ಮಂಗಳವಾರ, 14 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಡಗಿನ ಕಕ್ಕಡ 18

Last Updated 13 ಆಗಸ್ಟ್ 2012, 19:30 IST
ಅಕ್ಷರ ಗಾತ್ರ

ಆಗಸ್ಟ್‌ನಲ್ಲಿ ಬಿಡದೆ ಸುರಿವ ಜಡಿ ಮಳೆಯ ಒಂದು ದಿನ ಕೊಡಗಿನಲ್ಲಿ  `ಕಕ್ಕಡ 18~ ಆಚರಣೆಯ (ಈ ಸಲ ಆಗಸ್ಟ್ 3ರಂದು ನಡೆಯಿತು) ಸಂಭ್ರಮವೋ ಸಂಭ್ರಮ.
ಕಾಡಿನಲ್ಲಿ ಬೆಳೆವ ಒಂದು ವಿಧದ ಮದ್ದು ಸೊಪ್ಪು  ತಂದು ಅದರ ನೀಲಿ- ಕೆಂಪು ಮಿಶ್ರಿತ ಬಣ್ಣದ ರಸವನ್ನು ಸೇರಿಸಿ ಪಾಯಸ ಮತ್ತು ಹಿಟ್ಟು ಮಾಡಿ ತಿನ್ನುವುದು ಬಹಳ ಹಿಂದಿನಿಂದಲೂ ನಡೆದು ಬಂದ ಕ್ರಮ. ಅದರೊಂದಿಗೆ ಕೋಳಿ ಸಾರು ತಿನ್ನುವುದು ಸಂತೋಷದ ಕ್ಷಣವಾಗಿಯೂ ಸೇರಿಕೊಂಡಿದೆ. ಅದೇ ಕಕ್ಕಡ 18.

ಮದ್ದು ಸೊಪ್ಪು
ಪಶ್ಚಿಮ ಘಟ್ಟದ ಕಾಡುಗಳಲ್ಲಿ ಬೆಳೆಯುವ ಚಿಕ್ಕ ಬಳ್ಳಿಯಂತಹ ಒಂದು ವರ್ಗದ ಸಸ್ಯವನ್ನು ಕೊಡಗಿನ ಜನ ಮದ್ದು ಸೊಪ್ಪು ಎಂದು ಗುರುತಿಸಿ ಸೇವಿಸುತ್ತಾರೆ. ಸುಮಾರು 8-10 ಅಡಿ ಎತ್ತರಕ್ಕೆ ಬೆಳೆಯಬಲ್ಲ ಈ ಗಿಡಗಳ ಸಸ್ಯಶಾಸ್ತ್ರೀಯ ಹೆಸರು ಒ್ಠಠಿಜ್ಚಿಜಿ ಢ್ಞಛ್ಞಿಜಿ ಏಛಿಢ್ಞಛಿ.
 ಕೊಡಗಿನ ಕಾಡುಗಳಲ್ಲಿ ಇದು ಯಥೇಚ್ಛವಾಗಿ ಕಾಣಬರುತ್ತಿತ್ತು. ಈಗ ಕಾಡು ಕಡಿಮೆಯಾಗಿ ತೋಟ ಕೃಷಿ ಆರಂಭವಾದ ನಂತರ ರೈತರು ತಮ್ಮ ಹಿತ್ತಲಲ್ಲಿ ಇಲ್ಲವೇ ತೋಟದಲ್ಲಿ ಇದನ್ನು ಬೆಳೆದುಕೊಳ್ಳುತ್ತಿದ್ದಾರೆ.

ಆಗಸ್ಟ್ 3 ಕೊಡಗಿನ ಮೂಲನಿವಾಸಿಗಳ ಕ್ಯಾಲೆಂಡರ್ ಪ್ರಕಾರ `ಕಕ್ಕಡ 18~ (ಹಿಂದೂ ಪಂಚಾಂಗದ ಕರ್ಕಾಟಕ ಅಥವಾ ಆಟಿ ತಿಂಗಳು ಅಂದರೆ ಜುಲೈ 17 ರಿಂದ ಆಗಸ್ಟ್ 16 ಕೊಡವರಿಗೆ ಕಕ್ಕಡ ತಿಂಗಳು. ಅದರಲ್ಲಿ 18ನೇ ದಿನ). ಈ ತಿಂಗಳಲ್ಲಿ ಈ ಮದ್ದು ಸೊಪ್ಪಿಗೆ ನಿತ್ಯ ಒಂದೊಂದು ವಿಧದ ಔಷಧೀಯ ಸತ್ವಗಳು ಸೇರುತ್ತವೆ ಎಂಬುದು ಪರಂಪರಾಗತ ನಂಬಿಕೆ. ಅದರ ಪ್ರಕಾರ ಕಕ್ಕಡ 18 ರಂದು 18 ವಿಧದ ಔಷಧಿ ತುಂಬಿಕೊಳ್ಳುವುದರಿಂದ ಅಂದು ಈ ಮದ್ದು ಸೊಪ್ಪಿನ ರಸವನ್ನು ಊಟದಲ್ಲಿ ಸೇವಿಸುವುದು ವಾಡಿಕೆ.

ಈ ಸಂದರ್ಭದಲ್ಲಿ ಮಳೆ ಜೋರಾಗಿರುತ್ತದೆ. ಇಂಥ ಕಾಲದಲ್ಲಿ ಈ ಸೊಪ್ಪಿನ ಗುಣಗಳಿಂದ ಶರೀರದ ಹದಿನೆಂಟು ಬಗೆಯ ಕಾಯಿಲೆಗಳು ಪರಿಹಾರವಾಗುತ್ತವೆ ಎಂದು ಜನ ನಂಬುತ್ತಾರೆ. ಅದಕ್ಕಾಗೇ ಅಂದು ಮದ್ದು ಸೊಪ್ಪಿನ ಪಾಯಸ, ಅನ್ನ ಇಲ್ಲವೇ ಹಿಟ್ಟು ಮಾಡಿ ಸೇವಿಸುತ್ತಾರೆ. ಜೊತೆಗೆ ಮಳೆಗಾಲದ ಚಳಿಯ ವಾತಾವರಣದಲ್ಲಿ ದೇಹಕ್ಕೆ ಉಷ್ಣಾಂಶ ನೀಡಬಹುದೆಂದು ಕೋಳಿ ಮಾಂಸವನ್ನು ಸೇವಿಸುವ ಕ್ರಮವನ್ನೂ ಒಟ್ಟಿಗೆ ಇಟ್ಟುಕೊಂಡಿದ್ದಾರೆ. ಕಕ್ಕಡ ಕೋಳಿ  ತಿನ್ನುವುದು ಈಗಲೂ ರೂಢಿಯಲ್ಲಿದೆ.

ಜಿಲ್ಲೆಯ ಕೆಲವು ಜನಾಂಗದವರು ಮದ್ದು ಸೊಪ್ಪಿನೊಂದಿಗೆ ಮರ ಕೆಸು ಸೊಪ್ಪನ್ನು ಪ್ರತ್ಯೇಕವಾಗಿ ಔಷಧೀಯ ಸೊಪ್ಪನ್ನಾಗಿ ಸೇವಿಸುವುದುಂಟು. ಒಟ್ಟಾರೆ ಕಕ್ಕಡ ತಿಂಗಳಿನಲ್ಲಿ ಮದ್ದು ಸೊಪ್ಪು ಸೇವಿಸುತ್ತಾರೆ, ಕಕ್ಕಡ ಕೋಳಿ ಮುರಿದು ತಿನ್ನುತ್ತಾರೆ. ಎಂದಿನಂತೆ ಈ ಸಲವೂ ಮಡಿಕೇರಿಯ ಸಂತೆಗಳಲ್ಲಿ, ತರಕಾರಿ ಮಾರುಕಟ್ಟೆಗಳಲ್ಲಿ ಕಕ್ಕಡ 18ರ ಆಸುಪಾಸು ಮದ್ದು ಸೊಪ್ಪು ಮಾರಾಟ ಭರ್ಜರಿಯಾಗೇ ನಡೆದಿತ್ತು.

ಸಾಮಾನ್ಯವಾಗಿ ಈ ಕಕ್ಕಡ-ಕರ್ಕಾಟಕ ತಿಂಗಳಲ್ಲಿ ಕೃಷಿ ಕೆಲಸಕ್ಕೆ ಪುರಸೊತ್ತೇ ಇರುವುದಿಲ್ಲ. ಹೀಗಾಗಿ ಹಬ್ಬ ಹರಿದಿನಗಳ ಆಚರಣೆ, ದೇವಸ್ಥಾನದಲ್ಲಿ ವಿಶೇಷ ಪೂಜೆ ಇತ್ಯಾದಿ ಇಲ್ಲವೇ ಇಲ್ಲ ಎನ್ನಬಹುದು. ಈ ತಿಂಗಳಿನಲ್ಲಿ ಪುರುಷರು ತಲೆ ಕೂದಲು ಕತ್ತರಿಸುವುದಿಲ್ಲ. ಪರಸ್ಪರ ನೆಂಟರಿಷ್ಟರಲ್ಲಿಗೆ ಹೋಗುವ ಬರುವ ಸಂಪ್ರದಾಯವೂ ಇಲ್ಲ. ಆದರೆ ಈಗ ಮಳೆಯೂ ಕಡಿಮೆ, ಈ ಆಚರಣೆಗಳೂ ಕಡಿಮೆ.

ಇನ್ನು ಮಳೆಗಾಲದಲ್ಲಿ ತಿನ್ನುತ್ತಿದ್ದ ಕಣಿಲೆ (ಬೈಂಬಳೆ), ಮಣ್ಣಿನಲ್ಲಿ ಬೆಳೆವ ಅಣಬೆಗಳು ಅಪರೂಪವಾಗುತ್ತಿವೆ. ಆದರೂ ಮಳೆ ಕಣ್ಣಾಮುಚ್ಚಾಲೆಯಿಂದ ಕೃಷಿ ಭೂಮಿಗಳ ಕೆಲಸ ಕಡಿಮೆಯಾಗಿ ವಾಣಿಜ್ಯ ಬೆಳೆಗಳು ಗದ್ದೆಗಳಲ್ಲಿ ಬಂದರೂ ಕಕ್ಕಡದ ಮದ್ದು ಸೊಪ್ಪು, ಕೋಳಿ ಸಾರಿನ ಹಿರಿಮೆ ಎಂದೂ ಮಾಸಿಲ್ಲ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT