ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೌಂದರ್ಯದ ಸಿರಿ ಕಲ್ಲೂರು ಸಿದ್ಧೇಶ್ವರ

Last Updated 25 ಫೆಬ್ರುವರಿ 2013, 19:59 IST
ಅಕ್ಷರ ಗಾತ್ರ

ಸಿರುಟ್ಟ ಪ್ರಕೃತಿ, ವಿಧವಿಧ ಬೆಳೆಗಳಿಂದ ಕೂಡಿದ ಹೊಲಗದ್ದೆಗಳು, ಕಡಿದಾದ ರಸ್ತೆ, ಮರಗಿಡಗಳಲ್ಲಿ ಹಕ್ಕಿಗಳ ಇಂಚರ, ಜೊತೆಗೆ ವರ್ಷವಿಡೀ ಜಿನುಗುವ ಜಲಧಾರೆ...

ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲ್ಲೂಕಿನ ಕಲ್ಲೂರೆಂಬ ಪುಟ್ಟ ಗ್ರಾಮದ ರಮ್ಯಪ್ರಕೃತಿಯೊಳು ನೆಲೆನಿಂತ ಪುಣ್ಯಕ್ಷೇತ್ರವೇ ಕಲ್ಲೂರು ಸಿದ್ಧೇಶ್ವರ. ಗ್ರಾಮವನ್ನು ಪ್ರವೇಶಿಸುತ್ತಿದ್ದಂತೆ ಮೊದಲಿಗೆ ಸಿಗುವುದು ಪತ್ರಿವನ.

ಬಿಲ್ವಪತ್ರೆಯ ಗಿಡಗಳಿಂದ ತುಂಬಿದ ಈ ವನದ ಮಧ್ಯದಲ್ಲಿ ಇದೆ ಒಂದು ಪಾದಕಟ್ಟೆ. ಅದು ಸಿದ್ಧೇಶ್ವರ  ಪಾದಗಟ್ಟೆ. ಪತ್ರಿವನ ರಸ್ತೆಯಲ್ಲಿ ನಿಂತು ನೋಡಿದರೆ ಬೆಟ್ಟದಲ್ಲಿ ತನ್ನ ವಿಶಿಷ್ಟ ವಾಸ್ತುಶೈಲಿಯ ದೇವಾಲಯ ಗೋಚರಿಸುತ್ತದೆ. ಅದುವೇ ಸಿದ್ಧೇಶ್ವರ  ದೇವಾಲಯ. 

ದೇವಾಲಯ ನೋಡಲು ಮೆಟ್ಟಿಲುಗಳನ್ನೇರಿ ಬರುತ್ತಿದ್ದಂತೆ ಕಾಣಸಿಗುವುದೊಂದು ಪವಿತ್ರ ಜಲವನ್ನು ಹೊಂದಿದ ಹೊಂಡ. ಈ ಬೆಟ್ಟದಲ್ಲಿ ಅದೆಲ್ಲಿಂದಲೋ ಹರಿದು ಬಂದು ಹೊಂಡ ಸೇರುವ ಈ ನೀರು ಎಂಥ ಬಿರುಬೇಸಿಗೆಯಲ್ಲೂ ಸಹ ತನ್ನ ಸೆಲೆಯಲ್ಲಿ ಕೊರತೆ ಕಾಣದಿರುವುದು ವಿಸ್ಮಯವೇ ಸರಿ.

ಈ ಹೊಂಡದ ನೀರಲ್ಲಿ ಮುಖ-ಕೈಕಾಲು ತೊಳೆದುಕೊಂಡು ನೀರನ್ನು ಸೇವಿಸಿ ಅದರ ರುಚಿ ಅನುಭವಿಸಿ. ಆ ನೀರಿನಲ್ಲಿರುವ ತಂಪು ಹಾಗೂ ರುಚಿ ಆಸ್ವಾದಿಸುವುದೇ ಪುಣ್ಯ.

ನಿರಂತರ ರುದ್ರಾಭಿಷೇಕ

ದೇವಾಲಯದ ಒಳಕ್ಕೆ ಕಾಲಿಡುತ್ತಲೇ ಸದಾ ರುದ್ರಾಭಿಷೇಕದಿಂದ ಕಂಗೊಳಿಸುವ ಸಿದ್ಧೇಶ್ವರ ನಿಮಗೆ ದರ್ಶನ ನೀಡುವನು. ಭಕ್ತಿಭಾವದಿಂದ ನಮಸ್ಕರಿಸಿ ಕುಳಿತು ಸುತ್ತಲೂ ವೀಕ್ಷಿಸಿದರೆ ಕೊರೆದಿಟ್ಟಂತೆ ಕಾಣುವ ಬೆಟ್ಟ, ಗಿಡಮರಗಳು. ಎಲ್ಲವೂ ನಮ್ಮನ್ನು ಮಂತ್ರಮುಗ್ದರನ್ನಾಗಿಸುತ್ತವೆ.

  ಚಾಲುಕ್ಯರ ಕಾಲದ್ದೆಂದು ಹೇಳಲಾಗುವ ಈ ದೇವಾಲಯ ಕಲ್ಯಾಣದ ಕ್ರಾಂತಿಯ ಕಾಲಕ್ಕೆ ಚನ್ನಬಸವಣ್ಣನವರು ಶರಣರ ಜೊತೆಗೆ ಉಳುವಿಯತ್ತ ಪ್ರಯಾಣ ಬೆಳೆಸುವ ಮೊದಲು ಈ ತಾಣದಲ್ಲೂ ಹಲವು ದಿನ ನೆಲೆಸಿದ್ದರೆಂದು ಹೇಳುವರು.

ಇಲ್ಲಿಯ ಕಲ್ಲೂರು, ಗೊಡಚಿ, ಚುಂಚನೂರು, ಜಾಲಿಕಟ್ಟೆ, ಮುರಗೋಡ, ಬೈಲಹೊಂಗಲ ತಾಲ್ಲೂಕಿನ ಕಾದ್ರೋಳ್ಳಿ ಮೂಲಕ ಉಳವಿ ಕ್ಷೇತ್ರಕ್ಕೆ ಚನ್ನಬಸವಣ್ಣನವರ ಪ್ರಯಾಣ ಬೆಳೆಸಿರುವ ಬಗ್ಗೆ ದಾಖಲೆಗಳಿವೆ. ಚನ್ನಬಸವಣ್ಣನವರು ಪೂಜೆಗೈದ ತಾಣದಲ್ಲಿ ಸಿದ್ಧೇಶ್ವರ  ಮೂರ್ತಿ ಪ್ರತಿಷ್ಠಾಪಿಸಲಾಗಿದೆ.

ಜಕಣಾಚಾರಿಯ ಶಿಲ್ಪಕಲಾ ವೈಭವದೆಂದು ಹೇಳಲಾಗುವ ಕೆತ್ತನೆಯ ಕುಸುರಿ ಕಲೆಯನ್ನು ಈ ದೇವಾಲಯ ಹೊಂದಿದೆ. ದೇವಾಲಯದ ಎದುರಿಗೆ ಕಲ್ಯಾಣ ಬಸಪ್ಪನ ಕಟ್ಟೆ ಇದೆ.

ಈ ಕಲ್ಲಿಗೆ ನಮಸ್ಕರಿಸಿ ಏನಾದರೂ ಬೇಡಿಕೊಂಡು ಇಲ್ಲಿರುವ ಕಲ್ಲನ್ನು ಎತ್ತಿದರೆ ನಿಮ್ಮ ಬೇಡಿಕೆ ಈಡೇರುವುದೋ, ಇಲ್ಲವೋ ಎನ್ನುವುದನ್ನು ಅದು ಸೂಚಿಸುತ್ತದೆ ಎನ್ನುವುದು ನಂಬಿಕೆ.

ಆಸೆ ಈಡೇರುವುದಾದರೆ ಕಲ್ಲು ಎತ್ತಲು ಹಗುರವಾಗುವುದು ಇಲ್ಲದಿದ್ದರೆ ಭಾರವಾಗುವುದು ಎನ್ನುವುದು ಪ್ರತೀತಿ. ವಿವಾಹ ಕಾರ‌್ಯಗಳು, ದೇವರಿಗೆ ಹರಕೆ ಹೊತ್ತ ಭಕ್ತರಿಂದ ಅನ್ನ ಸಂತರ್ಪಣೆ ಇಲ್ಲಿ ಸಾಮಾನ್ಯ. ಇಲ್ಲೊಂದು ಕಾರ‌್ಯಾಲಯ ಇದ್ದು ಮುಂಚಿತವಾಗಿ ಸಂಪರ್ಕಿಸಿದರೆ ವಸತಿಗಾಗಿ ಕೊಠಡಿಯನ್ನೂ ಒದಗಿಸಲಾಗುತ್ತದೆ.

ಪ್ರತಿವರ್ಷ ರಥೋತ್ಸವ

ಪ್ರತಿ ಹೊಸ್ತಿಲ ಹುಣ್ಣಿಮೆ ನಂತರ ಬರುವ ಸೋಮವಾರ ದಿನ ಕಾರ್ತಿಕೋತ್ಸವ, ಮರುದಿನ ರಥೋತ್ಸವ ಜರುಗುತ್ತವೆ. ಈ ರಥವು ದೇವಾಲಯದಿಂದ ಸಂಚರಿಸಿ ಆರಂಭದಲ್ಲಿ ಸಾಗಿಬಂದ ಪತ್ರಿವನದಲ್ಲಿರುವ ಸಿದ್ಧೇಶ್ವರ  ಪಾದಗಟ್ಟೆಯವರೆಗೂ ಸಂಚರಿಸಿ ದೇವಾಲಯ ಆವರಣಕ್ಕೆ ಆಗಮಿಸುವ ಮೂಲಕ ಜಾತ್ರೆ ಜರುಗುತ್ತದೆ.

ಕಾರ್ತಿಕೋತ್ಸವದಂದು ದೊಡ್ಡದಾದ ಮಣ್ಣಿನ ಹಣತೆಯಲ್ಲಿ ಎರಡರಿಂದ ಮೂರು ಕೆ.ಜಿ ಎಣ್ಣೆ ಹಾಕಿ ದೀಪವನ್ನು ದೇವರಿಗೆ ಬೆಳಗಿಸಿ ಎತ್ತರವಾದ ಬೆಟ್ಟದ ಮೇಲೆ ಹೋಗಿ ಇಟ್ಟು ಬರುತ್ತಾರೆ. ಈ ದೀಪದ ಜ್ಯೋತಿಯು ಸುತ್ತಲಿನ ಗ್ರಾಮಗಳಲ್ಲದೇ ಬಹು ದೂರದವರೆಗೂ ಗೋಚರಿಸುತ್ತದೆ ಎನ್ನುವುದು ಇಲ್ಲಿಯವರ ಹೇಳಿಕೆ.

ಇಲ್ಲಿ ಜಲಪಾತ ಕೂಡ ಉಂಟು. ಮಳೆಗಾಲದಲ್ಲಿ ಅದರ ರಮಣೀಯತೆಯನ್ನು ಸವಿಯಬಹುದು.  ಪಿಕ್ನಿಕ್ ಪ್ರಿಯರಿಗೂ ಇದೊಂದು ಪಿಕ್ನಿಕ್ ಪಾಯಂಟ್, ದೈವೀ ಆರಾಧಕರಿಗೆ ಪುಣ್ಯಕ್ಷೇತ್ರ. ಅಂದ ಹಾಗೆ ಇಲ್ಲಿ ಬರುವಾಗ ಜೊತೆಗೆ ತಿಂಡಿ ತಿನಿಸು ತರಬೇಕಾಗುತ್ತದೆ. ಇಲ್ಲಿ ಜಾತ್ರೆ ಸಂದರ್ಭ ಹೊರತುಪಡಿಸಿದರೆ ಯಾವಾಗಲೂ ಅಂಗಡಿ ಮುಂಗಟ್ಟುಗಳು ಇರುವುದಿಲ್ಲ. ಒಮ್ಮೆಯಾದರೂ ಈ ಪುಣ್ಯಕ್ಷೇತ್ರಕ್ಕೆ ಭೇಟಿ ನೀಡಿ.

ಹೀಗೆ ಬನ್ನಿ

ರಾಮದುರ್ಗದಿಂದ ಸವದತ್ತಿ ಕಡೆಗೆ ಚಲಿಸುವ ಸಾರಿಗೆ ವಾಹನಗಳು ಮುಳ್ಳೂರು ಘಾಟ್ ಮೂಲಕ ಸಂಚರಿಸುತ್ತವೆ. ಈ ಘಾಟ್ ಪ್ರದೇಶ ಬಹಳ ತಿರುವು ಮುರುವಿನಿಂದ ಕೂಡಿದೆ. ಆದುದರಿಂದ ವಾಹನ ಚಾಲನೆ ಮಾಡುವಾಗ ತುಂಬಾ ಎಚ್ಚರಿಕೆ ಅಗತ್ಯ. ಘಾಟ್ ಇಳಿದ ತಕ್ಷಣ ಮುಳ್ಳೂರ ಗ್ರಾಮದ ತಿರುವು ಉಂಟು.

ಅಲ್ಲಿ ನಿಲುಗಡೆ ಉಂಟು. ಅಲ್ಲಿ ಇಳಿದುಕೊಂಡರೆ ಕಲ್ಲೂರ ಗ್ರಾಮ ಸುಲಭವಾಗಿ ತಲುಪಲು ಅನುಕೂಲ.  ಈ ಗ್ರಾಮಕ್ಕೆ ತಲುಪಲು ಸವದತ್ತಿ ಮೂಲಕವೂ ಅನುಕೂಲ. ಸವದತ್ತಿ- ರಾಮದುರ್ಗ ಬಸ್ಸಿನಲ್ಲಿ ಹೊರಟರೆ ಮುಳ್ಳೂರ್ ಘಾಟ್ ಪ್ರಾರಂಭಕ್ಕೆ ಮುನ್ನ ಮುಳ್ಳೂರ್ ಗ್ರಾಮದ ತಿರುವಿನಲ್ಲಿ ನಿಲುಗಡೆಯಲ್ಲಿ ಇಳಿದುಕೊಳ್ಳುವುದು.

  ಮುಳ್ಳೂರು ಗ್ರಾಮದ ತಿರುವು ರಾಮದುರ್ಗದಿಂದ 12 ಕಿ. ಮೀ.  ಸವದತ್ತಿಯಿಂದ 26 ಕಿ. ಮೀ. ಅಂತರವುಂಟು. ಮುಳ್ಳೂರು ಗ್ರಾಮದಿಂದ ಮೂರು ಕಿ. ಮೀ. ಅಂತರದಲ್ಲಿ ಕಲ್ಲೂರು ಗ್ರಾಮವಿದೆ.

ಈ ಗ್ರಾಮದವರೆಗೂ ವಾಹನ ಸೌಕರ್ಯವುಂಟು. ಕಲ್ಲೂರು ಗ್ರಾಮಕ್ಕೆ ಬಂದ ತಕ್ಷಣ ಮಹಾದ್ವಾರ ಕಾಣುತ್ತದೆ.  ಆ ಮಹಾದ್ವಾರದ ಮೂಲಕ ಸಾಗುವ ರಸ್ತೆಯಲ್ಲಿ ಒಂದೂವರೆ ಕಿ. ಮೀ ಕಾಲ್ನಡಿಗೆಯಲ್ಲಿ ನಡೆದು ಬಂದರೆ ಕಾಣಸಿಗುವ ದೇವಾಲಯ ತಾಣವೇ ಕಲ್ಲೂರು ಸಿದ್ಧೇಶ್ವರ ಪುಣ್ಯಕ್ಷೇತ್ರ. ಸ್ವಂತ ವಾಹನವಿದ್ದರೆ ಒಳಿತು. ಆಟೊ ಸೌಲಭ್ಯ ಇವೆ.

ಇಲ್ಲದೇ ಹೋದರೆ ಕಲ್ಲೂರ ಗ್ರಾಮದಿಂದ ಒಂದೂವರೆ ಕಿ.ಮೀ ನಡೆದುಕೊಂಡು ಬರಬೇಕಾಗುತ್ತದೆ.  ಅದು ಕೂಡ ಆಯಾಸವೆನಿಸದು. ಕಾರಣ ಇಲ್ಲಿನ ಪ್ರಕೃತಿ. ಸುತ್ತಲೂ ಪರ್ವತ ಶ್ರೇಣಿ, ಅಕ್ಕಪಕ್ಕ ಹೊಲಗದ್ದೆಗಳು ಅಲ್ಲಿ ಕೆಲಸಮಾಡುತ್ತಿರುವ ರೈತಾಪಿ ಜನರು ಕಣ್ಮನ ಸೆಳೆಯುತ್ತವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT