ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಡಿಯೂರಪ್ಪ ನಾಯಕತ್ವ ಬದಲಿಸಿದರೆ ಸಾಮೂಹಿಕ ಹೋರಾಟ: ಸ್ವಾಮೀಜಿಗಳ ಎಚ್ಚರಿಕೆ

Last Updated 20 ಜುಲೈ 2021, 19:20 IST
ಅಕ್ಷರ ಗಾತ್ರ

ಚಿತ್ರದುರ್ಗ: ‘ಬಿ.ಎಸ್‌.ಯಡಿಯೂರಪ್ಪ ಅವರನ್ನು ಯಾವ ಕಾರಣಕ್ಕೂ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಬಾರದು. ಅವಧಿ ಪೂರ್ಣಗೊಳ್ಳುವವರೆಗೂ ಅವರನ್ನೇ ಮುಂದುವರಿಸಬೇಕು. ಒಂದು ವೇಳೆ ನಾಯಕತ್ವ ಬದಲಾಯಿಸಿದರೆ ಸಾಮೂಹಿಕ ಹೋರಾಟಕ್ಕೂ ಸಿದ್ಧರಿದ್ದೇವೆ’ ಎಂದು ವಿವಿಧ ಮಠಾಧೀಶರು ಬಿಜೆಪಿ ವರಿಷ್ಠರಿಗೆ ಎಚ್ಚರಿಕೆ ನೀಡಿದರು.

ಶಿವಮೂರ್ತಿ ಮುರುಘಾ ಶರಣರ ನೇತೃತ್ವದಲ್ಲಿ ಇಲ್ಲಿನ ಮುರುಘಾಮಠದಲ್ಲಿ ಹಲವು ಮಠಾಧೀಶರು ಮಂಗಳವಾರ ಪತ್ರಿಕಾಗೋಷ್ಠಿ ನಡೆಸಿದರು. ‘ಮುಖ್ಯಮಂತ್ರಿ ಬದಲಾವಣೆ ಮಾಡಿದರೆ ಯಡಿಯೂರಪ್ಪ ಅವರಿಗೇನೂ ನಷ್ಟ ಆಗುವುದಿಲ್ಲ. ಆದರೆ, ಪಕ್ಷಕ್ಕೆ ದೊಡ್ಡ ತೊಂದರೆ ಉಂಟಾಗಬಹುದು. ರಾಜ್ಯದ ಅಭಿವೃದ್ಧಿಗೆ ಅಪಾರ ಕೊಡುಗೆ ನೀಡಿದವರನ್ನು ನಿರ್ಲಕ್ಷಿಸುವುದರಿಂದ ಮುಂದೆ ಭಾರಿ ಬೆಲೆ ತೆರಬೇಕಾಗುತ್ತದೆ. ಅವಧಿಗೂ ಮುನ್ನವೇ ಮುಖ್ಯಮಂತ್ರಿ ಬದಲಾವಣೆ ಮಾಡಿದರೆ ಪಕ್ಷಕ್ಕೆ ತೊಂದರೆ ಆಗುವುದು ಖಚಿತ’ ಎಂದು ಶಿವಮೂರ್ತಿ ಮುರುಘಾ ಶರಣರು ಅಭಿಪ್ರಾಯಪಟ್ಟರು.

‘ಯಡಿಯೂರಪ್ಪ ಅವರೊಬ್ಬ ಜನನಾಯಕ. ರಾಜಕೀಯ ಜೀವನವನ್ನು ಏಕವ್ಯಕ್ತಿಯಿಂದ ಆರಂಭಿಸಿ ಪಕ್ಷವನ್ನು ತಳಮಟ್ಟದಿಂದ ಸಂಘಟಿಸಿದ್ದಾರೆ. ದಕ್ಷಿಣ ಭಾರತದಲ್ಲಿ ಬಿಜೆಪಿ ಸರ್ಕಾರವನ್ನು ರಚಿಸಿದ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇಂಥ ಮೇಧಾವಿ ಹಾಗೂ ಮುತ್ಸದ್ಧಿಯನ್ನು ಅಲಕ್ಷ್ಯ ಮಾಡುವುದು ಸರಿಯಲ್ಲ. ಅವರ ಗೌರವಕ್ಕೆ ಧಕ್ಕೆ ಉಂಟಾಗುವಂತಹ ನಡೆಯನ್ನು ಸಹಿಸುವುದಿಲ್ಲ’ ಎಂದು ಎಚ್ಚರಿಸಿದರು.

ಕುಂಚಿಟಿಗ ಗುರುಪೀಠದ ಶಾಂತವೀರ ಸ್ವಾಮೀಜಿ ಮಾತನಾಡಿ, ‘ಯಡಿಯೂರಪ್ಪ ಕೇವಲ ವೀರಶೈವ–ಲಿಂಗಾಯತ ಸಮುದಾಯಕ್ಕೆ ಮಾತ್ರವಲ್ಲ; ಬಸವಣ್ಣ ಅವರ ಕಾಯಕ ಪ್ರಜ್ಞೆಗೆ ಸಾಕ್ಷಿಯಾಗಿ ಕೆಲಸ ಮಾಡುತ್ತಿದ್ದಾರೆ. ಅವರ ಸೇವಾ ಅವಧಿಯನ್ನು ಪೂರ್ಣಗೊಳಿಸಲು ಅವಕಾಶ ಮಾಡಿಕೊಡಬೇಕು. ಪರ್ಯಾಯ ನಾಯಕರನ್ನು ಬೆಳೆಸುವ ನಿಟ್ಟಿನಲ್ಲಿ ಯಾವ ವಿರೋಧವೂ ಇಲ್ಲ. ಆದರೆ, ಯಡಿಯೂರಪ್ಪ ಬದಲಾವಣೆ ಸಲ್ಲದು’ ಎಂದರು.

ಇಳಕಲ್‌ನ ಗುರುಮಹಾಂತೇಶ್ವರ ಮಠದ ಗುರುಮಹಾಂತ ಸ್ವಾಮೀಜಿ, ಅಥಣಿ ಗಚ್ಚಿನಮಠದ ಶಿವಬಸವ ಸ್ವಾಮೀಜಿ, ಶಿರಸಿ ರುದ್ರದೇವರ ಮಠದ ಮಲ್ಲಿಕಾರ್ಜುನ ಸ್ವಾಮೀಜಿ, ಸತ್ತಿಮಠದ ಸ್ವಾಮೀಜಿ, ಚಳ್ಳಕೆರೆಯ ಬಸವಕಿರಣ ಸ್ವಾಮೀಜಿ, ಎಸ್‌ಜೆಎಂ ವಿದ್ಯಾಪೀಠದ ಕಾರ್ಯದರ್ಶಿ ಎ.ಜೆ. ಪರಮಶಿವಯ್ಯ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT