ಬುಧವಾರ, 15 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಾ ಶ್ರೀಮಂತಿಕೆಯ ಸಿದ್ಧರಬೆಟ್ಟ

Last Updated 2 ಏಪ್ರಿಲ್ 2012, 19:30 IST
ಅಕ್ಷರ ಗಾತ್ರ

ತುಮಕೂರು ಜಿಲ್ಲೆ ಕೊರಟಗೆರೆಯಿಂದ ಸುಮಾರು 12 ಕಿ.ಮೀ ದೂರದಲ್ಲಿರುವ ಶ್ರೀ ಸಿದ್ಧೇಶ್ವರ ಸ್ವಾಮಿಯ ಸಿದ್ಧರಬೆಟ್ಟ  ಕ್ಷೇತ್ರ ಪ್ರಸಿದ್ಧಿ ಪಡೆದ ಪುಣ್ಯ ಸ್ಥಳ. ಜತೆಗೆ ಗಿಡ ಮೂಲಿಕೆಗಳ ಉಗ್ರಾಣ ಎಂದೇ ಖ್ಯಾತಿ ಪಡೆದಿದೆ. ಅಸಂಖ್ಯಾತ ಭಕ್ತರನ್ನು ಸೂಜಿಗಲ್ಲಿನಂತೆ ಆಕರ್ಷಿಸುತ್ತಿದೆ. ಈ ಕ್ಷೇತ್ರಕ್ಕೆ ನೂರಾರು ವರ್ಷಗಳ ಇತಿಹಾಸವಿದ್ದು, ಕಲಾ ಶ್ರೀಮಂತಿಕೆಗೆ ಹೆಸರಾಗಿದೆ.

ದೇವರ ದರ್ಶನಕ್ಕೆ ಕಾಲು ನಡಿಗೆಯಲ್ಲಿ ಸುಮಾರು 2900 ಅಡಿ ಎತ್ತರದ ಬೆಟ್ಟ ಹತ್ತಿ (ಸುಮಾರು 3 ಸಾವಿರ ಮೆಟ್ಟಿಲು) ಹೋಗಬೇಕು. ಹತ್ತಲು ಭಕ್ತಾದಿಗಳಿಗೆ ಸುಲಭವಾಗಲೆಂದು ಅಲ್ಲಲ್ಲಿ ಕಂಬಿ ಹಾಕಿದ್ದಾರೆ. ಬೆಟ್ಟದ ದಾರಿಯಲ್ಲಿ ಸಾಗುವಾಗ ಗಿಡ ಮೂಲಿಕೆಗಳು, ಪ್ರಶಾಂತವಾದ ವಿಶ್ರಾಂತಿ ಕುಟೀರಗಳು, ಕುರುಚಲು ಹುಲ್ಲು ಹಾಗೂ ಸುತ್ತಲಿನ  ಹಸಿರಿನ ಪರಿಸರದಲ್ಲಿ ಚಾಚಿಕೊಂಡಿರುವ ವಿಶಾಲ ಕಲ್ಲು ಬಂಡೆಗಳು ಕಂಡು ಬರುತ್ತವೆ.

ಬಹಳ ಹಿಂದೆ ಪ್ರಶಾಂತವಾದ ಈ ಬೆಟ್ಟದಲ್ಲಿ ಋಷಿ ಮುನಿಗಳು ನೆಲೆಸಿ ತಪಸ್ಸು ಮಾಡಿದ್ದರಂತೆ. ಅವರನ್ನು ಸುತ್ತಮುತ್ತಲಿನ ಹಳ್ಳಿಯ ಜನರು ಸಿದ್ಧರು ಎಂದು ಕರೆಯುತ್ತಿದ್ದರು. ಆದ್ದರಿಂದಾಗಿ ಈ ಕ್ಷೇತ್ರಕ್ಕೆ ಸಿದ್ಧರಬೆಟ್ಟ ಎಂಬ ಹೆಸರು ಬಂತು ಎಂಬ ಉಲ್ಲೆೀಖವಿದೆ. ದೇವರಾಯನ ದುರ್ಗದಿಂದ ಈ ಕ್ಷೇತ್ರ ಕೆಲವೇ ಕಿ.ಮೀ. ದೂರದಲ್ಲಿದೆ.

ಪ್ರಾಕೃತಿಕ ಸೌಂದರ್ಯವನ್ನು ಮೈಗೂಡಿಸಿಕೊಂಡಿರುವ ಶ್ರೀ ಕ್ಷೇತ್ರದಲ್ಲಿ ಉದ್ಭವ ಶ್ರೀ ಸಿದ್ಧೇಶ್ವರ ಸ್ವಾಮಿ ದೇವರ ದರ್ಶನ ಪಡೆಯಲು ಬೆಟ್ಟದ ತುತ್ತತುದಿಯ ಗುಹೆಯೊಳಗೆ ಪ್ರವೇಶ ಮಾಡಬೇಕು. ತಲೆ ಬಾಗಿಯೇ ಒಳಗೆ ನಡೆಯಬೇಕು. ಹೀಗೆ ದರ್ಶನ ಪಡೆಯುವುದೇ ಒಂದು ರೋಮಾಂಚನ. ವಿದ್ಯುತ್ ಸೌಲಭ್ಯ ಇರುವುದರಿಂದ ದೇವರ ಮೂರ್ತಿ ಚೆನ್ನಾಗಿ ಗೋಚರಿಸುತ್ತದೆ.

ಲಿಂಗದ ಪಕ್ಕದಲ್ಲೆೀ ಮಹಾಗಣಪತಿ, ನಂದಿ ಹಾಗೂ ನಾಗದೇವತೆಯ ವಿಗ್ರಹಗಳಿವೆ. ಇಲ್ಲಿನ ಪ್ರಮುಖ ಆಕರ್ಷಣೆಯೆಂದರೆ ಲಿಂಗದ ಮುಂದಿರುವ ಚಿಕ್ಕದಾದ ಕಲ್ಯಾಣಿ. ವರ್ಷಪೂರ್ತಿ ನೀರಿನಿಂದ ತುಂಬಿದ್ದು, ಎಷ್ಟೇ ಭಕ್ತಾದಿಗಳು ಬಂದು ಸ್ನಾನ ಮಾಡಿದರೂ ಬರಿದಾಗುವುದಿಲ್ಲ. ಇದು ಬಹು ವಿಸ್ಮಯ. ಈ ನೀರಿನಿಂದ ಜಳಕ ಮಾಡಿದರೆ ಚರ್ಮ ಕಾಯಿಲೆಗಳು ದೂರ ವಾಗುವವು ಎಂಬ ನಂಬಿಕೆಯಿದೆ.

ಕಲ್ಯಾಣಿಯ ಪಕ್ಕದಲ್ಲಿ ಮತ್ತೊಂದು ಸಣ್ಣ ಗುಹೆಯಿದೆ. ಅದನ್ನು ಹೊಕ್ಕರೆ ಹಿಂದೆ ಋಷಿ ಮುನಿಗಳು ತಪಸ್ಸು ಮಾಡುತ್ತಿದ್ದ ಪ್ರಶಾಂತ ಸ್ಥಳವನ್ನು ನೋಡಬಹುದು. ಬೆಟ್ಟದಲ್ಲಿ ಸಾಕಷ್ಟು ಔಷಧಿ ಗುಣವುಳ್ಳ ಸಸ್ಯ ಸಂಪತ್ತಿದೆ. ಆದ್ದರಿಂದ ಅನೇಕ ಸಂಶೋಧಕರು ಹಾಗೂ ವಿದ್ಯಾರ್ಥಿಗಳು ದೇಶ  ವಿದೇಶಗಳಿಂದ ಇಲ್ಲಿಗೆ ಬರುತ್ತಾರೆ ಎಂದು ಸ್ಥಳೀಯ ನಿವಾಸಿ ಶಿವರಾಜ್‌ಕುಮಾರ್ ಹೇಳುತ್ತಾರೆ.

ಬೆಟ್ಟದ ಕೆಳಗೆ ಒಂದು ಚಿಕ್ಕ ದೇವಸ್ಥಾನವಿದೆ. ಅಲ್ಲಿ ಸಿದ್ಧೇಶ್ವರ ಸ್ವಾಮಿಯ ಉತ್ಸವ ಮೂರ್ತಿಯಿದೆ. ವಯಸ್ಸಾದವರು ಹಾಗೂ ಬೆಟ್ಟ ಹತ್ತಲು ಆಗದವರು ಉತ್ಸವ ಮೂರ್ತಿಯ ದರ್ಶನ ಮಾಡಬಹುದು. ಶ್ರಾವಣ ಹಾಗೂ ಕಾರ್ತೀಕ ಮಾಸದಲ್ಲಿ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡಿ ದೇವರಿಗೆ ತಲೆ ಕೂದಲು ಅರ್ಪಿಸುತ್ತಾರೆ.

ಸೇವೆ, ಸೌಕರ್ಯ
ಇಲ್ಲಿ ನಡೆಯುವ ಪೂಜಾಕಾರ್ಯಗಳಿಗೆ ಶುಲ್ಕ ನಿಗದಿ ಮಾಡಿಲ್ಲ. ಭಕ್ತರು ತಮ್ಮ ಇಚ್ಛಾನುಸಾರ ಅಗತ್ಯ ಪೂಜೆಗಳನ್ನು ಮಾಡಿಸಬಹುದು. ನಿತ್ಯ ಬೆಳಿಗ್ಗೆ 7.30 ರಿಂದ ರಾತ್ರಿ 7 ರ ವರೆಗೆ ಉತ್ಸವ ಮೂರ್ತಿ ಹಾಗೂ ಬೆಟ್ಟದಲ್ಲಿರುವ ಉದ್ಭವ ಮೂರ್ತಿ ಮಂದಿರದ ಬಾಗಿಲು ತೆರೆದಿರುತ್ತದೆ. ಬೆಟ್ಟದ ಕೆಳಗಿನ ದೇವಸ್ಥಾನ ಪಕ್ಕದಲ್ಲೆೀ ಸಮುದಾಯ ಭವನವಿದೆ. ಇಲ್ಲಿ ಸರಳ ವಿವಾಹಗಳಿಗೂ ಅವಕಾಶವಿದೆ.

ಭಾನುವಾರ, ಸೋಮವಾರ ಮತ್ತು ಸರ್ಕಾರಿ ರಜಾ ದಿನಗಳಲ್ಲಿ ಇಲ್ಲಿಗೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು  ಬರುತ್ತಾರೆ. ಅವರಿಗೆ ಉಳಿದುಕೊಳ್ಳಲು ವಸತಿ ಗೃಹಗಳಿವೆ. ಬೆಂಗಳೂರು ಮತ್ತು ತುಮಕೂರು ಹೆದ್ದಾರಿಯ ದಾಬಸ್‌ಪೇಟೆಯಿಂದ ಶ್ರೀ ಸಿದ್ಧರಬೆಟ್ಟ  ಕ್ಷೇತ್ರಕ್ಕೆ 25 ಕಿ.ಮೀ. ದೂರ. ಬಸ್ ಸೌಕರ್ಯವಿದೆ. ಬೆಂಗಳೂರು-ಮಧುಗಿರಿ ಮಾರ್ಗದಲ್ಲಿಯೂ ಈ ಕ್ಷೇತ್ರ ತಲುಪಬಹುದು. ಮಾಹಿತಿಗೆ 94499 39775, 87624 69260.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT