ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇವನಾಂಪ್ರಿಯನ ಸಂದೇಶ ಹುಡುಕುತ್ತಾ...

Last Updated 22 ಅಕ್ಟೋಬರ್ 2018, 19:30 IST
ಅಕ್ಷರ ಗಾತ್ರ

‘ದೇವನಾಂಪ್ರಿಯ ಹೇಳುತ್ತಿದ್ದಾನೆ: ಎರಡೂವರೆ ವರ್ಷ ಕಾಲಕ್ಕಿಂತಲೂ ಹೆಚ್ಚು ನಾನು ಉಪಾಸಕನಾಗಿದ್ದೇನೆ. ಆದರೆ ನಾನೆಂದಿಗೂ ಕಠಿಣ ಪರಿಶ್ರಮ ಪಡಲಿಲ್ಲ. ಈಗ ಒಂದು ವರ್ಷಕ್ಕಿಂತಲೂ ಹೆಚ್ಚು ಕಾಲದಿಂದ ಜನರೊಟ್ಟಿಗೆ ಕೂಡಿಕೊಂಡಿದ್ದೇನೆ. ಹಾಗೂ ಕಠಿಣ ಪರಿಶ್ರಮ ಪಡುತ್ತಿದ್ದೇನೆ. ಹಾಗೆ ಜಂಬೂದ್ವೀಪ (ಭಾರತ)ದಲ್ಲಿ ಈ ಸಂದರ್ಭದಲ್ಲಿ ದೇವರುಜನರ ಜತೆ ಬೆರೆತಿರಲಿಲ್ಲ: ಅವರನ್ನು ಈಗ ಬೆರೆಯುವಂತೆ ಮಾಡಲಾಗಿದೆ. ಇದು ಕಠಿಣ ಶ್ರಮದ ಫಲ. ಈ ಕೆಲಸ ಕೇವಲ ಶ್ರೇಷ್ಠ ಮನುಷ್ಯನಿಂದ ಮಾತ್ರ ಸಾಧ್ಯ ಎಂದು ಹೇಳಲಾಗುವುದಿಲ್ಲ. ಬದಲಾಗಿ ಸಾಮಾನ್ಯ ಮನುಷ್ಯನೊಬ್ಬ ಆಸಕ್ತಿಯಿಂದ ಶ್ರಮಿಸಿದರೆ ಸ್ವರ್ಗವನ್ನು ಪಡೆಯಬಹುದು...’

ಕೊಪ್ಪಳ ಹೊರವಲಯದ ಪಾಲ್ಕಿಗುಂಡು ಬಂಡೆಯ ಮೇಲೆ ಸಾಮ್ರಾಟ ಅಶೋಕನ ಈ ಶಾಸನವಿದೆ. ಹಾಗೆಂದು ಅದು ಬೆಟ್ಟ ಹತ್ತಿದ ತಕ್ಷಣ ಸಿಗುವುದಿಲ್ಲ.

ದೊಡ್ಡ ಬಂಡೆಗೆ ಇನ್ನೊಂದು ಕಲ್ಲು ಛತ್ರಿಯಾಕಾರದ ಛಾವಣಿ ಹೊದೆಸಿದೆ. ನಿಸರ್ಗ ರಚನೆಯೇ ಹೀಗಿದೆ. ಛತ್ರಿಯ ಕೆಳಗೆ ಕೂತು ಉಸ್ಸಪ್ಪಾ ಎಂದು ಉಸಿರುಬಿಡುತ್ತಾ ಎಲ್ಲಿದೆ ಅಶೋಕನ ಶಾಸನ ಎಂದು ಕೂಗಿದರೂಅದು ಕಾಣಲಿಲ್ಲ. ಒಂದಿಷ್ಟು ಪರದಾಡಿದ ಬಳಿಕ ನಮ್ಮ ಮಾರ್ಗದರ್ಶಕರು, ’ನೀವು ಆ ಬರಹದ ಮೇಲೆಯೇ ಕುಳಿತಿದ್ದೀರಲ್ಲಾ’ ಎಂದರು !

ಹೌದು. ಎಷ್ಟೋ ಕುತೂಹಲಿಗಳಿಗೆ ಹೀಗಾಗಿದೆ. ಕುಳಿತ ಜಾಗದಲ್ಲೇ ಸ್ವಲ್ಪ ಸರಿದು ನೋಡಿದರೆ ಅಸ್ಪಷ್ಟ ಬರಹ ಕಾಣಿಸುತ್ತದೆ. ಆದರೆ, ಅಲ್ಲೊಂದು ಶಾಸನ ಬರಹ ಇದೆ ಎಂದು ಹೇಳುವ ಸೂಚನೆಗಳೂ ಇಲ್ಲ. ಮಾರ್ಗದರ್ಶಕರೂ ಇಲ್ಲ. ಹೀಗಾಗಿ ಬೌದ್ಧ ಬಿಕ್ಕುಗಳ ಸಂದೇಶ ಕಾಲನ ಹೊಡೆತಕ್ಕೆ ಸಿಕ್ಕಿದೆ. ತತ್ವಗಳೂ ಸವಕಲಾಗಿದೆಯೇನೋ ಎಂಬಂತೆ ವ್ಯಂಗ್ಯವಾಡುತ್ತಿವೆ. ಸಾಲದ್ದಕ್ಕೆ ಸಮೀಪದಲ್ಲೇ ಇಂದ್ರಕೀಲ ಪರ್ವತದ (ಮಳೆಮಲ್ಲಪ್ಪನ ಗುಡ್ಡ) ಶಿರಚ್ಛೇದ ವ್ಯವಸ್ಥಿತವಾಗಿ ನಡೆದಿದೆ. ಈ ಬಂಡೆಯೂ ಆತಂಕ ಎದುರಿಸುತ್ತಿದೆ.

ಕೊಪ್ಪಳ ನಗರಕ್ಕೆ ದೊಡ್ಡ ಗೋಡೆ ಕಟ್ಟಿದಂತಿರುವ ಇಂದ್ರಕೀಲ ಪರ್ವತದ ಸಾಲು ಅದ್ಭುತವಾದ ನಿಸರ್ಗ ವೈವಿಧ್ಯ ಹೊಂದಿದೆ. ಬಂಡೆಯ ಮೇಲೆ ಪ್ರಶಾಂತವಾಗಿ ಕುಳಿತು ಧ್ಯಾನಾವಸ್ಥೆಯನ್ನು ಅನುಭವಿಸಬಹುದು. ಎತ್ತರದಲ್ಲಿ ಬೀಸುವ ಗಾಳಿಯೂ ಮುದ ನೀಡುತ್ತದೆ.

ಪಾಲ್ಕಿಗುಂಡಿಗೆ ಭೇಟಿ ಕೊಡಲು ಈಗ ಪ್ರಶಸ್ತ ಸಮಯ. ಬೆಟ್ಟದಲ್ಲೊಂದಿಷ್ಟು ಹಸಿರು ಚಿಗುರಿದೆ. ಬೆಟ್ಟದಲ್ಲೇ ಅರಳುವ ಅಪರೂಪದ ಹೂಗಳು, ಆರ್ಕಿಡ್‌ ಮಾದರಿಯ ಸಸಿಗಳು, ಆಲ್ಗೆಗಳು, ಬಂಡೆಯ ಪಾಚಿಯಲ್ಲೇ ಜೀವ ತಳೆದು ಅರಳಿದ ಬೆಳ್ಳನೆಯ ಪುಟ್ಟ ಹೂಗಳು, ಅಲ್ಲಲ್ಲಿ ಸಂಗ್ರಹವಾದ ಪ್ರಶಾಂತ ತಿಳಿನೀರು, ಮುಖಕ್ಕೆ ಎರಚಿಕೊಂಡರೆ ಸಿಗುವ ತಣ್ಣನೆಯ ಅನುಭವ... ಅಬ್ಬಬ್ಬಾ ಬೆಟ್ಟ ಹತ್ತಿದ್ದಕ್ಕೆ ಸಾರ್ಥಕವಾಯಿತು ಎಂಬ ಭಾವ ಮೂಡಿಸುತ್ತದೆ. ಕೊಪ್ಪಳದ ಜಿಲ್ಲಾ ಕ್ರೀಡಾಂಗಣ, ರೈಲು ಪಥ, ಅದರಾಚೆಗಿನ ಮೆಕ್ಕೆಜೋಳದ ಹೊಲಗಳು, ಬೆಂಕಿ ಪೊಟ್ಟಣ ಜೋಡಿಸಿಟ್ಟಂತೆ ಕಾಣುವ ಮನೆಗಳು, ಕಟ್ಟಡಗಳ ಸಾಲು ಹೀಗೆ ಒಂದು ಸಮಗ್ರವಾದ ದೃಶ್ಯ ಕಟ್ಟಿಕೊಡುವ ತಾಣವಿದು.

ಇದು ಒಂದು ಕಥೆಯಾದರೆ, ಇದೇ ಮಾದರಿಯ ಸೋದರ ಶಾಸನಗಳು ಗವಿಮಠದ ಹಿಂಭಾಗ ಅನಾಥಭಾವ ಹೊಂದಿವೆ. ಪುರಾತತ್ವ ಇಲಾಖೆ ಒಂದಿಷ್ಟು ಫಲಕ ಹಾಕಿ ಸುಮ್ಮನಾಗಿದೆ. ಈ ಶಾಸನ ಪ್ರದೇಶ ಕಿಡಿಗೇಡಿಗಳ ತಾಣವಾಗಿದೆ. ತ್ಯಾಜ್ಯ, ತಿಪ್ಪೆ ಸಂಗ್ರಹಿಸುವ ಪ್ರದೇಶವಾಗಿಬಿಟ್ಟಿದೆ. ಇಲ್ಲಿನ ಆಸುಪಾಸಿನಲ್ಲೇ ಸ್ಮಶಾನ ಇರುವುದರಿಂದ ಕಾಳಜಿ ವಹಿಸಲು ನಂಬಿಕೆಗಳೂ ತಡೆಯಾಗಿವೆ.

ಗವಿಮಠ ಹಾಗೂ ಪಾಲ್ಕಿಗುಂಡು ಶಾಸನಗಳಲ್ಲಿ ಅಶೋಕನ ಎರಡನೆಯ ಹೆಸರು ಮಾತ್ರ ಕಂಡುಬರುತ್ತದೆ. ಒಂದು ವಾದದ ಪ್ರಕಾರ ಕೊಪ್ಪಳ ಹಾಗೂ ರಾಯಚೂರು ಜಿಲ್ಲೆಯಲ್ಲಿನ ಮಸ್ಕಿಯಲ್ಲಿ ಪತ್ತೆಯಾಗಿರುವ ಮೂರೂ ಶಾಸನಗಳು ಒಬ್ಬ ಶಿಲ್ಪಿಯಿಂದ ಕೆತ್ತಲ್ಪಟ್ಟಿವೆ. ಕೊಪ್ಪಳದ ಎರಡೂ ಶಾಸನಗಳು ಪ್ರಾಕೃತ ಭಾಷೆಯಲ್ಲಿ, ಆದರೆ ಬ್ರಾಹ್ಮಿ ಲಿಪಿಯಲ್ಲಿವೆ. ಮೌರ್ಯರ ಕಾಲದಲ್ಲಿ ಪ್ರಾಕೃತ ಆಡುಭಾಷೆಯಾಗಿತ್ತು.

ಇತಿಹಾಸಕಾರರು ಬೃಹತ್ ಹಾಗೂ ಸಣ್ಣ ಎಂಬ ಎರಡು ಮಾದರಿಯ ಅಶೋಕ ಶಾಸನಗಳನ್ನು ವಿಂಗಡಿಸುತ್ತಾರೆ. ಅವರ ಪ್ರಕಾರ ಆತ ಒಂದೇ ಶಾಸನದ ಅನೇಕ ಪ್ರತಿಗಳನ್ನು ಸೃಷ್ಟಿಸಿದ್ದ. ಮೊದಲು ನಶಿಸಿಹೋಗಬಹುದಾದ ವಸ್ತುಗಳ ಮೇಲೆ ಶಾಸನಗಳನ್ನು ಬರೆಸುತಿದ್ದ. ಅವುಗಳ ನಶಿಸುವಿಕೆಯನ್ನು ಮನಗಂಡ ಆತ ದೀರ್ಘಕಾಲದ ಬಾಳಿಕೆಗಾಗಿ ಕಲ್ಲಿನಲ್ಲಿ ಅಕ್ಷರಗಳನ್ನು ಕೆತ್ತಲು ನಿರ್ಧರಿಸಿದ. ಹಾಗೆ ಮಾಡುವುದರಿಂದಲೇ ಮಾತ್ರ ತನ್ನ ಸಂದೇಶ ಪೀಳಿಗೆಯಿಂದ ಪೀಳಿಗೆಗೆ ತಲುಪಲು ಸಾಧ್ಯ ಎಂದು ಆತ ನಂಬಿದ್ದ.

ಈ ಕಾರಣಕ್ಕಾಗಿಯೇ ಕೊಪ್ಪಳದ ಸಣ್ಣ ಶಾಸನಗಳಲ್ಲಿ ಕಂಡುಬರುವ ಸಂದೇಶ ದೇಶದ ಇತರ ಭಾಗಗಳಲ್ಲಿ ಪತ್ತೆಯಾಗಿರುವ 17 ಶಾಸನಗಳಲ್ಲಿದೆ. ಇದೇ ಸಂದೇಶ ಹೊತ್ತ ಶಾಸನಗಳು ಕೊಪ್ಪಳದಿಂದ ಸುಮಾರು 1,700 ಕಿಲೋಮೀಟರ್‌ ದೂರದ ಗುಜರಾತ್ ಹಾಗೂ ಮಧ್ಯಪ್ರದೇಶದಲ್ಲಿ ಪತ್ತೆಯಾಗಿವೆ.

ಇತಿಹಾಸ ತಜ್ಞರು ಹೇಳುವಂತೆ ತನ್ನ ಶಾಸನಗಳಿಗೆ ಅಶೋಕ ವಾಣಿಜ್ಯ ಹಾಗೂ ಧಾರ್ಮಿಕ ಕ್ಷೇತ್ರಗಳನ್ನೇ ಆಯ್ಕೆ ಮಾಡಿಕೊಳ್ಳುತ್ತಿದ್ದ. ಮೌರ್ಯರ ಕಾಲದಲ್ಲಿ ಕೊಪ್ಪಳ ಪ್ರಮುಖ ವ್ಯಾಣಿಜ್ಯ ಕೇಂದ್ರವಾಗಿತ್ತೆಂಬುದಕ್ಕೆ ಇಲ್ಲಿ ಪತ್ತೆಯಾಗಿರುವ ಶಾಸನಗಳೇ ಸಾಕ್ಷಿ ಎಂಬುದು ಅವರ ವಾದ.

ಬೃಹ್ಮಗಿರಿಯಲ್ಲಿ ಪತ್ತೆಯಾಗಿರುವ ಸಣ್ಣ ಶಾಸನದಲ್ಲಿ ಎರಡು ಭಾಗಗಳಿವೆ. ಕೊಪ್ಪಳದ ಶಾಸನಗಳಲ್ಲಿ ಒಂದು ಭಾಗ ಮಾತ್ರ ಇದೆ.

ಗವಿಮಠದ ಹಿಂದಿನ ಬೆಟ್ಟದ ಮೇಲೆ ನಿಂತಂತಿರುವ ಕಲ್ಲು ಬಂಡೆಯ ಮೇಲೆ ಶಾಸನವೊಂದು ಪತ್ತೆಯಾಗಿದೆ. ಪಿಸ್ತೂಲ್ ರೂಪದಂತಿರುವ ಕಲ್ಲು ಹೊದಿಕೆ ಕೆಳಗೆ ಪಾದುಕೆ ರಚನೆ ಇದೆ. ಹೊರಗೆ ಶಾಸನವಿದೆ.

ಎಲ್ಲಿದೆ ಪಾಲ್ಕಿಗುಂಡು?

ಕೊಪ್ಪಳ ನಗರದ ಹೃದಯಭಾಗದಿಂದ ಸುಮಾರು 3.5 ಕಿಮೀ ದೂರದಲ್ಲಿನ ಇಂದ್ರಕೀಲ ಪರ್ವತದ ತುತ್ತತುದಿಯಲ್ಲಿದೆ. ಆ ಬಂಡೆಗಳ ತುದಿಗಳ ಮೇಲೆ ಒಂದು ಬಂಡೆಯಿದೆ. ಆ ಬಂಡೆಯ ಕೆಳಗೆ ಶಾಸನವಿದೆ. ಇದು ಪಲ್ಲಕ್ಕಿ ರೀತಿಯಲ್ಲಿ ಇರುವ ಕಾರಣ ಆ ಹೆಸರು ಬಂದಿದೆ. ಈ ಪ್ರದೇಶಗಳಲ್ಲಿ ಜೈನ ಮುನಿಗಳು ಧ್ಯಾನಮಗ್ನರಾಗುತ್ತಿದ್ದರಂತೆ.

ಈ ಶಾಸನಗಳ ಇರುವಿಕೆಯ ಬಗ್ಗೆ 1930ರ ತನಕ ಜಗತ್ತಿಗೆ ತಿಳಿದಿರಲಿಲ್ಲ. ಗವಿಮಠದ ಸ್ವಾಮಿಜಿಯೊಬ್ಬರು 1931ರಲ್ಲಿ ಬಂಡೆಯ ಮೇಲಿನ ಅಕ್ಷರಗಳನ್ನು ಗಮನಿಸಿ ಅದು ತಮಿಳು ಲಿಪಿಯಿರಬಹುದೆಂದು ಊಹಿಸಿ ಆ ವಿಷಯವನ್ನು ಬಿ.ಎನ್. ಶಾಸ್ತ್ರಿ ಎಂಬುವವರಿಗೆ ತಿಳಿಸಿದರು. ಶಾಸ್ತ್ರಿಯವರು ಅಂದಿನ ಹೈದರಾಬಾದ್ ನಿಜಾಮ್ ಸರ್ಕಾರಕ್ಕೆ ಮಾಹಿತಿಯನ್ನು ರವಾನಿಸಿದರು. ನಿಜಾಮ್ ಸರ್ಕಾರದ ಸಹಾಯಕ ನಿರ್ದೆಶಕ ಸೈಯದ್ ಯೂಸೂಫ್ ಕೊಪ್ಪಳಕ್ಕೆ ಬಂದು ಪರಿಶೀಲಿಸಿ ಅದು ಆಶೋಕ ಶಾಸನ ಎಂದು ಷರಾ ಬರೆದರು. ನಂತರ ನಿರ್ದೆಶಕ ಯಝ್ದಾನಿ ಶಾಸನವನ್ನು ಮರುಪರಿಶೀಲಿಸಿ ಅದು ಸಾಮ್ರಾಟ್ ಆಶೋಕ ಕೆತ್ತಿದ ಶಾಸನ ಎಂದು ಮುದ್ರಯೊತ್ತಿದರು. ಆರ್.ಎಲ್.ಟರ್ನರ್‌ ಅವರು ಶಾಸನವನ್ನು ಭಾಷಾಂತರಿಸಿ 1931ರಲ್ಲಿ ಪ್ರಕಟಿಸಿದರು.

ಏನು ಮಾಡಬಹುದು?

ಕೊಪ್ಪಳ ಆಧ್ಯಾತ್ಮಿಕ ಪ್ರವಾಸಿ ತಾಣ. ಇಲ್ಲಿನ ಗವಿಮಠದ ಗವಿಸಿದ್ದೇಶ್ವರ ಜಾತ್ರೆ ದೇಶ ವಿದೇಶಗಳಲ್ಲಿಯೂ ಪ್ರಸಿದ್ಧವಾದದ್ದು. 15 ದಿನಗಳ ಕಾಲ ಜಾತ್ರೆ ನಡೆಯುತ್ತದೆ.‌ ಈ ತಾಣವನ್ನು ಅಭಿವೃದ್ಧಿಪಡಿಸಿದರೆ, ಜಾತ್ರೆ ವೇಳೆಯಲ್ಲಿ ಇತಿಹಾಸ ಪ್ರವಾಸ/ ಚಾರಣ ಹಮ್ಮಿಕೊಳ್ಳಬಹುದು. ಸ್ಥಳೀಯರಿಗೆ ಆದಾಯ ಮೂಲವೂ ಆಗುತ್ತದೆ. ಜತೆಗೆ ಕೊಪ್ಪಳ ಕೋಟೆ, ಇಂದ್ರಕೀಲ ಪರ್ವತದ ಇತಿಹಾಸ ದರ್ಶನ ಮಾಡಿಸಬಹುದು. ಅಂದಹಾಗೆಗವಿಮಠದ ಗವಿಸಿದ್ದೇಶ್ವರ ಸ್ವಾಮಿಯ ಬಾಲ್ಯಜೀವನದ ಕಥೆ ಆರಂಭವಾಗುವುದೇ ಇಂದ್ರಕೀಲ ಪರ್ವತದಿಂದ. (ಮಳೆಮಲ್ಲೇಶ್ವರ ಗುಡ್ಡ). ಶಿಕ್ಷಣ ಸಂಸ್ಥೆಗಳು, ಜಿಲ್ಲಾಡಳಿತ ಸೇರಿಕೊಂಡು ಸಂರಕ್ಷಣಾ ಕ್ರಮ ಕೈಗೊಳ್ಳಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT