ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಂಡೀಪುರದಲ್ಲಿ ಜಿದ್ದಾ ಜಿದ್ದಿ

Last Updated 23 ಜುಲೈ 2012, 19:30 IST
ಅಕ್ಷರ ಗಾತ್ರ

ಇದು ಆಧಿಪತ್ಯದ ಪ್ರಶ್ನೆ! ಅಸಂಖ್ಯಾತ ವರ್ಷಗಳಿಂದ ಅರಣ್ಯಗಳಲ್ಲೇ ವಾಸಿಸುತ್ತ ವಿಕಾಸಗೊಂಡಿರುವ ಕಾಡಾನೆಗಳಿಗೆ ನಮ್ಮ ಅರಣ್ಯ ಇಲಾಖೆ ಸವಾಲು ಹಾಕಿರುವ (ಅಧಿಕ) ಪ್ರಸಂಗ ಇದು!

 ಕಾಡುಗಳಲ್ಲಿ ವನ್ಯಜೀವಿಗಳು ಸ್ವಚ್ಛಂದವಾಗಿ ವಿಹರಿಸಬೇಕೆ ಅಥವಾ ಅಲ್ಲಿ ಅರಣ್ಯ ಇಲಾಖೆ ಕಾರುಬಾರು ನಡೆಸಬೇಕೆ ಎಂಬ ಜಿಜ್ಞಾಸೆ. ಏಕೆಂದರೆ ಬಂಡೀಪುರ ರಾಷ್ಟ್ರೀಯ ಉದ್ಯಾನದಲ್ಲಿ ನಡೆಯುತ್ತಿರುವ ಸಂಘರ್ಷ ಈ ಪ್ರಶ್ನೆ ಹುಟ್ಟುಹಾಕಿದೆ.

 ಆನೆ ಮತ್ತು ಮಾನವ ಸಂಘರ್ಷ ಕೇಳಿದ್ದೀರಿ. ಆದರೆ ಆನೆ ಮತ್ತು ಅರಣ್ಯ ಇಲಾಖೆ ಸಂಘರ್ಷ ಕೇಳಿದ್ದೀರಾ? ಅಲ್ಲಿ ನಡೆಯುತ್ತಿರುವುದು ಅದೇ. ಕಾಡಿನ ನಿಜವಾದ ಹಕ್ಕುದಾರರು ನಾವೇ ಎಂದು ಕಾಡಾನೆಗಳು ಸಂಘರ್ಷಕ್ಕಿಳಿದರೆ, ಕಾಡು ನಮಗೇ ಸೇರಿದ್ದು ಎಂದು ಅರಣ್ಯ ಇಲಾಖೆ ಜಟಾಪಟಿ ನಡೆಸಿದೆ. 

 ಮೇಲುಕಾಮನಹಳ್ಳಿಯಿಂದ ಕೆಕ್ಕನಹಳ್ಳಿವರೆಗೆ ಸುಮಾರು 20 ಕಿ.ಮೀ ಉದ್ದಕ್ಕೆ ಮೈಸೂರು- ಊಟಿ ರಾಷ್ಟ್ರೀಯ ಹೆದ್ದಾರಿ (ಎನ್‌ಎಚ್ 67) ಬಂಡೀಪುರ ರಾಷ್ಟ್ರೀಯ ಉದ್ಯಾನದ ಮೂಲಕ ಹಾದು ಹೋಗುತ್ತದೆ. ಬಂಡೀಪುರದೊಳಗೆ ಈ ಹೆದ್ದಾರಿ ಹಾದು ಹೋಗುವ ಜಾಗ ಕಾಡಾನೆಗಳ ಅತ್ಯುತ್ತಮ ಆವಾಸ ನೆಲೆ. ಇಲ್ಲೇ ನಡೆಯುತ್ತಿದೆ ಕಾಡಾನೆ ಮತ್ತು ಅರಣ್ಯ ಇಲಾಖೆಯ ವಿಚಿತ್ರ ಯುದ್ಧ.

 ಈ ರಸ್ತೆಯ ಉದ್ದಕ್ಕೂ ಎಡ- ಬಲಗಳಲ್ಲಿ ಸಿಮೆಂಟ್ ಕಾಂಕ್ರೀಟ್‌ನ 16 ಫಲಕ ನಿರ್ಮಿಸಿ ಅರಣ್ಯ ಹಾಗೂ ವನ್ಯಜೀವಿಗಳ ಸಂರಕ್ಷಣೆ ಕುರಿತ ಘೋಷಣೆಗಳನ್ನು ಬರೆಸಿದೆ ಅರಣ್ಯ ಇಲಾಖೆ. ರಾಷ್ಟ್ರೀಯ ಉದ್ಯಾನದೊಳಗೆ ಜನರಿಗೆ ಮುಕ್ತವಾಗಿ ಓಡಾಡಲು ಕಾನೂನು ಅವಕಾಶ ಕೊಡುವುದಿಲ್ಲ. ವಾಹನಗಳನ್ನೂ ಅಲ್ಲಿ ನಿಲ್ಲಿಸುವ ಹಾಗಿಲ್ಲ.
 
ಹೀಗಿರುವಾಗ ಕಾಂಕ್ರೀಟಿನ ಆ ಶಾಶ್ವತ ಫಲಕಗಳು ಯಾರಿಗಾಗಿ? ರಾಷ್ಟ್ರೀಯ ಉದ್ಯಾನದೊಳಗೆ ಅಂಥ ಕಾಂಕ್ರೀಟ್ ಫಲಕಗಳ ಅಗತ್ಯ ಇದೆಯೇ? ಫಲಕಗಳಲ್ಲಿ ಬರೆಸಿಕೊಂಡಿರುವ ಘೋಷಣೆಗಳನ್ನು ವನ್ಯಜೀವಿಗಳು ಓದಬಲ್ಲವೇ? ಇಲ್ಲ... ಎಂದಾದ ಮೇಲೆ ಅರಣ್ಯ ಇಲಾಖೆ ಅಷ್ಟೊಂದು ವೆಚ್ಚ ಮಾಡಿ ಗೋಡೆಯಂಥ ಫಲಕಗಳನ್ನು ಏಕೆ ನಿರ್ಮಿಸಿದೆ? ಅದರಿಂದ ಆಗುವ ಪ್ರಯೋಜನವಾದರೂ ಏನು?

 ಬಹುಶಃ ಕಾಡಾನೆಗಳಿಗೂ ಅರಣ್ಯ ಇಲಾಖೆಯ ಈ ದುಂದುವೆಚ್ಚದ ಹಿಂದಿರುವ `ಮರ್ಮ~ ಅರ್ಥವಾಗಿರಬೇಕು. ಜತೆಗೆ ತಮ್ಮ ಆವಾಸ ನೆಲೆಯಲ್ಲಿ ನೈಸರ್ಗಿಕವಲ್ಲದ ಯಾವುದೇ ಅಸ್ತಿತ್ವವನ್ನು ಸಹಿಸಿಕೊಳ್ಳದ ಕಾಡಾನೆಗಳು ಆ ಸಿಮೆಂಟ್ ಗೋಡೆಗಳನ್ನು ಸುಮ್ಮನೆ ಬಿಡುತ್ತವೆಯೇ? 16 ಸಿಮೆಂಟ್ ಫಲಕಗಳಲ್ಲಿ ನಾಲ್ಕನ್ನು ಕಾಡಾನೆಗಳು ಈಗಾಗಲೇ ಒದ್ದು ಪುಡಿಪುಡಿ ಮಾಡಿವೆ.

ಆದರೆ ಇಷ್ಟಕ್ಕೆ ಬಿಡುವುದು ಅರಣ್ಯ ಇಲಾಖೆಯ ಜಾಯಮಾನ ಅಲ್ಲವೇ ಅಲ್ಲ. ಕಾಡಾನೆ ಎಲ್ಲೆಲ್ಲಿ ಫಲಕಗಳನ್ನು ಪುಡಿ ಮಾಡಿದೆಯೋ ಅಲ್ಲೇ ಅಷ್ಟೇ ವೇಗದಲ್ಲಿ ಮತ್ತೆ ಕಾಂಕ್ರೀಟ್ ಫಲಕಗಳನ್ನು ನಿರ್ಮಿಸಿದೆ. ಅಷ್ಟೇ ಅಲ್ಲ ಕಾಡಾನೆಗಳು ಫಲಕಗಳ ಉಸಾಬರಿಗೆ ಬರಬಾರದು ಅಂತ ಸಿಮೆಂಟ್ ಲಕಗಳ ಮೇಲ್ಭಾಗದಲ್ಲಿ ಭರ್ಚಿಗಳಂತಿರುವ ಕಬ್ಬಿಣದ ಉದ್ದನೆಯ ಚೂಪು ಮುಳ್ಳುಗಳನ್ನು ನೆಟ್ಟಿದೆ. ಆದರೆ ಇವೆಲ್ಲ ಆನೆಗಳಿಗೆ ಯಾವ ಲೆಕ್ಕ? ಅರಣ್ಯ ಇಲಾಖೆ ಫಲಕಗಳನ್ನು ನಿರ್ಮಿಸಿದಷ್ಟೂ ಕಾಡಾನೆಗಳು ಅವನ್ನು ಒದ್ದು ಉರುಳಿಸಿವೆ.

 ತಮ್ಮ ಎದುರಿಗಿರುವ ಮರ ಅಥವಾ ಇನ್ಯಾವುದೇ ಆಕೃತಿಗಳನ್ನು ಕಂಡಾಗ ಅವಕ್ಕೆ ಒರಗುವುದು ಅಥವಾ ಮೈ ತುರಿಸಿಕೊಳ್ಳುವುದು ಆನೆ ಸೇರಿದಂತೆ ಸಾಮಾನ್ಯವಾಗಿ ಎಲ್ಲ ವನ್ಯಜೀವಿಗಳ ಅಭ್ಯಾಸ. ಫಲಕಗಳಲ್ಲಿ ನೆಟ್ಟ ಮುಳ್ಳುಗಳಿಗೆ ಅರಿಯದೆ ವನ್ಯಜೀವಿಗಳು ಒರಗಿ ತುರಿಸಿಕೊಂಡರೆ ಗಾಯವಾಗುವುದು ಸಹಜ.
 
ತುಕ್ಕು ಹಿಡಿದ ಕಬ್ಬಿಣದ ಮುಳ್ಳು ಚುಚ್ಚಿದರೆ ಗಾಯವಾಗಿ ದೇಹದಲ್ಲಿ ನಂಜು ಉಂಟಾಗಬಹುದು. ಹೀಗಿರುವಾಗ ವನ್ಯಜೀವಿಗಳ ಸಂರಕ್ಷಣೆಯ ಹೊಣೆ ಹೊತ್ತ ಇಲಾಖೆಯೇ ಈ ರೀತಿ ಬೇಜವಾಬ್ದಾರಿಯಿಂದ ವರ್ತಿಸಿದರೆ ಹೇಗೆ?

 ಆನೆ ಬಹಳ ಸೂಕ್ಷ್ಮ ಸಂವೇದನೆಯ ಜೀವಿ. ಮನುಷ್ಯರಂತೆ ಅದಕ್ಕೂ ಪ್ರೀತಿ, ಕೋಪ, ರಾಗ, ದ್ವೇಷಗಳೆಲ್ಲ ಇದೆ. ವಿನಾಕಾರಣ ತೊಂದರೆ ಕೊಡುವುದನ್ನು ಅದು ಸಹಿಸುವುದಿಲ್ಲ. ಇದು ಜನಸಾಮಾನ್ಯರಿಗಿಂತ ಅರಣ್ಯ ಇಲಾಖೆ ಸಿಬ್ಬಂದಿಗೆ ಚೆನ್ನಾಗಿ ಗೊತ್ತು. ಆದರೂ ಏಕೆ ಈ ಹಟ ಎಂಬುದೇ ಅರ್ಥವಾಗುತ್ತಿಲ್ಲ.

 ತಮಾಷೆಯೆಂದರೆ ಅರಣ್ಯ ಹಾಗೂ ವನ್ಯಜೀವಿಗಳ ಸಂರಕ್ಷಣೆಯಲ್ಲಿ ಮುಂಚೂಣಿಯಲ್ಲಿ ನಿಂತು ಮಹತ್ವದ ಕರ್ತವ್ಯ ನಿರ್ವಹಿಸುವ ಗಾರ್ಡ್, ವಾಚರ್‌ಗಳಿಗೆ ಸಕಾಲದಲ್ಲಿ ಸಂಬಳ ನೀಡಲು, ಅವರಿಗೆ ಸಮವಸ್ತ್ರ, ಬೂಟುಗಳಂಥ ಪ್ರಾಥಮಿಕ ಅಗತ್ಯಗಳನ್ನು

ಸಮರ್ಪಕವಾಗಿ ಪೂರೈಸಲು  ಇಲಾಖೆಯಲ್ಲಿ ದುಡ್ಡಿನ ಕೊರತೆ ಇದೆ! ಅರಣ್ಯ, ವನ್ಯಜೀವಿ ಸಂರಕ್ಷಣೆಯಲ್ಲಿ ಅಗತ್ಯವಾದ  ವೈರ್‌ಲೆಸ್, ಶಸ್ತ್ರ, ವಾಹನಗಳನ್ನು ಸುಸ್ಥಿತಿಯಲ್ಲಿಡಲು ಹಾಗೂ ವಾಹನಗಳಿಗೆ ಬೇಕಾದ ಇಂಧನ ಪೂರೈಸಲು ಇಲಾಖೆಯಲ್ಲಿ ದುಡ್ಡಿಲ್ಲ! ಆದರೆ ನಿಸರ್ಗದ ಪ್ರಯೋಗಶಾಲೆ ಎನಿಸಿರುವ ಅರಣ್ಯಕ್ಕೆ (ಅಗತ್ಯ ಇಲ್ಲದಿದ್ದರೂ) ಸಿಮೆಂಟ್, ಕಲ್ಲು, ಇಟ್ಟಿಗೆ, ಕಬ್ಬಿಣ ಒಯ್ಯಲು ದುಡ್ಡಿನ ಕೊರತೆಯೂ ಇಲ್ಲ! ಯಾವ ಅಡೆತಡೆಯೂ ಇಲ್ಲ!              

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT