ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲ್ಲುಗಳ ನಡುವೆ ನೀರ್ನಾದ

Last Updated 2 ಜೂನ್ 2014, 19:30 IST
ಅಕ್ಷರ ಗಾತ್ರ

ಬಿಸಿಲ ಝಳಕ್ಕೆ ಬೆಂದು ಬಸವಳಿದಿದ್ದ ಬೆಳಗಾವಿ ಜಿಲ್ಲೆಯ ಸವದತ್ತಿಯ ಇಳೆಗೆ ಎರಡು ವಾರಗಳ ಹಿಂದೆ ವರುಣ ಕೃಪೆ ತೋರಿದ್ದೇ ತಡ... ಮೂಲೆಯೊಂದರಲ್ಲಿ ಸದ್ದುಗದ್ದಲವಿಲ್ಲದೇ ಅಡಗಿಕುಳಿತಿದಿದ್ದ ಹೆಸರೇ ಇಲ್ಲದ ಜಲಪಾತವೊಂದು ನೀರಿನಿಂದ ಮಿಂದು ನೋಡುಗರನ್ನು ಪುಳಕಗೊಳಿಸುತ್ತಿದೆ.

ತನ್ನ ಒಡಲಲ್ಲಿ ಕೆನೆಭರಿತ ಹಾಲಿನಂತೆ ನೊರೆಯನ್ನು ಉಕ್ಕಿಸುತ್ತ ದಾರಿಹೋಕರೆಲ್ಲ ಒಂದು ಕ್ಷಣ ತನ್ನತ್ತ ನೋಟ ಹರಿಸುವಂತೆ ಮಾಡುತ್ತಿದೆ. ಕೊರೆದಿಟ್ಟ ಬೆಟ್ಟದ ಸಾಲು, ವೈಶಿಷ್ಟ್ಯಪೂರ್ಣವಾದ ತಿರುವೊಂದರಲ್ಲಿ ಕಾಣಸಿಗುವ ಈ ಜಲಧಾರೆಯ ಸೊಬಗು  ಯಲ್ಲಮ್ಮನಗುಡ್ಡಕ್ಕೆ ಹೋಗುವ ದಾರಿಯಲ್ಲಿ ಸಿಗುತ್ತದೆ.

ಜೋಗುಳಬಾವಿಯಿಂದ ಅರ್ಧ ಕಿ.ಮೀ. ಅಂತರದಲ್ಲಿ ವಾಹನದಲ್ಲಿ ಸುಲಭವಾಗಿ ತಲುಪಬಹುದಾದ ಅಥವಾ ಕಾಲ್ನಡಿಗೆಯಲ್ಲಿ ಬರಬಹುದಾದ ಜಲಧಾರೆ ಇದು. ಸವದತ್ತಿಯಿಂದ 2 ಕಿ.ಮೀ.ಅಂತರದಲ್ಲಿ ರಮಣೀಯ ಪರಿಸರದಲ್ಲಿ ಇರುವ ಈ ಅನಾಮಧೇಯ ಜಲಪಾತ ಮಳೆಗಾಲದಲ್ಲಿ ಮಾತ್ರ ತನ್ನ ಇರುವಿಕೆಯನ್ನು ಸಾಬೀತುಪಡಿಸುತ್ತದೆ.

ಆದರೆ ಈ ಬಾರಿ ವಾಯುಭಾರ ಕುಸಿತದಿಂದ ಉಂಟಾದ ಮಳೆಯಿಂದಾಗಿ ಬೇಸಿಗೆಯಲ್ಲೂ ನೋಡುಗರ ಕಣ್ಣು ತಂಪು ಮಾಡುತ್ತಿದೆ. ಅಕ್ಕಪಕ್ಕದ ಗದ್ದೆಗಳಲ್ಲೂ ತನ್ನ ಒನಪು ವೈಯಾರದಿಂದ ಹರಿಯುತ್ತಿದೆ. ದಾರಿಹೋಕರನೇಕರು ಇದರ ದಡದಲ್ಲಿ ತಾವು ಸ್ನಾನ ಮಾಡುವುದಲ್ಲದೇ, ವಾಹನಗಳಿಗೂ ಸ್ನಾನ ಮಾಡಿಸುತ್ತಿದ್ದಾರೆ.

ಜಲಧಾರೆಯ ಸೊಬಗನ್ನು ಕ್ಯಾಮೆರಾದಲ್ಲಿ ಸೆರೆಹಿಡಿಯಲೆಂದು ಹೊರಟೆ. ಆಗ ತಾನೆ ಮಳೆ ಸುರಿದಿದ್ದರಿಂದಾಗಿ ಬೆಟ್ಟದ ಕಲ್ಲುಗಳಲ್ಲಿ ಅಲ್ಲಲ್ಲಿ ನೀರು ಜಿನುಗುತ್ತಿತ್ತು. ಹಾಗೆಯೇ ಸಾವಕಾಶವಾಗಿ ಬೆಟ್ಟ ಏರತೊಡಗಿದೆ. ಒಂದು ಕ್ಷಣ ಎಲ್ಲಿ ಬಿದ್ದುಬಿಡುವೆನೋ ಎಂಬ ಭಯ ಕಾಡಿದರೂ ಚಾರಣಿಗರಂತೆ ಹತ್ತುವ ಹರಸಾಹಸ ಮಾಡಿದೆ.

ವಾಹ್! ಎಂಥಾ ಸೊಬಗು ಅದು. ನಾಲ್ಕಾರು ರೀತಿಯ ತಿರುವುಗಳಲ್ಲಿ ರಭಸದಿಂದ ಹರಿಯುವ ಜಲಧಾರೆ ವಿಸ್ಮಯವನ್ನುಂಟು ಮಾಡುವಂತಿತ್ತು. ಮಲೆನಾಡಿನಲ್ಲಾದರೆ ಇಂಥ ಜಲಧಾರೆಗಳು ಅನೇಕ ಸಿಗುತ್ತವೆ, ಬಯಲುಸೀಮೆಯ ಜನರಿಗೆ ಅಲ್ಲೊಂದು ಇಲ್ಲೊಂದು ಕಾಣಸಿಗುತ್ತವೆ. ಅದೂ ಮಳೆಯಾದಾಗ ಮಾತ್ರ.

ಇಂಥ ಅವಕಾಶ ಸಿಕ್ಕಾಗ ಕಷ್ಟವಾದರೂ ಸರಿ ಅದರ ಸೊಬಗು ಸವಿಯುವುದೇ ಚೆಂದ. ಯಲ್ಲಮ್ಮನಗುಡ್ಡಕ್ಕೆ ಸೇರಿರುವ ಸಂಗಪ್ಪನಕೊಳ್ಳದ ಮೂಲಕ ಹರಿದು ಜೋಗುಳಬಾವಿ ಹತ್ತಿರದ ತಿರುವಿನಲ್ಲಿ ಈ ಪ್ರಪಾತ ಸೃಷ್ಟಿಯಾಗಿದೆ. ಈ ಬೆಟ್ಟದಲ್ಲಿ ಸಾಮಾನ್ಯವಾಗಿ ಕುರಿಗಾಹಿಗಳು, ದನಕಾಯುವವರನ್ನು ಹೊರತುಪಡಿಸಿದರೆ ಬೇರಾರೂ ಇಲ್ಲಿ ಸಂಚರಿಸುವುದು ವಿರಳ.

ಚಾರಣ ಹವ್ಯಾಸವುಳ್ಳವರು ಇಲ್ಲಿ ಬಂದರೆ ಇಡೀ ಬೆಟ್ಟದ ಹಾಗೂ ಜಲಧಾರೆಯ ಸೊಬಗನ್ನು ಅನುಭವಿಸಬಹುದು.
ಯಲ್ಲಮ್ಮನಗುಡ್ಡಕ್ಕೆ ಬಂದು ಈ ಜಲಧಾರೆಯ ಸೊಬಗನ್ನು ಸವಿಯಿರಿ. ಸ್ವಂತ ವಾಹನದಲ್ಲಿ ಬಂದರೆ ನೇರವಾಗಿ ಜಲಧಾರೆ ಸಂದರ್ಶನ ಮಾಡಬಲ್ಲಿರಿ. ಬಸ್ ಪ್ರಯಾಣವಾದಲ್ಲಿ ಜೋಗುಳಬಾವಿಗೆ ಇಳಿದು ಯಲ್ಲಮ್ಮನಗುಡ್ಡದತ್ತ ಕಾಲ್ನಡಿಗೆಯಲ್ಲಿ ಬರಬೇಕು.

ಹ್ಞಾಂ... ಇಲ್ಲಿ ಬರುವಾಗ ತಿನ್ನಲು ತಿಂಡಿತಿನಿಸು ತನ್ನಿ. ಏಕೆಂದರೆ ಇಲ್ಲಿ ಹತ್ತಿರದಲ್ಲಿ ಎಲ್ಲೂ ಅಂಗಡಿ, ಹೋಟೆಲ್‌ಗಳಿಲ್ಲ.
ಹಾಗೆಯೇ ಒಂದು ಮಾತು. ರಸ್ತೆಬದಿ ಬೆಟ್ಟದಲ್ಲಿ ಕೊರೆದಿಟ್ಟಂತೆ ಉಕ್ಕಿಬರುವ ಈ ಜಲಧಾರೆ ಪ್ರಕೃತಿ ವೈಭವದ ನಡುವೆ ಕಚಗುಳಿ ಇಡುವ ಮಳೆರಾಯನ ಆರ್ಭಟಕ್ಕೆ ಮಾತ್ರ ಮೈಯೊಡ್ಡಿ ಉಕ್ಕುತ್ತದೆ. ಮಳೆ ಕಡಿಮೆಯಾದಂತೆ ಇದರ ಪ್ರವಾಹ ತಗ್ಗುತ್ತ ಬರೀ ಮೈ ಗೋಚರಿಸುವುದು. ಆದ್ದರಿಂದ ಮಳೆಗಾಲದಲ್ಲಿ ಬಂದು ಇದರ ಸವಿ ಸವಿಯಬಹುದು.                                                                                
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT