ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಳೆಗಾಗಿ ಬೀಗ ತರುವರು

ಆಚಾರ ವಿಚಾರ–14
Last Updated 1 ಆಗಸ್ಟ್ 2016, 19:30 IST
ಅಕ್ಷರ ಗಾತ್ರ

ಮಳೆಗಾಗಿ ಕಪ್ಪೆಗಳ ಮದುವೆ ಮಾಡುವುದನ್ನು ನೋಡಿದ್ದೇವೆ, ಮಕ್ಕಳು  ಗುರ್ಜಿ ಆಡಿ ಮಳೆರಾಯನ ತರಿಸುವ ಪರಿ ಕಂಡಿದ್ದೇವೆ, ಮಳೆಗಾಗಿ ಹೋಮ ಹವನ ಮಾಡುವುದನ್ನು ಕಂಡಿದ್ದೇವೆ. ಆದರೆ ಬಳ್ಳಾರಿ ಜಿಲ್ಲೆ ಕೂಡ್ಲಿಗಿ ತಾಲೂಕಿನ ಉಜ್ಜಿನಿ ಗ್ರಾಮದಲ್ಲಿ ಮಳೆ ತರಿಸುವುದಕ್ಕಾಗಿ  ವಿಚಿತ್ರ ಆಚರಣೆ ಇದೆ. ಅದೇ ಬೀಗದ ಯಾತ್ರೆ.

ಉಜ್ಜಿನಿ ಗ್ರಾಮದ ಒಂಬತ್ತು ಜನ ಆಯಾಗಾರರೇ ಮಳೆಬೀಗ ತರುವವರು. ಇಲ್ಲಿಯ ವೀರಶೈವ ಧರ್ಮದ ಪಂಚಪೀಠಗಳಲ್ಲೊಂದಾದ ಉಜ್ಜಯಿನಿ ಸದ್ಧರ್ಮ ಪೀಠದಿಂದ ಇಲ್ಲಿಯ ಗುರುಗಳ ಆಶೀರ್ವಾದ ಪಡೆದು   ಹಾಲುಮತ, ಗಂಗಾಮತ, ವಾಲ್ಮೀಕಿ, ಮಡಿವಾಳ, ಛಲವಾದಿ, ಕೊರವ... ಹೀಗೆ ಗ್ರಾಮದ ಆಯಾಗಾರರು ಮಳೆಬೀಗ ತರಲು ಐದು ವರ್ಷಕ್ಕೊಮ್ಮೆ ಸಿದ್ಧವಾಗುತ್ತಾರೆ. 

ಹೆಗಲ ಮೇಲೆ ಕಂಬಳಿ, ತಲೆ ಮೇಲೆ ಬುತ್ತಿಯ ಗಂಟು ಹೊತ್ತು  ಕೈಯಲ್ಲಿ ಬೆತ್ತ ಹಿಡಿದ ಆಯಾಗಾರರಿಗೆ  ಮನದಲ್ಲಿ ಮಳೆಬೀಗ ತರುವ ಕಾತುರ. ಸದ್ಧರ್ಮ ಪೀಠದ ಜಗದ್ಗುರುಗಳ ಆಶೀರ್ವಾದ ಪಡೆದು ಕೊಪ್ಪಳ ಜಿಲ್ಲೆ ಹಿರೇ ಸಿಂದೋಗಿಗೆ 100 ಕಿ.ಮೀ ಕಾಲ್ನಡಿಗೆಯಲ್ಲೇ ಹೋಗಿ ಅಲ್ಲಿಂದ ಮಳೆಬೀಗ ತರುವ ಸಂಪ್ರದಾಯ ಇದು. ಮಳೆಬೀಗ ತರುವ ಆಯಾಗಾರರಿಗೆ  ಉಜ್ಜಿಯಿನಿ ಪೀಠ ಹಾಗೂ ಗ್ರಾಮಸ್ಥರು ಕೆಲವು ಕಟ್ಟುಬದ್ಧ ನಿಯಮಗಳನ್ನು ಹಾಕುತ್ತಾರೆ. ಇದು ಕಾಟಾಚಾರಕ್ಕೆ ನಡೆಯುವ ಪಾದಯಾತ್ರೆ ಅಲ್ಲ.

ಯಾರೂ ಕಾಲಿಗೆ ಚಪ್ಪಲಿ ಹಾಕುವಂತಿಲ್ಲ, ಹಿರೇ ಸಿಂದೋಗಿಗೆ ಹೋಗುವಾಗ ಮಾರ್ಗ ಮಧ್ಯದಲ್ಲಿ ಬರುವ ಊರುಗಳ ಮಧ್ಯ ಹಾದುಹೋಗುವಂತಿಲ್ಲ. ತಮ್ಮ ಗುಂಪು ಬಿಟ್ಟು ದಾರಿಯಲ್ಲಿ ಸಿಗುವ ಯಾರೊಂದಿಗೂ ಮಾತನಾಡುವಂತಿಲ್ಲ... ಹೀಗೆ ಹತ್ತಾರು ಕಟ್ಟಳೆಗಳನ್ನು ಇವರು ಪಾಲಿಸುತ್ತಾರೆ.

‘ನಾವು ಸಿಂಧೋಗಿಗೆ ಹೋಗುವಾಗ ದಾರಿ ಮಧ್ಯೆ ನಮ್ಗೆ ಯಾರು ತೊಂದ್ರೆ ಕೊಡೋದಿಲ್ರೀ, ನಮ್ಮ ಪೀಠದಿಂದ, ಗ್ರಾಮಪಂಚಾಯ್ತಿ, ಪೊಲೀಸ್ ಠಾಣೆ, ತಹಶೀಲ್ದಾರಿಂದ ಪತ್ರ ಒಯ್ದಿರ್ತೀವಿ. ಯಾರಾದ್ರೂ ಅಕ್ಷರಸ್ಥರು, ಅಧಿಕಾರಿಗಳು ಕೇಳಿದ್ರೆ ಪತ್ರ ಕೊಡ್ತೀವೇ ಹೊರತೂ ಜಪ್ಪಯ್ಯ ಅಂದ್ರೂ ಯಾರೊಂದಿಗೂ ಮಾತಾಡಲ್ಲ ನೋಡ್ರಿ’ ಎನ್ನುತ್ತಾರೆ ಈಗ್ಗೆ ಎರಡು ವರ್ಷಗಳ ಹಿಂದೆ ಮಳೆಬೀಗ ತರಲು ಹೋಗಿದ್ದ ಉಜ್ಜಿನಿಯ ಆಯಾಗಾರ  ಸಿದ್ದೇಶಪ್ಪ.

ಐದು ವರ್ಷಗಳಿಗೊಮ್ಮೆ ರೋಹಿಣಿ ಮಳೆಯ  ದಿನಗಳಲ್ಲಿ ಈ ಆಚರಣೆ ನಡೆಯುತ್ತದೆ. ಈ ವರ್ಷ ಮೇ  ತಿಂಗಳ ಕೊನೆ ವಾರದಲ್ಲಿ ಈ ಆಚರಣೆ ನಡೆಯಿತು. ಶನಿವಾರವೇ  ಮಳೆಬೀಗ ತರುವ ಭಕ್ತರ ತಂಡ ಹೊರಡಬೇಕೆನ್ನುವ ಪದ್ಧತಿ ಇದೆ. ಭಾನುವಾರ ರಾತ್ರಿ ಕೊಪ್ಪಳ ಜಿಲ್ಲೆಯ ಸಿಂಧೋಗಿ ತಲುಪಲಿದ್ದು, ಆಗ ಅಲ್ಲಿಯ ಗ್ರಾಮಸ್ಥರು ಮೆರವಣಿಗೆ ಮೂಲಕ ಇವರನ್ನು ಸ್ವಾಗತಿಸಿ ಅಲ್ಲಿರುವ ಮರುಳಸಿದ್ದೇಶ್ವರ ಸ್ವಾಮಿ ದೇವಸ್ಥಾನಕ್ಕೆ ಕರೆದೊಯ್ಯುತ್ತಾರೆ.

ಇಲ್ಲಿ ಉಜ್ಜಿಯಿನಿ ಶ್ರೀ ಮರುಳಸಿದ್ದೇಶ್ವರ ಶಾಖಾಮಠ ಮತ್ತು ಈ ಹಿಂದೆ ಉಜ್ಜಿನಿ ಪೀಠದ ಜಗದ್ಗುರುಗಳಾಗಿದ್ದ ಮಳೆ ಮಲ್ಲಿಕಾರ್ಜುನ ಸ್ವಾಮಿಗಳ ಗದ್ದುಗೆ ಇದ್ದು, ಉಜ್ಜಿನಿಯಿಂದ ಹೋಗಿರುವ ಆಯಾಗಾರರು  ರಾತ್ರಿ ವಾಸ್ತವ್ಯ ಹೂಡುತ್ತಾರೆ. ನೂರಾರು ವರ್ಷಗಳ ಹಿಂದೆಯೇ ಶ್ರೀ ಮಳೆಮಲ್ಲಿಕಾಜು೯ನ ಸ್ವಾಮಿಗಳು ವೀರಶೈವ ಧರ್ಮ ಪ್ರಚಾರ ಮಾಡುವಾಗ ಸಿಂಧೋಗಿಗೆ ಹೋಗಿ ಅಲ್ಲಿ ಮಳೆಬೀಗ ಮರೆತು ಉಜ್ಜಿನಿಗೆ  ಬಂದಿದ್ದರು. ಅದನ್ನು ತರುವುದಕ್ಕಾಗಿಯೇ ಈ ಆಚರಣೆ ಎನ್ನುವ ನಂಬಿಕೆ ಇಲ್ಲಿಯ ಗ್ರಾಮಸ್ಥರದ್ದು.

ಈ ಆಚರಣೆಯನ್ನು ವೈಜ್ಞಾನಿಕವಾಗಿ ನೋಡಿದಾಗ ಇದರಲ್ಲಿ ರೈತರ ಕಾಳಜಿಯೂ ಇದೆ. ಮಳೆಬೀಗ ತರುವ ಭಕ್ತರು ಸಿಂಧೋಗಿಯಲ್ಲಿ ತಾವು ತಂದಿದ್ದ ಹೊಸ ಕಂಬಳಿ, ವಿಭೂತಿಗಳನ್ನು ಅಲ್ಲಿ ಅರ್ಪಿಸುತ್ತಾರೆ. ಉಜ್ಜಿನಿಯಿಂದ ತೆಗೆದುಕೊಂಡು ಹೋಗಿದ್ದ ಬಿತ್ತನೆ  ಬೀಜಗಳು ಅಲ್ಲಿ   ಅದಲಿ ಬದಲಿಯಾಗುತ್ತವೆ. ಅಲ್ಲಿಂದ ಅವರು ಕೊಡುವ ಬೀಜಧಾನ್ಯಗಳನ್ನು ಇತರೆ ಸಾಮಗ್ರಿಗಳನ್ನು ತೆಗೆದುಕೊಂಡು  ಸೋಮವಾರ ಹೊರಟ ಭಕ್ತರು ಮಂಗಳವಾರ ರಾತ್ರಿ ಉಜ್ಜಿನಿ ಗ್ರಾಮಕ್ಕೆ ಬರುತ್ತಾರೆ.

ಬುಧವಾರ ಬೆಳಿಗ್ಗೆ ಹಿರೇ ಸಿಂಧೋಗಿಯಿಂದ ತಂದ ಧಾನ್ಯಗಳ ಜೊತೆಗೆ ಉಜ್ಜಿನಿ ಗ್ರಾಮದ ಎಲ್ಲಾ ರೈತರು ಸೇರು, ಎರಡು ಸೇರು ಧಾನ್ಯ ತಗೊಂಡು ಹೋಗಿ  ಸಿಂಧೋಗಿಯಿಂದ ತಂದ ಧಾನ್ಯಗಳ ಜೊತೆ ಬೆರೆಸಿ ನಂತರ ಅಲ್ಲಿಂದ ತಂದ ಜೋಳವನ್ನು ತಮ್ಮ ತಮ್ಮ ಜಮೀನುಗಳಲ್ಲಿ  ಬಿತ್ತನೆ ಮಾಡುವುದು ಇಲ್ಲಿಯ ಸಂಪ್ರದಾಯ. ಹೀಗೆ ಆಚರಣೆ ಮಾಡುವುದರಿಂದ  ಬೆಳೆ, ಉತ್ತಮ ಮಳೆ, ಹೆಚ್ಚು  ಇಳುವರಿ ಬರುತ್ತದೆ ಎನ್ನುತ್ತಾರೆ ಉಜ್ಜಿನಿಯ ರೈತ ಎಂ.ಮರುಳಸಿದ್ದಪ್ಪ. 

ರೈತಪರ ಕಾಳಜಿಯನ್ನಿಟ್ಟುಕೊಂಡು ಆಚರಿಸುವ ಮಳೆಬೀಗ ಯಾತ್ರೆ ಈ ಆಧುನಿಕ ಯುಗದಲ್ಲಿಯೂ ನಡೆದುಕೊಂಡು ಬರುತ್ತಿರುವುದು ಸೋಜಿಗ.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT