ಗುರುವಾರ , ಮೇ 19, 2022
25 °C
ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಬಿ.ಎ.ಹರೀಶ್ ಅಧ್ಯಕ್ಷತೆಯಲ್ಲಿ ಕೆಡಿಪಿ ಸಭೆ

ಪಿಯು, ಎಸ್ಸೆಸ್ಸೆಲ್ಸಿ: ಫಲಿತಾಂಶ ಹೆಚ್ಚಳಕ್ಕೆ ಸೂಚನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಡಿಕೇರಿ: ಮೇ ಮತ್ತು ಜೂನ್ ತಿಂಗಳಲ್ಲಿ ದ್ವಿತೀಯ ಪಿಯು ಮತ್ತು ಎಸ್ಸೆಸ್ಸೆಲ್ಸಿ ಪರೀಕ್ಷೆಗಳು ನಡೆಯಲಿದ್ದು, ಫಲಿತಾಂಶ ಹೆಚ್ಚಳಕ್ಕೆ ಈಗಿನಿಂದಲೇ ಹೆಚ್ಚಿನ ಶ್ರಮ ವಹಿಸಬೇಕು ಎಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಬಿ.ಎ.ಹರೀಶ್ ಅವರು ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.

ನಗರದ ಜಿ.ಪಂ ಕೆಡಿಪಿ ಸಭಾಂಗಣದಲ್ಲಿ ಗುರುವಾರ ನಡೆದ ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಕೋವಿಡ್-19 ಕಾರಣ ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಶಾಲೆಗಳು ಆರಂಭವಾಗದೇ ವಿದ್ಯಾರ್ಥಿಗಳಿಗೆ ತುಂಬಾ ತೊಂದರೆಯಾಗಿದೆ. ಸದ್ಯ ಈಗಾಗಲೇ ಎಸ್‍ಎಸ್‍ಎಲ್‍ಸಿ ಮತ್ತು ಪಿಯು ತರಗತಿಗಳು ಆರಂಭವಾಗಿವೆ. ಪರೀಕ್ಷಾ ಫಲಿತಾಂಶ ಹೆಚ್ಚಳಕ್ಕೆ ಹೆಚ್ಚಿನ ಮುತುವರ್ಜಿ ವಹಿಸಬೇಕು ಎಂದು ಅವರು ನಿರ್ದೇಶನ ನೀಡಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ಕಾಂತರಾಜು ಅವರು ಪ್ರತಿಕ್ರಿಯಿಸಿ. ಜ.1ರಿಂದ ಎಸ್‍ಎಸ್‍ಎಲ್‍ಸಿ ಮತ್ತು ದ್ವಿತೀಯ ಪಿಯು ತರಗತಿಗಳು ಆರಂಭವಾಗಿವೆ. ಫೆ.1ರಿಂದ 9ನೇ ತರಗತಿ ಆರಂಭವಾಗಿದೆ. ಹಾಗೆಯೇ 6, 7 ಮತ್ತು 8ನೇ ತರಗತಿ ದಿನಬಿಟ್ಟು ದಿನ ವಿದ್ಯಾಗಮ ಕಾರ್ಯಕ್ರಮ ನಡೆಯುತ್ತಿದೆ ಎಂದು ಮಾಹಿತಿ ನೀಡಿದರು.

ಮಧ್ಯ ಪ್ರವೇಶಿಸಿ ಮಾತನಾಡಿದ ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷೆ ಕೆ.ಆರ್.ಮಂಜುಳಾ, ಸರ್ಕಾರಿ ಶಾಲೆಗಳನ್ನು ಯಾವುದೇ ಕಾರಣಕ್ಕೂ ಮುಚ್ಚಬಾರದು. ಕೋವಿಡ್-19 ನಂತರ ಸರ್ಕಾರಿ ಶಾಲೆಗೆ ಹೆಚ್ಚಿನ ವಿದ್ಯಾರ್ಥಿಗಳು ಸೇರ್ಪಡೆಯಾಗುತ್ತಿದ್ದು, ಕನಿಷ್ಠ ಐದು ಮಕ್ಕಳಿದ್ದರೂ ಸಹ ಸರ್ಕಾರಿ ಶಾಲೆಗಳನ್ನು ನಡೆಸಬೇಕು ಎಂದು ಸಲಹೆ ನೀಡಿದರು.

ಕನ್ನಡ ಅಂಕಿ ಬಳಸಿ: ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಲೋಕೇಶ್ ಸಾಗರ್ ಅವರು, ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ನಡೆಸಲಾಗುತ್ತಿರುವ ಕಾರ್ಯಕ್ರಮಗಳಿಗೆ ಜಿಲ್ಲಾಡಳಿತ, ಜಿ.ಪಂ, ಶಿಕ್ಷಣ ಇಲಾಖೆ... ಹೀಗೆ ಎಲ್ಲರೂ ಕೈಜೋಡಿಸುತ್ತಿದ್ದಾರೆ. ಕನ್ನಡ ಭಾಷಾ ಅಭಿವೃದ್ಧಿ ಸಂಬಂಧಿಸಿದಂತೆ ಕನ್ನಡ ಅಂಕಿಗಳನ್ನು ಕಡ್ಡಾಯವಾಗಿ ಬಳಸುವಂತಾಗಬೇಕು. ತರಗತಿಗಳಲ್ಲಿ ಪ್ರಾಥಮಿಕ ಹಂತದಲ್ಲಿಯೇ ಕನ್ನಡ ಅಂಕಿಗಳನ್ನು ಕಲಿಸಬೇಕು ಎಂದು ಸಲಹೆ ನೀಡಿದರು.

ಅಬಕಾರಿ ಸಂಬಂಧಿಸಿದಂತೆ ಜಿ.ಪಂ ಅಧ್ಯಕ್ಷರು ಮಾಹಿತಿ ಪಡೆದರು. ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದವರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಸಂಬಂಧಪಟ್ಟ ಅಧಿಕಾರಿಗಳು ಮಾಹಿತಿ ನೀಡಿದರು.

ಲೋಕೇಶ್ ಸಾಗರ್ ಅವರು, ಕುಶಾಲನಗರದಂತಹ ಹೆದ್ದಾರಿ ಪ್ರದೇಶದಲ್ಲಿ ರಾತ್ರಿ 9 ಗಂಟೆಯ ನಂತರ ಅನ್ನ ಸಿಗುವುದಿಲ್ಲ. ಆದರೆ, ಎಣ್ಣೆ ಸಿಗುತ್ತದೆ ಎಂದು ಗಮನ ಸೆಳೆದರು. ಲೋಕೇಶ್ವರಿ ಗೋಪಾಲ್ ಮಾತನಾಡಿ, ಪೆಟ್ಟಿಗೆ ಅಂಗಡಿಗಳಲ್ಲಿ ಮದ್ಯ ಮಾರಾಟವಾಗುತ್ತಿದ್ದು, ಇದಕ್ಕೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಅವರು ಸೂಚಿಸಿದರು.

ಕೃಷಿ ಇಲಾಖೆಯ ಜಂಟಿ ನಿರ್ದೇಶಕಿ ಶಬಾನಾ ಎಂ.ಶೇಖ್ ಅವರು, ಪ್ರಧಾನ ಮಂತ್ರಿ ಕಿಸಾನ್ ಯೋಜನೆಯಡಿ ಹಲವು ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ. ಸದ್ಯ ಆಧಾರ್ ಮತ್ತು ಪಹಣಿ ಜೋಡಣಾ ಕಾರ್ಯ ನಡೆಯುತ್ತಿದ್ದು, ಇದಕ್ಕೆ ಪ್ರತಿಯೊಬ್ಬ ರೈತರು ಕೈಜೋಡಿಸಬೇಕಿದೆ ಎಂದು ಅವರು ಮನವಿ ಮಾಡಿದರು.

ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ಎ.ಭವ್ಯಾ ಮಾತನಾಡಿ, ದಕ್ಷಿಣ ಕೊಡಗಿನ ಬಿರುನಾಣಿ ಸೇರಿದಂತೆ ಹಲವು ಭಾಗಗಳಲ್ಲಿ ಹುಲಿಗಳ ಹಾವಳಿ ಹೆಚ್ಚಾಗಿದ್ದು, ಹುಲಿಗಳನ್ನು ಸೆರೆ ಹಿಡಿಯಬೇಕು. ಕಾಡು ಪ್ರಾಣಿಗಳ ಉಪಟಳ ಕಡಿಮೆ ಮಾಡುವ ನಿಟ್ಟಿನಲ್ಲಿ ಕ್ರಮವಹಿಸಬೇಕು ಎಂದು ಅವರು ಹೇಳಿದರು.

ಇದಕ್ಕೆ ಧ್ವನಿಗೂಡಿಸಿದ ಕವಿತಾ ಪ್ರಭಾಕರ್ ಅವರು ಕರಿಕೆ ಭಾಗದ ಹಾಡಿಗಳು ಸೇರಿದಂತೆ ವಿವಿಧ ಕಾಲೊನಿಗಳಿಗೆ ಕುಡಿಯುವ ನೀರು ಒದಗಿಸಲು ವಿದ್ಯುತ್ ಸಂಪರ್ಕ ಕಲ್ಪಿಸುವಂತೆ ಹಲವು ಬಾರಿ ತಿಳಿಸಿದರೂ ಕಾರ್ಯವಾಗಿಲ್ಲ ಎಂದು ಅತೃಪ್ತಿ ವ್ಯಕ್ತಪಡಿಸಿದರು.

ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಎಂಜಿನಿಯರ್ ಮದನ್ ಮೋಹನ್ ಅವರು, ರಾಜ್ಯ ಹಾಗೂ ಜಿಲ್ಲಾ ಮುಖ್ಯ ರಸ್ತೆ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದರು.

ಜಿ.ಪಂ.ಯೋಜನಾ ನಿರ್ದೇಶಕರಾದ ರಾಜಗೋಪಾಲ್, ಉಪ ಕಾರ್ಯದರ್ಶಿ ಶ್ರೀಕಂಠಮೂರ್ತಿ ಹಾಜರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು