ಶುಕ್ರವಾರ, ಮಾರ್ಚ್ 5, 2021
24 °C

ಕೈಗಾರಿಕಾ ವಲಯಕ್ಕೆ ಸಿಗದ ಆದ್ಯತೆ

ಉಮಾ ರೆಡ್ಡಿ Updated:

ಅಕ್ಷರ ಗಾತ್ರ : | |

Prajavani

ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಅವರು ರೈತರು, ಅಂಗನವಾಡಿ ಕಾರ್ಯಕರ್ತೆಯರು, ಗಾರ್ಮೆಂಟ್‌ ವಲಯದಲ್ಲಿ ದುಡಿಯುವವರ ಬದುಕು ಹಸನು ಮಾಡಲು ಹಲವಾರು ಯೋಜನೆಗಳನ್ನು ಪ್ರಕಟಿಸುವ ಮೂಲಕ ಜನಸಾಮಾನ್ಯರ ಬಜೆಟ್‌ ಮಂಡಿಸಿರುವುದು ಉತ್ತೇಜಕರವಾಗಿದೆ. ಆದರೆ, ರಾಜ್ಯದ ಆರ್ಥಿಕ ಅಭಿವೃದ್ಧಿಯಲ್ಲಿ ಮಹತ್ವದ ಪಾತ್ರ ನಿರ್ವಹಿಸುವ ಕೈಗಾರಿಕಾ ವಲಯಕ್ಕೆ, ಅಸಂಖ್ಯ ಉದ್ಯೋಗ ಅವಕಾಶಗಳನ್ನು ಸೃಷ್ಟಿಸುವ ಕಿರು, ಸಣ್ಣ ಮತ್ತು ಮಧ್ಯಮ ಕೈಗಾರಿಕಾ ಕ್ಷೇತ್ರವನ್ನು (ಎಂಎಸ್‌ಎಂಇ) ನಿರ್ಲಕ್ಷಿಸಿದ ಭಾವನೆ ಮೂಡಿಸುತ್ತದೆ.

ಐ.ಟಿ ಉದ್ದಿಮೆ, ನವೋದ್ಯಮಗಳೂ (ಸ್ಟಾರ್ಟ್‌ಅಪ್‌) ರಾಜ್ಯದ ಆರ್ಥಿಕತೆಗೆ ಭಾರಿ ಕೊಡುಗೆ ನೀಡುತ್ತಿವೆ. ಈ ವಿಷಯದಲ್ಲಿ ಮಹಿಳಾ ಉದ್ಯಮಿಗಳ ಕೊಡುಗೆಯನ್ನೂ ನಿರ್ಲಕ್ಷಿಸುವಂತಿಲ್ಲ. ರಾಜ್ಯದ ಆರ್ಥಿಕತೆಯನ್ನು ಸದೃಢವಾಗಿ ಕಟ್ಟುವಲ್ಲಿ ಮತ್ತು ದೇಶದ ಕೈಗಾರಿಕಾ ಭೂಪಟದಲ್ಲಿ ರಾಜ್ಯಕ್ಕೆ ಪ್ರಮುಖ ಸ್ಥಾನಮಾನ ದೊರಕಿಸಿ ಕೊಡುವಲ್ಲಿ ಹೆಚ್ಚು ಪ್ರಸ್ತುತವಾಗುವ ಕೈಗಾರಿಕೆಗಳಿಗೆ ಬಜೆಟ್‌ನಲ್ಲಿ ಸಿಗಬೇಕಾದ ಆದ್ಯತೆ ದೊರೆತಿಲ್ಲ.

ಪುನಶ್ಚೇತನದ ನಿರೀಕ್ಷೆಯಲ್ಲಿ ಇರುವ ‘ಎಂಎಸ್‌ಎಂಇ‘ ಮತ್ತು ತಯಾರಿಕಾ ವಲಯಕ್ಕೆ ಹಣಕಾಸು, ಮೂಲಸೌಕರ್ಯಗಳ ನೆರವು ಒದಗಿಸಲು ಮುಖ್ಯಮಂತ್ರಿ ಮನಸ್ಸು ಮಾಡಿಲ್ಲ.  ಸುಲಭ ಹಣಕಾಸು ಸೌಲಭ್ಯ, ಉದ್ಯಮ ಸ್ಥಾಪನೆಗೆ ಅನುಕೂಲತೆ ಕಲ್ಪಿಸುವ ಕೈಗಾರಿಕಾ ಸ್ನೇಹಿ ಉಪಕ್ರಮಗಳು, ಮಹಿಳಾ ಉದ್ದಿಮೆಗಳಿಗೆ ನೆರವಾಗಲು ಸುಲಭ ಹಣಕಾಸಿನ ನೆರವು, ಟ್ರೇಡ್‌ ಲೈಸನ್ಸ್‌ ರದ್ದತಿ ಬಗ್ಗೆ ಬಜೆಟ್‌ನಲ್ಲಿ ಪ್ರಸ್ತಾವಗಳು ಇಲ್ಲದಿರುವುದು ನಿರಾಶೆ ಮೂಡಿಸುತ್ತದೆ.

ಆಶಾದಾಯಕ: ಎರಡು ಮತ್ತು ಮೂರನೇ ಹಂತದ ನಗರಗಳಲ್ಲಿ  ಬಂಡವಾಳ ಹೂಡಿಕೆ ಮತ್ತು ತಂತ್ರಜ್ಞಾನ ನೆರವು ಆಕರ್ಷಿಸಲು ಹೊಸ ಕೈಗಾರಿಕಾ ನೀತಿ ಜಾರಿಗೆ ತರುವ ಭರವಸೆ ಮಾತ್ರ ಆಶಾದಾಯಕವಾಗಿದೆ. ‘ಎಂಎಸ್‌ಎಂಇ’ ಸಾರ್ಥಕ ಹೆಸರಿನ ಹೊಸ ಯೋಜನೆಗೆ ಕೇವಲ ₹ 5 ಕೋಟಿ ನೆರವು ಘೋಷಿಸಲಾಗಿದೆ.

ಬೆಂಗಳೂರು ನಗರ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿನ ಎಲ್ಲ ಕೈಗಾರಿಕಾ ವಸಾಹತುಗಳಲ್ಲಿನ ‘ಎಂಎಸ್ಎಂಇ’ ಘಟಕಗಳಿಗೆ ಯಾವುದೇ ಉತ್ತೇಜನಾ ಕೊಡುಗೆಗಳಿಲ್ಲ. ಕೈಗಾರಿಕಾ ಎಸ್ಟೇಟ್‌ಗಳಲ್ಲಿನ ಮೂಲಸೌಕರ್ಯಗಳನ್ನು ಮೇಲ್ದರ್ಜೆಗೆ ಏರಿಸುವ ಹೊಸ ಪ್ರಸ್ತಾವಗಳೂ ಇಲ್ಲ.

‘ಚೀನಾ ಜತೆಗೆ ಸ್ಪರ್ಧೆ’ ಯೋಜನೆಗೆ ₹ 110 ಕೋಟಿ ಕೊಟ್ಟಿರುವುದನ್ನು ವಿಶೇಷ ಆರ್ಥಿಕ ವಲಯ (ಎಸ್‌ಇಜೆಡ್‌), ಕೈಗಾರಿಕಾ ಪಾರ್ಕ್‌ ಮತ್ತು ಕ್ಲಸ್ಟರ್ಸ್‌ಗಳಲ್ಲಿ ಮೂಲ ಸೌಕರ್ಯಗಳನ್ನು ಅಭಿವೃದ್ಧಿಪಡಿಸಲು ಸಾಕಾಗುವುದಿಲ್ಲ.

ತುಮಕೂರು ಕೈಗಾರಿಕಾ ಕೇಂದ್ರ (Industrial hub) ನಿರ್ಮಾಣವು ‘ಎಂಎಸ್‌ಎಂಇ’ಗಳ ಪಾಲಿಗೆ ಹೊಸ ವಹಿವಾಟಿನ ಅವಕಾಶಗಳನ್ನು ಒದಗಿಸಲಿದೆ ಎಂದು ಆಶಿಸಬಹುದಾಗಿದೆ.

ಬಜೆಟ್‌ ಮಂಡನೆ ದಿನವು ಸರ್ಕಾರದ ಪಾಲಿಗೆ ವಿಶೇಷ ಎನಿಸಬಹುದು. ಆದರೆ, ವಿವಿಧ ಉದ್ದೇಶಗಳಿಗೆ ಬಜೆಟ್‌ನಲ್ಲಿ ನಿಗದಿಪಡಿಸಿದ ಮೊತ್ತವನ್ನು ಹಣಕಾಸು ವರ್ಷಪೂರ್ತಿ ಸದ್ಬಳಕೆ ಮಾಡುವುದರ ಮೇಲೆ ಬಜೆಟ್‌ ಪ್ರಸ್ತಾವಗಳಿಗೆ ಮಹತ್ವ ಪ್ರಾಪ್ತವಾಗುತ್ತದೆ.

ರಾಜ್ಯದಲ್ಲಿ ಕೈಗಾರಿಕೆಗಳ ಬೆಳವಣಿಗೆಗೆ ಪುನಶ್ಚೇತನ ನೀಡಬೇಕೆಂದರೆ, ಮೂಲಸೌಕರ್ಯಗಳಿಗೆ ಸುಸ್ಥಿರ ನೆಲೆಯಲ್ಲಿ ಹಣಕಾಸು ನೆರವು ಒದಗಿಸಬೇಕಾಗುತ್ತದೆ. ಸಾಮಾನ್ಯ ಬಳಕೆಯ ಗುಣಮಟ್ಟದ ಮೂಲ ಸೌಕರ್ಯದ ಸೌಲಭ್ಯಗಳನ್ನು ಆದ್ಯತೆ ಮೇರೆಗೆ ಕಲ್ಪಿಸಬೇಕಾಗುತ್ತದೆ. ಸ್ಟಾರ್ಟ್‌ಅಪ್‌, ಮಹಿಳೆಯರೇ ನಿರ್ವಹಿಸುವ ಉದ್ದಿಮೆಗಳು, ‘ಎಂಎಸ್‌ಎಂಇ’ಗಳಿಗೆ ಬಜೆಟ್‌ನಲ್ಲಿ ಹಣಕಾಸು ಸೇರಿದಂತೆ ವಿವಿಧ ಬಗೆಯ ಉಪಕ್ರಮಗಳ ನೆರವು ಬೇಕಾಗುತ್ತದೆ.

ಸರ್ಕಾರ, ವಾಣಿಜ್ಯೋದ್ಯಮ ಸಂಘಟನೆ, ವರ್ತಕರ ಸಂಘಗಳು, ವಹಿವಾಟಿನ ಪಾಲುದಾರರ ಮಧ್ಯೆ ನಿರಂತರ ಸಮನ್ವಯತೆ ಮತ್ತು ಬೆಂಬಲ ಇರಬೇಕಾಗುತ್ತದೆ. ರಾಜ್ಯದಲ್ಲಿ ಇಂತಹ ಸೌಹಾರ್ದಮಯ ಕೈಗಾರಿಕಾ ಸ್ನೇಹಿ ವಾತಾವರಣ ಇದ್ದರೆ ಮಾತ್ರ ಹೊಸ ಹೊಸ ಆಲೋಚನೆಗಳು ಕಾರ್ಯರೂಪಕ್ಕೆ ಬರುತ್ತವೆ. ಅದರಿಂದ ಕೈಗಾರಿಕಾ ಬೆಳವಣಿಗೆಗೆ ವೇಗವೂ ಪ್ರಾಪ್ತವಾಗುತ್ತದೆ. ಜಾಗತಿಕ ಮಟ್ಟದಲ್ಲಿ ರಾಜ್ಯದ ಹೆಸರು ಇನ್ನಷ್ಟು ಪ್ರಕಾಶಿಸಲು ಸಾಧ್ಯವಾಗುತ್ತದೆ. ಬಜೆಟ್‌ನಲ್ಲಿ ಇಂತಹ ಮುನ್ನೋಟ ಇರಬೇಕಾಗಿತ್ತು. ಅಂತಹ ನಿರೀಕ್ಷೆ ಸಾಕಾರಗೊಂಡಿಲ್ಲ. ಆಶಾವಾದ, ಭರವಸೆ ಮೂಡಿಸದ ಕಾರ್ಯಕ್ರಮಗಳು ಇಲ್ಲದಿರುವುದರಿಂದ ಕೈಗಾರಿಕಾ ವಲಯಕ್ಕೆ ನಿರಾಶೆಯಾಗಿರುವುದಂತೂ ನಿಜ.

ಎಸ್‌ಎಂಇ ಕೈಗಾರಿಕೋದ್ಯಮಿ

 

* ಇವನ್ನೂ ಓದಿ...

ಸಣ್ಣ ನೀರಾವರಿ, ಅಂತರ್ಜಲ ವೃದ್ಧಿಗೆ ಆದ್ಯತೆ

* ‘ಉಕ್ಕುವ ಹಾಲಿಗೆ ನೀರು ಚಿಮುಕಿಸಿದಂತೆ’

ಅನ್ನದಾತನಿಗೆ ಹತ್ತಾರು ಯೋಜನೆ, ರಾಜ್ಯದಲ್ಲಿ ಪ್ರತ್ಯೇಕ ಬೆಳೆ ವಿಮೆ ಯೋಜನೆ

ಬಜೆಟ್‌: ಯಾರು ಏನಂತಾರೆ?

ಉದ್ಯಮ ವಲಯಕ್ಕೆ ಉತ್ತೇಜಕ ಬುತ್ತಿ 

ಬಜೆಟ್: ಪರಿಶಿಷ್ಟ ವರ್ಗಕ್ಕೆ ಭರ್ಜರಿ ಕೊಡುಗೆ

ಸರ್ಕಾರ ಜನರ ಕಣ್ಣಿಗೆ ಮಣ್ಣೆರಚಿದೆ: ಯಡಿಯೂರಪ್ಪ

ಸಾಲ ಮನ್ನಾಕ್ಕೆ ಇನ್ನೂ ಹಣ ಕೊಡುವೆ: ಕುಮಾರಸ್ವಾಮಿ

ಬೆಂಗಳೂರೇ ಮೊದಲು; ಉಳಿದವು ನಂತರ...

ಪ್ರತಿಭಟನೆ ಮಧ್ಯೆಯೇ ಬಜೆಟ್ ಭಾಷಣ

ಬಜೆಟ್‌ನಲ್ಲಿ ಜಿಲ್ಲಾವಾರು ಹಂಚಿಕೆ; ಸಮತೋಲನದ ಸರ್ಕಸ್

ಬರ ಪರಿಸ್ಥಿತಿ: ಆರ್ಥಿಕ ವೃದ್ಧಿ ದರ ಕುಸಿತ

ಮತ ಫಸಲಿಗಾಗಿ ಕುಮಾರ ಬಿತ್ತನೆ

ವಿಶ್ವವಿಖ್ಯಾತ ತಾಣವಾಗಿ ಬಾದಾಮಿ ಅಭಿವೃದ್ಧಿ

ಸಹಸ್ರ ಶಾಲೆಗಳ ಸ್ಥಾಪನೆ

ಸ್ವಾಮೀಜಿ ಊರುಗಳಲ್ಲಿ ಸಾಂಸ್ಕೃತಿಕ ಕೇಂದ್ರಗಳು

ಹೊಸ ಕ್ರೀಡಾ ವಸತಿ ನಿಲಯಗಳ ಘೋಷಣೆ

ಆರೋಗ್ಯ ಮತ್ತು ಕುಟುಂಬ ಕಲ್ಯಾಣಕ್ಕೆ ಆದ್ಯತೆ

‘ಮಾತೃಶ್ರೀ’ ಯೋಜನೆ ಸಹಾಯಧನ ಹೆಚ್ಚಳ

ಆನ್‌ಲೈನ್‌ ಮೂಲಕ ಸಿಇಟಿ, ವಿದ್ಯಾರ್ಥಿಗಳಿಗೆ ಡಿಜಿಟಲ್‌ ಅಂಕಪಟ್ಟಿ

ಬಜೆಟ್‌ನಲ್ಲಿ ಮಠಮಾನ್ಯಗಳ ತೃಪ್ತಿಪಡಿಸುವ ಯತ್ನ

ಬಜೆಟ್‌: ಯಾರು ಏನಂತಾರೆ?

ಚಲನಶೀಲ ಬೆಂಗಳೂರಿಗೆ ‘ಮತ್ತೊಂದು ಕಾವೇರಿ’

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು