ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಶಸ್ವಿನಿ ಸದಸ್ಯತ್ವಕ್ಕೆ ಮಾನದಂಡ ನಿಗದಿ: ಸೋಮಶೇಖರ್‌

ಅ. 2ರಿಂದ ಜಾರಿ: ಗೊಂದಲ ಸೃಷ್ಟಿಯಾಗದಂತೆ ಕ್ರಮ– ಸೋಮಶೇಖರ್‌
Last Updated 13 ಸೆಪ್ಟೆಂಬರ್ 2022, 19:09 IST
ಅಕ್ಷರ ಗಾತ್ರ

ಬೆಂಗಳೂರು: ‘ಯಶಸ್ವಿನಿ ಯೋಜನೆ ಯನ್ನು ಮತ್ತೆ ಜಾರಿಗೊಳಿಸುವ ಪ್ರಕ್ರಿಯೆ ಪ್ರಗತಿಯಲ್ಲಿದ್ದು, ಸದಸ್ಯತ್ವಕ್ಕೆ ಮಾನದಂಡಗಳನ್ನು ರೂಪಿಸಲಾಗುತ್ತಿದೆ’ ಎಂದು ಸಹಕಾರ ಸಚಿವ ಎಸ್‌.ಟಿ. ಸೋಮಶೇಖರ್‌ ತಿಳಿಸಿದರು.

ವಿಧಾನ ಪರಿಷತ್‌ನಲ್ಲಿ ಮಂಗಳವಾರ ಪ್ರಶ್ನೋತ್ತರ ವೇಳೆಯಲ್ಲಿ ಕಾಂಗ್ರೆಸ್‌ನ ಪ್ರಕಾಶ್‌ ಕೆ. ರಾಠೋಡ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ‘ಅಕ್ಟೋಬರ್‌ 2ರಿಂದ ಈ ಯೋಜನೆಯನ್ನು ಜಾರಿ ಗೊಳಿಸಲು ಉದ್ದೇಶಿಸಲಾಗಿದ್ದು, ಈಗಾಗಲೇ ಹಣಕಾಸು ಮತ್ತು ಆರೋಗ್ಯ ಇಲಾಖೆ ಒಪ್ಪಿಗೆ ಪಡೆಯಲಾಗಿದೆ’ ಎಂದು ವಿವರಿಸಿದರು.

‘ಹೊಸದಾಗಿ ಯಶಸ್ವಿನಿ ಟ್ರಸ್ಟ್‌ ರಚಿಸುವ ಕಾರ್ಯವೂ ಪ್ರಗತಿಯಲ್ಲಿದೆ. ಜತೆಗೆ, ಯಾವ ಕಾಯಿಲೆಗಳನ್ನು ಮತ್ತು ಆಸ್ಪತ್ರೆಗಳನ್ನು ಈ ಯೋಜನೆಯ ವ್ಯಾಪ್ತಿಗೆ ತರಬೇಕು ಎನ್ನುವ ಬಗ್ಗೆ ಚರ್ಚಿಸಲಾಗುತ್ತಿದೆ. ಸಹಕಾರಿ ಬ್ಯಾಂಕ್‌ಗಳ ಸದಸ್ಯರನ್ನು ಸಹ ಈ ಯೋಜನೆಯನ್ನು ಒಳಪಡಿಸುವ ಉದ್ದೇಶವಿದೆ. ಹೀಗಾಗಿ, ಈ ಯೋಜನೆಯ ಬಗ್ಗೆ ಮಾರ್ಗಸೂಚಿ ಹಾಗೂ ನಿಯಮಗಳನ್ನು ರೂಪಿಸುವ ಕಾರ್ಯ ಪ್ರಗತಿ ಹಂತದಲ್ಲಿದೆ’ ಎಂದು ತಿಳಿಸಿದರು.

‘ಆಯುಷ್ಮಾನ್‌ ಭಾರತ ಸೇರಿದಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿವಿಧ ಯೋಜನೆಗಳಿಂದ ಗೊಂದಲ ಸೃಷ್ಟಿಯಾಗಬಾರದು ಎನ್ನುವ ಉದ್ದೇಶದಿಂದ ಈ ಯೋಜನೆಯನ್ನು ಜಾರಿಗೊಳಿಸುವ ಮುನ್ನವೇ ಎಲ್ಲ ರೀತಿಯ ಸಿದ್ಧತೆಗಳನ್ನು ಕೈಗೊಳ್ಳಲಾಗುತ್ತಿದೆ.ಒಂದು ಬಾರಿ ಜಾರಿಯಾದ ನಂತರ ಯಾವುದೇ ರೀತಿ ಗೊಂದಲಗಳು ಸೃಷ್ಟಿಯಾಗಬಾರದು ಎನ್ನುವುದು ಸರ್ಕಾರದ ಉದ್ದೇಶ’ ಎಂದು ಸ್ಪಷ್ಟಪಡಿಸಿದರು.

ಪ್ರಕಾಶ್‌ ರಾಠೋಡ ಮಾತನಾಡಿ, ‘ಈ ಯೋಜನೆಯನ್ನು ಘೋಷಿಸಿ ಆರು ತಿಂಗಳಾದರೂ ಅನುಷ್ಠಾನಗೊಳಿಸಿಲ್ಲ. ಬಜೆಟ್‌ನಲ್ಲೂ ₹300 ಕೋಟಿ ಒದಗಿಸಲಾಗಿತ್ತು. ಆದರೂ,ಇನ್ನೂ ಪ್ರಗತಿಯ ಹಂತದಲ್ಲಿದೆ’ ಎಂದು ಆಕ್ಷೇಪ ವ್ಯಕ್ತಪಡಿಸಿದರು.

ಬಿಜೆಪಿಯ ಎಚ್‌. ವಿಶ್ವನಾಥ್‌, ‘ಈ ಯೋಜನೆಯನ್ನು ಸಹಕಾರ ಇಲಾಖೆಯ ಮೂಲಕವೇ ನಿರ್ವಹಿಸಬೇಕು. ಯಾವುದೇ ಕಾರಣಕ್ಕೂ ಆರೋಗ್ಯ ಇಲಾಖೆಗೆ ವಹಿಸಲೇಬಾರದು’ ಎಂದರು.

‘ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲಿ ನಾನು ಸಹಕಾರ ಸಚಿವನಾಗಿದ್ದಾಗ ಯಶಸ್ವಿನಿ ಯೋಜನೆಯನ್ನು ಜಾರಿಗೊಳಿಸಲಾಗಿತ್ತು. ಈ ಯೋಜನೆ ಜಾರಿಗೆ ಬಹುರಾಷ್ಟ್ರೀಯ ಕಂಪನಿಗಳಿಂದ ಕಾರ್ಪೋರೇಟ್‌ ಸಾಮಾಜಿಕ ಹೊಣೆ ಗಾರಿಕೆ (ಸಿಎಸ್‌ಆರ್‌) ನಿಧಿ ಅಡಿಯಲ್ಲಿ ₹1 ಸಾವಿರ ಕೋಟಿ ಸಂಗ್ರಹಿಸಬೇಕು’ ಎಂದು ಸಲಹೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT