ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇಳುವವರಿಲ್ಲದ ಬೀಸುವ ಕಲ್ಲುಗಳು

Last Updated 1 ಜೂನ್ 2015, 19:30 IST
ಅಕ್ಷರ ಗಾತ್ರ

ನೆತ್ತಿಯಲಿ ಉಂಬುವುದು: ಸುತ್ತಲೂ ಸುರಿಸುವುದು ಎತ್ತಿದರೆ ಎರಡು ಹೋಳಹುದು: ಉತ್ತಮರು ಇದಕುತ್ತರವ ಹೇಳಿ ಸರ್ವಜ್ಞ...

ತನ್ನ ನೆತ್ತಿಯಲಿ ತಿನ್ನುವುದು, ತಿಂದುದನ್ನು ಸುತ್ತಲೂ ಹೊರಹಾಕುವುದು, ಇದನ್ನು ಮೇಲಕ್ಕೆತ್ತಿದರೆ ಎರಡು ಭಾಗವಾಗುವುದು. ಇದು ಏನು...?

ಇದು ಬೀಸುವ ಕಲ್ಲು. ಸರ್ವಜ್ಞ ತನ್ನ ಒಗಟಿನ ತ್ರಿಪದಿಯಲ್ಲಿ ಇದನ್ನು ಹೇಳಿದ್ದಾನೆ. ಲೆಕ್ಕವಿಲ್ಲದಷ್ಟು ಜನಪದ ಹಾಡುಗಳ ಹುಟ್ಟಿಗೆ ಕಾರಣವಾಗಿರುವ ಈ ಬೀಸುಕಲ್ಲು ಗಳೀಗ ಕಣ್ಮರೆಯಾಗಿವೆ. ಇವುಗಳ ಜಾಗದಲ್ಲಿ ಗಿರಣಿಗಳು, ಮಿಕ್ಸರ್‌, ಗ್ರೈಂಡರ್‌ಗಳು ಅಬ್ಬರಿಸುತ್ತಿವೆ.

ಗಿರಣಿ, ಮಿಕ್ಸರ್‌ ಗ್ರೈಂಡರ್‌ ಇಲ್ಲದ ಆ ದಿನಗಳಲ್ಲಿ ಪ್ರತಿ ಮನೆಯಲ್ಲಿಯೂ ಬೀಸುವ ಕಲ್ಲುಗಳಿರುತ್ತಿದ್ದವು. ರಾಗಿ, ಜೋಳ, ಅಕ್ಕಿ, ಭತ್ತ, ತೊಗರಿ ಮೊದಲಾದ ಧಾನ್ಯಗಳ ಹಿಟ್ಟು ತೆಗೆಯಲು, ಅದರಲ್ಲಿನ ಹೊಟ್ಟನ್ನು ಬೇರ್ಪಡಿಸಲು ವಿಧವಿಧ ವಿನ್ಯಾಸದ, ಗಾತ್ರದ ಬೀಸುವ ಕಲ್ಲುಗಳನ್ನು ಹಿಂದೆ ಬಳಸ ಲಾಗುತ್ತಿತ್ತು. ಇವುಗಳ ಮುಂದೆ ಕುಳಿತಾಗ ಮಹಿಳೆಯರ ಬಾಯಲ್ಲಿ ಬರುತ್ತಿದ್ದ ಜನಪದ ಹಾಡುಗಳು  ಅವೆಷ್ಟೋ. ‘ಬೀಸುವ ಪದ’ ಗಳಾಗಿ ಜನಪದ ಸಾಹಿತ್ಯದಲ್ಲಿ ಹೆಸರಾಗಿರುವ ಈ ಹಾಡುಗಳನ್ನೀಗ ಹುಡುಕುವುದೂ ಕಷ್ಟವಾಗಿದೆ.

ಕಲ್ಲಿನ ಬದಲು ಗಿರಣಿ
ಬೀಸುವ ಕಲ್ಲಿನ ಬದಲು ಡೀಸೆಲ್ ಚಾಲಿತ ಗಿರಣಿಗಳು ಕಾಲಿಟ್ಟಿವೆ. ಇತ್ತೀಚಿನ ದಿನಗಳಲ್ಲಿ ಮನೆಯಿಂದ ಜಮೀನು ದೂರದಲ್ಲಿ ಇರು ವುದು ಸಾಮಾನ್ಯ. ಆದ್ದರಿಂದ ರೈತಾಪಿ ಜನರು ಜಮೀನಿಗೆ ಚಕ್ಕಡಿಯಲ್ಲೋ, ಟ್ರ್ಯಾಕ್ಟರ್‌ಗಳಲ್ಲಿಯೋ ಹೋಗುವ ಬದಲು ಅಲ್ಲಿಯೇ ಮನೆ ಕಟ್ಟಿಕೊಂಡು ವಾಸ ಮಾಡುತ್ತಿದ್ದಾರೆ. ಆದ್ದರಿಂದ ಮನೆಗಳಲ್ಲಿಯೇ ಗಿರಣಿ ಹಾಕಿಕೊಂಡು ವ್ಯಾಪಾರ ನಡೆಸುತ್ತಾರೆ.

ಕೆಲವು ರೈತರು ತಮ್ಮ ಚಕ್ಕಡಿಗೆ ಗಿರಣಿ ಯಂತ್ರ ಅಳವಡಿಸಿ ಹೊಲ-ಗದ್ದೆಗಳ ಮುಂದೆ ನಿಲ್ಲಿಸಿ ಅಲ್ಲಿಯೇ ಡೀಸೆಲ್ ಎಂಜಿನ್ ಮೂಲಕ ಹಿಟ್ಟು ಹಾಕಿಕೊಡುವ ಕಾಯಕಕ್ಕೂ ಇಳಿದಿದ್ದಾರೆ. ತಲೆ ಮೇಲೊಂದು ಗಂಟು ಇಟ್ಟುಕೊಂಡು ಗಿರಣಿ ಇರುವಲ್ಲಿಗೆ ಹೋಗುವ ಸ್ತ್ರೀಯರ ಕೊರತೆ ನೀಗಿಸಲು ಮೊಬೈಲ್ ಗಿರಣಿಗಳೂ ಇಂದು ಹಳ್ಳಿಗಳಿಗೆ ಕಾಲಿಟ್ಟಿವೆ.

ಭತ್ತ ಪಾಲಿಶ್ ಮಾಡುವುದರಿಂದ ಹಿಡಿದು ಮೆಣಸಿನಕಾಯಿಯನ್ನು ಕುಟ್ಟಿ ಖಾರವನ್ನು ಮಾಡುವ ಕಾರ್ಯದವರೆಗೂ ಇಂದು ಗಿರಣಿಗಳದ್ದೇ ಕಾರುಬಾರು. ಆದ್ದರಿಂದ ಎಲ್ಲ ಕೆಲಸ ಕಾರ್ಯಕ್ಕೆ ಬಳಕೆಯಾಗುವ  ರೀತಿಯಲ್ಲಿ ಇವುಗಳ ವಿನ್ಯಾಸ ವಾಗಿವೆ. ‌ಮನೆ ಬಳಕೆಗೆ ಚಿಕ್ಕ ಮಿಕ್ಸರ್‌ ಗ್ರೈಂಡರ್ ಬಂದರೆ ಬೃಹತ್‌ ಪ್ರಮಾಣದ ಕೆಲಸಗಳಿಗೆ ದೊಡ್ಡ ಗ್ರೈಂಡರ್‌ ಬಂದು, ಬೀಸುವ ಕಲ್ಲುಗಳ ಬಳಕೆ ಕ್ಷೀಣಿಸುತ್ತಿವೆ.

ಆದರೆ ವಿವಿಧ ಆಕಾರದ, ನಮನಮೂನೆಯ ಬೀಸುಕಲ್ಲುಗಳೀಗ ವಸ್ತುಸಂಗ್ರಹಾಲಯಕ್ಕಷ್ಟೇ ಸೀಮಿತವಾಗಿವೆ. ಇಂಥ ಬಗೆಬಗೆಯ ಕಲ್ಲುಗಳು ಬೆಳಗಾವಿ ಜಿಲ್ಲೆಯ ಕಿತ್ತೂರಿನ ಅರಮನೆಯಲ್ಲಿರುವ ವಸ್ತುಸಂಗ್ರಹಾಲಯ ದಲ್ಲಿದ್ದರೆ, ಬೃಹದಾಕಾರವಾಗಿರುವ ಬೀಸುವ ಕಲ್ಲನ್ನು ಬೆಂಗಳೂರು ಗ್ರಾಮಾಂತರ ಜಿಲ್ಲೆ ರಾಮನಗರದ ಹತ್ತಿರದ ಜನಪದ ಲೋಕದಲ್ಲಿ ಕಾಣಬಹುದು.

ಎತ್ತುಗಳನ್ನು ಬಳಸಿರುವ ಬೀಸುವ ಕಲ್ಲು ಇಲ್ಲಿದೆ. ಚಿತ್ರದುರ್ಗದ ಬೆಟ್ಟದ ಮೇಲೆ ಆನೆ ಯಿಂದ ಬೀಸುವ ಕಲ್ಲುಗಳಿವೆ. ಇಂಥಹುದೇ ಕಲ್ಲು ಮೈಸೂರಿನ ಜಗನ್‌ಮೋಹನ್ ಅರಮನೆಯ ಮುಂದೆ ಕೂಡ ಇದೆ. ಮಹಾರಾಷ್ಟ್ರದ  ಔರಂಗಾಬಾದ್‌ದಲ್ಲಿ ಪಾಣ್‌ಚಕ್ಕಿ ಎಂಬ ಬೀಸುವ ಕಲ್ಲು ಇದ್ದು, ಅದು ಹರಿಯುವ ನೀರಿನ ಒತ್ತಡದ ಮೂಲಕ ತಿರುಗುವ ವಿನ್ಯಾಸವಾಗಿದೆ. ಈಗ ನೋಡಲು ಸಿಗುತ್ತಿವೆ, ಬಳಕೆಯಲ್ಲಿಲ್ಲ.

ಬೀಸುವ ಕಲ್ಲು ಏಕೆ?
ಆಧುನಿಕ ತಂತ್ರಜ್ಞಾನಗಳಿಂದ ಕೆಲಸ ಸುಲಭ ಆಗಿರುವಾಗ ಬೀಸುವ ಕಲ್ಲಿನ ಗೊಡವೆ ಏಕೆ ಎನ್ನುವ ಪ್ರಶ್ನೆ ಸಹಜ. ಆದರೆ ನಮ್ಮ ಹಿರಿಯರ ಆರೋಗ್ಯದ ಗುಟ್ಟುಗಳಲ್ಲಿ ಈ ಬೀಸುವ ಕಲ್ಲು ಕೂಡ ಒಂದು ಎನ್ನುವುದು ಹಲವರಿಗೆ ತಿಳಿದಿಲ್ಲ!

ಬೆಳಗಿನ ಜಾವ ಎದ್ದು ಮಹಿಳೆಯರು ಬೀಸುವ ಕಾರ್ಯ ಕೈಗೊಳ್ಳುತ್ತಿದ್ದರು. ಈಗಿ ನಂತೆ ಅವರು ವಾಕಿಂಗ್ ಜಾಗಿಂಗ್ ಹೋಗು ತ್ತಿರಲಿಲ್ಲ. ಜಿಮ್‌ ಗೊಡವೆಯೂ ಅವರಿಗೆ ಬೇಕಿರಲಿಲ್ಲ. ಬೀಸುವ ಕಾರ್ಯದ ಮೂಲಕವೇ ಕೈ ಕಾಲುಗಳಿಗೆ ವ್ಯಾಯಾಮ ದೊರಕಿಸಿಕೊಳ್ಳುತ್ತಿದ್ದರು (ಇದನ್ನು ಅಕರ್ಣ ಧನುರಾಸನ ಕ್ರಿಯೆಗೆ ಹೋಲಿಸುವರು). ಅಷ್ಟೇ ಅಲ್ಲ. ಬೀಸುವ ಪ್ರಕ್ರಿಯೆಯಿಂದ ಇಡೀ ಮೈಗೆ ವ್ಯಾಯಾಮ ಲಭಿಸುತ್ತಿತ್ತು.

ಕೈಕಾಲು, ಹೊಟ್ಟೆಯ ಭಾಗಕ್ಕೆ ಸಾಕಷ್ಟು ವ್ಯಾಯಾಮ ದೊರಕುತ್ತಿತ್ತು. ಇದರಿಂದ ಬೊಜ್ಜು ಮಹಿಳೆಯರ ಬಳಿ ಸುಳಿಯುತ್ತಿರ ಲಿಲ್ಲ. ಕಲ್ಲು ಬೀಸುವಾಗ ಹಾಡುತ್ತ ಇರುವ ಕಾರಣ, ಉಸಿರಾಟದ ಕ್ರಿಯೆಯೂ ಸುಗಮ ವಾಗುತ್ತಿತ್ತು. ಹೆಚ್ಚುವರಿ ಪ್ರಾಣಾಯಾಮ, ಯೋಗವೆಲ್ಲವೂ ಅವರಿಗೆ ಬೇಕಿರಲಿಲ್ಲ.

ಪೂಜ್ಯನೀಯವೂ ಹೌದು
ಬೀಸುವ ಕಲ್ಲು ಕೇವಲ ಹಿಟ್ಟು ಮಾಡುವ ಕಲ್ಲಾಗಿ ಇರಲಿಲ್ಲ, ಪೂಜ್ಯನೀಯ ವಸ್ತುವಾಗಿ ಹಿಂದಿನವರು ಬಳಸುತ್ತಿದ್ದರು. ಇಂದಿಗೂ ಗ್ರಾಮೀಣ ಪ್ರದೇಶಗಳಲ್ಲಿ ಇವುಗಳನ್ನು ಮದುವೆ ಸಮಾರಂಭದಲ್ಲಿ ಪೂಜಿಸುವ ಸಂಪ್ರದಾಯವಿದೆ. ಅಂದರೆ ಬ್ರಹ್ಮಗಂಟು ಕಟ್ಟಲು ವಿವಾಹಕ್ಕೆ ಬಲ ಬಂದಿರುವ ಮುತ್ತೈದೆಯರು ಬೀಸುವ ಕಲ್ಲು ಪೂಜಿಸಿ ಅದರಲ್ಲಿ ಎಳ್ಳು, ಉದ್ದು, ಅಕ್ಕಿ, ಗೋಧಿ, ಐದು ದವಸ ಧಾನ್ಯಗಳನ್ನು ಬೀಸಿ ಬ್ರಹ್ಮಗಂಟು ಎಂದು ಕಟ್ಟುತ್ತಾರೆ.

ಅಷ್ಟೇ ಅಲ್ಲ ಕಾರಹುಣ್ಣಿಮೆಯಂದು ಹೋರಿಗಳಿಗೆ ಪೂಜಿಸುವ ಮೊದಲು ಬೀಸುವ ಕಲ್ಲುಗಳಿಗೆ ಪೂಜೆ ಸಲ್ಲುತ್ತದೆ. ಅದರಲ್ಲಿ ನುಚ್ಚು ಒಡೆದು ದನ-ಕರುಗಳಿಗೆ ಹಾಕಲಾಗುವುದು. ಇನ್ನೊಂದು ಐತಿಹ್ಯದಂತೆ ಮನೆಯಲ್ಲಿ ಒಳಕಲ್ಲು, ಬೀಸುವ ಕಲ್ಲು ಒಂದೇ ಕೊಠಡಿಯೊಳಗೆ ಇರಬೇಕು ಎನ್ನುವುದು ಹಿರಿಯರ ಅಣತಿ. ಅವೆರಡೂ ಅತ್ತೆ ಸೊಸೆಯ ರಂತೆ. ಬೇರೆ ಬೇರೆ ಕೊಠಡಿಗಳಲ್ಲಿ ಅವು ಗಳನ್ನು ಅಳವಡಿಸಿದ್ದಾದರೆ ಮನೆಯಲ್ಲಿ ಅತ್ತೆ ಸೊಸೆ ಹೊಂದಾಣಿಕೆ ಕಠಿಣ ಎಂಬ ನಂಬಿಕೆ.

ಕನ್ನಡದ ಕಪ್ಪು ಬಿಳುಪಿನ ಚಿತ್ರಗಳಲ್ಲಿ ಅಂದರೆ ಕಿತ್ತೂರ ಚನ್ನಮ್ಮ, ಮಲ್ಲಮ್ಮನ ಪವಾಡ, ಚಂದವಳ್ಳಿ ತೋಟ, ರೈತನ ಮಕ್ಕಳು ವರ್ಣ ಚಿತ್ರವಾದ ಸತಿ ಸಕ್ಕೂಬಾಯಿ ಮೊದಲಾದ ಚಿತ್ರಗಳಲ್ಲಿ ಬೀಸುವ ಕಲ್ಲಿನ ಮಹತ್ವ ಸಾರುವ ದೃಶ್ಯಗಳು, ಹಾಡುಗಳು ಇರುವುದನ್ನು ಕಾಣುತ್ತೇವೆ.
*
ನುಡಿಗಟ್ಟುಗಳಲ್ಲಿ ಬೀಸುಕಲ್ಲು
* ರಾಮ ರಾಜ್ಯ ಆಳಿದರೂ ರಾಗಿ ಬೀಸೋದು ತಪ್ಪಲಿಲ್ಲ.
*ಕುಟ್ಟಲಾರದವಳಿಗೆ ಕೂಳಿಲ್ಲ.  ಬೀಸಲಾರದವಳಿಗೆ ಹಿಟ್ಟಿಲ್ಲ.
*ನೆಂಟರು ಬಿಕ್ಕಿ ಬಿಕ್ಕಿ ಅತ್ತರೆ ಬೀಸುವ ಕಲ್ಲು ತಿರುಗೀತೆ?
* ಬೀಸುವ ಕಲ್ಲು ಕೊಟ್ಟವರಿಗೆ ಸಕಲ ಸೌಭಾಗ್ಯ ಬರಲಿ. ಅಂಥವರ ಮನೆಗೆ ಮಲ್ಲಿಗೆ ಮುಡಿಯುವ ಸೊಸೆ ಬರಲಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT