,ಮಹಿಳೆಯರು ಕೆಂಪು ಸೀರೆ ಧರಿಸಿ ಗಮನಸೆಳೆದರು.

ಸಮ್ಮೇಳನ 32 ವರ್ಷಗಳ ನಂತರ ಮೈಸೂರಿನಲ್ಲಿ ನಡೆಯುತ್ತಿದೆ. ಎಐಟಿಯುಸಿಯ ಪ್ರಧಾನ ಕಾರ್ಯದರ್ಶಿ ವಿಜಯಭಾಸ್ಕರ್, ಕರ್ನಾಟಕ ರಾಜ್ಯ ಸಮಿತಿ ಅಧ್ಯಕ್ಷ ಎಚ್.ವಿ.ಅನಂತ ಸುಬ್ಬರಾವ್, ಮುಖಂಡ ಮಹದೇವನ್, ನಿವೃತ್ತ ಪ್ರಾಧ್ಯಾಪಕ ಪಿ.ವಿ.ನಂಜರಾಜೇ ಅರಸ್
ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT