ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೈಭವದಲ್ಲಿ ಬೆಂಗಳೂರು ಹೆಬ್ಬಾ ಗಿಲು

Last Updated 24 ಫೆಬ್ರುವರಿ 2014, 19:30 IST
ಅಕ್ಷರ ಗಾತ್ರ

ಬೆಂಗಳೂರಿನ ಹೆಬ್ಬಾಗಿಲು ಎಂದೇ ಗುರುತಿಸಲಾಗಿರುವುದು ತುಮಕೂರು ಜಿಲ್ಲೆಯಲ್ಲಿನ ಶಿವಗಂಗೆ ಬೆಟ್ಟ.
ಸಮುದ್ರ ಮಟ್ಟದಿಂದ 4,547 ಅಡಿ ಎತ್ತರದಲ್ಲಿರುವ ಶಿವಗಂಗೆ ಶಂಖಾಕೃತಿಯ ಬೆಟ್ಟ. ಪೂರ್ವದಿಂದ ಬಸವ, ಪಶ್ಚಿಮದಿಂದ ಗಣೇಶ, ಉತ್ತರದಿಂದ ಶಿವಲಿಂಗ, ದಕ್ಷಿಣದಿಂದ ಸರ್ಪದ ಆಕಾರದಲ್ಲಿ ಕಾಣುತ್ತದೆ. ‘ದಕ್ಷಿಣ ಕಾಶಿ’ ಎಂದೇ ಪ್ರಸಿದ್ಧಿಯನ್ನೂ ಪಡೆದಿದೆ.

ಇದು ವರ್ಷವಿಡೀ ಜಲಧಾರೆಯನ್ನು ಹೊಂದಿರುವ ಅದ್ಭುತ ಬೆಟ್ಟ. ಪುರಾಣ ಪ್ರಸಿದ್ಧ ಗವಿಗಂಗಾಧರೇಶ್ವರ ದೇವಾಲಯಕ್ಕೆ ಇಲ್ಲಿರುವ ರಹಸ್ಯ ಸುರಂಗ ಮಾರ್ಗದಲ್ಲಿ ಸಾಗಿದರೆ ಶ್ರೀರಂಗಪಟ್ಟಣವನ್ನೂ ತಲುಪಬಹುದಂತೆ!
ಶಿವಗಂಗೆ ಮೂಲತಃ ಸಣ್ಣ ಗುಡ್ಡ. ಈ ಗುಡ್ಡದಲ್ಲಿರುವ ಶಿವನ ದೇವಾಲಯದಿಂದ ಇದಕ್ಕೆ ಶಿವಗಂಗೆ ಎಂಬ ಹೆಸರು ಬಂತು. ಇಲ್ಲಿ ಒಂದು ನೀರಿನ ಬುಗ್ಗೆ ಇದ್ದು, ಅದು ಈ ಸ್ಥಳದ ಸೊಬಗನ್ನು ಇಮ್ಮಡಿಗೊಳಿಸುತ್ತಿದೆ. ಸ್ಥಳೀಯರ ಪ್ರಕಾರ ಈ ನೀರಿನ ಬುಗ್ಗೆಯು ಪವಿತ್ರ ಗಂಗೆಯ ಒಂದು ಉಪಶಾಖೆಯಾಗಿದ್ದು, ಆ ಕಾರಣದಿಂದ ಈ ಸ್ಥಳಕ್ಕೆ ಶಿವಗಂಗೆ ಎಂಬ ಹೆಸರು ಬಂದಿದೆ.

ಬೆಟ್ಟದ ಮೇಲೆ ಇರುವ ಗಂಗಾಧರೇಶ್ವರನ ಲಿಂಗದ ಮೇಲೆ ತುಪ್ಪವನ್ನು ಹಾಕಿದರೆ ಬೆಣ್ಣೆಯಾಗಿ ಪರಿವರ್ತನೆ ಆಗುತ್ತದೆ ಎಂಬುದು ಪ್ರತೀತಿ. ಬೆಟ್ಟದ ಶಿವಲಿಂಗದ (ಗಂಗಾಧರೇಶ್ವರ) ಎದುರು ನಂದಿ ವಿಗ್ರಹವಿದೆ. ಎಡಕ್ಕೆ ಪಾರ್ವತಿ ದೇವಸ್ಥಾನ, ಮುಂಭಾಗದಲ್ಲಿ ಕೆಂಪೇಗೌಡರ ಖಜಾನೆ ಇದ್ದ ಗುಹೆಯಿದೆ.

ಅಲ್ಲಿಂದ ಸ್ವಲ್ಪ ದೂರದಲ್ಲಿ ಸುಂದರ ಕೆತ್ತನೆಯ ಏಕಶಿಲಾ ಸ್ಥಂಭಗಳಿಂದ ನಿರ್ಮಾಣವಾದ ಕೆಂಪೇಗೌಡರ ಹಜಾರ, ಕಲ್ಯಾಣ ಮಂಟಪ, ಸಪ್ತ ಮಾತೃಕೆ, ನವಗ್ರಹ ವಿಗ್ರಹಗಳಿವೆ. ಅಗಸ್ತ್ಯ ಋಷಿಗಳು ಇಲ್ಲಿ ತಪಸ್ಸು ಮಾಡಿದ ಸ್ಥಳ ಎನ್ನಲಾದ ಅಗಸ್ತ್ಯ ತೀರ್ಥದ ಸುತ್ತ ನೂರೆಂಟು ಶಿವಲಿಂಗಗಳಿವೆ.

ಸಮೀಪದಲ್ಲಿ ಕಮಲ ತೀರ್ಥ, ಉತ್ತರಕ್ಕೆ ಶೃಂಗೇರಿ ಶಾರದಾ ಪೀಠ ಮತ್ತು ವಹ್ನಿ ಕುಲದ ಮಹಾಲಕ್ಷ್ಮೀ ಪೀಠವಿದೆ. ಪೂರ್ವಕ್ಕೆ ಬೃ

ಹದಾಕಾರದ ರಾಚೋಟಿ ವೀರಭದ್ರಾಲಯದ ಎತ್ತರದ ಗಂಟೆ ಕಂಬ, ಹರಕೆ ಗಣಪ, ಪಾತಾಳಗಂಗೆಗೆ ಹೋಗುವ ಮಾರ್ಗದಲ್ಲಿ ಕ್ಷೇತ್ರದ ಅಧಿ ದೇವತೆ ಹೊನ್ನಾದೇವಿ ದೇವಸ್ಥಾನವಿದೆ.

ಶಿವಗಂಗೆ ಬೆಟ್ಟದ ವಿಶೇಷವೆಂದರೆ ಪೂರ್ವಕ್ಕೆ ವೃಷಭಾಕೃತಿ, ದಕ್ಷಿಣಕ್ಕೆ ಲಿಂಗಾಕೃತಿ, ಪಶ್ಚಿಮಕ್ಕೆ ಗಣಪತಿ, ಉತ್ತರಕ್ಕೆ ಸರ್ಪದ ಆಕೃತಿಯಂತೆ ಕಾಣುತ್ತದೆ. ವಿಷ್ಣುವರ್ಧನನ ಪಟ್ಟ ಮಹಿಷಿ ಶಾಂತಲಾ ದೇವಿಯು ಶಿವಗಂಗೆಯಲ್ಲಿ ಸಲ್ಲೇಖನ ವ್ರತ ಕೈಗೊಂಡು ಮುಕ್ತಿ ಪಡೆದ ಸಂಗತಿ ಕ್ರಿ.ಶ.1131ರ ಶ್ರಾವಣ ಬೆಳಗೊಳದ ಶಾಸನದಲ್ಲಿ ಉಲ್ಲೇಖವಾಗಿದೆ.

ಬೆಟ್ಟದಲ್ಲಿ ಸ್ವಲ್ಪ ಮೇಲೆ ಏರಿದರೆ ಒಳಕಲ್ಲು ತೀರ್ಥ ಎನ್ನುವ ಮತ್ತೊಂದು ಸ್ಥಳವಿದೆ. ಇಲ್ಲಿ ವರ್ಷವಿಡೀ ನೀರು ದೊರೆಯುತ್ತದೆ.

ಹೀಗಿದೆ ಇತಿಹಾಸ, ಪುರಾಣ...
ಕಣಾದ ಎಂಬ ಋಷಿ ಏಕಪಾದದಲ್ಲಿ ನಿಂತು ನೀರಿಗಾಗಿ ತಪಸ್ಸು ಮಾಡಿದ. ಅವನ ತಪೋಶಕ್ತಿಯಿಂದ ಶಿವನ ಜಟೆಯಲ್ಲಿದ್ದ ನೀರು ಭೂಮಿಗೆ ಹರಿದು ಬಂತು. ಅದನ್ನು ಕಂಡ ಮುನಿಗಳು ‘ಶಿವಗಂಗಾ’ ಎಂದರು. ಅದೇ ಶಿವಗಂಗೆ ಕ್ಷೇತ್ರ ಆಗಿದೆ ಎಂದು ಸ್ಥಳ ಪುರಾಣ ಹೇಳುತ್ತದೆ.

ಬೆಂಗಳೂರು ನಿರ್ಮಾತೃ ಕೆಂಪೇಗೌಡ 1550ರಲ್ಲಿ ಶಿವಗಂಗೆಯನ್ನು ವಶಪಡಿಸಿಕೊಂಡಿದ್ದು. ಈ ಕ್ಷೇತ್ರವನ್ನು ಧಾರ್ಮಿಕ ಕ್ಷೇತ್ರವನ್ನಾಗಿ ಅಭಿವೃದ್ಧಿಪಡಿಸಿ ಕಡಿದಾದ, ಎತ್ತರವಾದ ಬೆಟ್ಟಕ್ಕೆ ಸಲೀಸಾಗಿ ಹತ್ತಲು ಕಲ್ಲಿನ ಮೆಟ್ಟಿಲುಗಳನ್ನು ಅಳವಡಿಸಲಾಯಿತು. ದೇವಾಲಯದ ಹಜಾರಗಳನ್ನು ನಿರ್ಮಿಸಲಾಯಿತು. ಆ ಪ್ರದೇಶದಲ್ಲಿ ಬೀಳುವ ಮಳೆನೀರನ್ನು ಸಂಗ್ರಹಿಸಿ ಮರುಬಳಕೆ ಮಾಡುವ ತಂತ್ರಜ್ಞಾನದ ವ್ಯವಸ್ಥೆಯೂ ಆಯಿತು. ಅದು ಪವಿತ್ರ ಶೈವಕ್ಷೇತ್ರವಾಗುವಂತೆ ಶ್ರಮಿಸಿದ್ದು ಕೆಂಪೇಗೌಡ. ಅದು ಈಗ ಧಾರ್ಮಿಕ, ಐತಿಹಾಸಿಕ, ಸಾಂಸ್ಕೃತಿಕ ಸಂಗಮವಾಗಿ ಹೆಸರಾಗಿದೆ.

ಹಲವು ಅಚ್ಚರಿಯ ಸಂಗತಿಗಳನ್ನು ಈ ಬೆಟ್ಟ ಹೊಂದಿದೆ. ಅದರಲ್ಲಿ ಒಂದು ಬೆಟ್ಟದ ತುದಿ­ಯಲ್ಲಿ­ರುವ ಬೆಳ್ಳಿ ಗಂಟೆ. ಈ ಗಂಟೆ ಸಮರ್ಪಿಸಿದವರು ಕೆಂಪೇ­ಗೌಡ.

16ನೇ ಶತಮಾನದಲ್ಲಿ ಗಂಗಾಧರೇಶ್ವರ ದೇವಾಲಯದ ನವರಂಗದ ಸಿಂಹದ್ವಾರ ನಿರ್ಮಿಸಲಾಯಿತು. ಇದೇ ಕಾರಣಕ್ಕೆ, ಈ ಬಾಗಿಲುವಾಡದ ಕೆಳಗಡೆ ಕೆಂಪೇಗೌಡ, ಪತ್ನಿ, ಪುತ್ರ ಪುತ್ರಿಯರ ಉಬ್ಬು ಶಿಲೆಗಳಿವೆ. ಶಿವಗಂಗೆ ಬೆಟ್ಟದ ಬುಡದಲ್ಲಿ ರಾಯಗೋಪುರ (ಕೆಂಪೇಗೌಡ ಗೋಪುರ) ಮತ್ತು ಬೆಟ್ಟದ ಮೇಲೆ ‘ಕೆಂಪೇಗೌಡ ಹಜಾರ’ ನಿರ್ಮಾಣವಾಗಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT