ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುಷ್ಪಗಿರಿ ಪರಿಸರ ಸಂರಕ್ಷಣಾ ಕೇಂದ್ರ!

Last Updated 16 ಜುಲೈ 2012, 19:30 IST
ಅಕ್ಷರ ಗಾತ್ರ

ಬೇಲೂರು, ಹಳೇಬೀಡಿಗೆ ಹೋದವರು ಅದ್ಭುತ ಶಿಲ್ಪಕಲಾಲೋಕವನ್ನು ಕಣ್ಣು ತುಂಬಿಸಿಕೊಂಡು ಬರುತ್ತಾರೆ. ಏಕೆಂದರೆ ಇವು ವಿಶ್ವಖ್ಯಾತಿ ಪಡೆದ ತಾಣಗಳು. ಆದರೆ ಹಳೇಬೀಡಿನಿಂದ ಕೇವಲ ನಾಲ್ಕು ಕಿಮೀ ದೂರದ ಪುಷ್ಪಗಿರಿ ಬಗ್ಗೆ ಬಹಳ ಜನಕ್ಕೆ ಗೊತ್ತಿಲ್ಲ.

ಹೌದು. ಅಲ್ಲೊಂದು ಸುಂದರ, ಪರಿಸರಸ್ನೇಹಿ ಗಿರಿಯೊಂದು ಇದೆ. ಹಚ್ಚ ಹಸಿರು ಗಿಡಗಳು, ಕಣ್ಣು ಹಾಯಿಸಿದಲ್ಲೆಲ್ಲ ಬಣ್ಣ, ಬಣ್ಣದ ಹೂವು, ತಂಗಾಳಿಯಲ್ಲಿ ತೇಲಿ ಬರುವ ಅದರ ಕಂಪು. ವಾಹ್! ಅದೊಂದು ಮಧುರ ಅನುಭವ.

ಪುಷ್ಪಗಿರಿಯಲ್ಲಿರುವ ಮನಮೋಹಕ ಮಲ್ಲಿಕಾರ್ಜುನ ದೇವಾಲಯವನ್ನು ಹೊಯ್ಸಳ ದೊರೆ ವಿಷ್ಣುವರ್ಧನ ಕಟ್ಟಿಸಿದನೆಂಬ ಉಲ್ಲೇಖವಿದೆ. ಕಾಡು ಮೃಗಗಳ ಕಾಟ, ಬೆಳೆದು ನಿಂತ ಕುರುಚಲು ಗಿಡಗಳಿಂದಾಗಿ ಬೆಟ್ಟಕ್ಕೆ ಹೋಗುವ ಭಕ್ತರ ಸಂಖ್ಯೆಯೇ ಅಪರೂಪವಾಗಿತ್ತು.

ಪುಷ್ಪಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಸೋಮಶೇಖರ ಶಿವಾಚಾರ್ಯ ಸ್ವಾಮೀಜಿ ಇದನ್ನೆಲ್ಲ ಗಮನಿಸಿ ಬೆಟ್ಟದ ಸೌಂದರ್ಯಕ್ಕೆ ಕಾಯಕಲ್ಪ ನೀಡಲು ಮುಂದಾದರು. ಅದರ ಫಲವಾಗಿ ಈಗ ಅದೊಂದು ಸುಂದರ ತಾಣವಾಗಿದೆ. ಅಲ್ಲೆಗ ಬಗೆಬಗೆಯ ಗಿಡ, ಮರಗಳು, ಹೂವಿನ ಸಸ್ಯಗಳು, ಜಿಂಕೆ, ನವಿಲು, ಅನೇಕ ವಿಧವಾದ ಪಕ್ಷಿಗಳನ್ನು ನೋಡಿ ಕಣ್ಣು ತುಂಬಿಕೊಳ್ಳಬಹುದು. ಮಠದ ವತಿಯಿಂದ ಗಿರಿಗೆ ಬರುವ ಭಕ್ತಾದಿಗಳಿಗೆ ಊಟ, ತಿಂಡಿ, ವಸತಿ ವ್ಯವಸ್ಥೆ ಕೂಡ ಇದೆ.

ಇಷ್ಟೇ ಅಲ್ಲ. ಪುಷ್ಪಗಿರಿಯಲ್ಲಿ ಪರಿಸರ ಜಾಗೃತಿ ಕಾರ್ಯಕ್ರಮಗಳು ನಡೆಯುತ್ತವೆ. ಸಾವಯವ ಕೃಷಿ ಬಗ್ಗೆ ತರಬೇತಿ ನಿಡಲಾಗುತ್ತದೆ. ಪುಷ್ಪಗಿರಿಯ ಮಠಾಧೀಶರು ಸ್ವಯಂ ಹಳ್ಳಿ, ಹಳ್ಳಿಗೂ ತೆರಳಿ ಸ್ವಚ್ಛತೆ ಬಗ್ಗೆ, ಪರಿಸರ ಕಾಳಜಿ ಬಗ್ಗೆ ಉಪನ್ಯಾಸ ನೀಡುತ್ತಾರೆ.

ಸುತ್ತಲಿನ ಹಳ್ಳಿಗಳಲ್ಲಿ ಮಠದ ವತಿಯಿಂದ ಬಯೋಗ್ಯಾಸ್ ಅಳವಡಿಸಿದ್ದಾರೆ. ಹಸು, ಕೋಳಿ, ಕುರಿಗಳ ಸಾಕಣೆ, ವ್ಯವಸಾಯ ಅಭಿವೃದ್ಧಿ ಹೀಗೆ ರೈತರಿಗೆ ಅನುಕೂಲವಾಗುವಂತಹ ಅನೇಕ ವಿಷಯಗಳ ಮೇಲೆ ಬೆಳಕು ಚೆಲ್ಲುತ್ತಾರೆ. 

ಸಾಲು ಮರದ ತಿಮ್ಮಕ್ಕನ ಕಂಚಿನ ಪ್ರತಿಮೆ ಅನಾವರಣಕ್ಕೂ ಸ್ವಾಮಿಜಿ ಸಿದ್ಧತೆ ನಡೆಸಿದ್ದಾರೆ. ಶಾಲಾ, ಕಾಲೇಜು, ಮನೆಯ ಮುಂದೆ ಗಿಡಗಳನ್ನು ನೆಡಲು ಪ್ರೇರೇಪಿಸುತ್ತಾರೆ. ಪ್ರತಿಯೊಬ್ಬರಿಗೂ ಒಂದು ಸಸಿಯನ್ನು ಉಚಿತವಾಗಿ ಕೊಡುತ್ತಾರೆ.

ಮಠವನ್ನು ಬೆಳೆಸಿ, ತಾವು ಬೆಳೆದು ಬಾಳಲಿಚ್ಛಿಸುವ ಮಠಾಧೀಶರ ಮಧ್ಯೆ ಪರಿಸರ ಬೆಳೆಸಿ, ಉಳಿಸಿ ಎಂದು ಸದ್ದಿಲ್ಲದೆ ಹೋರಾಡುತ್ತ ಬಂದ ಈ ಅಪರೂಪದ ಸ್ವಾಮೀಜಿ ಒಂದು ಬೆಟ್ಟಕ್ಕೆ ಹಸಿರು ಸೌಂದರ್ಯ ತುಂಬಿದ್ದಾರೆ.

ಪುಷ್ಪಗಿರಿಗೆ ಹಳೇಬೀಡಿನಿಂದ ಬಸ್, ಆಟೊ ವ್ಯವಸ್ಥೆ ಇದೆ. ಪರಿಸರ ಕಾಳಜಿ ಕಾರ್ಯಕ್ರಮಗಳಿಗೆ ಉಚಿತವಾಗಿ ಇಲ್ಲಿ ವ್ಯವಸ್ಥೆ ಮಾಡಲಾಗುತ್ತದೆ. ಶಾಲಾ ಕಾಲೇಜುಗಳು, ಪರಿಸರ ಕಾಳಜಿಯುಳ್ಳ ಸಂಸ್ಥೆಗಳು ಇಲ್ಲಿ ವಿಚಾರ ಸಂಕಿರಣಗಳನ್ನು ನಡೆಸಬಹುದು.  ವಿವರಗಳಿಗೆ www.spmpushpagiri.com

 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT