ಬುಧವಾರ, 15 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಡಿದೆದ್ದ ಗುಡ್ಡ

Last Updated 14 ಅಕ್ಟೋಬರ್ 2013, 19:30 IST
ಅಕ್ಷರ ಗಾತ್ರ

ಅಂದು ಮುಂಜಾನೆ ಕಂಡರಿಯದ ಮಳೆ ಸುರಿಯುತ್ತಿತ್ತು. ಮಳೆ ಲೆಕ್ಕಿಸದೆ ಕೆಲಸ ಕಾರ್ಯದಲ್ಲಿ ತೊಡಗುವ ಮಲೆನಾಡಿಗರು ಬೆಚ್ಚಿಬಿದ್ದಿದ್ದರು. ನಾಟಿ ಮಾಡಿದ್ದ, ಮಾಡಬೇಕಿದ್ದ ಗದ್ದೆಗಳು, ಆಸುಪಾಸಿನ ತೋಟಗಳೆಲ್ಲಾ ಜಲಾವೃತ. ಮೂರೇ ಗಂಟೆಯಲ್ಲಿ ಹನ್ನೆರಡು ಇಂಚು ಮಳೆ. ರಸ್ತೆ ಸೇತುವೆಗಳೆಲ್ಲಾ ಕಾಣೆಯಾಗಿದ್ದವು. ಹಟ್ಟಿಯೊಳಗಿದ್ದ ದನಗಳೂ ಬೆರಗಾಗಿದ್ದವು.

ಕಾಫಿ ಕಾಯಿಸಲೂ ಕೈ ಕಾಲು ನಡುಗುತ್ತಿತ್ತು. ಇನ್ನು ಅಡುಗೆ ಮಾತು ದೂರ. ತಾಯಂದಿರು ಮಕ್ಕಳ ಮುಖ ನೋಡುತ್ತಾ ಯೋಚಿಸುತ್ತಿರುವಾಗಲೇ... ‘ಸಾಲು ಗುಡ್ಡ ಒಡೆದು ಹೋಗುತ್ತಿವೆ ನೋಡಿರಪ್ಪಾ...’ ಎಂಬ ಕೂಗು ಎಲ್ಲರನ್ನೂ ಬೆಚ್ಚಿಬೀಳಿಸಿತು. ಹೊರಬಂದು ಇಣುಕಿದರೆ ಎಲ್ಲೆಲ್ಲೂ ಮಸುಕು ಮಸುಕು. ಏನೂ ಕಾಣಿಸುತ್ತಿಲ್ಲ.

ಆದರೆ ನಾಲ್ಕಾರು ಬಾರಿ ಭಯಂಕರ ಸದ್ದು ಮಾತ್ರ ಕಿವಿಗೆ ಅಪ್ಪಳಿಸುತ್ತಿದೆ. ಊರಿಗೆ ಉಳಿಗಾಲ ಉಂಟೇ...? ಊರ ಹಿರಿಯರು ಚಿಂತೆಗೀಡಾಗಿದ್ದರು. ಇದು ಕತೆಯಲ್ಲ. ಸಕಲೇಶಪುರ ತಾಲ್ಲೂಕು ಅಚ್ಚನಹಳ್ಳಿ ಗ್ರಾಮದಲ್ಲಿ ಕಳೆದ ಆಗಸ್ಟ್ 2ರಂದು ನಡೆದ ಘಟನೆ!

ಗುಡ್ಡ ಒಡೆಯುವುದೆ...?
ಗುಡ್ಡಗಳು ಒಡೆಯೋದಂದ್ರೆ! ಆಘಾತದೊಟ್ಟಿಗೆ ಕುತೂಹಲ ಹೆಚ್ಚಿತು. ನೋಡಲೇಬೇಕೆಂದು ಊರ ಯುವಕರೊಟ್ಟಿಗೆ ಕಾಲು ದಾರಿ ಹಿಡಿದು ನಾಲ್ಕಾರು ಮೈಲಿ ಕ್ರಮಿಸಿದೆ.

ಅಲ್ಲಿ ಕಂಡದ್ದು ದೊಡ್ಡ ಪ್ರಪಾತ. ಕೆಲ ಕ್ಷಣ ಮೈ ಜುಮ್ಮೆಂದಿತ್ತು. ನೂರಾರು ಮೀಟರ್ ಅಂತರದ ಕಂದರ! ಈ ಅವಾಂತರಕ್ಕೆ ಕಾರಣವಾದರೂ ಏನು? ಇದು ಒಂದೆಡೆಯ ನೋಟವಲ್ಲ, ನಾಲ್ಕಾರು ಕಡೆ ವಿರೂಪಗೊಂಡಿದ್ದ ಗುಡ್ಡ ಹಿಂದೆಂದೂ ಕಂಡರಿಯದಂತೆ ಕಂದಕಗಳ ಸೃಷ್ಟಿಸಿತ್ತು.

ಈ ಗುಡ್ಡಗಳ ಎರಡು ಮಗ್ಗುಲಲ್ಲೂ ಸುಮಾರು ಆರು ಜಾಗಗಳಲ್ಲಿ, ದೇವೀ ಗುಡ್ಡದ ಮೂರು ಜಾಗದಲ್ಲಿ ಏಕಾಏಕಿ ಒಡೆದು ಒಳಗಿದ್ದ ಜಲರಾಶಿ ಉಕ್ಕಿ ಹರಿದು ದೊಡ್ಡ ದೊಡ್ಡ ಪ್ರಪಾತಗಳೇ ಸೃಷ್ಟಿಯಾಗಿವೆ. ಇದು ಪ್ರಳಯವೋ !  ಪ್ರಕೃತಿ ವಿಕೋಪವೋ! ಉತ್ತರ ಸಿಗದ ಪ್ರಶ್ನೆಯಲ್ಲೇ ಮೌನವಾಗಿದೆ ಮಲೆನಾಡು.

ಹಿಂದೆಯೂ ಆಗಿತ್ತು
೧೯೬೧ನೇ ಇಸವಿಯಲ್ಲೊಮ್ಮೆ ಇದೇ ದುರಂತವಾಗಿತ್ತು. ಗುಡ್ಡಗಳು ಒಡೆದು ಭಾರಿ ಪ್ರಮಾಣದಲ್ಲಿ ನೀರಿನೊಟ್ಟಿಗೆ ಹರಿದು ಬಂದ ಮಣ್ಣು ರೈತರ, ಅದರಲ್ಲೂ ಮಲೆಯ ಬುಡಕಟ್ಟು ಕುಟುಂಬಗಳ ತೋಟ ಗದ್ದೆಗಳೇ ಮಣ್ಣಿನರಾಶಿಯಲ್ಲಿ ಮುಚ್ಚಿಹೋಗಿದ್ದರಿಂದ ಹಲವಾರು ಬಡ ಕುಟುಂಬಗಳು ಹೊರ ಪ್ರಪಂಚಕ್ಕೇ ಅರಿವಾಗದೇ ನಿರಾಶ್ರಿತರಾಗಿ ವಲಸೆ ಹೋಗಿದ್ದರು. ಅದನ್ನೇ ನೆನಪಿಸುವಂತಿತ್ತು ಇಂದಿನಾ ಮಳೆಯೂ ಅನ್ನುತ್ತಾರೆ ಮೂಡಿಗೆರೆ ತಾ

ಲ್ಲೂಕು  ಕುಂಬರಡಿ ಗ್ರಾಮದ ಪುಟ್ಟೇಗೌಡ್ರು.

ಭೂಮಿ ಜಡವಲ್ಲ ತನ್ನದೇ ಆದ ಭೌಗೋಳಿಕ ಅಂಗ ರಚನೆ ಹೊಂದಿದೆ. ಮನುಷ್ಯನ ಅಗತ್ಯತೆಗೆ ಭೂಮಿಯ ಮೇಲೆ ಕ್ಷಣವೆನ್ನದೇ ಹಲ್ಲೆ ನಡೆಯುತ್ತಿದೆ. ಕೊಳವೇ ಭಾವಿಗಳಲ್ಲಿ ಬಿಸಿ ನೀರು ಬರುತ್ತಿರುವ ಸುದ್ದಿ ಕೇಳಿದ್ದೇವೆ. ಅಂತೆಯೇ ಸಮುದ್ರದ ನೀರೂ ಬರುತ್ತಿದೆ. ಭೂಮಿ ಇರುವುದು ಅಗೆಯಲು, ಕೊರೆಯಲು ಎಂದುಕೊಂಡಿದ್ದೇವೆ.

ಏಕಕಾಲದಲ್ಲಿ ಹೆಚ್ಚಿನ ಮಳೆ ಸುರಿದರೆ ಕೆಲವೊಮ್ಮೆ ಭೂಮಿಯ ಒಡಲು ಬಿಸಿಯಾಗಿ ಸಿಡಿಯುವ ಸಾಧ್ಯತೆಯೂ ಇದೆ. ಜಲ ಶೇಖರಣೆ ಹೆಚ್ಚಾಗಿ ನೀರು ಹೊರ ಉಕ್ಕಿದಾಗಲೂ ಈ ಅವಾಂತರ ಎದುರಾಗುತ್ತದೆ. ಅಲ್ಲದೇ ಮನುಷ್ಯನ ದುರಾಲೋಚನೆಗೆ  ಭೂಮಿಯನ್ನು ವಿರೂಪಗೊಳಿಸಿದಲ್ಲೂ (ಚರಂಡಿ, ಒಡ್ಡು, ಗಣಿಗಾರಿಕೆ) ಈ ಅನಾಹುತ ನಿರೀಕ್ಷಿತ.

ಭೂಮಿಯ ಒಳ ಮೈ ಮೂಲಕ ಹತ್ತಾರು ಮೈಲು ದೂರದವರೆಗೂ ಒಂದೇ ರೂಪದ ಸೆಲೆ ಹೊಂದ್ದಿದ್ದಲ್ಲಿ ಒಂದೆಡೆ ಗಾಯಗೊಂಡರೂ ಪರಿಣಾಮ ಹತ್ತಾರೆಡೆ ಕಾಣಿಸುವ ಸಾಧ್ಯತೆ ಇದೆ. ಹೊರ ಜಗತ್ತನ್ನು ಪ್ರಯೋಗ ಶಾಲೆಯನ್ನಾಗಿಸಿ ಕೊಂಡಿದ್ದೇವೆ. ಅದೇ ಕಾಲಡಿಯ ಮಣ್ಣನ್ನು ನಿರ್ಲಕ್ಷಿಸಿದ್ದೇವೆ. ಇದು ದೊಡ್ಡ ಅವಾಂತರ ಎನ್ನುತ್ತಾರೆ ಪರಿಸರ ಮತ್ತು ಆಹಾರ ತಜ್ಞರಾದ ಕೆ.ಸಿ.ರಘು.

ಈ ವಿಕೋಪದಿಂದ ಹಾನಿ ಕಮ್ಮಿಯೇನಲ್ಲ. ಇಲ್ಲಿಯ ಪ್ರದೇಶದಲ್ಲಿ ಶೀತ ಆವರಿಸಿ ಬೆಳೆಗಳಿಗೆ ಕೊಳೆರೋಗ ತಗುಲಿ ಬಹುತೇಕ ಬೆಳೆ ಹಾನಿಗೊಂಡಿವೆ. ಈಗಿನ ಆರ್ಥಿಕ ಪರಿಸ್ಥಿತಿಯಲ್ಲಿ ಹಳ್ಳಿಗರ ಬದುಕು ಕಷ್ಟಕರ. ಗುಡ್ಡಗಳು ಕುಸಿದಿದ್ದರಿಂದ ಆಸುಪಾಸಿನ ಹಳ್ಳಕೊಳ್ಳಗಳು ಹೂಳು ತುಂಬಿ ಬೇಸಿಗೆಯಲ್ಲಿ ನೀರಿನ ಅಭಾವ ಕಾಣಿಸಿಕೊಳ್ಳಲಿದೆ. ಏಕಾಏಕಿ ಧಾರಾಕಾರ ಮಳೆ ಸುರಿದಿದ್ದರಿಂದ ಭೂಮಿಯ ಫಲವತ್ತತೆ ಸಂಪೂರ್ಣ ಹಾನಿಗೊಳಗಾಗಿದೆ.

60 ವರ್ಷ ಹಿಂದಿನ ಪರಿಸ್ಥಿತಿ ಈ ಪ್ರದೇಶದ ಜನತೆಗೆ ಎದುರಾಗಿರುವುದು ದುರದೃಷ್ಟ.  ಏಕಕಾಲದಲ್ಲಿಯೇ ಹತ್ತಾರು ಕಡೆ ಗುಡ್ಡ ಕುಸಿದಿದ್ದಾದರು ಏಕೆ ? ಹಳ್ಳಿಗರ ಪ್ರಶ್ನೆಗೆ  ನಿಖರ ಉತ್ತರ ಎಂದು ದೊರೆತೀತೋ ...
-ಅಚ್ಚನಹಳ್ಳಿ ಸುಚೇತನ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT