ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಟ್ಟಿಗೆ ಹಬ್ಬದ ಈ ಪರಿ ಗೊತ್ತಾ?

Last Updated 9 ನವೆಂಬರ್ 2015, 19:47 IST
ಅಕ್ಷರ ಗಾತ್ರ

ಹಿಂಗಾರು ಮಳೆಯು ಪ್ರಾರಂಭವಾಗಿ ಬಿತ್ತನೆಗಳೆಲ್ಲ ಮುಗಿದು ಸಸಿಗಳು ತಲೆ ಎತ್ತಿ ಗರಿಬಿಡುತ್ತಿರುವ ಸಂದರ್ಭದಲ್ಲಿ ಬರುವ ದೊಡ್ಡ ಸಂಪ್ರದಾಯದ ಹಬ್ಬ ದೀಪಾವಳಿ. ಮುಂಗಾರು ಧಾನ್ಯಗಳ ರಾಶಿಯ ಕಾರ್ಯ ಆರಂಭಗೊಳ್ಳುವ ಅವಧಿಯಿದು. ಕಾಳುಗಳನ್ನು ಒಕ್ಕಲು ಮಾಡುತ್ತಾ ಕಾರ್ತೀಕ ಮಾಸವನ್ನು ಬರಮಾಡಿಕೊಳ್ಳುವ ರೈತರು ತಮ್ಮ ಅನ್ನದಾತ ಗೋವುಗಳನ್ನು ಪೂಜೆ ಮಾಡುವುದೇ ಕೊಟ್ಟಿಗೆಯ ಹಬ್ಬ ಅರ್ಥಾತ್‌ ಹಟ್ಟಿಹಬ್ಬ.

ಆಧುನಿಕತೆಯ ಸ್ಪರ್ಶ ಹಟ್ಟಿಗಳಿಗೂ ತಟ್ಟಿರುವ ಕಾರಣ, ಬಹುತೇಕ ಕಡೆಗಳಲ್ಲಿ ಕಾಂಕ್ರೀಟ್ ಹಟ್ಟಿಗಳಲ್ಲೇ ಹಬ್ಬ ಆಚರಿಸುವ ಸ್ಥಿತಿ ಇಂದಿನದ್ದು. ಸಂಪ್ರದಾಯಬದ್ಧವಾಗಿ ಆಚರಣೆ ಮಾಡಲಾಗದ ಕಾರಣ, ನಾಮಕಾವಸ್ತೆ ಎನ್ನುವಂತೆ ಈ ಹಬ್ಬ ಮಾಡುತ್ತಿದ್ದರೂ ಉತ್ತರ ಕರ್ನಾಟಕದ ಭಾಗಗಳಲ್ಲಿ ಇಂದಿಗೂ ಸಾಂಪ್ರದಾಯಿಕವಾಗಿ ಹಬ್ಬ ಆಚರಿಸುತ್ತಿರುವುದು ವಿಶೇಷ.

ಸೆಗಣಿಯಿಂದ ಹಟ್ಟೆವ್ವನನ್ನು ಮತ್ತು ಪಾಂಡವರನ್ನು ಮಾಡಿ ಉತ್ತರಾಣಿ ಕಡ್ಡಿ, ಹೊನ್ನಾರಿ ಹೂವು ಹಾಗೂ ಇನ್ನಿತರ ಹಲವು ವಿಧದ ಹೂವುಗಳಿಂದ ಅಲಂಕರಿಸಿ ಶ್ಯಾವಿಗೆ ಹಾಗೂ ಅನ್ನವನ್ನು ಮಾಡಿ ಎಡೆ ಹಿಡಿಯುವರು. ಈ ದಿನಗಳಲ್ಲಿ ಶ್ಯಾವಿಗೆ ಊಟ ಮಾಡುವರು. ಸಕ್ಕರೆ ಶ್ಯಾವಿಗೆ ಬೆಲ್ಲದ ಶ್ಯಾವಿಗೆ ಹಾಲು ಹಾಕಿ ಊಟಕ್ಕೆ ಹೆಚ್ಚು ಬಳಕೆ ಮಾಡುವರು. ಇದನ್ನು ಹಟ್ಟಿ ಹಬ್ಬದ ವಿಶೇಷ ಸಿಹಿ ಅಡುಗೆ ಅಂತ ಪರಿಗಣಿಸಲಾಗಿದೆ.

ದನಗಳ ಮೈ ತೊಳೆದು ಗಲೀಫಾ ಹಾಕಿ, ಕೋಡಿಗೆ ಬಣ್ಣ ಹಚ್ಚಿ ಸಿಂಗರಿಸುವರು. ಪಾಂಡವರೊಂದಿಗೆ ಗೋವುಗಳು ವಿರಾಟನ ರಾಜ್ಯಕ್ಕೆ ಮರಳಿದವೆಂಬ ಪ್ರತೀತಿಯಿಂದ ಇಲ್ಲಿ ಪಾಂಡವರನ್ನು ಮತ್ತು ಹಟ್ಟೆವ್ವನನ್ನು ಇಟ್ಟಿರುವ ಸ್ಥಳದವರೆಗೂ ಆಕಳ ಹೆಜ್ಜೆಗಳನ್ನು ತಮ್ಮ ಕೈ ಮುಟಗೀ ಮಾಡಿ ಅದಕ್ಕೆ ಕೆಮ್ಮಣ್ಣು ಮತ್ತು ಬಿಳಿ ಸುಣ್ಣವನ್ನು ಬಳಸಿ ಹೆಜ್ಜೆ ಮೂಡಿಸುತ್ತಾರೆ. ಹಿತ್ತಲಲ್ಲಿ ಕುಂಬಳಿ ಬಳ್ಳಿ ಹತ್ತಿರ ಹಟ್ಟೆವ್ವನನ್ನು ಅಂದರೆ ಲಕ್ಷ್ಮಿ ಮೂರ್ತಿ ಮಾಡಿ ಇಡುತ್ತಾರೆ.

ಉತ್ತರಾಣಿ ಕಡ್ಡಿ ಚುಚ್ಚಿ, ಜೋಳದ ದಂಟು ಅಥವಾ ಕಬ್ಬಿನ ಗಣಿಕೆಯ ನಡುವೆ ಹಟ್ಟೆವ್ವನನ್ನು ಅಲಂಕರಿಸಿ ಪೂಜೆಗೈಯುತ್ತಾರೆ. ಇಲ್ಲಿ ಹಟ್ಟೆವ್ವ ಅಂದರೆ ತಾಯಿಯ ಸ್ವರೂಪ ಆಕೆಯ ಮಕ್ಕಳ ಸ್ವರೂಪದಲ್ಲಿ ಚಿಕ್ಕ ಚಿಕ್ಕ ಆಕಾರದಲ್ಲಿ ಪಾಂಡವರನ್ನು ಸೆಗಣಿಯಿಂದ ತಯಾರಿಸುತ್ತಾರೆ.

ಈ ರೀತಿ ಕೆಲವು ಮನೆಯವರು ಈ ಹಬ್ಬವನ್ನು ಐದು ದಿನ ಮೂರು ದಿನ ಒಂದು ದಿನ ಹೀಗೆ ತಮ್ಮ ತಮ್ಮ ಮನೆಯಲ್ಲಿ ಎಷ್ಟು ದಿನ ಇಡುವ ಸಂಪ್ರದಾಯವಿದೆಯೋ ಅಷ್ಟು ದಿನ ಇಡುವ ಮೂಲಕ ಕೊನೆಯ ದಿನ ತಮ್ಮ ಮನೆಗಳ ಮಾಳಿಗೆಯ ಕುಂಬಿಯ ಮೇಲೆ ಸಾಲಾಗಿ ಜೋಡಿಸಿ ಎಡ ಮತ್ತು ಬಲ ಬದಿಗಳಲ್ಲಿ ಜೋಳದ ದಂಟು ಇರಿಸಿ ದಾರದಿಂದ ಸುತ್ತು ಹಾಕುವ ಮೂಲಕ ಈ ಹಬ್ಬದ ಆಚರಣೆ ಕೊನೆಗೊಳ್ಳುವುದು. ಮಾಳಿಗೆಯ ಕುಂಬಿಯ ಮೇಲೆ ಇಡುವಾಗಲೂ ಹಟ್ಟೆವ್ವ ಅಂತ ಮಾಡಿದ ದೊಡ್ಡ ಮೂರ್ತಿಯನ್ನು ನಡುವೆಯೇ ಬರುವಂತೆ ನೋಡಿಕೊಳ್ಳುವರು.

ಪಾಂಡವರ ಜೊತೆಗಿನ ನಂಟು
ಹಟ್ಟಿ ಹಬ್ಬಕ್ಕೆ ಮಹಾಭಾರತದ ನಂಟಿದೆ. ಅಜ್ಞಾತವಾಸ ಕಳೆಯುತ್ತಿದ್ದ ಪಾಂಡವರು ವಿರಾಟನ ಗೋವುಗಳನ್ನು ಕೌರವರಿಂದ ಬಿಡಿಸಿಕೊಂಡು ಬಂದಿರುವ ನೆನಪಿನಲ್ಲಿ ಅಂದರೆ ಪಾಂಡವರು ಇದೇ ದಿನ ತಮ್ಮ ಅಜ್ಞಾತವಾಸ ಮುಗಿಸಿ ತಮ್ಮ ಗೋವುಗಳೊಂದಿಗೆ ಪುರಪ್ರವೇಶ ಮಾಡಿದರೆಂಬ ನಂಬಿಕೆಯಿಂದಾಗಿ ಈ ದಿನ ಹಟ್ಟೆವ್ವ ಇಡುವ ಸಂಪ್ರದಾಯವಿದೆ. ಇದಕ್ಕೆ ಸೆಗಣಿಯ ಪಾಂಡವರನ್ನು ಬರಮಾಡಿಕೊಳ್ಳುವುದು ಎಂದೂ ಕರೆಯುತ್ತಾರೆ.

ನೂರಾರು ಕಷ್ಟಗಳನ್ನು ಅನುಭವಿಸಿ, ಅಜ್ಞಾತವಾಸ ಮುಗಿಸಿ, ಜಯಶೀಲರಾಗಿ ಬಂದ ದಿನವೆಂದೂ ಸತ್ಯಸುಂದರ ನೆನಪನ್ನು ಮಾಡಿಕೊಳ್ಳುವುದರ ಮೂಲಕ ಮುಂದೆ ಜೀವನದಲ್ಲಿ ಒದಗಬಹುದಾದ ಕಷ್ಟಗಳನ್ನು ಎದುರಿಸುವ ಧೈರ್ಯ ನಮ್ಮಲ್ಲೂ ಬರಲಿ ಎಂಬುದು ಇದರ ಅರ್ಥ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT