ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶೇಷ ಮಕ್ಕಳ ಆರೈಕೆಯಲ್ಲಿ ‘ಅರುಣಚೇತನ’

Last Updated 11 ಏಪ್ರಿಲ್ 2016, 19:33 IST
ಅಕ್ಷರ ಗಾತ್ರ

ಬುದ್ಧಿಮಾಂದ್ಯರು ಹೆತ್ತ ತಂದೆ ತಾಯಂದಿರಿಂದಲೇ ಕಡೆಗಣನೆಗೆ ಒಳಗಾಗುತ್ತಿರುವ ಈ ಕಾಲಘಟ್ಟದಲ್ಲಿ ಅವರ ವಿಶೇಷ ಆರೈಕೆಯಲ್ಲಿ ತೊಡಗಿ ಅವರ ಬಾಳಲ್ಲಿ ಹೊಂಗನಸನ್ನು ಮೂಡಿಸುತ್ತಿರುವ ಸಂಸ್ಥೆ ಮುಧೋಳದ ಅರುಣಚೇತನ ಶಾಲೆ.

ಬುದ್ಧಿಮಾಂದ್ಯ ಮಕ್ಕಳನ್ನು ಸಮಾಜದ ಮುಖ್ಯವಾಹಿನಿಗೆ ತರಲು ಇಲ್ಲಿ ಶ್ರಮಿಸಲಾಗುತ್ತಿದೆ. ಬೆಳಿಗ್ಗೆ ಉದಯರಾಗದಿಂದ ಹಿಡಿದು, ಸ್ನಾನದ ಮಂತ್ರ, ಭೋಜನಾರಂಭದ ಮಂತ್ರ, ರಾತ್ರಿಯ ಐಕ್ಯಮಂತ್ರದವರೆಗೆ ಎಲ್ಲ ಸಂಸ್ಕಾರಗಳನ್ನೂ ಇಲ್ಲಿ ಮಕ್ಕಳಿಗೆ ರೂಢಿ ಮಾಡಿಸಲಾಗುತ್ತದೆ. ಹಲ್ಲುಜ್ಜುವುದು, ಸ್ನಾನ ಮಾಡುವುದು, ಯೋಗಾಸನ, ವ್ಯಾಯಾಮ, ಧ್ಯಾನ ಮಾಡುವುದನ್ನೂ ಇಲ್ಲಿ ಹೇಳಿಕೊಡಲಾಗುತ್ತದೆ.

ಸರ್ಕಾರದ ಯಾವುದೇ ಸೌಲಭ್ಯಗಳನ್ನು ಪಡೆಯದೆ, ಜನರಿಂದ ಬರುವ ಧನ ಸಹಾಯದಿಂದಲೇ ಕಾರ್ಯ ನಿರ್ವಹಿಸುತ್ತಿದೆ ಈ ಸಂಸ್ಥೆ. ಹುಬ್ಬಳ್ಳಿಯ ಸೇವಾಭಾರತಿ ಟ್ರಸ್ಟ್‌ನವರ ಆಶ್ರಯದಲ್ಲಿ ನಡೆಯುವ ಈ ಶಾಲೆಗೆ ಪೂರ್ಣಾವಧಿಯಲ್ಲಿ ಮಾರುತಿ.ಎಚ್.ಹಳ್ಳೂರೆಯವರು ಕಾರ್ಯನಿರ್ವಹಿಸುತ್ತಿದ್ದು, ಅವರು ಮಕ್ಕಳ ಆರೈಕೆಯಲ್ಲಿ ತೊಡಗಿಕೊಂಡಿದ್ದಾರೆ.

2011ರ ಮಾರ್ಚ್‌ ತಿಂಗಳಿನಲ್ಲಿ ಕೇವಲ ನಾಲ್ಕು ಮಕ್ಕಳೊಂದಿಗೆ ಆರಂಭವಾಗಿರುವ ಈ ಶಾಲೆಯಲ್ಲಿ ಈಗ 24 ಮಕ್ಕಳು ಅಭ್ಯಸಿಸುತ್ತಿದ್ದಾರೆ. ಸಂಸ್ಥೆಗೆ ತಮ್ಮ ಮನೆಯನ್ನೇ ಬಿಟ್ಟುಕೊಟ್ಟಿದ್ದಾರೆ ಕುಶಾಲಗೌಡ ಕೆ. ಪಾಟೀಲರು. ಒಂದು ಸಮಿತಿಯನ್ನು ರಚಿಸಲಾಗಿದ್ದು, ಮಕ್ಕಳಿಗೆ ವಿಶೇಷವಾಗಿ ಅಗತ್ಯವುಳ್ಳ ಸಾಮಗ್ರಿಗಳನ್ನು, ಕಾರ್ಯ ಚಟುವಟಿಕೆಗಳನ್ನು, ಯೋಜನೆಗಳನ್ನು ರೂಪಿಸಲು ಈ ಸಮಿತಿ ತೀರ್ಮಾನ ತೆಗೆದುಕೊಂಡು ಕಾರ್ಯ ನಿರ್ವಹಿಸುತ್ತದೆ.

ಅಲ್ಪಪ್ರಮಾಣ, ತೀವ್ರ ಪ್ರಮಾಣ, ಅತಿ ಪ್ರಮಾಣ ಬುದ್ಧಿಮಾಂದ್ಯ ಹಾಗೂ ಫಿಸಿಯೋಥೆರಪಿಯ ಅವಶ್ಯಕತೆ ಇರುವ ಮಕ್ಕಳು... ಹೀಗೆ ನಾಲ್ಕು ವಿಭಾಗಗಳನ್ನು ಮಾಡಿ ಮಕ್ಕಳಿಗೆ ಪ್ರತ್ಯೇಕ ತರಬೇತಿ ನೀಡಲಾಗುತ್ತದೆ. ವಿಶೇಷ ತರಬೇತಿ ನೀಡಲು ನಾಲ್ವರನ್ನು ನೇಮಿಸಿಕೊಳ್ಳಲಾಗಿದೆ.

ಮಕ್ಕಳಿಗೆ ಸಾಮೂಹಿಕ ಹುಟ್ಟು ಹಬ್ಬ ಕಾರ್ಯಕ್ರಮ ಆಚರಿಸಲಾಗುತ್ತದೆ. ರಕ್ಷಾ ಬಂಧನ ಕಾರ್ಯಕ್ರಮ, ಶ್ರೀ ಕೃಷ್ಣ ಜನ್ಮಾಷ್ಟಮಿ, ದೀಪ ಪೂಜಾ ಕಾರ್ಯಕ್ರಮ ಹೀಗೆ ಹಬ್ಬಗಳನ್ನು ಆಚರಿಸಲಾಗುತ್ತದೆ. ರಾಷ್ಟ್ರೀಯ ಹಬ್ಬಗಳನ್ನೂ ಇಲ್ಲಿ ಆಚರಿಸಿ ಮಕ್ಕಳಲ್ಲಿ ರಾಷ್ಟ್ರಭಕ್ತಿಯನ್ನೂ ಮೂಡಿಸುತ್ತಿದೆ. ರಾಷ್ಟ್ರಗೀತೆ, ಒಂದೇ ಮಾತರಂ ಸೇರಿದಂತೆ ದೇಶಭಕ್ತಿ ಗೀತೆಗಳನ್ನು ಕಂಠಸ್ಥ ಮಾಡಿಸಲಾಗುತ್ತದೆ.

ವರ್ಷದಲ್ಲಿ ಮಕ್ಕಳಿಗೆ ಎರಡು ಬಾರಿ ಉಚಿತವಾಗಿ ಆರೋಗ್ಯ ತಪಾಸಣೆ ಮಾಡಿಸಲಾಗುತ್ತದೆ. ವೈದ್ಯರಿಗೇ ಸವಾಲಾಗಿದ್ದ ಮಕ್ಕಳು ಇಲ್ಲಿ ಕೊಡುವ ಚಿಕಿತ್ಸೆಗೆ ಗುಣವಾಗಿದ್ದೂ ಉಂಟು. ಒಂದು ಮಗು ಈ ಶಾಲೆಯಲ್ಲಿ ತರಬೇತಿ ಪಡೆದು, ಇದೀಗ ಸಾಮಾನ್ಯ ಶಾಲೆಯಲ್ಲಿ ಪ್ರವೇಶ ಪಡೆದುಕೊಂಡಿದೆ.

‘ಸರ್ಕಾರದ ಸೌಲಭ್ಯಗಳು ನಮ್ಮ ಸಂಸ್ಥೆಗೆ ಬೇಡ. ಆದರೆ ಮಕ್ಕಳಿಗೆ ನೇರವಾಗಿ ಸೌಲಭ್ಯ ಸಿಕ್ಕರೆ ಅವರ ಭವಿಷ್ಯಕ್ಕೆ ದಾರಿಯಾಗುತ್ತದೆ. ಇದೇ ಸಂಸ್ಥೆ ಉದ್ದೇಶ’ ಎನ್ನುತ್ತಾರೆ ಸಮಿತಿಯ ಅಧ್ಯಕ್ಷರು. ಸಂಸ್ಥೆ ಇನ್ನಷ್ಟು ನಿರಾಯಾಸವಾಗಿ ಕಾರ್ಯನಿರ್ವಹಿಸಲು ಸಹಾಯಕ್ಕಾಗಿ ಹಸ್ತ ಚಾಚಿದೆ. ಅಂಥ ದಾನಿಗಳು ಇಲ್ಲಿನ ಮಕ್ಕಳನ್ನು ದತ್ತು ಪಡೆದು ನೆರವಾಗಬಹುದು. ಸಂಪರ್ಕಕ್ಕೆ: 9611777645. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT