ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬುತ್ತಿ ಪೂಜೆ

Last Updated 30 ಜುಲೈ 2012, 19:30 IST
ಅಕ್ಷರ ಗಾತ್ರ

ಶ್ರಾವಣ, ಕಾರ್ತಿಕ ಮಾಸ, ಶಿವರಾತ್ರಿಯಂಥ ಸಂದರ್ಭಗಳಲ್ಲಿ  ಗ್ರಾಮೀಣ ಪ್ರದೇಶಗಳಲ್ಲಿ ವಿಶಿಷ್ಟವಾದ `ಬುತ್ತಿ ಪೂಜೆ~ ರೂಢಿಯಲ್ಲಿದೆ. ಆಗ ಮಾಡುವ ಅಲಂಕಾರದ್ದೇ ಒಂದು ವಿಶೇಷ. ಇದಕ್ಕೆ ಸಾಕಷ್ಟು ಪರಿಣತಿ ಬೇಕು. ಬೆಳಗಾವಿ ಜಿಲ್ಲೆ ಸವದತ್ತಿ ತಾಲೂಕಿನ ಮುನವಳ್ಳಿಯ ಶ್ರೀಶೈಲಸ್ವಾಮಿ ಸಂಭಾಳಮಠ ಅವರದು ಈ ಅಲಂಕಾರದಲ್ಲಿ ಎತ್ತಿದ ಕೈ.

65 ವರ್ಷದ ಶ್ರೀಶೈಲಸ್ವಾಮಿ ಓದಿದ್ದು ಕೇವಲ ಎರಡನೆಯ ತರಗತಿ, ಬಾಲ್ಯದಿಂದಲೂ ಕಿತ್ತು ತಿನ್ನುವ ಬಡತನ. ಆದರೆ ತಂದೆಗೆ ಕಲಾಕುಸುರಿ ಕೆಲಸದಲ್ಲಿ ಸಹಾಯ ಮಾಡುತ್ತ ಅದರಲ್ಲಿ ಮುಂದೆ ಬಂದದ್ದು ಅವರ ಜೀವನದ ಮಹತ್ವದ ತಿರುವು.

ಪ್ರತಿ ವರ್ಷ ಮಣ್ಣೆತ್ತಿನ ಅಮಾವಾಸ್ಯೆ ವೇಳೆಗೆ ಗಣೇಶ ಮೂರ್ತಿ ತಯಾರಿಕೆ ಪ್ರಾರಂಭಿಸುತ್ತಾರೆ. ಗೌರಿ ಹಬ್ಬದ ವೇಳೆಗೆ ಗೌರಿ ಮೂರ್ತಿ, ಹೋಳಿ ಹಬ್ಬಕ್ಕೆ ರತಿ-ಮನ್ಮಥ, ಮೋಹರಂ ಕಾಲಕ್ಕೆ ಹೆಜ್ಜೆ ಮೇಳದವರಿಗೆ ಹೂಗುಚ್ಛಗಳು, ಮದುವೆಗೆ ಬಾಸಿಂಗಗಳು... ಹೀಗೆ ಎಲ್ಲ ವಿಧ, ವೈವಿಧ್ಯ, ಸಾಂಪ್ರದಾಯಿಕ ಅಂದಚೆಂದಕ್ಕೆ ಬೇಕಾದ ಸಾಮಗ್ರಿ ತಯಾರಿಕೆಯಲ್ಲಿ ನುರಿತಿದ್ದಾರೆ.

ಶ್ರಾವಣ ಮಾಸದಲ್ಲಿ ದೇವಾಲಯಗಳಲ್ಲಿ ಇವರು ಕಟ್ಟುವ ಬುತ್ತಿ ಪೂಜೆ ಕುತೂಹಲ, ಅಚ್ಚರಿ ಉಂಟು ಮಾಡುತ್ತದೆ. ಬುತ್ತಿ ಪೂಜೆಗೆ ಇವರು ರಾತ್ರಿಯಿಡೀ ಮಗನೊಂದಿಗೆ ನಿದ್ರೆಗೆಟ್ಟು ಪೂರ್ವಸಿದ್ಧತೆ ಮಾಡಿಕೊಳ್ಳುತ್ತಾರೆ. ಬೆಳಗಿನ ಜಾವ ಮಡಿಯಿಂದ ಅಕ್ಕಿಯನ್ನು ಚೆನ್ನಾಗಿ ಕುದಿಸಿ ಅನ್ನ ಮಾಡಿಕೊಂಡು ದೇವರಿಗೆ ಮೊದಲು ಪೂಜೆ ಸಲ್ಲಿಸುತ್ತಾರೆ.

ನಂತರ ಶುಭ್ರವಾದ ಬಿಳಿಯ ವಸ್ತ್ರ ಅಥವ ಧೋತರದ ಬಟ್ಟೆಯಲ್ಲಿ ಆ ಅನ್ನವನ್ನು ಹಾಕಿ, ಮೊಸರು ಕಲಸಿ ಬೇಕಾದ ರೀತಿಯಲ್ಲಿ ಹದ ಮಾಡಿಕೊಳ್ಳುತ್ತಾರೆ. ನಂತರ ಬುತ್ತಿ ಪೂಜೆಯ ಮೂರ್ತಿ (ಹದವಾದ ಅನ್ನದಲ್ಲಿ ತಯಾರಿಸಿದ ದೇವರ ಮೂರ್ತಿ) ಕಟ್ಟುತ್ತಾರೆ.

ಇಷ್ಟಾಗುವಾಗ ಬೆಳಗು ಹರಿದಿರುತ್ತದೆ. ನಂತರ ಮೂರ್ತಿಗೆ ವಿವಿಧ ಬಣ್ಣದ ಪೇಪರ್ ಕಟಿಂಗ್ಸ್‌ಗಳನ್ನು ಹಚ್ಚಿ ಹೊಸ ರೂಪ ಕೊಡುತ್ತಾರೆ. ಬುತ್ತಿ ಪೂಜೆ ನಿಜಕ್ಕೂ ಕಠಿಣ. ಇದಕ್ಕೆ ಮೆದುವಾಗಿ ಅನ್ನವಾಗುವ ಅಕ್ಕಿ ಅವಶ್ಯಕ.

ಜೊತೆಗೆ ಅದನ್ನು ಕುದಿಸಿ ಚೆನ್ನಾಗಿ ನಾದುವ ಕಾರ್ಯವೂ ಒಂದು ಕಲೆ. ಸ್ವಲ್ಪ ಹದ ತಪ್ಪಿದರೂ ಎಲ್ಲ ಕೆಲಸ ಕೆಟ್ಟಂತೆ. ಆದ್ದರಿಂದ ಬಹಳ ಎಚ್ಚರಿಕೆ ಅಗತ್ಯ ಎನ್ನುತ್ತಾರೆ. (ಲೇಖಕರ ಮೊಬೈಲ್ 81472 75277).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT