ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಷ್ಠಶಿಲ್ಪಗಳ ಅದ್ಭುತ ನೋಟ

Last Updated 20 ಮೇ 2013, 19:59 IST
ಅಕ್ಷರ ಗಾತ್ರ

ಇದೊಂದು ವಿಭಿನ್ನ ಬಗೆ ರಥ. ಇದರಲ್ಲಿ ಯಾವುದೇ ದೇವತೆಗಳ ಕಾಷ್ಠಶಿಲ್ಪಗಳಿರದೇ ಅಲ್ಲಮಪ್ರಭು, ಬಸವೇಶ್ವರ, ಅಕ್ಕಮಹಾದೇವಿ, ಹಡಪದ ಅಪ್ಪಣ್ಣ, ಮಡಿವಾಳ ಮಾಚಿದೇವ, ಸತ್ಯಕ್ಕ, ಆದಿಯಾಗಿ ಶಿವಶರಣ ಶರಣೆಯರ ಕಾಷ್ಠಶಿಲ್ಪಗಳೇ ತುಂಬಿವೆ. ಸುಮಾರು 325 ವರ್ಷಗಳ ಇತಿಹಾಸ ಹೊಂದಿರುವ ಈ ಅಪರೂಪದ ಬ್ರಹ್ಮರಥೋತ್ಸವದ ತೇರು ನೀಡಬೇಕೆಂದರೆ ದಾವಣಗೆರೆಯಿಂದ ಚಿತ್ರದುರ್ಗಕ್ಕೆ ಹೋಗುವ ಮಾರ್ಗದಲ್ಲಿರುವ ಹೆಬ್ಬಾಳು ಗ್ರಾಮದ ಸುಕ್ಷೇತ್ರ ಶ್ರೀ ರುದ್ರೇಶ್ವರ ವಿರಕ್ತ ಮಠಕ್ಕೆ ಬರಬೇಕು.

ರಥದ ಪೂರ್ಣ ಎತ್ತರ ಸುಮಾರು 39 ಅಡಿ. ಆರು ಅಡಿಗಳೆತ್ತರದ ನಾಲ್ಕು ಗಾಲಿಗಳನ್ನು ಹೊಂದಿರುವ ಸುಮಾರು 18 ಅಡಿ ಎತ್ತರದ 15 ಅಡಿ ಅಗಲ, ಅರವತ್ತು ಅಡಿ ಸುತ್ತಳತೆಯ ತೇರುಗಡ್ಡೆ ಪೂರ್ವಭಾಗದಲ್ಲಿ ವಿಭಿನ್ನ ಶಿವಶರಣದ ಕೆತ್ತನೆಗಳಿವೆ. ಇವರ ಜೊತೆಗೆ ನೀಲಾಂಬಿಕೆ, ಸಿದ್ದರಾಮೇಶ್ವರ, ಷಣ್ಮುಖ ಸ್ವಾಮಿ, ದಕ್ಷಿಣದಲ್ಲಿ ಚನ್ನಬಸವಣ್ಣ, ರುದ್ರೇಶ್ವರರು, ಕಾಡುಸಿದ್ದೇಶ್ವರ, ಮಲ್ಲಿಕಾರ್ಜುನ ಮುರುಘರಾಜೇಂದ್ರ, ಜಯದೇವ ಜಗದ್ಗುರುಗಳು, ಅಥಣಿ ಶಿವಯೋಗಿಗಳ ಕಾಷ್ಠಶಿಲ್ಪಗಳು ರಚಿಸಲಾಗಿದೆ.

ತೇರುಗಡ್ಡೆಯ ಮೇಲ್ಭಾಗದ ಪೂರ್ವದಲ್ಲಿ ಅನುಭವ ಮಂಟಪದ ಶಿಲ್ಪವಿದ್ದು ಅದರಲ್ಲಿ ಅಲ್ಲಮಪ್ರಭುಗಳು ಮಂಟಪಾರೂಢರಾಗಿದ್ದಾರೆ. ರಥದ ಉತ್ತರ ಮೇಲ್ಭಾಗದಲ್ಲಿ ಬಿಜ್ಜಳನ ಮಹಾಮಂತ್ರಿ ಬಸವೇಶ್ವರರ ಬಳಿ ಹಡಪದ ಅಪ್ಪಣ್ಣನವರು ಅಲ್ಲಮಪ್ರಭುದೇವರ ಆಗಮನದ ಸಂದೇಶ ಪತ್ರ ವಾಚನ ಮಾಡುತ್ತಿರುವ ಶಿಲ್ಪವಿದೆ. ಒಂದೆಡೆ ಕಾಲಜ್ಞಾನಿ ರುದ್ರಮುನಿಸ್ವಾಮಿಗಳು ಕಾಲಜ್ಞಾನ ಹೇಳುತ್ತಿರುವ ಶಿಲ್ಪವಿದ್ದರೆ, ಮತ್ತೊಂದೆಡೆ ಬಸವಣ್ಣನವರು ಕರಣೀಕರಾಗಿ ಕಾರ್ಯಮಗ್ನರಾಗಿರುವಾಗ ಕಳ್ಳನೊಬ್ಬ ದರೋಡೆಗೆ ಪ್ರಯತ್ನಿಸುತ್ತಿರುವ ಸನ್ನಿವೇಶದ ಶಿಲ್ಪವಿದೆ. 6 ಅಡಿ ಎತ್ತರದ ಸುಂದರ ಮಂಟಪ ಭಾಗ ಹೊಂದಿರುವ 18 ಅಡಿ ಎತ್ತರದ ರಥ ಗಡ್ಡೆಯು ತೇಗ, ಹೊನ್ನೆ ಮುಂತಾದ ಮರಗಳಿಂದ ನಿರ್ಮಿಸಲಾಗಿದ್ದು, ಅತ್ಯಾಕರ್ಷಕವಾಗಿದೆ.

ಶಿಥಿಲಾವಸ್ಥೆಯಲ್ಲಿದ್ದ ಹಳೇ ರಥದ ಬದಲಾಗಿ ಮಹಾಂತರುದ್ರೇಶ್ವರ ಮಹಾಸ್ವಾಮಿಗಳು ನೂತನ ರಥ ನಿರ್ಮಿಸಿದ್ದಾರೆ. ಸುಮಾರು 20 ಲಕ್ಷ ರೂಪಾಯಿ ವೆಚ್ಚದಲ್ಲಿ ಹರಪನಹಳ್ಳಿಯ ಶ್ರೀ ಕಾಳಿಕಾಂಬಾ ರಥ ಶಿಲ್ಪಿಗಳಾದ ಚನ್ನಕೇಶವ ಬಡಿಗೇರ್ ಇದನ್ನು ರಚಿಸಿದ್ದಾರೆ. ಕಳೆದ ಸೋಮವಾರ (ಮೇ 13) ಅಕ್ಷಯ ತೃತೀಯ ಹಾಗೂ ಬಸವೇಶ್ವರ ಜಯಂತಿಯಂದು ಮಹಾರಥೋತ್ಸವ ಜರುಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT