ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲೆ ಮೈದಳೆದ ಚತುರ್ಮುಖ ಬಸದಿ

Last Updated 3 ಫೆಬ್ರುವರಿ 2014, 19:30 IST
ಅಕ್ಷರ ಗಾತ್ರ

ಥಳಕು- ಬಳುಕಿನೊಂದಿಗೆ ಉತ್ತರ ಕನ್ನಡ ಜಿಲ್ಲೆಯ ಗೇರುಸೊಪ್ಪದ ಬಳಿ ಹರಿಯುವ ಶರಾವತಿಯ ಪಕ್ಕದಲ್ಲಿಯೇ ಇತಿಹಾಸದ ವೈಭವ ಸಾರುವ ಕುರುಹು ಒಂದಿದೆ. ಅದೇ ನಗರೆಯ ಜೈನ ಬಸದಿ.

ಇದು ಸಾಮಾನ್ಯ ಬಸದಿಯಲ್ಲ. ಬದಲಿಗೆ ಪ್ರಾಚೀನ ಕರ್ನಾಟಕದ ಶಿಲ್ಪಕಲೆಯಲ್ಲಿಯೇ ಅತ್ಯಂತ ವಿಭಿನ್ನ ಮತ್ತು ವಿಶಿಷ್ಟವಾದ ಶಿಲ್ಪಕಲೆಯನ್ನು ಹೊಂದಿರುವ ಖ್ಯಾತಿ ಇದರದ್ದು. ನಾಲ್ಕು ಮುಖಗಳನ್ನು ಹೊಂದಿರುವ ಈ ‘ಚತುರ್ಮುಖ ಬಸದಿ’ ನಾಲ್ಕು ನಿಟ್ಟಿನಿಂದ ನೋಡಿದರೂ ಒಂದೇ ರೀತಿಯಲ್ಲಿ ಕಾಣಿಸುವುದು ಕುತೂಹಕಲರ. ಬೃಹದಾಕಾರದ ಸುಂದರ ಮೂರ್ತಿಗಳು, ಹೆಬ್ಬಾಗಿಲುಗಳು, ಗರ್ಭಗುಡಿ, ಹೊರಭಾಗದತ್ತ ದೃಷ್ಟಿ ಬೀರಿದರೆ ನಿಬ್ಬೆರಗಾಗಬೇಕು.

ಪಕ್ಕದಲ್ಲಿಯೇ ಪಾರ್ಶ್ವನಾಥ ಬಸದಿ, ಪಾರ್ಶ್ವನಾಥ ದೇಗುಲ, ಮಹಾವೀರ ದೇಗುಲ ಹಾಗೂ ನೇಮಿನಾಥ ದೇವಾಲಯಗಳೂ ಇವೆ. ಪಾರ್ಶ್ವನಾಥ ಮಂದಿರದಲ್ಲಿರುವ ಶ್ರೀ ಜ್ವಾಲಾಮಾಲಿನಿ ವಿಗ್ರಹಕ್ಕೆ ಈಗಲೂ ನಿತ್ಯಪೂಜೆ ಜರುಗುತ್ತದೆ. ಇವುಗಳೊಂದಿಗೆ, ಇಲ್ಲಿಗೆ ಬಂದ ಒಂಬತ್ತು ಜೈನ ತೀರ್ಥಂಕರರ ಸುಂದರ ವಿಗ್ರಹಗಳನ್ನು ಒಟ್ಟಿಗೆ ಜೋಡಿಸಿಡಲಾಗಿದೆ. ಅಲ್ಲಲ್ಲಿ ಬಿದ್ದಿರುವ ಶಿಲಾಶಾಸನಗಳು, ಸ್ತಂಭಗಳು, ಕಮಾನುಗಳನ್ನು ಯಥಾಸ್ಥಿತಿಯಲ್ಲಿ ಸಂರಕ್ಷಿಸಿಡಲಾಗಿದೆ. ಬಸದಿಯ ಸುತ್ತಲೂ ದಟ್ಟವಾದ ಕಾಡಿದ್ದು, ಕಾಡಿನ ಮಧ್ಯದಲ್ಲಿ ಕಲ್ಲಿನ ಕಟ್ಟೆಗಳು ಹಾಗೂ ಬಾವಿಯ ಕುರುಹುಗಳಿವೆ. ಸುಮಾರು ೩ಸಾವಿರ ಬಾವಿಗಳು ಇಲ್ಲಿ ಇದ್ದವು ಎನ್ನುತ್ತಾರೆ ಸ್ಥಳೀಯರು.

ಕಾಡಿನ ಮರಗಳ ತುಂಬೆಲ್ಲ ಕರಿಮೆಣಸಿನ ಬಳ್ಳಿಗಳು ಹರಡಿವೆ. ಅಪರೂಪದ ಸಸ್ಯ ಮತ್ತು ಪ್ರಾಣಿ ಪ್ರಭೇದಗಳು ಇಲ್ಲಿನ ಕಾಡಿನಲ್ಲಿವೆ. ಬಸದಿಯ ಎರಡೂ ದಿಕ್ಕಿನಲ್ಲೂ ಶರಾವತಿ ನದಿ ಹರಿಯುತ್ತಿದ್ದು, ತನ್ಮೂಲಕ ಇಲ್ಲಿನ ಸೌಂದರ್ಯವನ್ನು ದ್ವಿಗುಣಗೊಳಿಸಿವೆ. ಜೈನ ಬಸದಿಯ ಪಕ್ಕದಲ್ಲಿ ಹರಿಯುವ ಶರಾವತಿ ನದಿಗೆ ತೂಗು ಸೇತುವೆಯನ್ನು ಕಟ್ಟಿದ್ದು ಇದನ್ನು ದಾಟುವುದು ವಿಶಿಷ್ಟ ಅನುಭವ ನೀಡುತ್ತದೆ. 

ಐತಿಹಾಸಿಕ ಹಿನ್ನೆಲೆ
ಸರಿಸುಮಾರು ೧೩ರಿಂದ ೧೬ನೇ ಶತಮಾನದವರೆಗೆ ಜೈನರ ಪ್ರಮುಖ ಕೇಂದ್ರವೆನ್ನಿಸಿದ್ದ ನಗರೆಯ ಅಂದಿನ ಹೆಸರು ಕ್ಷೇಮಾಪುರ ತೀರ್ಥ. ಆ ಕಾಲದಲ್ಲಿ ನಗರೆಯು ಸಾಳ್ವ ಅರಸರ ರಾಜಧಾನಿಯಾಗಿತ್ತು. ಸ್ವತಃ ಜೈನಧರ್ಮದ ಅನುಯಾಯಿಗಳಾದ ಸಾಳ್ವರು ಗೇರುಸೊಪ್ಪೆಯ ತುಂಬೆಲ್ಲ ಹಲವಾರು ಬಸದಿಗಳನ್ನು ಹಾಗೂ ದೇವಾಲಯಗಳನ್ನು ನಿರ್ಮಿಸಿದ್ದರೆಂಬ ಐತಿಹ್ಯವಿದೆ. ಅದರಲ್ಲಿಯೂ ಕಾಳುಮೆಣಸಿನ ‘ರಾಣಿ’ ಎಂದೇ ಪ್ರಖ್ಯಾತವಾಗಿದ್ದ ರಾಣಿ ಚೆನ್ನಭೈರಾದೇವಿಯ ಆಳ್ವಿಕೆಯ ೪೮ ವರ್ಷಗಳನ್ನು (ಕ್ರಿ.ಶ. ೧೫೫೪ರಿಂದ ೧೬೦೨ರವರೆಗೆ) ಗೇರುಸೊಪ್ಪೆಯ ಸ್ವರ್ಣಯುಗವೆಂದೇ ಬಣ್ಣಿಸಲಾಗುತ್ತದೆ. ಹಲವು ಚಾರಿತ್ರಿಕ ಸಂಶೋಧನೆಗಳ ಪ್ರಕಾರ ಗೇರುಸೊಪ್ಪೆಯ ೭೦೦ ಎಕರೆಗಳಷ್ಟು ವಿಸ್ತೀರ್ಣದ ಜಾಗದಲ್ಲಿ  ೧೦೮ ಜೈನ ದೇಗುಲಗಳನ್ನು ನಿರ್ಮಿಸಲಾಗಿತ್ತಂತೆ. ಹಾಗಾಗಿ ಇತಿಹಾಸ ತಜ್ಞರು ಈ ಸ್ಥಳವನ್ನು ಜೈನರ ಹರಪ್ಪಾ ಎಂದೇ ಕರೆಯುತ್ತಾರೆ. ಆದರೆ 108ರ ಪೈಕಿ ಈಗ ಐದು ದೇಗುಲಗಳನ್ನು ಮಾತ್ರ ಕಾಣಬಹುದಾಗಿದೆ.

ಹೀಗೆ ಬನ್ನಿ: ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದಿಂದ ಇಡಗುಂಜಿ, ಮಣ್ಣಿಗೆಯ ಮಾರ್ಗವಾಗಿ ೪೨ ಕಿ.ಮೀ. ಸಾಗಿದರೆ ಮಾಗೋಡು  ಸಿಗುತ್ತದೆ. ಅಲ್ಲಿಂದ ಪೀಟನ್ಸ್ ಪ್ಲಾಟ್ ಎಂಬ ಪುರಾತನ ಸಾಗವಾನಿ ತೋಪನ್ನು ದಾಟಿ ತೂಗುಸೇತುವೆಯ ಮೂಲಕ ಶರಾವತಿ ನದಿಯನ್ನು ದಾಟಬೇಕು. ಹೊನ್ನಾವರದ ಬಂದರಿನಿಂದ ಯಾಂತ್ರೀಕೃತ ಬೋಟಿನಲ್ಲಿ ಸುಮಾರು ೩೦ ಕಿ.ಮೀ. ಶರಾವತಿ ನದಿಯಲ್ಲೇ ಕ್ರಮಿಸಿ ನಗರೆ ತಲುಪಬಹುದು.    ಐತಿಹಾಸಿಕವಾಗಿ ಹಾಗೂ ಪ್ರಾಕೃತಿಕವಾಗಿ ಮಹತ್ವಪೂರ್ಣವೆನ್ನಿಸಿರುವ ಈ ಸ್ಥಳವು ರಾಷ್ಟ್ರೀಯ ಸಂರಕ್ಷಿತ ಸ್ಮಾರಕಗಳಲ್ಲೊಂದೆನ್ನಿಸಿರುವದು ಕನ್ನಡಿಗರ ಹೆಮ್ಮೆಯಲ್ಲವೇ?
           
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT