ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನನ್ನಂಥವಳಿಗೇ ಹೀಗೇಕೆ ಆಗುತ್ತಿದೆ? ಹೈಕೋರ್ಟ್‌ನಲ್ಲಿ ವೈದ್ಯೆಯ ಅಳಲು

Last Updated 3 ಮಾರ್ಚ್ 2022, 2:35 IST
ಅಕ್ಷರ ಗಾತ್ರ

ಬೆಂಗಳೂರು: ‘ಎಲ್ಲವೂ ನನಗೇ ಏಕೆ ಆಗುತ್ತಿದೆ ಎಂದು ಕೊರಗಬೇಡಿ. ತೆರೆದ ಅವಕಾಶಗಳನ್ನು ಅರಸಿಕೊಂಡು ಹೋಗಿ. ತಪ್ಪೆಲ್ಲಿದೆ ಎಂಬುದರ ಆತ್ಮಾವಲೋಕನ ಮಾಡಿಕೊಳ್ಳಿ. ಮನದ ಮನೆಯಲ್ಲಿ ಹರಿದಾಡುವ ಜಿರಲೆಗಳಿಗೆ ಇನ್ನಿಲ್ಲದ ಪ್ರಾಶಸ್ತ್ಯ ನೀಡಬೇಡಿ. ಸ್ವಲ್ಪ ಸಮಯದ ಬಳಿಕ ಅವು ತಮ್ಮಷ್ಟಕ್ಕೇ ತಾವೇ ಜಾಗ ಖಾಲಿ ಮಾಡುತ್ತವೆ. ಬದುಕು ತರ್ಕದ ತಳಹದಿಯ ಮೇಲೆ ನಿಂತಿಲ್ಲ...! ’

ವಿದ್ಯಾವಂತ ವೈದ್ಯ ದಂಪತಿಯ ವಿಚ್ಛೇದನ ಪ್ರಕರಣದಲ್ಲಿ ಪತಿ–ಪತ್ನಿ ಇಬ್ಬರಿಗೂ ಹೈಕೋರ್ಟ್‌ ಹೇಳಿದ ಕಿವಿಮಾತಿದು.

‘ಮಧ್ಯಂತರ ಜೀವನಾಂಶ ನೀಡು ವಂತೆ ಕೌಟುಂಬಿಕ ನ್ಯಾಯಾಲಯಕ್ಕೆ ನಿರ್ದೇಶಿಸಬೇಕು‘ ಎಂದು ಕೋರಿ ಪತ್ನಿ ಸಲ್ಲಿಸಿದ್ದ ರಿಟ್‌ ಅರ್ಜಿಯನ್ನು ನ್ಯಾಯ ಮೂರ್ತಿ ಕೃಷ್ಣ ಎಸ್‌.ದೀಕ್ಷಿತ್‌ ಅವರಿದ್ದ ಏಕಸದಸ್ಯ ನ್ಯಾಯಪೀಠ ಬುಧವಾರ ವಿಚಾರಣೆ ನಡೆಸಿತು.

ಬೆಳಗಿನ ಕಲಾಪದಲ್ಲಿ ಪ್ರಕರಣವನ್ನು ವಿಚಾರಣೆಗೆ ಪ್ರಕರಣ ಕೈಗೆತ್ತಿಕೊಂಡ ನ್ಯಾಯಪೀಠ, ‘ಈ ಸಂಬಂಧ ನೀವು ಮತ್ತೆಂದೂ ಕೋರ್ಟ್‌ ಮೆಟ್ಟಿಲು ತುಳಿಯದಂತೆ ರಾಜಿಯಾಗಿ ವ್ಯಾಜ್ಯವನ್ನು ಬಗೆಹರಿಸಿಕೊಳ್ಳಿ’ ಎಂದು ಮೌಖಿಕ ಸಲಹೆ ನೀಡಿತ್ತು. ಇದರನ್ವಯ ಮಧ್ಯಾಹ್ನದ ಕಲಪದಲ್ಲಿ ಪತಿ–ಪತ್ನಿ ಇಬ್ಬರೂ ರಾಜಿಯಾಗಲು ಒಪ್ಪಿರುವುದಾಗಿ ನ್ಯಾಯಪೀಠಕ್ಕೆ ಜಂಟಿ ಜ್ಞಾಪನಾ ಪತ್ರ ಸಲ್ಲಿಸಿದರು.

ಜ್ಞಾಪನಾ ಪತ್ರ ನೀಡುವಾಗ ಪತ್ನಿ, ‘ಸ್ವಾಮಿ, ನನ್ನಂಥವಳಿಗೇ ಹೀಗಾಯಿತಲ್ಲ. ಇದೆಲ್ಲಾ ನನಗೇ ಏಕೆ ಆಗುತ್ತಿದೆ’ ಎಂದು ಸ್ವತಃ ನೋವು ತೋಡಿಕೊಂಡರು. ಇದಕ್ಕೆ ನ್ಯಾಯಮೂರ್ತಿಗಳು ಷೇಕ್‌ಸ್ಪಿಯರ್‌ನ, ‘ರೇಪ್‌ ಆಫ್‌ ಲ್ಯೂಕ್ರಿಸ್‌’ ಸಾನೆಟ್ಟಿನ ಪಂಕ್ತಿಯೊಂದನ್ನು ಉದ್ಧರಿಸಿ, ‘ಎಲ್ಲವೂ ನನಗೇ ಏಕೆ ಆಗುತ್ತಿದೆ, ಬೇರೆಯವರಿಗೆ ಏಕೆ ಇಂತಹ ಕಷ್ಟಗಳಿಲ್ಲ ಎಂದು ಭಾವಿಸಬೇಡಿ. ಬದುಕು ಎಂಬುದು ಕಂಡೆನೆಂದು ಹತ್ತಿರ ಹೋದರೆ ಕಾಣದಾಗುವ ಮರೀಚಿಕೆ. ಒಂದು ರೀತಿಯಲ್ಲಿ ಇದು; ಕಾಣುತ್ತೆ, ಆದರೂ ಕಾಣಾಕಿಲ್ಲ ಎಂಬಂತೆ’ ಎಂದು ಹೇಳಿದರು.

‘ನೀವಿಬ್ಬರೂ ಸಾಕಷ್ಟು ವಿದ್ಯಾವಂತರಿದ್ದೀರಿ, ವೈದ್ಯರಿದ್ದೀರಿ. ತರ್ಕಗಳನ್ನು ದಾಟಿ ನಿಂತಂತಹದ್ದುಪರಸ್ಪರ ಕ್ಷಮಿಸುವ ಗುಣ. ಇದನ್ನು ಅರ್ಥಮಾಡಿಕೊಂಡು ಮುಂದಿನ ಜೀವನ ನಡೆಸಿ’ ಎಂದು ಹೇಳಿತು.

ಆದೇಶ: ‘ಅಧೀನ ನ್ಯಾಯಾಲಯಗಳಲ್ಲಿ ಇಬ್ಬರೂ ಪರಸ್ಪರ ದಾಖಲಿಸಿರುವ ಎಲ್ಲ ‍ಪ್ರಕರಣಗಳಿಗೆ ಇನ್ನು ಮುಂದೆ ಪೂರ್ಣವಿರಾಮ ಹಾಕಬೇಕು. ಕ್ರಿಮಿನಲ್‌ ಕೇಸುಗಳು, ಆದಾಯ ತೆರಿಗೆ, ಶಿಸ್ತು ಸಮಿತಿ ಮುಂದಿನ ಪ್ರಕರಣ, ಇಬ್ಬರ ನಡುವಿನ ಕೌಟುಂಬಿಕ ವ್ಯಾಜ್ಯ ಹಾಗೂ ಸಂಬಂಧಿಸಿದ ಎಲ್ಲ ಬಗೆಯ ತಕರಾರುಗಳಿಗೆ ವಿಚಾರಣಾ ನ್ಯಾಯಾಲಯಗಳು ಗೌರವಯುತ ಅಂತ್ಯ ಹಾಡಬೇಕು‘ ಎಂದು ನ್ಯಾಯಪೀಠ ಆದೇಶಿಸಿದೆ.

ಪ್ರಕರಣವೇನು?:ಪತಿ ಪತ್ನಿ ಇಬ್ಬರೂ ವೈದ್ಯರು. 40ರ ಆಜುಬಾಜಿನ ವಯಸ್ಸು. 2012ರಲ್ಲಿ ಮದುವೆಯಾದರು. ಪತಿ ಎಂ.ಡಿ ಪದವೀಧರರಾಗಿದ್ದು ಎಂಡೊಕ್ರೊನೊಲಾಜಿಸ್ಟ್‌ (ಅಂತಃಸ್ರಾವ ಶಾಸ್ತ್ರಜ್ಞ) ಹಾಗೂ ‘ಮ್ಯಾಗ್ನೆಟಿಕ್‌ ರಿಸೊನೆನ್ಸ್‌ ಕೊಲಾಂಜಿಯೊ ಪ್ಯಾಂಕ್ರಿಯಾಟೊಗ್ರಫಿ’ಯಲ್ಲಿ ಸೂಪರ್‌ ಸ್ಪೆಷಲಿಸ್ಟ್‌. ಪತ್ನಿಯೂ ಜನರಲ್‌ ಮೆಡಿಸನ್‌ನಲ್ಲಿ ಎಂಬಿಬಿಎಸ್‌ ಮುಗಿಸಿದವರು.

ಮದುವೆಯಾಗುವ ಸಮಯದಲ್ಲಿ ಪತ್ನಿ ಸ್ನಾತಕೋತ್ತರ ಪದವಿ ಅಧ್ಯಯನ ಮಾಡುತ್ತಿದ್ದರು. ಹಸೆಮಣೆ ತುಳಿದ ಒಂದೇ ವರ್ಷದಲ್ಲಿ ಇಬ್ಬರಲ್ಲೂ ಭಿನ್ನಾಭಿಪ್ರಾಯಗಳು ಬೆಳೆದ ಪರಿಣಾಮ ಪತಿ ಬೆಂಗಳೂರಿನ ಪ್ರಧಾನ ಕೌಟುಂಬಿಕ ನ್ಯಾಯಾಲಯದಲ್ಲಿ ಹಿಂದೂ ವಿವಾಹ ಕಾಯ್ದೆ–1955ರ ಕಲಂ 12 (1) (ಎ) (ಸಿ) ಅಡಿಯಲ್ಲಿ ವಿಚ್ಛೇದನದ ದಾವೆ ಹೂಡಿದರು.

ದಾವೆ ನಡೆಯುತ್ತಿದ್ದ ಸಮಯದಲ್ಲಿ ಪತ್ನಿ ಜೀವನಾಂಶ ಕೋರಿದಾಗ ಕೌಟುಂಬಿಕ ನ್ಯಾಯಾಲಯ ನಿರಾಕರಿಸಿತ್ತು. ಇದನ್ನು ಪ್ರಶ್ನಿಸಿ ಅವರು ಹೈಕೋರ್ಟ್‌ ಮೆಟ್ಟಿಲು ತುಳಿದಿದ್ದರು. ಒಂಬತ್ತು ವರುಷಗಳಿಂದ ಬಾಕಿ ಇದ್ದ ಈ ವ್ಯಾಜ್ಯಕ್ಕೆ ಇತಿಶ್ರೀ ಹಾಡಿದ ನ್ಯಾಯಪೀಠ, ‘ಪತಿ–ಪತ್ನಿ ತಮ್ಮ ಮನೋಕಾಮನೆಗೆ ಅನುಗುಣವಾಗಿ ಬದುಕು ನಡೆಸಲು ಸ್ವತಂತ್ರವಾಗಿದ್ದಾರೆ’ ಎಂದು ಘೋಷಿಸಿತು.

***

ಬದುಕಿನಲ್ಲಿ ಕೆಲವೊಮ್ಮೆ ಕಾರಣವಿಲ್ಲದೆ ಶಿಕ್ಷೆಗಳು ಎದುರಾಗುತ್ತವೆ. ಅವುಗಳಿಗೆ ತುಂಬಾ ಹೊತ್ತು ಕಾರಣ ಹುಡುಕುತ್ತಾ ಕೂರಬಾರದು. ಕಾರಣ ಇರುವುದಿಲ್ಲ ಎಂದಲ್ಲ. ಆದರೆ, ಬಸವಳಿದಾಗಅವು ಮನಜರ ಬುದ್ಧಿಗೆ ನಿಲುಕುವುದೇ ಇಲ್ಲ..!

-ಕೃಷ್ಣ ಎಸ್.ದೀಕ್ಷಿತ್‌, ನ್ಯಾಯಮೂರ್ತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT