ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆದರ್ಶವೀ ಸ್ವಚ್ಛತಾ ಪಾಠ

Last Updated 23 ಫೆಬ್ರುವರಿ 2015, 19:30 IST
ಅಕ್ಷರ ಗಾತ್ರ

ಗಾಂಧೀ ಜಯಂತಿ ದಿನ ದೇಶದೆಲ್ಲೆಡೆ ಸ್ವಚ್ಛತಾ ಅಭಿಯಾನ ನಡೆಯುವುದು ಸಹಜ. ಆದರೆ ಕರ್ನಾಟಕದ ಬಾರ್ಡೋಲಿ ಎನಿಸಿದ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾದಲ್ಲಿ ಮಾತ್ರ ಈ ಅಭಿಯಾನ ನಿತ್ಯ ನಿರಂತರ. ಸ್ವಚ್ಛತೆಯ ಬಗೆಗಿನ ಸಮಾನ ಮನಸ್ಕರ ತಂಡ ‘ಸ್ವಚ್ಛ ಸುಂದರ ಅಂಕೋಲಾ ನಮ್ಮ ಕನಸು’ ಎಂಬ ಧ್ಯೇಯದೊಂದಿಗೆ ಊರಿಗೇ ಸ್ವಚ್ಛತಾ ಪಾಠ ಹೇಳಿಕೊಡುತ್ತಿದೆ. ನಾಲ್ಕು ತಿಂಗಳಿಂದ ನಿತ್ಯವೂ ರಸ್ತೆಗಿಳಿದು ಶ್ರಮದಾನ ಮಾಡುತ್ತಿದೆ.

ಈ ಕಾಯಕಕ್ಕೆ ಮುನ್ನುಡಿಯಾದವರು ಕ್ಷೇತ್ರ ಶಿಕ್ಷಣಾಧಿಕಾರಿ ನಾಗರಾಜ ನಾಯಕ ಮತ್ತು ಪಟ್ಟಣ ಪಂಚಾಯಿತಿ ಅಧ್ಯಕ್ಷ ಭಾಸ್ಕರ ನಾರ್ವೇಕರ್. ಪರಿಸರ ಪ್ರಿಯ ಈ ರೂವಾರಿಗಳಿಗೆ ಪ್ರೇರಣೆಯಾದದ್ದು ಸ್ವಚ್ಛ ಭಾರತ ಅಭಿಯಾನ. ಊರು ಸ್ವಚ್ಛವಾಗಿ ಕಾಣಲು ಕಸಮುಕ್ತಗೊಂಡು ಎಲ್ಲರೂ ಆರೋಗ್ಯದಿಂದಿರಲು ಅಭಿಯಾನವನ್ನು ನಿರಂತರವಾಗಿ ನಡೆಸಬೇಕೆಂಬ ಬಯಕೆ ಇವರದಾಗಿತ್ತು.

ಈ ಬಯಕೆಗೆ ದಂಡಾಧಿಕಾರಿ ಲಾಂಜೇಕರ ಅವರೂ ಜೊತೆಯಾದರು. ಊರು ಸ್ವಚ್ಛಗೊಳಿಸುವುದೆಂದರೆ ಸಾಮಾನ್ಯ ಕೆಲಸವಂತೂ ಅಲ್ಲ. ಸ್ವಚ್ಛತಾ ಕಾರ್ಯ ಕೇವಲ ಆರಂಭಶೂರವಾಗದೆ ಶಿಸ್ತು, ಒಗ್ಗಟ್ಟಿನಿಂದ ನಡೆಸಬೇಕಾಗಿತ್ತು. ಆಗ ತಂಡ ರಚನೆ ಮಾಡುವ ತೀರ್ಮಾನಕ್ಕೆ ಬಂದರು. ವಿವಿಧ ಇಲಾಖೆಗಳ, ಸಂಘ ಸಂಸ್ಥೆಗಳ, ಶಿಕ್ಷಕರ, ಪಟ್ಟಣ ಪಂಚಾಯಿತಿ ಮತ್ತು ಊರ ಪ್ರಮುಖರ ಸಹಭಾಗಿತ್ವದೊಂದಿಗೆ ಸ್ವಯಂ ಸೇವಕರು ಸ್ವಚ್ಛತಾ ಜವಾಬ್ದಾರಿಯನ್ನು ವಹಿಸಿಕೊಂಡು ಕಾರ್ಯ ಶುರುಮಾಡಿದರು.

ಸ್ವಚ್ಛತಾ ದಿನಚರಿ
ಸ್ವಚ್ಛತಾ ತಂಡ ಪ್ರತಿದಿನ ಊರಿನ ಒಂದು ಪ್ರದೇಶವನ್ನು ಆಯ್ಕೆ ಮಾಡಿಕೊಂಡು ಅಲ್ಲಿ ಮುಂಜಾನೆ ಮೂರು ಗಂಟೆಗಳ ತನಕ ಸ್ವಚ್ಛತೆಗೆ ಇಳಿಯುತ್ತದೆ. ತಂಡದ ಜೊತೆ ಆ ಪ್ರದೇಶದ  ಕೆಲವು ಆಸಕ್ತರು ಕೈಜೋಡಿಸುತ್ತಾರೆ. ಕೆಲಸ ಮುಗಿದ ನಂತರ ತಮ್ಮ ತಮ್ಮ ವೃತ್ತಿಗಳಿಗೆ ತೆರಳುತ್ತಾರೆ. ಇದು ದಿನಚರಿ.

‘ಒಳ್ಳೆಯ ಕೆಲಸಕ್ಕೆ ನೂರೆಂಟು ವಿಘ್ನಗಳು’ ಎಂಬಂತೆ ಆರಂಭದಲ್ಲಿ ಈ ತಂಡಕ್ಕೂ ಆಯಿತು. ‘ಊರ ಸ್ವಚ್ಛತೆ ಏನಿದ್ದರೂ ನಗರಸಭೆಗಳಿಗೆ ಮೀಸಲು. ಅವರ ಕೆಲಸ ಇವರಿಗೇಕೆ?’ ಎನ್ನುವ ಮಾತುಗಳು ಕೆಲವರಿಂದ ಕೇಳಿ ಬಂತು. ಅದಕ್ಕೆ ಕಿವಿಗೊಡದ ತಂಡ ಸ್ವಚ್ಛತಾ ಕಾರ್ಯವನ್ನು ಗೌರವದಿಂದ ಕಾಣತೊಡಗಿತು. ದಿನಕಳೆದಂತೆ ಸಕಾರಾತ್ಮಕ ಸ್ಪಂದನೆ ದೊರೆಯಿತು. ಮಹಿಳೆಯರು ಮತ್ತು ವೃದ್ಧರೂ ಕೈಜೋಡಿಸಿದರು. ಗಲ್ಲಿ ಗಲ್ಲಿಗಳಲ್ಲಿನ ಬೀದಿ, ರಸ್ತೆ, ಚರಂಡಿ ಕಸ, ಕೊಳೆ ತೊಳೆದಂತೆ ಸ್ವಚ್ಛವಾಗಿ ಕಾಣತೊಡಗಿದವು.

ಸ್ವಚ್ಛತಾ ಪಾಠದ ಉದ್ದೇಶ
ಕಸ ಕಂಡರೆ, ಅದನ್ನು ಮುಟ್ಟುವುದೆಂದರೆ ಹಲವರಲ್ಲಿ ನಿಕೃಷ್ಟ ಭಾವನೆ. ಎಲ್ಲೆಡೆ ಶುಚಿಯಾಗಿ ಇರಬೇಕೆಂದು ಬಯಸಿದರೂ ಅದು ನಮ್ಮದಲ್ಲದ ಕೆಲಸ ಎಂದುಕೊಳ್ಳುವವರೇ ಹೆಚ್ಚು. ಕಸ ರಹಿತವಾಗಿ ನಮ್ಮ ಬೀದಿಗಳನ್ನು ಉಳಿಸುವುದಕ್ಕೆ ಮನಸ್ಸು ಮಾಡುತ್ತಿಲ್ಲ. ಆದರೆ ಈ ತಂಡ ಇದನ್ನು ಮಾಡಿ ತೋರಿಸುತ್ತಿದೆ.

ಲಾಭದ ಆಸೆ ಇಲ್ಲ
ಅಷ್ಟಕ್ಕೂ ಈ ತಂಡ ಯಾವುದೇ ಲಾಭಕ್ಕಾಗಿ, ಪ್ರಚಾರಕ್ಕಾಗಿ ಊರ ಸ್ವಚ್ಛತೆಗೆ ಇಳಿದದ್ದಲ್ಲ. ಜನರಲ್ಲಿ ಸ್ವಚ್ಛತೆಯ ಬಗ್ಗೆ ಅರಿವು ಮೂಡಿಸಿ ಅವರಲ್ಲೇ ಸ್ವಯಂ ಪ್ರೇರಣೆ ತರುವ ಯೋಜನೆ ಇದರದ್ದು. ಗಲ್ಲಿಗಲ್ಲಿಗೂ ಸ್ವಚ್ಛತಾ ಪ್ರಜ್ಞೆ ಜಾಗೃತವಾಗಬೇಕು, ಸ್ವಚ್ಛತೆ ಎನ್ನುವುದು ಪ್ರತಿಯೊಬ್ಬ ವ್ಯಕ್ತಿಯ ಹೃದಯಕ್ಕೂ ತಾಗಬೇಕು, ಆತ್ಮ ಸಾಕ್ಷಿಯಿಂದ ಪೊರಕೆ ಹಿಡಿದು ಅಂಗಳಕ್ಕೆ ಬೀದಿಗೆ ಬಂದರೆ ಕಸ ಸರಿದಾರಿಗೆ ಬಂದೇ ಬರುತ್ತದೆ ಎನ್ನುತ್ತದೆ ತಂಡ.

ಎಲ್ಲರ ಸಹಕಾರ ಶ್ರಮದಿಂದ ಸ್ವಚ್ಛತಾ ತಂಡ ಈಗ 150 ದಿನಗಳನ್ನು ಪೂರೈಸಿದೆ. ಆದರೆ ಇದು ದಿನಗಳ ಲೆಕ್ಕಕ್ಕೆ ಮೀಸಲು ಇರದೇ ಕೆಲಸ ನಿತ್ಯ ನಿರಂತರ ಆಗಿರಬೇಕು ಎನ್ನುವುದು ತಂಡದ ಸದಸ್ಯರ ಅಭಿಲಾಷೆ. ಸಮಾನ ಮನಸ್ಕ ಕ್ರೀಯಾಶೀಲ ವ್ಯಕ್ತಿಗಳು ಒಂದಾದರೆ ಅಸಾಧ್ಯ ಎನಿಸುವ ಕಾರ್ಯಗಳು ಸಾಧ್ಯವಾಗುತ್ತವೆ. ಮಾಡುವ ಕೆಲಸದಲ್ಲಿ ನಿಷ್ಠೆ ಮತ್ತು ಪ್ರಾಮಾಣಿಕತೆ ತೋರಿದರೆ ಯಶಸ್ಸು ಶತಃಸಿದ್ಧ ಎಂಬುದನ್ನು ಸಾಧಿಸಿ ತೋರಿಸಿದೆ ಈ ತಂಡ.

ಸಮಾಜದಲ್ಲಿ ಬದಲಾವಣೆ ಗಾಳಿ ಬೀಸಬೇಕು. ಎಲ್ಲರೂ ಸ್ವಚ್ಛತೆಯ ಗುಂಗಿನಲ್ಲಿ ಭಾಷಣ ಕೇಳುತ್ತಾ ಚಪ್ಪಾಳೆ ತಟ್ಟುವಾಗ ಇವರು ಮಾತ್ರ ಸ್ವತಃ ಕಾರ್ಯಕ್ಕಿಳಿದದ್ದು ನಿಜಕ್ಕೂ ಶ್ಲಾಘನೀಯ. ಪ್ರತಿಯೊಬ್ಬ ಸಾಮಾನ್ಯನೂ ಸ್ವಚ್ಛತೆಯ ಜವಾಬ್ದಾರಿಯನ್ನು ಅರಿತುಕೊಳ್ಳಬೇಕೆಂಬ ಸಂದೇಶವನ್ನು ನೀಡಿದ ಈ ತಂಡ ಆದರ್ಶ ಪ್ರಾಯ. ನಾಗರಾಜ ನಾಯಕ ಅವರ ಸಂಪರ್ಕಕ್ಕೆ: 9480695382.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT