ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾರೆ ಜಹಾಂಸೆ ಅಚ್ಛಾ...

Last Updated 21 ಜನವರಿ 2013, 19:59 IST
ಅಕ್ಷರ ಗಾತ್ರ

ಗಣರಾಜ್ಯೋತ್ಸವಕ್ಕೆ ಇನ್ನು ನಾಲ್ಕೇ ದಿನ ಬಾಕಿ. ಕೈಯಿಂದಲೇ ನೂಲು ನೇಯ್ದು ರಾಷ್ಟ್ರಧ್ವಜ ತಯಾರಿಸುವ ಅಪ್ಪಟ ಖಾದಿ ಉತ್ಪನ್ನಗಳಿಂದಾಗಿ ಪ್ರಸಿದ್ಧಿ ಹೊಂದಿರುವ ಹುಬ್ಬಳ್ಳಿಯ  ಬೆಂಗೇರಿಯಲ್ಲಿನ ಕರ್ನಾಟಕ ಖಾದಿ ಗ್ರಾಮೋದ್ಯೋಗ ಸಂಘದಲ್ಲೆಗ ಬಿಡುವಿಲ್ಲದ ಕೆಲಸ.

ವಿಧಾನಸೌಧ, ಹೈಕೋರ್ಟ್, ರಾಜ್ಯದಲ್ಲಿನ ಶಾಲಾ- ಕಾಲೇಜುಗಳು ಅಷ್ಟೇ ಏಕೆ ಗ್ವಾಲಿಯರ್ ಕೋಟೆ, ಮಹಾರಾಷ್ಟ್ರದ ರಾಯಘಡ ಕೋಟೆ, ನರಗುಂದದ ಕೋಟೆ, ಕೆಂಪು ಕೋಟೆ, ರಾಷ್ಟ್ರಪತಿ ಭವನ, ಸಂಸತ್ತು... ಅಬ್ಬಬ್ಬಾ... ಒಂದೇ ಎರಡೇ ಎಲ್ಲೆಡೆ ಹಾರಿಸಲು ಇಲ್ಲಿಯದ್ದೇ ರಾಷ್ಟ್ರಧ್ವಜ ಬೇಕು. ಹಾಗೆಂದು ಎಲ್ಲ ಕಡೆಗಳಲ್ಲಿ ಒಂದೇ ತೆರನಾದ, ಒಂದೇ ಅಳತೆಯ ಧ್ವಜ ಹಾರಿಸುತ್ತಾರೆ ಎಂದುಕೊಂಡರೆ ಅದು ತಪ್ಪು.

ಯಾಕೇ ಅಂತೀರಾ?  ಕೆಂಪು ಕೋಟೆ, ರಾಷ್ಟ್ರಪತಿ ಭವನ, ಸಂಸತ್ತು ಇತ್ಯಾದಿಗಳ ಮೇಲೆ ಹಾರಿಸಲು 12/8ಅಡಿಯ ಅಳತೆಯದ್ದೇ ಧ್ವಜ ಆಗಬೇಕು. ಸರ್ಕಾರಿ ಕಟ್ಟಡಗಳಿಗೆ 9/6ಅಡಿಯದ್ದೇ ಇರಬೇಕು. ವಿವಿಐಪಿಗಳ ವಿಮಾನದಲ್ಲಿ, ರಾಷ್ಟ್ರಪತಿ ಸಂಚರಿಸುವ ರೈಲುಗಳ ಮೇಲೆ ಪ್ರದರ್ಶಿಸಲು 18/12ಅಡಿ; ಗಣ್ಯಾತಿಗಣ್ಯರ (ವಿವಿಐಪಿ) ಕಾರುಗಳಿಗೆ 9/6ಅಡಿ; ವಿದೇಶಗಳ ಜೊತೆ ಒಪ್ಪಂದಗಳಿಗೆ ಸಹಿ ಮಾಡುವ ಸಂದರ್ಭಗಳಲ್ಲಿ ಪ್ರದರ್ಶಿಸುವ ಉದ್ದೇಶಕ್ಕಾಗಿ 6/4ಅಡಿ... ಹೀಗೆ ಹೇಳುತ್ತಾ ಹೋದರೆ ದೊಡ್ಡ ಪಟ್ಟಿಯೇ ಬೆಳೆಯುತ್ತದೆ.

ಅಂದಹಾಗೆ, ಬೆಂಗೇರಿಯಲ್ಲಿ ಈ ಸಂಘ ಸ್ಥಾಪನೆ ಆದದ್ದು 2006ರಲ್ಲಿ.  `ಕೇಂದ್ರ ಸರ್ಕಾರದ ಧ್ವಜ ಸಂಹಿತೆ ನಿಯಮದ ಅನುಸಾರ ಇಲ್ಲಿ ಧ್ವಜ ತಯಾರಿಸಲಾಗುತ್ತದೆ. ಸಂಘವು ಭಾರತೀಯ ಮಾನಕ ಸಂಸ್ಥೆಯಿಂದ (ಬಿಐಎಸ್) ಮಾನ್ಯತೆ ಹೊಂದಿದೆ. ಸಿದ್ಧಗೊಂಡು ಮಾರುಕಟ್ಟೆಗೆ ಹೋಗುವ ಹೊತ್ತಿಗೆ ಇಲ್ಲಿ ತಯಾರಾಗುವ ಪ್ರತಿಯೊಂದು ರಾಷ್ಟ್ರ ಧ್ವಜವನ್ನು ಹದಿನೆಂಟು ಪರೀಕ್ಷೆಗೊಳಪಡಿಸಲಾಗುತ್ತಿದೆ ಎಂದು ವಿವರ ನೀಡುತ್ತಾರೆ' ಇಲ್ಲಿನ ರಾಷ್ಟ್ರ ಧ್ವಜ ಉತ್ಪತ್ತಿ ಘಟಕದ ವ್ಯವಸ್ಥಾಪಕ ಮುತಾಲಿಕ್ ದೇಸಾಯಿ.

`ಬಟ್ಟೆ ತಯಾರಾಗಲು ನೇಯುವಾಗ ಅಡ್ಡ ಎಳೆಗಳೂ ಉದ್ದ ಎಳೆಗಳೂ ಬೇಕು. ಅಡ್ಡ ಎಳೆಗಳಿಗೆ ಹಾಸು ಎಂತಲೂ ಉದ್ದ ಎಳೆಗಳಿಗೆ ಹೊಕ್ಕು ಎಂತಲೂ ಹೆಸರು. ಮೊದಲು ಕಚ್ಚಾ ಬಟ್ಟೆಯ ತೂಕದ ಪರೀಕ್ಷೆ, ನಂತರ ಬಣ್ಣದ ಪರೀಕ್ಷೆ; ಅಶೋಕ ಚಕ್ರದ ಹಲ್ಲುಗಳ ಅಳತೆಯ ಪರೀಕ್ಷೆ ಹೀಗೆ ಪ್ರತಿ ಹಂತದಲ್ಲಿಯೂ ಪರೀಕ್ಷೆ ನಡೆಸಲಾಗುತ್ತದೆ. ಸಂಪೂರ್ಣ ಧ್ವಜದ ಅಳತೆ, ಅದರ ಗುಣಮಟ್ಟದ ಪರೀಕ್ಷೆಯಾದ ನಂತರವೇ ರಾಷ್ಟ್ರಧ್ವಜಗಳು ಮಾರುಕಟ್ಟೆಗೆ ಬಿಡುಗಡೆಯಾಗುವ ಮಾನ್ಯತೆ ಪಡೆಯುವುದು' ಎಂಬ ವಿವರಣೆ ಸಂಘದ ಅಧ್ಯಕ್ಷ ಬಿ.ಬಿ. ಪಾಟೀಲ ಅವರದ್ದು.

ವಿವಿಧ ಅಳತೆಯವು
`ಸ್ವಾತಂತ್ರ್ಯಾ ನಂತರ ರಾಷ್ಟ್ರ ಧ್ವಜದ ಬಗ್ಗೆ ಆರಂಭಿಕ ನಿರ್ದೇಶನಗಳನ್ನು ನೀಡಿದಾಗ ಗಣ್ಯಾತಿಗಣ್ಯರ ಕಾರುಗಳೂ ಸೇರಿದಂತೆ ಇತರ ಕಡೆ ಬಳಸಲು ಐದು ಅಡಿ ಅಳತೆಯ ಧ್ವಜ ಇರಬೇಕೆಂದು ತಿಳಿಸಲಾಗಿತ್ತು. ಆದರೆ ಈಗಿನ ಧ್ವಜ ಸಂಹಿತೆ ಪ್ರಕಾರ ಒಂಬತ್ತು ಅಡಿ ಅಳತೆ ನೀಡಲಾಗಿದೆ. ಇಲ್ಲಿ ತಯಾರಾಗುವ ಅತಿ ದೊಡ್ಡ ಅಳತೆಯ ಧ್ವಜ ಎಂದರೆ  21/14 ಅಡಿಯದ್ದು. ಅತಿ ಎತ್ತರದ ಕಟ್ಟಡಗಳ ಮೇಲೆ ಹಾರಿಸಲು ಇದನ್ನು ಬಳಸಲಾಗುವುದು' ಎನ್ನುತ್ತಾರೆ ಮುತಾಲಿಕ್.

ಹುಬ್ಬಳ್ಳಿಯಲ್ಲಿ ತಯಾರಿಸಲಾಗುತ್ತಿರುವ ಈ ರಾಷ್ಟ್ರಧ್ವಜ ತಯಾರಿಕೆಗೆ ಬಂಟಿಂಗ ಬಟ್ಟೆಯೇ ಬೇಕು. ಬಾಗಲಕೋಟೆ ಜಿಲ್ಲೆಯ ತುಳಸಿಗೆರೆ, ಜಾಲಿಹಾಳ, ಬಾದಾಮಿ ತಾಲ್ಲೂಕಿನ ಬೇಲೂರು ಕೇಂದ್ರಗಳಿಂದ ಬಟ್ಟೆ ಬರುತ್ತದೆ. 40-45 ಜನ ನುರಿತ ಮಹಿಳಾ ಕುಶಲಕರ್ಮಿಗಳನ್ನು ರಾಷ್ಟ್ರಧ್ವಜ ನಿರ್ಮಾಣ ಕಾರ್ಯದಲ್ಲಿ ತೊಡಗಿಸಿಕೊಳ್ಳಲಾಗಿದೆ.

ಮೊದಲು ಡೈಯಿಂಗ್, ನಂತರ ಬ್ಲೀಚಿಂಗ್, ಅದಾದ ನಂತರ ಅಶೋಕ ಚಕ್ರ ಮುದ್ರಿಸುವುದು. ಧ್ವಜವನ್ನು ಸರಿಯಾದ ಅಳತೆಗೆ ಅನುಗುಣವಾಗಿ ಹೊಲಿದ ನಂತರ ಅಂತಿಮ ಸ್ವರ್ಶವಾಗಿ ಅದಕ್ಕೆ ಇಸ್ತ್ರಿ ಹಾಕುವುದು. ಇಷ್ಟಾದ ನಂತರವೇ ಮಾರುಕಟ್ಟೆಗೆ ಧ್ವಜ ಬಿಡುಗಡೆಗೊಳ್ಳುತ್ತದೆ. ದೇಶದಾದ್ಯಂತ ಇರುವ ಖಾದಿ ಭಂಡಾರಗಳ ಮೂಲಕ ರಾಷ್ಟ್ರಧ್ವಜಗಳನ್ನು ಮಾರಾಟ ಮಾಡಲಾಗುತ್ತದೆ. ಕರ್ನಾಟಕದಲ್ಲಿಯೇ ಇಂತಹ 250ಕ್ಕೂ ಅಧಿಕ ಖಾದಿ ಭಂಡಾರಗಳಿವೆ' ಎಂಬುದು ಅವರ ವಿವರಣೆ.

ಸಂಬಳ ಕಡಿಮೆ
ಗಣರಾಜ್ಯೋತ್ಸವ ಹಾಗೂ ಸ್ವಾತಂತ್ರ್ಯ ದಿನಗಳ ಸಂದರ್ಭದಲ್ಲಿ ಹೆಚ್ಚಿನ ವಹಿವಾಟು ನಡೆಯುತ್ತವೆ. 2012ರಲ್ಲಿ 70 ಲಕ್ಷ ರೂಪಾಯಿಗಳವರೆಗೂ ವಹಿವಾಟು ಆಗಿತ್ತು. ಈ ವರ್ಷ ಒಂದು ಕೋಟಿವರೆಗೂ ವಹಿವಾಟು ನಡೆಯುವ ಗುರಿ ಹೊಂದಲಾಗಿದೆ. ಕೇಂದ್ರದಲ್ಲಿ ಮಹಿಳಾ ಸಿಬ್ಬಂದಿಯೇ ಹೆಚ್ಚು. ವಿಷಾದ ಎಂದರೆ ಅವರಿಗೆ ಈಗ ನೀಡುತ್ತಿರುವ ಸಂಬಳ ಸಾಕಾಗುತ್ತಿಲ್ಲ. ಇದರಿಂದ ಈ ಕೆಲಸ ನಿರ್ವಹಿಸಲು ಮಹಿಳೆಯರೂ ಸೇರಿದಂತೆ ಇತರ ಕಾರ್ಮಿಕರು ಆಸಕ್ತಿ ತೋರುತ್ತಿಲ್ಲ.

ಸರ್ಕಾರ ಈ ನಿಟ್ಟಿನಲ್ಲಿ ಹೆಚ್ಚಿನ ಪ್ರೋತ್ಸಾಹ, ಬೆಂಬಲ ನೀಡಬೇಕಾಗಿದೆ. ಇಲ್ಲಿ ತಯಾರಾಗುವ ಅಧಿಕೃತ ರಾಷ್ಟ್ರ ಧ್ವಜಗಳ ಖರೀದಿಯನ್ನು ಕಡ್ಡಾಯಗೊಳಿಸಿದರೆ ಉತ್ತಮ ಗುಣಮಟ್ಟದ ರಾಷ್ಟ್ರಧ್ವಜ ಎಲ್ಲರಿಗೂ ದೊರಕಲು ಅನುವಾಗುತ್ತದೆ, ಜೊತೆಗೆ ಇಲ್ಲಿಯ ಸಿಬ್ಬಂದಿಗೆ ಉತ್ತಮ ಸಂಬಳವೂ ದೊರಕುತ್ತದೆ' ಎನ್ನುತ್ತಾರೆ ಸಂಘದ ಅಧ್ಯಕ್ಷ ಬಿ.ಬಿ. ಪಾಟೀಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT